ಸರ್ಕಾರಗಳ ಅಧಿಕಾರ ಮೊಟಕು
ಸ್ವಾತಂತ್ರ್ಯ ಬಂದ ಮೇಲೆ ಭಾಷಾವಾರು ಪ್ರಾಂತ್ಯ ರಚನೆಗಳಾದವು. ಭಾಷೆ, ಸಂಸ್ಕೃತಿ, ಇತಿಹಾಸ, ರಾಜಕೀಯ ಕಾರಣಗಳಿಗಾಗಿ ರಾಜ್ಯ ರಚಿಸುವುದು ಅನಿವಾರ್ಯವಾಯಿತು. ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲೆ ಆಡಳಿತ ವ್ಯವಸ್ಥೆ ಕೂಡ ಅದರಂತೆ ರೂಪುಗೊಂಡಿತು. ಸಂವಿಧಾನ ಕೂಡ ಒಕ್ಕೂಟ ವ್ಯವಸ್ಥೆ ಸ್ವರೂಪವನ್ನೇ ಉಲ್ಲೇಖಿಸಿದೆ. ಸಂವಿಧಾನದ ವಿಧಿ ೩೬೮(೨) ರಂತೆ ಸಂಸತ್ ಮಾಡುವ ಸಂವಿಧಾನ ತಿದ್ದುಪಡಿಗಳಿಗೆ ಕನಿಷ್ಠ ಶೇ.೫೦ ರಷ್ಟು ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಬೇಕು. ಆದರೂ ಸಂವಿಧಾನದ ಮೂಲ ಸ್ವರೂಪ ಬದಲಿಸಲು ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಶವಾನಂದ ಭಾರತಿ ಹಾಗೂ ಮಿನರ್ವ ಮಿಲ್ಸ್ ಪ್ರಕರಣಗಳಲ್ಲಿ ಸ್ಪಷ್ಟವಾಗಿ ಹೇಳಿದೆ.ಕೇಂದ್ರ ಸರ್ಕಾರ ಮಾತ್ರ ಒಕ್ಕೂಟ ವ್ಯವಸ್ಥೆಯಿಂದ ದೂರ ಸರಿಯುವ ಕೆಲಸಗಳನ್ನು ಮಾಡುತ್ತಲೇ ಬಂದಿದೆ. ರಾಜ್ಯ ಸರ್ಕಾರ ಆಡಳಿತ, ಶಾಸನ ಮತ್ತು ಆರ್ಥಿಕ ಅಧಿಕಾರವನ್ನು ಹೊಂದಿದೆ.
ಸಂವಿಧಾನದ ವಿಧಿ ೧೫೪, ೧೬೨ ರಂತೆ ರಾಜ್ಯ ಸರ್ಕಾರಕ್ಕೆ ಆಡಳಿತ ನಡೆಸುವ ಅಧಿಕಾರವಿದೆ. ಪೊಲೀಸ್ ವ್ಯವಸ್ಥೆ ರಾಜ್ಯದ ವ್ಯಾಪ್ತಿಗೆ ಬರುತ್ತದೆ. ಡಿಜಿಪಿ ನೇಮಕ ರಾಜ್ಯ ಸರ್ಕಾರದ ಅಧಿಕಾರಕ್ಕೆ ಸೇರಿದ್ದು. ಆದರೂ ಕೇಂದ್ರ ಸರ್ಕಾರ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ತರಿಸಿಕೊಂಡು ರಾಜ್ಯದ ಸಲಹೆಯನ್ನು ನಾಮಕಾವಸ್ತೆ ಪಡೆದು ಡಿಜಿಪಿ ನೇಮಕವನ್ನು ತಾನೇ ಕೈಗೊಳ್ಳುತ್ತದೆ. ಅದೇರೀತಿ ಮೆಡಿಕಲ್ ಸೀಟುಗಳಿಗೆ `ನೀಟ್' ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಪ್ರವೇಶ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡುತ್ತಿದೆ. ಹಲವು ಯೋಜನೆಗಳಿಗೆ ಕೇಂದ್ರ ತನ್ನ ಪಾಲು ನೀಡಬೇಕು. ಅದಕ್ಕೆ ಇಲ್ಲದ ಕಾರಣ ನೀಡಿ ಕೊಕ್ಕೆ ಹಾಕುತ್ತಿದೆ. ಕೆಲವು ಯೋಜನೆಗಳ ಹೆಸರು ಬದಲಾಗಿದೆ ಎಂದು ಹೇಳಿ ಅನುದಾನ ನಿಲ್ಲಿಸಿದ ಪ್ರಸಂಗಗಳು ನಡೆದಿವೆ. ಕೇರಳದಲ್ಲಿ ಹೊಸ ಶಾಲೆ ತೆರೆಯಲಿಲ್ಲ ಎಂದು ಅನುದಾನ ನಿಲ್ಲಿಸಲಾಯಿತು. ಇದಕ್ಕೆ ಕಾರಣ ಎಂದರೆ ಕೇರಳದಲ್ಲಿ ಜನನ ಪ್ರಮಾಣ ಇಳಿಮುಖಗೊಂಡಿದೆ. ಇದು ಉತ್ತಮ ಎಂದೆನಿಸಿದರೂ ಕೇಂದ್ರ ಒಪ್ಪಲಿಲ್ಲ. ಈ ಮಾತು ಬಿಜೆಪಿ ಆಡಳಿತ ಇರುವ ರಾಜ್ಯ ಸರ್ಕಾರಗಳಿಗೆ ಅನ್ವಯಿಸುವುದಿಲ್ಲ.
ಸಂವಿಧಾನದಲ್ಲಿ ೫೧ ಉಲ್ಲೇಖಗಳು ಶಾಸನ ಮಾಡುವುದಕ್ಕೆ ಸಂಬಂಧಿಸಿದ್ದು, ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರವನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಕೇಂದ್ರ ಸರ್ಕಾರ ಈಗ ರಾಜ್ಯಗಳಿಗೆ ತಿಳಿಸದೆ ರಾಜ್ಯಗಳ ಅಧಿಕಾರದಲ್ಲೂ ಹಸ್ತಕ್ಷೇಪ ಮಾಡುತ್ತಿದೆ. ನಾಗರಿಕ ಸಂಹಿತೆ, ಅರಣ್ಯ, ಔಷಧ, ಏಕಸ್ವಾಮ್ಯತೆ, ಕಾರ್ಮಿಕ ಸಂಘಟನೆಗಳು, ಸಾಮಾಜಿಕ ರಕ್ಷಣೆ, ವಿಮೆ, ಕಾರ್ಮಿಕರ ಕಲ್ಯಾಣ, ಶಿಕ್ಷಣ, ಕಾನೂನು, ವಿದ್ಯುತ್, ಪುರಾತತ್ವ ಇಲಾಖೆ, ಆಸ್ತಿ ವಶ, ಸ್ಟಾಂಪ್ ಶುಲ್ಕ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳಿಗೆ ಸಂವಿಧಾನದ ೨೫೪(೨) ರಂತೆ ಅಧಿಕಾರವಿದ್ದರೂ ಕೇಂದ್ರದ ಹಸ್ತಕ್ಷೇಪ ಅಧಿಕಗೊಂಡಿದೆ. ರಾಜ್ಯ ಮಾಡಿದ ಶಾಸನಕ್ಕೆ ರಾಷ್ಟçಪತಿ ಅಂಗೀಕಾರ ದೊರೆತರೂ ಕೇಂದ್ರದ ಶಾಸನವೇ ಉಳಿಯುತ್ತದೆ ಎಂಬ ನಿಯಮ ಸರಿಯಲ್ಲ. ಕೆಲವು ವಿಷಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಅಧಿಕಾರವಿದ್ದರೂ ಕೇಂದ್ರ ಸವಾರಿ ಮಾಡುವುದುಂಟು. ರಾಜ್ಯಗಳ ಅನುಮೋದನೆ ಪಡೆಯದೆ ಸಂಸತ್ ರಾಜ್ಯದ ಅಧಿಕಾರ ವ್ಯಾಪ್ತಿಯನ್ನು ಆಕ್ರಮಿಸಿಕೊಂಡ ಘಟನೆಗಳೂ ನಡೆದಿವೆ. ಕ್ರಿಮಿನಲ್ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ. ಇದಕ್ಕೆ ರಾಜ್ಯಗಳ ಅಭಿಪ್ರಾಯ ಪಡೆಯಲಿಲ್ಲ. ಕಾನೂನು ಪರಿಪಾಲನೆ ಮತ್ತು ಪೊಲೀಸ್ ವ್ಯವಸ್ಥೆ ರಾಜ್ಯದ ವ್ಯಾಪ್ತಿಗೆ ಬಂದರೂ ಕೇಂದ್ರ ಅದರಲ್ಲೂ ಹಸ್ತಕ್ಷೇಪ ಮಾಡಿದೆ.
ಬಿಜೆಪಿ ಸರ್ಕಾರ ಹಣಕಾಸು ಅಧಿಕಾರದಲ್ಲೂ ನೇರವಾಗಿ ಹಸ್ತಕ್ಷೇಪ ಮಾಡಿದೆ. ೧೪ನೇ ಹಣಕಾಸು ಆಯೋಗದ ವಿಚಾರದಲ್ಲೂ ಪ್ರಧಾನಿ ಹಸ್ತಕ್ಷೇಪ ಕಂಡು ಬಂದಿದೆ. ತೆರಿಗೆ ಸಂಗ್ರಹದಲ್ಲಿ ರಾಜ್ಯಗಳ ಪಾಲು ಶೇ.೪೧ ಇತ್ತು. ಅದನ್ನು ಶೇ.೩೧ಕ್ಕೆ ಇಳಿಸಲಾಗಿದೆ. ರಾಜ್ಯದೊಂದಿಗೆ ಹಂಚಿಕೆಯಾಗದೇ ಇರುವ ಸೆಸ್ ಮತ್ತು ಸರ್‌ಚಾರ್ಜ್ಗಳನ್ನು ಕೇಂದ್ರ ಹೆಚ್ಚಿಸುತ್ತಿದೆ. ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳ ಆಡಳಿತದಲ್ಲಿದ್ದರೆ ಕೇಂದ್ರದ ಮುಂಡಿಯೂರಿ ನೆರವು ಕೇಳಬೇಕಾಗಿ ಬಂದಿದೆ. ಸಂಸತ್ತಿನ ಪಡಸಾಲೆಗಳಲ್ಲಿ ಹಿಂದೆ ಪಿಸುಮಾತೊಂದು ಕೇಳಿ ಬರುತ್ತಿತ್ತು. ಅದರಂತೆ ಈಗ ರಾಜ್ಯ ಸರ್ಕಾರಗಳು ಮುನಿಸಿಪಾಲಿಟಿಗಳಾಗುತ್ತಿವೆ.