ಸರ್ಕಾರ ತನ್ನ ನಿರ್ಧಾರ ಹಿಂದಕ್ಕೆ ಪಡೆಯದಿದ್ದರೆ ಹುಬ್ಬಳ್ಳಿ ಬಂದ್..!
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಖುಲಾಸೆಗೊಳಿಸುವ ಸರ್ಕಾರದ ಕ್ರಮವನ್ನು ಖಂಡಿಸಿ ಬುಧವಾರ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮ ಸೇನೆ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು, ಪ್ರಕರಣ ವಾಪಸ್ ಪಡೆಯುವ ತನ್ನ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯದೇ ಇದ್ದರೆ `ಹುಬ್ಬಳ್ಳಿ ಬಂದ್' ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಿಡ್ಡಿ ಹನುಮಂತ ದೇವಸ್ಥಾನದಿಂದ ಮೆರವಣಿಗೆಯ ಮೂಲಕ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಆಗಮಿಸಿದ ಶ್ರೀರಾಮ ಸೇನೆಯ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರ ವಿರುದ್ಧ ಘೋಷಣೆ ಕೂಗಿದರು.
ಬಳಿಕ ಮಾತನಾಡಿದ ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ, ಎರಡು ವರ್ಷಗಳ ಹಿಂದೆ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಎದುರು ನಡೆದ ಗಲಭೆ ಪ್ರಕರಣ ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿತ್ತು. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಗೂಂಡಾಗಳು ಪೊಲೀಸರ ವಾಹನಗಳನ್ನೇ ಬುಡಮೇಲು ಮಾಡಿದ್ದರು. ಅದೃಷ್ಟವಶಾತ್ ಅದರಲ್ಲಿದ್ದ ಮೂವರು ಸಿಬ್ಬಂದಿ ಬದುಕುಳಿದಿದ್ದರು. ಕೇವಲ ಪೊಲೀಸರನ್ನೇ ಟಾರ್ಗೆಟ್ ಮಾಡದ ಜಿಹಾದಿಗಳು ಪಕ್ಕದಲ್ಲೇ ಇರುವ ದಿಡ್ಡಿ ಹನುಮಂತ ದೇವಸ್ಥಾನ ಮತ್ತು ಆಸ್ಪತ್ರೆಯ ಮೇಲೆ ಕಲ್ಲು ತೂರಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.