ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸರ್ಕಾರವೆಂಬುದು ವಿಷಕನ್ಯೆಯಂತೆ

03:00 AM Oct 07, 2024 IST | Samyukta Karnataka

ಇತ್ತೀಚಿಗೆ ನಾಗ್ಪುರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಸರ್ಕಾರಗಳ ಭರವಸೆಯಲ್ಲಿ ನಿಮ್ಮ ಉದ್ಯಮಗಳನ್ನು ಸ್ಥಾಪಿಸಬೇಡಿ, ಸ್ವಾವಲಂಬಿ ನೆಲೆಗಟ್ಟಿನಲ್ಲಿ ಉದ್ಯಮಗಳನ್ನು ಸ್ಥಾಪಿಸಿ ಯಾವುದೇ ಸಬ್ಸಿಡಿ ಅರ್ಥಾತ್ ಸರ್ಕಾರಗಳಿಂದ ಸಹಾಯಧನದ ನಿರೀಕ್ಷೆ ಮಾಡಬೇಡಿ ಎಂದು ಹೇಳಿದಲ್ಲದೆ ಈ ವಿಷಯದಲ್ಲಿ ಸರ್ಕಾರಗಳು ವಿಷಕನ್ಯೆ ಇದ್ದಂತೆ ಎಂದೂ ಹೇಳಿದರು. ಅಂದ ಹಾಗೆ ಗಡ್ಕರಿ ಸಾಹೇಬರು ಸರ್ಕಾರಗಳು ವಿಷಕನ್ಯೆಯಂತೆ ಎಂದು ಹೇಳಿದ್ದು ಇದೇ ಮೊದಲೇನಲ್ಲ ಕಳೆದ ವರುಷ ಕೂಡಾ ಹೀಗೆ ಹೇಳಿದ್ದರು ಹಾಗು ಇತ್ತೀಚಿನ ದಿನಗಳಲ್ಲಿ ಗಡ್ಕರಿ ಸಾಹೇಬರು ಯಾವುದೆ ಅವಕಾಶವನ್ನು ಬಿಡದೆ ತಮ್ಮದೇ ಸರಕಾರವನ್ನು ನಿರ್ಭಿಡೆಯಿಂದ ತರಾಟೆ ತೆಗೆದು ಕೊಳ್ಳುತ್ತಿರುವುದು ಹೊಸದೇನಲ್ಲ. ಈ ವಿಷಕನ್ಯೆ ಹೇಳಿಕೆಯು ಕೂಡ ಮಹಾರಾಷ್ಟ್ರದ ತಮ್ಮದೇ ಸರ್ಕಾರದ ವಿರುದ್ಧವಾಗಿತ್ತು ಎಂಬುದು ಗಮನಾರ್ಹ ಅಂಶ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ಮಾಝಿ ಲಾಡಕಿ ಬಹಿನ್ ಎಂಬ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆ ಅಡಿಯಲ್ಲಿ ಯಾವ ಕುಟುಂಬದ ಆದಾಯ ವಾರ್ಷಿಕವಾಗಿ ೨.೫ ಲಕ್ಷ ರೂಪಾಯಿಗಳನ್ನು ಮೀರುವುದಿಲ್ಲವೋ ಅಂತಹ ಕುಟುಂಬದ ೨೧ ರಿಂದ ೬೫ ವರ್ಷ ವಯಸ್ಸಿನ ಮಹಿಳೆಯರು ತಿಂಗಳಿಗೆ ೧೫೦೦ ರೂಪಾಯಿಗಳನ್ನು ಪಡೆಯಲು ಅರ್ಹರು ಎಂದು ಹೇಳಿತು ಹಾಗು ಈ ಯೋಜನೆ ಒಂದರಿಂದಲೇ ರಾಜ್ಯಕ್ಕೆ ೪೬,೦೦೦ ಕೋಟಿ ರೂಪಾಯಿ ಹೊರೆಯಾಗುವ ಸಾಧ್ಯತೆಯಿದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿಕೊಂಡಿತ್ತು. ಈ ವಿಷಯವನ್ನು ಉದ್ದೇಶಿಸಿಯೇ ಗಡ್ಕರಿ ಸಬ್ಸಿಡಿ ನಿಮಗೆ ಸಿಗಬಹುದು ಆದರೆ ಅದು ನಿಮಗೆ ಎಂದು ತಲುಪೀತು ಎಂದೂ ಹೇಳಲಾಗದು ಏಕೆಂದರೆ ನಿಮಗಾಗಿ ನಿಮ್ಮ ಉದ್ಯಮಕ್ಕಾಗಿ ತೆಗೆದಿಟ್ಟ ಹಣ ಲಾಡಕಿ ಬಹಿನ್ ಯೋಜನೆಗೆ ಹರಿದು ಹೋದೀತು ಆದ್ದರಿಂದ ಸಬ್ಸಿಡಿ ಅದು ಬಂದಾಗಲೇ ನಿಜ ಎಂದು ವಾಣಿಜ್ಯೋದ್ಯಮಿಗಳಿಗೆ ಕಿವಿ ಮಾತು ಹೇಳಿದ್ದರು. ಗಡ್ಕರಿ ಸಾಹೇಬರು ಹೇಳಿದ ಮಾತಲ್ಲಿ ಎಳ್ಳಷ್ಟೂ ತಪಿಲ್ಲ ಆದರೆ ಈ ಮಾತನ್ನು ಸದನದ ಒಳಗೆ ಆಡಬೇಕಿತ್ತು, ಆದರದು ಸಾಧ್ಯವಿಲ್ಲ ತಮ್ಮದೇ ಪಕ್ಷದ ನೀತಿ ನಿಯಮಗಳ ಬಗ್ಗೆ ಸೊಲ್ಲೆತ್ತುವಂತಿಲ್ಲ. ಆದರೆ ಗಡ್ಕರಿ ಅಂತಹವರನ್ನು ಯಾರೂ ತಡೆಯಲು ಸಾಧ್ಯವಿಲ್ಲ ಏನನ್ನು ಹೇಳಬೇಕು ಅದು ಸದನದ ಒಳಗಡೆ ಆಗದಿದ್ದರೆ ಹೊರಗಾದರು ಸರಿ ಹೇಳಿಯೇ ಸಿದ್ಧ.
ಹಾಗೆ ನೋಡಿದರೆ ಗಡ್ಕರಿ ಸಾಹೇಬರು ತಮ್ಮದೇ ಸರ್ಕಾರದ ರೀತಿ ನೀತಿಗಳನ್ನು ತರಾಟೆಗೆ ತೆಗೆದುಕೊಂಡದ್ದು ಇದೇ ಮೊದಲಲ್ಲ, ವಿತ್ತ ಸಚಿವರಿಗೆ ಹೆಲ್ತ್ ಇನ್ಶೂರೆನ್ಸ್ ಮೇಲೇಕೆ ಜಿಎಸ್‌ಟಿ ಎಂದು ಕೇಳಿದ್ದರು. ಅದೇ ರೀತಿ ನಾಗ್ಪುರದಲ್ಲಿ ನಡೆದ ಸಮಾರಂಭದಲ್ಲಿ ರಾಮದಾಸ್ ಅಠಾವಳೆ ಅವರನ್ನು ಅವರ ರಾಜಕೀಯ ಚಾಕಚಕ್ಯತೆಯನ್ನು ಉದ್ದೇಶಿಸಿ ಮಾತನಾಡುತ್ತ ೨೦೨೯ ರಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆಯೋ ಇಲ್ಲವೋ ಆದರೆ ರಾಮದಾಸ್ ಅಠಾವಳೆ ಅವರು ಮಾತ್ರ ಮತ್ತೆ ಮಂತ್ರಿ ಆಗುತ್ತಾರೆ ಎಂದು ಹೇಳುವುದರ ಮೂಲಕ ಹಲವರ ನಿದ್ದೆ ಗೆಡಿಸಿದ್ದರು. ಕಳೆದ ತಿಂಗಳು ನಡೆದ ಸಮಾರಂಭದಲ್ಲಂತೂ ನಾವು ವಿಶ್ವಗುರು ಆಗಬೇಕಾದರೆ ಸಾಮಾಜಿಕ ಸಾಮರಸ್ಯದ ಹಾದಿ ಹಿಡಿಯಬೇಕು ಎಂದು ಹೇಳಿ ಎಲ್ಲರೂ ಬೆರಗಾಗುವಂತೆ ಮಾಡಿದ್ದರು. ಹಾಗೆಂದು ಯಾರ ಬಗ್ಗೆಯೂ ವಿಷ ಕಾರುವ ಪ್ರವೃತ್ತಿ ಗಡ್ಕರಿ ಅವರದಲ್ಲ ಅವರೇ ಹೇಳುವ ಹಾಗೆ ನಮ್ಮಲ್ಲಿ ಅಭಿಪ್ರಾಯ ಭೇದಗಳು ಇರುವುದು ಸಮಸ್ಯೆ ಅಲ್ಲ ಅದನ್ನು ವೈಯುಕ್ತಿಕ ನೆಲೆಗಟ್ಟಿನಲ್ಲಿ ವಿರೋಧ ಮಾಡುತ್ತಿದ್ದರೆಂದು ಭಾವಿಸಬಾರದು ಏಕೆಂದರೆ ಮುಂದೊಂದು ದಿನ ನಮ್ಮ ಭಿನ್ನ ಭಿನ್ನ ಅಭಿಪ್ರಾಯಗಳನ್ನು ಗಟ್ಟಿಯಾಗಿ ಹೇಳದೆ ಇದ್ದರೆ ಅಭಿಪ್ರಾಯದ ಕೊರತೆಯ ಸಮಸ್ಯೆ ಎದುರಾಗಬಹುದು ಎಂದು ತಮ್ಮ ಹೇಳಿಕೆಗಳ ಮರ್ಮವೇನು ಸಮಜಾಯಿಸಿ ಕೊಟ್ಟಿದ್ದರು. ಇದು ಗಡ್ಕರಿ ಸ್ಟೈಲ್.
ನಿತಿನ್ ಗಡ್ಕರಿ ಅವರ ಕಾಳಜಿ ನಿಜಕ್ಕೂ ಮೆಚ್ಚಬೇಕಾದ್ದೇ. ಅತೀ ಎಂಬಂತೆ ಓಲೈಕೆಯ ರಾಜಕಾರಣಕ್ಕಾಗಿ, ಚುನಾವಣೆ ಗೆಲ್ಲಲೆಂದು ಕೊಡಮಾಡುವ ಗ್ಯಾರಂಟಿಯಿಂದಾಗಿ ಇಂದು ಹಿಮಾಚಲ ಪ್ರದೇಶ ಯಾವ ಪರಿಸ್ಥಿತಿಗೆ ಬಂದು ನಿಂತಿದೆ ಎಂದರೆ ಸಚಿವರಿಗೆ ೨ ತಿಂಗಳ ವೇತನ ಕಡಿತಗೊಳಿಸಿದೆ. ಗಾಂಜಾ ಕೃಷಿಯನ್ನು ಕಾನೂನು ಬದ್ಧಗೊಳಿಸಿದೆ. ಪಕ್ಷಾಂತರ ಮಾಡುವ ಶಾಸಕರಿಗೆ ಪಿಂಚಣಿ ಕಡಿತಗೊಳಿಸುವ ಮಸೂದೆಯನ್ನೂ ಅಂಗೀಕರಿಸಿದೆ. ಇದೆಲ್ಲದರ ಮಧ್ಯೆ ಹಿಮಾಚಲ ಪ್ರದೇಶ ಸರ್ಕಾರ ಶೌಚಾಲಯ ಆಸನಗಳನ್ನು ಆಧರಿಸಿ ತೆರಿಗೆ ವಿಧಿಸಲು ಮುಂದಾಗಿದೆ ಎಂಬ ವದಂತಿ ಹರಡಿತ್ತು ಆದರೆ ಇದು ನಿಜವಲ್ಲ ಎಂಬ ಸಮಜಾಯಿಷಿಯನ್ನು ಹಿಮಾಚಲ ಪ್ರದೇಶ ಸರ್ಕಾರ ಕೊಡಬೇಕಾಯಿತು. ಹೀಗೆ ಸಬ್ಸಿಡಿಗಳನ್ನೂ ಘೋಷಿಸಿ ವೆನಿಝುಲ ಎಂಬ ದೇಶ ಪಾತಾಳಕ್ಕೆ ತಲುಪಿದ್ದು ಯಾವುದೇ ದೇಶವಿರಲಿ ಅಗತ್ಯಕ್ಕಿಂತ ಹೆಚ್ಚು ಸಬ್ಸಿಡಿಗಳನ್ನು ಏಕೆ ನೀಡಬಾರದು ಎಂಬುದಕ್ಕೆ ಒಂದು ಸ್ಪಷ್ಟ ನಿದರ್ಶನ ವೆನಿಝುಲ ದೇಶ. ಅಷ್ಟೇಕೆ ಎರಡೇ ಎರಡು ವರುಷಗಳ ಹಿಂದೆ ಶ್ರೀಲಂಕಾ ಪರಿಸ್ಥಿಯು ಇದೇ ರೀತಿ ಆಗಿತ್ತು ಹಾಗು ಈ ಪರಿಸ್ಥಿತಿಯಿಂದ ಹೊರ ಬರಲು ಶ್ರೀಲಂಕಾ ಪಡುತ್ತಿರುವ ಪಡಿಪಾಟಲು ಎಲ್ಲವೂ ನಮ್ಮ ಕಣ್ ಮುಂದಿದೆ. ಅಂದರೆ ಸರ್ಕಾರಗಳಿಗೆ ತಾವು ಮಾಡಬೇಕಾದ ಕೆಲಸಗಳ ಬಗ್ಗೆ ಸ್ಪಷ್ಟತೆ ಇರಬೇಕು. ಸರ್ಕಾರಗಳು ಬಡವ ಬಲ್ಲಿದರ ಹಾಗು ಸಮಾಜದ ಪ್ರತಿ ವರ್ಗಗಳ ಶಾಶ್ವವಾತವಾಗಿ ಬಡತನವನ್ನು ನಿರ್ಮೂಲನೆ ಮಾಡುವ ಯೋಚನೆ ಮಾಡಬೇಕೆ ಹೊರತು ತತ್‌ಕ್ಷಣಕ್ಕೆ ೧೫೦೦ ರೂಪಾಯಿ ಕೊಟ್ಟೂ ಅಥವಾ ಗೃಹಲಕ್ಷ್ಮೀ, ಯೋಜನೆಗಳಿಂದಲೋ ಜನರನ್ನು ಬಡತನ ರೇಖೆಯಿಂದ ಮೇಲೆತ್ತಬಹುದು ಎಂದು ಭಾವಿಸಿದರೆ ಅದು ತಪ್ಪಾದೀತು ಹಾಗು ಅದರಲ್ಲೂ ಚುನಾವಣೆ ಪ್ರಣಾಳಿಕೆಗಳಲ್ಲಿ ವಿದ್ಯುತ್ ಉಚಿತ, ಗೃಹಲಕ್ಷ್ಮೀ ಯೋಜನೆ, ಬಸ್ ಪ್ರಯಾಣ ಉಚಿತ ಹೀಗೆ ಇಂತಹ ಪ್ರಲೋಭನೆಯನ್ನುಂಟು ಮಾಡುವ ಅಂಶಗಳೇ ತುಂಬಿದ್ದರೆ ಅದು ಪರೋಕ್ಷವಾಗಿ ಲಂಚದಂತೆ ಕಂಡು ಬರುತ್ತದೆ ಅಲ್ಲದೆ ಶ್ರೀ ಸಾಮಾನ್ಯನ ಮೌಲ್ಯವನ್ನು ಕೇವಲ ಒಂದಿಷ್ಟು ಸಾವಿರ ರೂಪಾಯಿಗಳಲ್ಲಿ ಹಿಡಿದಿಟ್ಟಂತಾಗುತ್ತದೆ ಎಂಬುದನ್ನು ಜನ ಸಾಮಾನ್ಯರು ಅರಿಯಬೇಕು.
