For the best experience, open
https://m.samyuktakarnataka.in
on your mobile browser.

ಸರ್ಕಾರ ಸಮಾಜಕ್ಕೆ ಯಾವ ಸಂದೇಶ ಕೊಡಲು ಹೊರಟಿದೆ?

01:49 PM Jan 02, 2024 IST | Samyukta Karnataka
ಸರ್ಕಾರ ಸಮಾಜಕ್ಕೆ ಯಾವ ಸಂದೇಶ ಕೊಡಲು ಹೊರಟಿದೆ

ಬೆಂಗಳೂರು: ಸಿದ್ದರಾಮಯ್ಯ ಅವರ ಸರ್ಕಾರ ಸಮಾಜಕ್ಕೆ ಯಾವ ಸಂದೇಶ ಕೊಡಲು ಹೊರಟಿದೆ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ ಪ್ರಕರಣ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು "ಐದು ಶತಮಾನಗಳ ಭಾರತೀಯರ ಹೋರಾಟ, ವಿಶ್ವದ ಕೋಟ್ಯಾಂತರ ಹಿಂದೂಗಳ ಕನಸು ಅಯೋಧ್ಯೆಯಲ್ಲಿ ನನಸಾಗುವ ಕ್ಷಣ ಸನ್ನಿಹಿತವಾಗುತ್ತಿರುವ' ಸಂದರ್ಭದಲ್ಲಿ, ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದವರನ್ನು ಜೈಲಿಗಟ್ಟುವ ಕಾಂಗ್ರೆಸ್ ಸರ್ಕಾರದ ಕ್ರಮ ಹಿಂದೂ ದ್ವೇಷಿ ಹಾಗೂ ರಾಮ ಮಂದಿರ ನಿರ್ಮಾಣದ ವಿರೋಧಿ ಮನಸ್ಥಿತಿಯನ್ನು ಸಾಬೀತು ಪಡಿಸಿದೆ.
ಹುಬ್ಬಳ್ಳಿಯಲ್ಲಿ ರಾಮಮಂದಿರ ಹೋರಾಟದಲ್ಲಿ ಭಾಗಿಯಾಗಿದ್ದ ಕರಸೇವಕ ಶ್ರೀಕಾಂತ್ ಪೂಜಾರಿ ಅವರನ್ನು 31 ವರ್ಷಗಳ ಬಳಿಕ ಬಂಧನ ಹಾಗೂ ಉಳಿದ ಹೋರಾಟಗಾರರನ್ನು ಬಂಧಿಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಕಾನೂನಿನ ಹೆಸರಲ್ಲಿ ರಾಮ ಭಕ್ತರ ಮೇಲೆ ಸೇಡು ತೀರಿಸಿಕೊಳ್ಳುವ ವಿಕೃತ ಮನಸ್ಥಿತಿಯನ್ನು ಪ್ರತಿಬಿಂಬಿಸಿದೆ. ರಾಜ್ಯದಲ್ಲಿ ಸಾವಿರಾರು ಗಂಭೀರ ಕ್ರಿಮಿನಲ್ ಹಾಗೂ ದೇಶ ದ್ರೋಹಿ ಪ್ರಕರಣಗಳು ಮಂದಗತಿಯ ತನಿಖೆಯಿಂದ ದಶಕಗಳಿಂದಲೂ ಧೂಳು ಹಿಡಿಯುತ್ತಿವೆ. ಇದ್ಯಾವುದರತ್ತಲೂ ಗಮನ ಹರಿಸದೇ ರಾಮ ಭಕ್ತರನ್ನೇ ಗುರಿಯನ್ನಾಗಿಸಿಕೊಂಡಿರುವ ಸಿದ್ದರಾಮಯ್ಯ ಅವರ ಸರ್ಕಾರ ಸಮಾಜಕ್ಕೆ ಯಾವ ಸಂದೇಶ ಕೊಡಲು ಹೊರಟಿದೆ? ಶ್ರೀರಾಮ ಮಂದಿರ ನಿರ್ಮಾಣದ ವಿರುದ್ಧ ಪಿತೂರಿ ನಡೆಸಿದವರು ಏನಾದರು? ರಾಮಭಕ್ತರ ಮೇಲೆ ದೌರ್ಜನ್ಯ ನಡೆಸಿದ ಸರ್ಕಾರಗಳು ಏನಾದವು? ಎಂಬುದನ್ನು ಇನ್ನೂ ಬುದ್ದಿ ಕಲಿಯದ ಕಾಂಗ್ರೆಸ್ಸಿಗರು ಇತಿಹಾಸವನ್ನೊಮ್ಮೆ ಮೆಲುಕು ಹಾಕಲಿʼ ಎಂದಿದ್ದಾರೆ.

ರಾಜ್ಯಾದ್ಯಂತ ಪ್ರತಿಭಟನೆ: ರಾಮನ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಕೆತ್ತನೆ ಮಾಡಿದ್ದಾಗಿ ನಿನ್ನೆ ಸಂಭ್ರಮದಿಂದ ಇದ್ದೆವು. ರಾಜ್ಯದ ಪ್ರತಿಯೊಬ್ಬರು ಹೆಮ್ಮೆ ಪಡುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವು, ಹಳೆಯ ಕೇಸನ್ನು ಮತ್ತೆ ಓಪನ್ ಮಾಡಿ ಶ್ರೀಕಾಂತ ಪೂಜಾರಿಯವರನ್ನು ಬಂಧಿಸಿರುವುದು ಖಂಡನೀಯ. ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾಳೆ ಇಡೀ ರಾಜ್ಯಾದ್ಯಂತ ಹೋರಾಟ ಮಾಡಲು ಕರೆ ನೀಡುತ್ತಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್ ಮಾತ್ರವಲ್ಲದೆ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ‌ಬಿ.ವೈ. ವಿಜಯೇಂದ್ರ ಪ್ರಕಟಿಸಿದರು.