ಸರ್ಕಾರಿ ವೈದ್ಯರಿಗೆ ರಕ್ಷಣೆ ಗಗನ ಕುಸುಮ
ಕೋಲ್ಕತ್ತದಿಂದ ಮಹಿಳಾ ವೈದ್ಯಾಧಿಕಾರಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಘಟನೆ ಇಡೀ ದೇಶವನ್ನು ಕಂಗೆಡಿಸಿತ್ತು. ಸುಪ್ರೀಂ ಕೋರ್ಟ್ ವಿಶೇಷ ವಿಚಾರಣೆ ನಡೆಸಿ ವೈದ್ಯರ ರಕ್ಷಣೆಗೆ ಪ್ರತ್ಯೇಕ ಪಡೆ ರಚಿಸುವಂತೆ ಸೂಚಿಸಿತು. ಆದರೂ ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೋಲ್ಕತ್ತ ಘಟನೆ ನಡೆದ ಮೇಲೆ ಈಗ ತಮಿಳುನಾಡಿನಲ್ಲಿ ಮತ್ತೊಂದು ಘಟನೆ ನಡೆದಿದೆ. ಇದಕ್ಕೆ ಪರಿಹಾರ ಎಂದರೆ ಸರ್ಕಾರಗಳು ಆಸ್ಪತ್ರೆಗಳ ಹಾಗೂ ವೈದ್ಯರ ಸಂಖ್ಯೆ ಹೆಚ್ಚಿಸಬೇಕು. ಡಾ. ಬಾಲಾಜಿ ಜಗನ್ನಾಥನ್ ಮೇಲೆ ದಾಳಿ ನಡೆಸಿ ಚಾಕುವಿನಿಂದ ಇರಿಯಲಾಗಿದೆ. ಕ್ಯಾನ್ಸರ್ ಪೀಡಿತ ತಾಯಿಗೆ ಸರಿಯಾದ ಚಿಕಿತ್ಸೆ ದೊರಕಲಿಲ್ಲ ಎಂದು ಆರೋಪಿಸಿ ವೈದ್ಯರ ಮೇಲೆ ಹಲ್ಲೆ ನಡೆದಿದೆ. ಇದಕ್ಕೆ ವೈದ್ಯರ ಮೇಲೆ ದ್ವೇಷ ಎಂದು ಭಾವಿಸುವುದಕ್ಕಿಂತ ತನ್ನ ತಾಯಿಯನ್ನು ಕಳೆದುಕೊಂಡ ವ್ಯಕ್ತಿಯ ಹತಾಶಭಾವ ಕಾರಣ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವಿನ ಅಂಚಿನಲ್ಲಿರುವ ರೋಗಿಗಳ ಆಪ್ತರಿಗೆ ಸ್ವಾಂತನ ಹೇಳಿ ಅವರನ್ನು ಮಾನಸಿಕವಾಗಿ ಸಿದ್ಧಪಡಿಸುವ ಕೆಲಸ ನಡೆಯುತ್ತಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಹೀಗಾಗಿ ಅಲ್ಲಿ ಇಂಥ ಹೆಚ್ಚು ಪ್ರಕರಣಗಳು ನಡೆಯುವುದಿಲ್ಲ. ಎಲ್ಲ ಘಟನೆಗಳಲ್ಲೂ ವೈದ್ಯಕೀಯ ನಿರ್ಲಕ್ಷ್ಯ ಎಂದು ಆರೋಪಿಸುವುದು ಮಾಮೂಲಾಗಿ ಬಿಟ್ಟಿದೆ. ವೈದ್ಯಕೀಯ ನಿರ್ಲಕ್ಷ್ಯ ನಿಜವಾಗಿಯೂ ನಡೆದಿದ್ದಲ್ಲಿ ಅದನ್ನು ಮತ್ತೊಬ್ಬ ವೈದ್ಯರೇ ಹೇಳಬೇಕು. ಜನಸಾಮಾನ್ಯರು ತೀರ್ಮಾನಕ್ಕೆ ಬರಲು ಅವಕಾಶವಿಲ್ಲ. ಒಂದು ವೇಳೆ ಆರೋಪ ಸಾಬೀತಾದಲ್ಲಿ ವೈದ್ಯರು ತಮ್ಮ ವೃತ್ತಿಯನ್ನು ಮುಂದುವರಿಸದಂತೆ ನಿಷೇಧಿಸಬಹುದು. ಅಲ್ಲದೆ ಜೈಲು ಶಿಕ್ಷೆಯನ್ನೂ ವಿಧಿಸಬಹುದು. ಈ ನ್ಯಾಯಾಂಗ ಪ್ರಕ್ರಿಯೆ ವಿಳಂಬವಾಗುತ್ತದೆ ಎಂದು ರೋಗಿಯ ಮನೆಯವರು ನೇರವಾಗಿ ವೈದ್ಯರ ಮೇಲೆ ದಾಳಿ ನಡೆಸುವುದಕ್ಕೆ ಆರಂಭಿಸಿದ್ದಾರೆ. ಸರ್ಕಾರಿ ಆಸ್ಪತ್ರೆ ವೈದ್ಯರು ಯಾವ ರೋಗಿಯನ್ನು ಹಿಂದಕ್ಕೆ ಕಳುಹಿಸಲು ಬರುವುದಿಲ್ಲ. ರೋಗಿಯ ಪ್ರವೇಶಕ್ಕೆ ಅವಕಾಶವಿಲ್ಲದಿದ್ದರೂ ನಿರಾಕರಿಸುವಂತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರಿ ವೈದ್ಯರು ಸೂಕ್ತ ಚಿಕಿತ್ಸೆ ನೀಡುವುದು ಕಷ್ಟ. ಅದರಲ್ಲೂ ಕಡು ಬಡವರಿಗೆ ಹಣದ ಕೊರತೆಯೂ ಇರುತ್ತದೆ. ಅವರು ಸರ್ಕಾರಿ ಆಸ್ಪತ್ರೆಯಲ್ಲೇ ಇರಬೇಕು. ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದರೆ ಸವಲತ್ತು ಹೆಚ್ಚಿಸಬಹುದು. ಆದರೆ ಯಾವುದೇ ಸರ್ಕಾರ ಆರೋಗ್ಯಕ್ಕೆ ಅನುದಾನ ಹೆಚ್ಚಿಸಲು ಮನಸ್ಸು ಮಾಡಿಲ್ಲ. ಒಂದು ಕಡೆ ವೈದ್ಯರ ಕೊರತೆ ಮತ್ತೊಂದು ಕಡೆ ರೋಗಿಗಳ ಸಂಖ್ಯೆ ದಿನೇದಿನೇ ಅಧಿಕಗೊಳ್ಳುತ್ತಿರುವುದು ಅಕ್ರಮದ ಹಾದಿ ಅನುಸರಿಸಲು ಕಾರಣವಾಗುತ್ತಿದೆ.
ಸರ್ಕಾರಿ ವೈದ್ಯರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಬಯಸಿ ವೈದ್ಯಕೀಯ ಕಾಲೇಜುಗಳಲ್ಲಿ ಮೆರಿಟ್ ಸೀಟುಗಳನ್ನು ಹೆಚ್ಚಿಸಲಾಗಿದೆ. ಗ್ರಾಮೀಣ ಸೇವೆಯನ್ನು ಕಡ್ಡಾಯ ಮಾಡಲಾಗಿದೆ. ಆದರೂ ಗ್ರಾಮಗಳಲ್ಲಿ ವೈದ್ಯರ ಕೊರತೆ ಇರುವುದಂತೂ ನಿಜ. ಇಂಥ ಪರಿಸ್ಥಿತಿಯಲ್ಲಿ ಕೆಲವರು ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಅದರಿಂದ ಇತರ ಬಡವರಿಗೆ ಉತ್ತಮ ವೈದ್ಯಕೀಯ ಸೇವೆ ಲಭಿಸುವುದಿಲ್ಲ. ವೈದ್ಯರು ಮುಷ್ಕರ ನಡೆಸಬಾರದು ಎಂದು ಹೇಳುತ್ತೇವೆ. ಆದರೆ ಅವರಿಗೆ ಸೂಕ್ತ ರಕ್ಷಣೆ ಒದಗಿಸಲಿಲ್ಲ ಎಂದರೆ ವೈದ್ಯರು ಕೆಲಸ ಮಾಡುವುದಾದರೂ ಹೇಗೆ ಎಂಬುದನ್ನು ಚಿಂತಿಸಬೇಕು. ರೈಲ್ವೆ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳು ತಮ್ಮದೇ ಆದ ರಕ್ಷಣಾ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. ಕೇಂದ್ರ ಮತ್ತು ರಾಜ್ಯ ಆರೋಗ್ಯ ಇಲಾಖೆ ಪ್ರತ್ಯೇಕ ಪೊಲೀಸ್ ರಕ್ಷಣಾ ರೂಪಿಸಿಕೊಳ್ಳುವುದರ ಬಗ್ಗೆ ಚಿಂತಿಸುವುದು ಅಗತ್ಯ. ಐಸಿಯು ಮತ್ತು ತುರ್ತು ಚಿಕಿತ್ಸಾ ವಿಭಾಗಗಳಿಗೆ ರೋಗಿಯಲ್ಲದೆ ಇತರರು ಪ್ರವೇಶಿಸದಂತೆ ನಿರ್ಬಂಧಿಸಬೇಕು. ಈಗ ಖಾಸಗಿ ಆಸ್ಪತ್ರೆಗಳಲ್ಲೂ ವೈದ್ಯರ ಮೇಲೆ ಹಲ್ಲೆ ನಡೆಸುವುದು