ಸರ್ಕಾರಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಕೈಗಾರಿಕಾ, ವಾಣಿಜ್ಯ ಮತ್ತು ಕೃಷಿ ಬೆಳವಣಿಗೆಗಳನ್ನು ಉತ್ತೇಜಿಸುವ ನೀತಿಗಳನ್ನು ಜಾರಿಗೊಳಿಸುವುದು ಮೂಲಸೌಕರ್ಯದಲ್ಲಿ ಭಾರೀ ಹೂಡಿಕೆಗಳನ್ನು ಉತ್ತೇಜಿಸುವುದು ಇಂತಹ ಸಮಗ್ರ ನೀತಿಗಳನ್ನು ಅಳವಡಿಸುವದರತ್ತ ಗಮನಿಸಬೇಕು. ಹಾಗೆ ಮಾಡುವುದರಿಂದ ದೇಶದ ಕಟ್ಟ ಕಡೆಯ ಪ್ರಜೆಯನ್ನು ತಲುಪಬಹುದು. ಇದಕ್ಕೆ ಸೂಕ್ತ ನಿದರ್ಶನವೆಂದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸರ್ಕಾರಗಳು ಕೊಟ್ಟ ಆದ್ಯತೆ ಹಾಗು ಕಲ್ಪಿಸಿದ ಮೂಲ ಸೌಕರ್ಯ. ಕರ್ನಾಟಕದಲ್ಲಂತೂ ಕರ್ನಾಟಕ ಸರ್ಕಾರ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಕೊಟ್ಟ ಉತ್ತೇಜನದಿಂದಾಗಿ ಇಡೀ ಪ್ರಪಂಚದಲ್ಲಿ ಇಂದು ಮಾಹಿತಿ ತಂತ್ರ ಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ತನ್ನದೇ ಸ್ಥಾನವನ್ನು ಕಂಡುಕೊಂಡಿದೆ ಅಷ್ಟೇ ಅಲ್ಲ ಮಾಹಿತಿ ತಂತ್ರ ಜ್ಞಾನದೊಂದಿಗೆ ಸಂಬಂಧಿತ ಹಾಗು ಪೂರಕ ಉದ್ಯೋಗಗಳು ತಲೆ ಎತ್ತಿವೆ. ಬಡತನದ ಬೇಗೆಯಿಂದ ಜನರನ್ನು ಮೇಲೆತ್ತಬೇಕೆಂದರೆ ಸರ್ಕಾರಗಳು ಹೊಸದಾಗಿ ಏನನ್ನು ಮಾಡುವ ಅವಶ್ಯಕೆತೆಯಿಲ್ಲ ಈಗಿರುವ ಯೋಜನೆಗಳನ್ನೇ ಸಮರ್ಪಕವಾಗಿ ಕಾರ್ಯಗತಗೊಳಿಸಿದರೆ ಸಾಕು ಯಾವ ರಾಜ್ಯಗಳಿಗೂ ಹೊಸ ಹೊಸ ಯೋಜನೆಗಳ ಅವಶ್ಯಕತೆಯಿಲ್ಲ. ಮೊದ ಮೊದಲು ಬಿಜೆಪಿ ಪಾರ್ಟಿ ವಿಥ್ ಡಿಫರೆನ್ಸ್. ಪಾರ್ಟಿ ಫಾರ್ ಡೆವಲಪ್ಮೆಂಟ್ ಎಂದು ಹೇಳಿಕೊಂಡು