For the best experience, open
https://m.samyuktakarnataka.in
on your mobile browser.

ಸರ್ಕಾರಿ ಆಸ್ಪತ್ರೆಯ ಸೂಚನಾ ಫಲಕಕ್ಕೆ ‘ಕೋಮು ಬಣ್ಣ’

07:19 PM Dec 11, 2023 IST | Samyukta Karnataka
ಸರ್ಕಾರಿ ಆಸ್ಪತ್ರೆಯ ಸೂಚನಾ ಫಲಕಕ್ಕೆ ‘ಕೋಮು ಬಣ್ಣ’

ಪುತ್ತೂರು: ರೋಗಿಗಳ ಸುರಕ್ಷತೆ ಹಾಗೂ ಚಿಕಿತ್ಸೆಯ ದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಅಳವಡಿಸಲಾದ ಸೂಚನಾ ಫಲಕವೊಂದು ಇದೀಗ ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದ್ದು, ಇದಕ್ಕೊಂದು ‘ಕೋಮುಬಣ್ಣ’ ಬಳಿಯುವ ಪ್ರಯತ್ನ ನಡೆದಿರುವುದು ಸಾಮಾಜಿಕ ಸ್ವಾಸ್ಥ್ಯಕ್ಕೆ ಆತಂಕ ಉಂಟು ಮಾಡುವ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿನ ಇಸಿಜಿ ಹಾಗೂ ತುರ್ತು ಚಿಕಿತ್ಸಾ ಕೊಠಡಿಯ ಬಾಗಿಲಿನಲ್ಲಿ ‘ಬುರ್ಖಾ ತೆಗೆದು ಒಳ ಬನ್ನಿ’ ಎಂಬ ಸೂಚನಾ ಫಲಕ ಹಾಕಲಾಗಿತ್ತು. ಈ ಫಲಕ ಅಳವಡಿಕೆ ಮಾಡಿರುವುದು ವರ್ಷದ ಹಿಂದೆ. ಆದರೆ ಈ ಸೂಚನಾ ಫಲಕದ ಫೋಟೋ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಾರಣ ಇದೊಂದು ‘ಚರ್ಚಾ ವಿವಾದ’ ವಿಚಾರವಾಗಿ ಪರಿವರ್ತಿತವಾಗಿತ್ತು.
ಪುತ್ತೂರು ಶಾಸಕರ ವಾಟ್ಸಾಪ್ ಗ್ರುಪಿನಲ್ಲಿಯೂ ಇದನ್ನು ಹರಿಬಿಡಲಾಗಿತ್ತು. ವಾಸ್ತವವಾಗಿ ಇಸಿಜಿ ಮಾಡಲು ಬುರ್ಖಾ ತೆಗೆಯಲೇಬೇಕಾದ ಅಗತ್ಯವಿದ್ದು, ತುರ್ತು ಚಿಕಿತ್ಸೆಯ ಹಿನ್ನಲೆಯಲ್ಲಿ ಇಂತಹ ಸೂಚನೆಯ ಫಲಕ ಹಾಕಲಾಗಿತ್ತು. ಆದರೆ ಈಗ ಅದಕ್ಕೆ ಬಣ್ಣ ಹಚ್ಚುವ ಪ್ರಯತ್ನ ನಡೆಸಲಾಗಿದೆ.
ಸೂಚನಾ ಫಲಕ ತೆರವು:
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವಂತೆ ಆಸ್ಪತ್ರೆಗಳ ಮೇಲೆ ಬಂದ ಒತ್ತಡದ ಹಿನ್ನಲೆಯಲ್ಲಿ ಇದೀಗ ಸೂಚನಾ ಫಲಕವನ್ನು ತೆರವುಗೊಳಿಸಲಾಗಿದೆ. ಈ ಸೂಚನಾ ಫಲಕದ ಬಗ್ಗೆ ವಿದೇಶಿ ಕರೆಯ ಬೆದರಿಕೆಗಳೂ ಬಂದಿವೆ ಎನ್ನಲಾಗಿದೆ. ಒಟ್ಟಿನಲ್ಲಿ ಇದೊಂದು ಗೊಂದಲದ ವಿಚಾರವಾಗಿ ಮಾರ್ಪಟ್ಟಿದ್ದು, ಇಲ್ಲಿ ಕೃತಕ ಸಮಸ್ಯೆಯೊಂದನ್ನು ಸೃಷ್ಟಿಸಿರುವ ವ್ಯಕ್ತಿಗಳ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ನಡುವೆ ಆರೋಗ್ಯ ಸೇವೆ ವಿಚಾರದಲ್ಲಿ ಧರ್ಮವನ್ನು ಎಳೆದು ತಂದಿರುವ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತಗೊಂಡಿದೆ.