ಸರ್ಕಾರದ ಒಪ್ಪಿಗೆ ವಿನಾಃ ಗಣತಿ ವರದಿ ವಿವರ ಬಹಿರಂಗಪಡಿಸುವಂತಿಲ್ಲ
ರಾಜ್ಯದಲ್ಲಿ 1,300ಕ್ಕಿಂತ ಹೆಚ್ಚು ಜಾತಿಗಳಿರುವಾಗ 10 ಜಾತಿಗಳ ಹೆಸರು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಉಡುಪಿ: ಸರ್ಕಾರದ ಒಪ್ಪಿಗೆ ಇಲ್ಲದೇ ಸಾಮಾಜಿಕ, ಶೈಕ್ಷಣಿಕ ವರದಿ ವಿವರ ಬಹಿರಂಗಪಡಿಸುವಂತಿಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿಕಟಪೂರ್ವ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸೋಮವಾರ ನಡೆದ 'ಪತ್ರಕರ್ತರೊಂದಿಗೆ ಸಂವಾದ' ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದ 5.98 ಕೋಟಿ ಜನರ ಸಮೀಕ್ಷೆ ನಡೆಸಿ ಸಾಮಾಜಿಕ ಶೈಕ್ಷಣಿಕ ಜನ ಗಣತಿ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದೆ. ಈ ವರದಿಯ ಬಗ್ಗೆ ಚರ್ಚೆ ಮಾಡಲು ನಾನು ಸಿದ್ಧ. ಸಚಿವ ಸಂಪುಟ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ರಾಜ್ಯದಲ್ಲಿ 1,300ಕ್ಕಿಂತ ಹೆಚ್ಚು ಜಾತಿಗಳಿರುವಾಗ 10 ಜಾತಿಗಳ ಹೆಸರು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸರಕಾರ ಈ ವರದಿ ಬಗ್ಗೆ ಅಧಿಕೃತವಾಗಿ ತೀರ್ಮಾನ ಮಾಡಿದ ಮೇಲೆ ಈ ವಿಚಾರದಲ್ಲಿ ಚರ್ಚೆ ಮಾಡಬೇಕಾಗುತ್ತದೆ. ಸರಕಾರದ ಬಿಡುಗಡೆ ಮಾಡದೇ ಯಾವುದನ್ನೂ ಅಧಿಕೃತ ದತ್ತಾಂಶ ಎಂದು ಒಪ್ಪಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಿಲ್ಲಿಸಬೇಕು ಎಂದು ಹೆಗ್ಡೆ ಮನವಿ ಮಾಡಿದರು.
ನಾನು ಸದ್ಯಕ್ಕೆ ಯಾವುದೇ ಪಕ್ಷದ ಸದಸ್ಯ ಅಲ್ಲ. ಆಯೋಗದಲ್ಲಿದ್ದಾಗ ನಾನು ಯಾವುದೇ ಪಕ್ಷದ ಸದಸ್ಯನಾಗಿರಲು ಸಾಧ್ಯವಿಲ್ಲ. ಮುಂದಿನ ನಿರ್ಧಾರದ ಬಗ್ಗೆ ಕುಟುಂಬ ಸದಸ್ಯರ ಜೊತೆ ಚರ್ಚಿಸುತ್ತೇನೆ. ಸ್ನೇಹಿತರು, ಆಪ್ತರೊಂದಿಗೆ ಮುಂದಿನ ರಾಜಕೀಯದ ನಡೆ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದು ಕೊಳ್ಳುವುದಾಗಿ ತಿಳಿಸಿದರು.
ಬಿಜೆಪಿಯಿಂದ ಅಧಿಕೃತವಾಗಿ ಯಾರೂ ಸಂಪರ್ಕ ಮಾಡಿಲ್ಲ. ಬಿಜೆಪಿಯ ಕೆಲವು ಸ್ನೇಹಿತರು ಕರೆ ಮಾಡಿ ಮಾತನಾಡುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಬೇಕೋ ಬೇಡವೋ ಎಂಬುದು ಮೊದಲ ಚರ್ಚೆ, ಯಾವ ಪಕ್ಷದಿಂದ ಎಂಬುದು ಆಮೇಲೆ. ಮುಂದಿನ ಒಂದು ವಾರದೊಳಗೆ ತೀರ್ಮಾನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ರಜತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ, ಉಡುಪಿ ಪತ್ರಿಕಾ ಭವನ ಸಮಿತಿ ಸಂಚಾಲಕ ಅಜಿತ್ ಅರಾಡಿ ಇದ್ದರು. ಪತ್ರಕರ್ತ ಚೇತನ್ ಮಟಪಾಡಿ ಸ್ವಾಗತಿಸಿ, ನಿರೂಪಿಸಿದರು.