ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸರ್ಕಾರಿ ಹೊಲಕ್ಕೆ ರಾಜಕೀಯ ಬೇಲಿ

01:50 AM May 30, 2024 IST | Samyukta Karnataka

ತಾತ್ವಿಕವಾಗಿ ನಾಡಿನ ಸಂಪತ್ತು ಸರ್ಕಾರಕ್ಕೆ ಸೇರಿದ್ದು, ಇದರ ಉಪಯೋಗ ಹಾಗೂ ವಿನಿಯೋಗದ ಅಧಿಕಾರ ಮಾತ್ರ ಪ್ರಜೆಗಳಿಗೆ ಎಂಬುದರ ಒಳಾರ್ಥ ಸರ್ಕಾರದ ಕಣ್ಗಾವಲಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಪ್ರಜೆಗಳ ಯೋಗಕ್ಷೇಮವನ್ನು ನೋಡಿಕೊಳ್ಳುವ ಜವಾಬ್ದಾರಿ ಪರಮಾಧಿಕಾರದ ದಿಕ್ಸೂಚಿ. ಬಹುತೇಕ ಸಂದರ್ಭಗಳಲ್ಲಿ ಈ ಪರಮಾಧಿಕಾರದ ಧರ್ಮ-ಮರ್ಮ-ಕರ್ಮಗಳ ಒಳಸುಳಿ ಏನೆಂಬುದು ಬಡಪೆಟ್ಟಿಗೆ ತಿಳಿಯುವುದೇ ಇಲ್ಲ ಎನ್ನಲು ರಾಜ್ಯ ಸರ್ಕಾರಿ ಒಡೆತನದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಿಗೂಢ ರೀತಿಯಲ್ಲಿ ಜರುಗಿರುವ ೮೭ ಕೋಟಿ ರೂಪಾಯಿ ಹಣದ ಅಕ್ರಮದ ಪ್ರಕರಣವೇ ಸಾಕ್ಷಿ. ಬೇಲಿ ಮತ್ತು ಹೊಲವನ್ನು ಹೋಲುವ ಈ ಪ್ರಕರಣದಲ್ಲಿ ಅಕ್ರಮ ಜರುಗಿರುವುದು ನಿಜ ಎಂಬುದನ್ನು ಬೇಷರತ್ತಾಗಿ ಒಪ್ಪುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಖಾತೆ ಸಚಿವ ನಾಗೇಂದ್ರ ಅವರು ಹಣ ನುಂಗಿರುವವರು ಯಾರೆಂಬುದು ಮಾತ್ರ ಗೊತ್ತಿಲ್ಲ. ನನ್ನ ಪಾತ್ರವಂತೂ ಈ ಪ್ರಕರಣದಲ್ಲಿ ಇಲ್ಲ. ಹೀಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ಕಡ್ಡಿ ಮುರಿದಂತೆ ಹೇಳಿರುವುದು ಸಾರ್ವಜನಿಕ ಚರ್ಚೆಗೆ ಗ್ರಾಸ. ಸರ್ಕಾರಿ ಹಣವನ್ನು ಬಳಸಲು ಷರತ್ತುಗಳು ಹಲವಾರು. ಬ್ಯಾಂಕಿನ ಖಾತೆಯಿಂದ ಹಣ ಪಡೆಯಲು ನಿಗಮದ ನಿರ್ಣಯಾಧಿಕಾರವಿರುವ ಇಬ್ಬರು ಅಧಿಕಾರಿಗಳ ಸಹಿ ಅತ್ಯಗತ್ಯ. ಇದನ್ನು ಬ್ಯಾಂಕ್ ಅಧಿಕಾರಿಗಳು ಸ್ಥಿರೀಕರಿಸಿದರಷ್ಟೇ ಹಣ ಪಾವತಿಗೆ ಅವಕಾಶ. ತಿಂಗಳಿಗೊಮ್ಮೆ ಬ್ಯಾಂಕಿನಿಂದ ನಿಗಮದ ಹಣಕಾಸಿನ ವ್ಯವಹಾರದ ಟಿಪ್ಪಣಿಯನ್ನು ಗಮನಿಸಿ ತತ್ಸಂಬಂಧಿತ ಸಚಿವರ ಗಮನಕ್ಕೆ ತರುವುದು ಸಂಪ್ರದಾಯ. ಖಜಾನೆಯಿಂದಲೂ ಇಂತಹುದೇ ಟಿಪ್ಪಣಿ ಮಂತ್ರಿಗಳ ಅವಗಾಹನೆಗಾಗಿ ಬರುವುದು ಕೂಡಾ ವಾಡಿಕೆ. ಇಷ್ಟೆಲ್ಲಾ ಷರತ್ತುಗಳು ಇದ್ದರೂ, ೮೭ ಕೋಟಿ ರೂಪಾಯಿಗಳ ಹಣ ಬಿಡುಗಡೆಯಾದರೂ, ಯಾರೊಬ್ಬರೂ ಇದರ ಬಗ್ಗೆ ಚಕಾರ ಎತ್ತದಿರುವುದು ಅನುಮಾನಕ್ಕೆ ಕಾರಣವಾಗುವ ಸಂಗತಿ. ವಾಲ್ಮೀಕಿ ನಿಗಮದ ಜನರಲ್ ಮ್ಯಾನೇಜರ್ ಚಂದ್ರಶೇಖರ್ ಆತ್ಮಹತ್ಯೆಯ ಸಂದರ್ಭದಲ್ಲಿ ಬರೆದಿರುವ ಪತ್ರದ ಮೂಲಕವಷ್ಟೇ ಈ ವಿವರ ಬಹಿರಂಗ. ಈ ಅಕ್ರಮಕ್ಕೆ ಕಾರಣರಾದ ಹಲವು ಅಧಿಕಾರಿಗಳ ಹೆಸರನ್ನು ಈ ಪತ್ರದಲ್ಲಿ ಚಂದ್ರಶೇಖರ್ ಪ್ರಸ್ತಾಪಿಸಿದ್ದರೂ, ಎಲ್ಲರ ಗಮನ ಸೆಳೆಯುವುದುಸಚಿವರ ಮೌಖಿಕ ಸೂಚನೆಯ ಮೇರೆಗೆ ಹೀಗೆ ಮಾಡಲಾಗುತ್ತಿದೆ' ಎಂಬ ಮಾತಿನ ಮರ್ಮ ಏನೆಂಬುದು ತಿಳಿಯುತ್ತಿಲ್ಲ. ಹಲವರು ಹೇಳುವಂತೆ ಬೆಂಕಿಯಿಲ್ಲದೇ ಹೊಗೆಯಾಡುವುದು ಅಸಾಧ್ಯ. ಸಚಿವರ ಮೌಖಿಕ ಸೂಚನೆ ಎಂದರೆ ಈ ಅಕ್ರಮ ನಡೆದ ಸಂದರ್ಭದಲ್ಲಿ ಮಂತ್ರಿಗಳಾಗಿದ್ದವರಾರು? ಅವರು ಯಾರಿಗೆ ಈ ಸೂಚನೆಯನ್ನು ಕೊಟ್ಟಿದ್ದರು. ಹೀಗೆ ಮೌಖಿಕ ಆದೇಶದ ಮೇಲೆ ಸರ್ಕಾರದ ಆಡಳಿತ ನಡೆಯುವುದು ಸಾಧ್ಯವೇ? ಹಾಗೊಮ್ಮೆ ಮೌಖಿಕ ಆದೇಶ ತುರ್ತು ಸಂದರ್ಭದಲ್ಲಿ ಮಂತ್ರಿಗಳು ನೀಡಿದರೂ ನಂತರವಾದರೂ ಲಿಖಿತ ಆದೇಶ ಪಡೆಯುವ ಸಂಪ್ರದಾಯವನ್ನು ಏಕೆ ಪರಿಪಾಲಿಸಿಲ್ಲ? ಎಂಬ ತರಹೇವಾರಿ ಪ್ರಶ್ನೆಗಳಿಗೆ ಉತ್ತರ ಸಿಕ್ಕುವುದು ಸಂಪೂರ್ಣವಾದ ತನಿಖೆ ಮುಗಿದ ನಂತರವೇ. ತನಿಖೆ ಸ್ವರೂಪ ಏನೇ ಇರಲಿ, ಪರಿಶಿಷ್ಟ ಪಂಗಡದ ಕಲ್ಯಾಣದ ಸಲುವಾಗಿ ಸ್ಥಾಪಿಸಿದ್ದ ವಾಲ್ಮೀಕಿ ನಿಗಮದ ಹಣ ಹೀಗೆ ಅಕ್ರಮವಾಗಿ ಪಟ್ಟಭದ್ರರ ಜೇಬು ಸೇರಿರುವುದು ಪರಿಸ್ಥಿತಿಯ ಕ್ರೂರ ವಿಡಂಬನೆ.
