For the best experience, open
https://m.samyuktakarnataka.in
on your mobile browser.

ಸರ್ಕಾರದ ಒತ್ತಡಕ್ಕೆ ಮಣಿದು ಹಾವೇರಿ ಎಸ್ಪಿ ಹೇಳಿಕೆ ಬದಲು

09:26 PM Nov 11, 2024 IST | Samyukta Karnataka
ಸರ್ಕಾರದ ಒತ್ತಡಕ್ಕೆ ಮಣಿದು ಹಾವೇರಿ ಎಸ್ಪಿ ಹೇಳಿಕೆ ಬದಲು

ಹಾವೇರಿ(ಶಿಗ್ಗಾವಿ): ಶಿಗ್ಗಾವಿ ಸವಣೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ರೌಡಿಶೀಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಹೇಳಿಕೆ ಬದಲಾಯಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಹಾವೇರಿ ಎಸ್ಪಿ ಕಾಂಗ್ರೆಸ್ ಅಭ್ಯರ್ಥಿಯ ಕುರಿತು ಸ್ಪಷ್ಟೀಕರಣ ನೀಡಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾವೇರಿ ಎಸ್ಪಿ ಮಾಧ್ಯಮದ ಪ್ರಶ್ನೆಗೆ ಇರುವ ಪರಿಸ್ಥಿತಿಯನ್ನು ಸತ್ಯವನ್ನು ಹೇಳಿದ್ದರು. ಅದು ಮಾಧ್ಯಮದಲ್ಲಿ ಬಂದಿದೆ. ಎಸ್ಪಿ ಸುಮ್ಮನೆ ಹೇಳಿಕೆ ನೀಡುವುದಿಲ್ಲ. ಮಾಹಿತಿ ಪಡೆದುಕೊಂಡೇ ಹೇಳಿರುತ್ತಾರೆ. ಈಗ ಸರ್ಕಾರದ ಒತ್ತಡಕ್ಕೆ ಮಣಿದು ಯಾವುದೇ ಪ್ರಕರಣ ಇಲ್ಲ ಅಂತ ಹೇಳುತ್ತಾರೆ. ಎಸ್ಪಿ ಹೇಳಿಕೆಯ ಬಗ್ಗೆ ತನಿಖೆಯಾಗಬೇಕು. ಯಾವುದು ಸತ್ಯ ಎನ್ನುವುದು ಗೊತ್ತಾಗಬೇಕು. ಈ ಬಗ್ಗೆ ನಾವು ನಾಳೆ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದರು.
ಕಳೆದ ವರ್ಷ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಅಷ್ಟೊಂದು ಪ್ರಕರಣಗಳು ಇದ್ದವು. ಪ್ರಕರಣಗಳು ಮುಕ್ತಾಯವಾಗಲು ಏನೆಲ್ಲ ನಿಯಮ ಇದೆ ಎಂದು ಎಸ್ಪಿಯವರು ಪೊಲೀಸ್ ಮ್ಯಾನುವಲ್ ಏನು ಅಂತ ಅವರೇ ಹೇಳಿದರು. ಈಗ ಯಾವುದೇ ಪ್ರಕರಣ ಇಲ್ಲ ಅಂತ ಸರ್ಕಾರ ಹೇಳಿಸಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿಯ ತಾಲೂಕಿನಲ್ಲಿಯೇ ಅವರ ವಿರುದ್ದ ಕೇಸ್‌ಗಳಿವೆ ನಾನು ಯಾರ ವಿರುದ್ಧವು ದ್ವೇಷದ ರಾಜಕಾರಣ ಮಾಡುವುದಿಲ್ಲ ಆ ಅಗತ್ಯ ನನಗಿಲ್ಲ. ಯಾಸಿರ್ ಖಾನ್ ಬಗ್ಗೆ ಅಜ್ಜಂಫಿರ್ ಖಾದ್ರಿ ಅವರು ಮೊದಲು ಹೇಳಿದ್ದು, ಎಸ್ಪಿಗೆ ಆ ರೀತಿ ಹೇಳಿಕೆ ನೀಡಲು ನಾನು ಹೇಳಿದ್ನಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಅಭ್ಯರ್ಥಿ ಭಯೋತ್ಪಾದಕರ ಜೊತೆ ಇದ್ದ ಫೋಟೋಗಳು ಮಾಧ್ಯಮಗಳೇ ಬಿಡುಗಡೆ ಮಾಡಿವೆ. ಅದಕ್ಕೂ ನನಗೂ ಏನು ಸಂಬಂಧವಿಲ್ಲ ಎಂದರು.
ಇನ್ನು ಬಿಜೆಪಿ ಅಭ್ಯರ್ಥಿ ವಿರುದ್ಧ ಬಿಟ್‌ಕಾಯಿನ್ ಆರೋಪ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ರಾಜ್ಯ ಸರ್ಕಾರ ಕಳೆದ ಒಂದೂವರೆ ವರ್ಷದಿಂದ ತನಿಖೆ ಮಾಡುತ್ತಿದೆ. ಬಿಟ್‌ಕಾಯಿನ್ ಗೂ ಭರತ್ ಬೊಮ್ಮಾಯಿಗೂ ಯಾವುದೇ ಸಂಬಂಧ ಇಲ್ಲ. ಅವರ ಆರೋಪ ನಿರಾಧಾರ ಎಂದು ಹೇಳಿದರು.

Tags :