For the best experience, open
https://m.samyuktakarnataka.in
on your mobile browser.

ಸರ್ಕಾರದ ವಿರುದ್ಧ ಶಿಕ್ಷಕರ ರಣಕಹಳೆ

10:19 PM Aug 12, 2024 IST | Samyukta Karnataka
ಸರ್ಕಾರದ ವಿರುದ್ಧ ಶಿಕ್ಷಕರ ರಣಕಹಳೆ

ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರನ್ನು ಒಡೆದು ಆಳುತ್ತಿರುವ ರಾಜ್ಯ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ೨೦೧೬ಕ್ಕಿಂತ ಮುಂಚೆ ನೇಮಕಗೊಂಡ ೧ ಲಕ್ಷ ೨೦ ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರು ಸೋಮವಾರ ರಾಜ್ಯಾದ್ಯಂತ ತರಗತಿ ಬಹಿಷ್ಕರಿಸಿ, ಬೆಂಗಳೂರಿನ ಸ್ವತಂತ್ರ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಶಿಕ್ಷಕರ ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಕರ ಪ್ರತಿನಿಧಿಗಳು, ಸಂಘಟನೆ ಪದಾಧಿಕಾರಿಗಳನ್ನು ಗೃಹ ಕಚೇರಿ ಕೃಷ್ಣಾಗೆ ಆಹ್ವಾನಿಸಿ, ಮಾತುಕತೆ ನಡೆಸಿದರು.
ಸಭೆ ನಡೆಯುತ್ತಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕರೆ ಮಾಡಿ, ಕೂಡಲೇ ಪ್ರತಿಭಟನಾನಿರತ ಶಿಕ್ಷಕರ ಜತೆ ಮಾತುಕತೆ ನಡೆಸುವಂತೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ರಾಮೋಜಿಗೌಡ, ಸಿ.ಟಿ.ರವಿ, ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಶಿಕ್ಷಣ ತಜ್ಞ ನಿರಂಜನ ಆರಾಧ್ಯ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಕೆ.ನಾಗೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ, ಮುಖಂಡರಾದ ಬಾಗೂರು ಮಂಜೇಗೌಡ, ನಾಗರಾಜ ಗುರಿಕಾರ ಸೇರಿದಂತೆ ವಿವಿಧ ಶಿಕ್ಷಕರ ಸಂಘಟನೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆ ಬಳಿಕ ಮಧ್ಯಾಹ್ನ ತುಮಕೂರಿನಿಂದ ಬೆಂಗಳೂರಿಗೆ ಧಾವಿಸಿದ ಸಚಿವ ಮಧು ಬಂಗಾರಪ್ಪ ಅವರು ಪ್ರತಿಭಟನಾನಿರತ ಶಿಕ್ಷಕರನ್ನು ಭೇಟಿ ಮಾಡಿ, ಆಗಸ್ಟ್ ೨೦ರೊಳಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶಿಕ್ಷಕರ ಸಮಸ್ಯೆ ಇತ್ಯರ್ಥಕ್ಕೆ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು. ಇದೇ ವೇಳೆ ಮಾತನಾಡಿದ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ್, ಶಿಕ್ಷಕರ ಬೇಡಿಕೆ ಈಡೇರದಿದ್ದರೆ ಸೆಪ್ಟೆಂಬರ್ ೫ರಿಂದ ಉಗ್ರ ಹೋರಾಟ ನಡೆಸುವುದು ಅನಿವಾರ್ಯ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜಧಾನಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಶಿಕ್ಷಕರು ಹೋರಾಟದಲ್ಲಿ ಭಾಗಿಯಾದ ಪರಿಣಾಮ ರಾಜ್ಯದ ಬಹುತೇಕ ಸರಕಾರಿ ಪ್ರಾಥಮಿಕ ಶಾಲೆಗಳು ಬಿಕೋ ಎನ್ನುತ್ತಿದ್ದವು. ಕೇವಲ ೨೨ ಸಾವಿರ ಪದವಿ ಶಿಕ್ಷಕರು ಮಾತ್ರ ಶಾಲೆಗೆ ಹಾಜರಾದರೆ ೧.೨೦ ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರು ತರಗತಿ ಬಹಿಷ್ಕರಿಸಿದ್ದರು.
೨೦೧೭ರವರೆಗೆ ನೇಮಕಗೊಂಡ ಶಿಕ್ಷಕರನ್ನು ೧ರಿಂದ ೭ನೇ ತರಗತಿ ಬೋಧನೆಗೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಿ ೨೦೧೭ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ೨೦೧೭ರ ನಂತರ ನೇಮಕಗೊಂಡ ಶಿಕ್ಷಕರಿಗಷ್ಟೇ ಅನ್ವಯಿಸಬೇಕು ಹಾಗೂ ೨೦೧೬ಕ್ಕಿಂತ ಮೊದಲೇ ನೇಮಕಗೊಂಡವರಿಗೆ ಪೂರ್ವಾನ್ವಯ ಮಾಡಬಾರದು. ೨೦೧೬ಕ್ಕಿಂತ ಮೊದಲು ನೇಮಕಗೊಂಡ ಶಿಕ್ಷಕರನ್ನು ೧ರಿಂದ ೫ನೇ ತರಗತಿ ಬೋಧನೆಗೆ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕ (ಪಿಎಸ್‌ಟಿ) ಎಂದು ಪದನಾಮ ಮಾಡಿರುವುದನ್ನು ರದ್ದುಪಡಿಸಿ ೧ರಿಂದ ೮ರವರೆಗೆ ಬೋಧಕ ಶಿಕ್ಷಕರೆಂದು ಪರಿಗಣಿಸಬೇಕು ಎಂದು ಶಿಕ್ಷಕರು ಸರ್ಕಾರವನ್ನು ಒತ್ತಾಯಿಸಿದರು. ವಿದ್ಯಾರ್ಹತೆ ಹೊಂದಿರುವ ಶಿಕ್ಷಕರಿಗೆ ೧ರಿಂದ ೯ರವರೆಗೆ ಬೋಧನೆಗೆ ಪ್ರೌಢಶಾಲಾ ಶಿಕ್ಷಕರೆಂದು ಬಡ್ತಿ ನೀಡಬೇಕು. ಪದವಿ, ಸ್ನಾತಕೋತ್ತರ. ಪಿಎಚ್‌ಡಿ ಮತ್ತಿತರ ಉನ್ನತ ಶಿಕ್ಷಣ ಅರ್ಹತೆ ಹೊಂದಿದವರಿಗೆ ನ್ಯಾಯ ಒದಗಿಸಬೇಕು ಎಂದು ಶಿಕ್ಷಕರು ಆಗ್ರಹಿಸಿದರು.

Tags :