ಸಹಜವಾಗಿಯೇ ಇಂತಹ ಬೃಹತ್ ಅಕ್ರಮದ ಪ್ರಕರಣ ಸಾರ್ವಜನಿಕವಾಗಿ ದೊಡ್ಡ ಹಗರಣದ ರೂಪದಲ್ಲಿ ಭುಗಿಲೆದ್ದಿದೆ. ವಿಚಿತ್ರವೆಂದರೆ, ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಪಾತ್ರಗಳು ಬದಲಾದ ನಂತರ ರಾಜಕೀಯ ಪಕ್ಷಗಳ ಮುಖಂಡರು, ತಮ್ಮ ಮಾತಿನ ಧಾಟಿಯನ್ನು ಬದಲಾಯಿಸುವ ಪ್ರವೃತ್ತಿಗೆ ಶರಣಾಗಿರುವ ಪರಿಣಾಮವೆಂದರೆ, ಸಾರ್ವಜನಿಕರ ಗಮನಕ್ಕೆ ಬರುತ್ತಿರುವುದು ಅರೆ ಸುಳ್ಳು, ಇಲ್ಲವೇ ಅರೆ ಸತ್ಯ. ಸರ್ಕಾರದ ರಾಜೀನಾಮೆಯನ್ನು ಕೇಳುವುದು, ಮುಖ್ಯಮಂತ್ರಿ ರಾಜೀನಾಮೆಗೆ ಪಟ್ಟು ಹಿಡಿಯುವುದು ಹಾಗೂ ಸಂಬಂಧಿಸಿದ ಮಂತ್ರಿಯ ವಿರುದ್ಧ ದೋಷಾರೋಪಗಳನ್ನು ಹೊರಿಸಿ ಉಗ್ರ ಪ್ರತಿಭಟನೆಯ ಮಾತುಗಳನ್ನು ಆಡುವ ಪ್ರವೃತ್ತಿಗೆ ಬದಲು ನೈತಿಕ ಹಾಗೂ ತಾರ್ಕಿಕ ರೀತಿಯಲ್ಲಿ ಪ್ರಕರಣದ ವಿವರಗಳನ್ನು ಮುಂದಿಟ್ಟು, ತುರ್ತು ತನಿಖೆಗೆ ಹಕ್ಕು ಮಂಡಿಸುವುದು ಸಾಧುವಾದ ಮಾರ್ಗ. ಹೊಸ ಸಹಸ್ರಮಾನದ ನಂತರ ಭಾರತದ ರಾಜಕಾರಣದಲ್ಲಿ ಆಗಿರುವ ಬೆಳವಣಿಗೆ ಎಂದರೆ ರಾಜಕೀಯ ಪಕ್ಷಗಳು ತಾವು ವಹಿಸುವ ಪಾತ್ರಗಳಿಗೆ ತಕ್ಕಂತೆ ನುಡಿಗಟ್ಟನ್ನು ಬಳಸಿಕೊಳ್ಳುವ ಚಾಣಾಕ್ಷತನ. ಈ ಪ್ರಕರಣದ ಬಗ್ಗೆ ಮೊದಲು ಆಗಬೇಕಾದ ಕೆಲಸವೆಂದರೆ, ಸರ್ಕಾರ ನಿರ್ಧರಿಸಿರುವಂತೆ ಸಿಐಡಿ ತನಿಖೆ ಶೀಘ್ರ ಗತಿಯಲ್ಲಿ ಮುಗಿದ ನಂತರ ಮುಂದಿನ ಮಾರ್ಗವನ್ನು ಕಂಡುಕೊಳ್ಳುವುದು ನ್ಯಾಯಸಮ್ಮತ.
ರಾಜೀನಾಮೆ ಕೊಡುವುದು ಅಥವಾ ಬಿಡುವುದು ಇಂತಹ ಸಂದರ್ಭದಲ್ಲಿ ಮಂತ್ರಿಗಳಿಗೆ ಸೀಮಿತವಾಗಿ ಉಳಿಯುವ ವಿಷಯವಾಗಲಾರದು. ಏಕೆಂದರೆ ತನಿಖೆ ನಡೆಯುವುದು ಮಂತ್ರಿಗಳ ಉಸ್ತುವಾರಿಯಲ್ಲಿರುವ ನಿಗಮದ ಕಾರ್ಯನಿರ್ವಹಣೆಯ ಬಗ್ಗೆ. ಹೀಗಿರುವಾಗ ಕನಿಷ್ಠ ಸಂಬಂಧಿಸಿದ ಮಂತ್ರಿಗಳನ್ನಾದರೂ ಆ ಖಾತೆಯಿಂದ ತನಿಖೆ ಮುಗಿಯುವವರೆಗೆ ದೂರ ಇಡುವುದು ಜನಸಮ್ಮತ ಹಾಗೂ ಧರ್ಮ ಸಮ್ಮತವಾದ ವಿಚಾರ. ತನಿಖೆಯಲ್ಲಿ ದೋಷಾರೋಪಗಳು ಖಚಿತವಾಗದೇ ಹೋದರೆ ಮಂತ್ರಿಗಳು ತಮ್ಮ ಖಾತೆಯಲ್ಲಿ ಮುಂದುವರಿಸುವುದು ಅಥವಾ ಬಿಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಹತಾಶೆಯಲ್ಲಿಯೇ ಮುಳುಗಿರುವ ಸಾರ್ವಜನಿಕರ ವಲಯದಲ್ಲಿ ವಿಶ್ವಾಸವನ್ನು ಮೂಡಿಸುವ ಸಲುವಾಗಿ ಸಂಬಂಧಿಸಿದ ಮಂತ್ರಿಯನ್ನು ಎಸ್‌ಟಿ ಕಲ್ಯಾಣ ಖಾತೆ ನಿರ್ವಹಣೆಯಿಂದ ಬಿಡುಗಡೆ ಮಾಡುವುದು ಜನಸಮ್ಮತವಾದ ಮಾರ್ಗ. ರಾಜಕೀಯ ಸತ್ಸಂಪ್ರದಾಯಗಳನ್ನು ಗೌರವಿಸುವ ಮುಖ್ಯಮಂತ್ರಿಗಳ ನಿರ್ಧಾರ ಏನೆಂಬುದನ್ನು ಕಾದು ನೋಡುವುದಷ್ಟೇ ಈಗ ಜನರಿಗಿರುವ ಮಾರ್ಗ.

Next Article