ಕೆಲವರ ದಂಧೆಯಾಗುತ್ತಿದೆ. ಪೊಲೀಸರು ಮಧ್ಯವರ್ತಿಗಳಾಗಿ ಖಾಸಗಿ ಆಸ್ಪತ್ರೆಗಳ ಆಡಳಿತ ವರ್ಗದವರಿಗೆ ಹಣ ವಸೂಲು ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಇಂಡಿಯನ್ ಮೆಡಿಕಲ್ ಕೌನ್ಸಿಲ್ ಹಾಗೂ ವೈದ್ಯರ ಸಂಘ ಇದಕ್ಕೆ ಕೂಡಲೇ ಪರಿಹಾರ ಹುಡುಕುವುದು ಅಗತ್ಯ. ದೇಶದಲ್ಲಿ ೧೩ ಲಕ್ಷ ಸರ್ಕಾರಿ ವೈದ್ಯರಿದ್ದಾರೆ. ಕರ್ನಾಟಕದಲ್ಲಿ ೫ ಸಾವಿರಕ್ಕೂ ಹೆಚ್ಚು ವೈದ್ಯರು ಸರ್ಕಾರಿ ಸೇವೆಯಲ್ಲಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದರೂ ಸರ್ಕಾರಿ ಸೇವೆಗೆ ಬರಲು ಪ್ರತಿಭಾವಂತ ವೈದ್ಯರು ಹಿಂಜರಿಯುವುದಕ್ಕೆ ಸುರಕ್ಷತೆ ಇಲ್ಲದಿರುವುದೂ ಒಂದು ಕಾರಣ. ಒಂದು ಕಡೆ ಸರ್ಕಾರಿ ವೈದ್ಯಕೀಯ ಸೇವೆ ಸೀಮಿತಗೊಳ್ಳುತ್ತಿರುವುದು, ಮತ್ತೊಂದು ಕಡೆ ಖಾಸಗಿ ಆಸ್ಪತ್ರೆಗಳ ಸಂಖ್ಯೆ ಅಧಿಕಗೊಳ್ಳುತ್ತಿರುವುದು ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಇದನ್ನೇ ಆರೋಗ್ಯ ವಿಮಾ ಕಂಪನಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿವೆ. ಔಷಧ ತಯಾರಿಕಾ ಕಂಪನಿಗಳಂತೂ ಲಾಭ ಬಡುಕತನದಲ್ಲಿ ಮುಂಚೂಣಿಯಲ್ಲಿದೆ. ವೈದ್ಯರ ನಡೆಸುವ ಎಲ್ಲ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮೇಳಗಳಿಗೆ ಈ ಔಷಧ ತಯಾರಿಕಾ ಕಂಪನಿಗಳು ಉದಾರ ನೆರವು ನೀಡುವುದು ಗುಟ್ಟಾಗಿ ಉಳಿದಿಲ್ಲ. ಆರೋಗ್ಯ ಇಲಾಖೆಗೆ ಇವುಗಳ ಮೇಲೆ ಯಾವುದೇ ಹಿಡಿತ ಇಲ್ಲ ಎಂಬುದಂತೂ ನಿಜ. ಬಡವರಿಗೆ ಉತ್ತಮ ಆರೋಗ್ಯ ಸೇವೆ ಲಭಿಸಬೇಕು ಎಂದರೆ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಉತ್ತಮಪಡಿಸಬೇಕು. ಸ್ಥಳೀಯರು ಮುಖಂಡರು ಆಸಕ್ತಿವಹಿಸಿ ಅಲ್ಲಿ ಕೆಲಸ ಮಾಡುವ ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸುವ ಕೆಲಸ ಕೈಗೊಳ್ಳಬೇಕು. ಸಮಾಜ ವಿದ್ರೋಹಿ ಶಕ್ತಿಗಳು ಸನ್ನಿವೇಶವನ್ನು ದುರುಪಯೋಗಪಡಿಸಿಕೊಳ್ಳಲು ಬಿಡಬಾರದು. ಸಮಾಜ ಸೇವೆ ಮಾಡುವುದಕ್ಕೆ ಕಟಿಬದ್ಧರಾದ ವೈದ್ಯರು ಇದರಿಂದ ನಿರಾಶೆಗೊಂಡು ವಿದೇಶಗಳಿಗೆ ಹೋಗುವುದು ಅನಿವಾರ್ಯವಾಗಲಿದೆ.