ಈ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದು ನಿಜ ಆದರೆ ಬಿಜೆಪಿ ಎಂಬ ಬಿಜೆಪಿ ಕೂಡ ಮಹಾರಾಷ್ಟ್ರ ಗೆಲ್ಲಲ್ಲು ಲಾಡಕಿ ಬೆಹನ್ ನಂತಹ ಯೋಜನೆಗಳನ್ನು ಹಮ್ಮಿಕೊಳ್ಳುತ್ತದ್ದೆ ಎಂದರೆ ಇದು ಪಕ್ಷಾತೀತ ಪಿಡುಗು. ಹಾಗಾದಾಗ ಭವಿತವ್ಯದ ದೃಷ್ಟಿಯಿಂದ ಯಾರಾದರೊಬ್ಬರು ಮಾತಾಡಲೇ ಬೇಕು ಆ ಕೆಲಸವನ್ನು ಆಗಿಂದಾಗ್ಗೆ ಗಡ್ಕರಿ ಮಾಡುತ್ತಿದ್ದಾರೆ. ಇದು ಕೆಲವರಿಗೆ ಮೋದಿ ಹಾಗು ಗಡ್ಕರಿ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬಂತೆ ತೋರಬಹುದು. ಆದರೆ ಗಡ್ಕರಿ ಇರುವುದೇ ಹಾಗೆ ಗಡ್ಕರಿ ಮೋದಿ ಅವರ ಜಾಗದಲ್ಲಿ ಇನ್ಯಾರಾದರೂ ಪ್ರಧಾನಿ ಆಗಿದ್ದರು ಇದನ್ನೇ ಮಾಡುತ್ತಿದ್ದರು. ನೀವೇ ನೋಡಿ ಗಡ್ಕರಿ ಮಾತನಾಡುವಾಗ ಒಬ್ಬ ರಾಜಕೀಯ ನಾಯಕನಿಗಿಂತ ಹೆಚ್ಚಾಗಿ ವ್ಯಾಪಾರ ಕುಶಾಗ್ರಮತಿ ಉಳ್ಳ ವಾಣಿಜ್ಯೋದ್ಯಮಿಯೋ ಅಥವಾ ಚತುರ ರಾಜತಾಂತ್ರಿಕ ನೈಪುಣ್ಯತೆ ಉಳ್ಳ ನಿಪುಣ ವ್ಯಕ್ತಿ ಮಾತನಾಡಿದಂತೆ ಭಾಸವಾಗುತ್ತದೆ. ಗಡ್ಕರಿ ಅವರ ಈ ಗುಣವೇ ಅವರನ್ನು ಆಳುವ ಪಕ್ಷದಲ್ಲಷ್ಟೇ ಅಲ್ಲ ವಿರೋಧ ಪಕ್ಷಗಳಲ್ಲೂ ಅಭಿಮಾನಿಗಳನ್ನು ಹುಟ್ಟು ಹಾಕುವಂತೆ ಮಾಡಿದೆ, ಇದೇ ಕಾರಣಕ್ಕಾಗಿ ಗಡ್ಕರಿ ಏನು ಮಾಡಿದರು ಸುದ್ದಿಯಾಗುತ್ತಾರೆ. ಅವಕಾಶ ಸಿಕ್ಕರೆ ಮುಂದೊಂದು ದಿನ ಪ್ರಧಾನಿಯೂ ಆಗಲಿ ಎಂದು ಬಯಸುತ್ತಾರೆ. ಆ ಸುದ್ದಿಯನ್ನು ಆಯಾ ಕಾಲಕ್ಕೆ ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಮಾಧ್ಯಮಗಳು ಹಾಗು ಜನ ಸಾಮಾನ್ಯರು ಅರ್ಥೈಸಿಕೊಳ್ಳುತ್ತಾರೆ.

Next Article