ಸರ್ಕಾರ ಹಗರಣ ಮುಚ್ಚಿಹಾಕಲು SIT ತನಿಖೆ ನೇಮಿಸುತ್ತಿದೆ
ಬೆಂಗಳೂರು: ಮುಡಾ ಹಗರಣದ ಮಾದರಿಯಲ್ಲೇ ವಾಲ್ಮೀಕಿ ನಿಗಮದ ಹಗರಣವೂ ನಡೆದಿದೆ. ಮುಖ್ಯಮಂತ್ರಿಗಳು ಹಗರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಹಗರಣಗಳನ್ನು ಮುಚ್ಚಿಹಾಕಲು SIT ಮತ್ತು CID ತನಿಖೆಗಳನ್ನು ನೇಮಿಸುತ್ತಿದೆ ಜಾರಿ ನಿರ್ದೇಶನಾಲಯದ ತನಿಖೆಯಾಗದೇ ಇದ್ದಿದ್ದರೆ, ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಮುಚ್ಚಿ ಹೋಗುತ್ತಿತ್ತು ಎಂದು ಹೇಳಿದರು. ಹಗರಣವನ್ನು ಸಿಬಿಐ ತನಿಖೆ ನಡೆಸುವಾಗ ಹಣಕಾಸು ಅವ್ಯವಹಾರದ ಸುಳಿವು ದೊರೆತಿದ್ದು, ಜಾರಿ ನಿರ್ದೇಶನಾಲಯ ತನಿಖೆ ಮುಂದುವರೆಸಿತ್ತು. ಆರಂಭದಲ್ಲೇ 187 ಕೋಟಿ ರೂಪಾಯಿ ಪೈಕಿ 87 ಕೋಟಿ ರೂಪಾಯಿ ದುರುಪಯೋಗವಾಗಿದೆ ಎಂದು ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದರು. ಇದರಲ್ಲಿ 20 ಕೋಟಿ ಹಣವನ್ನು ತುಕಾರಾಂ ಅವರಿಗೆ ಕಾಂಗ್ರೆಸ್ ಪಕ್ಷ ಬಳ್ಳಾರಿ ಲೋಕಸಭಾ ಚುನಾವಣೆಗಾಗಿ ಖರ್ಚು ಮಾಡಿದೆ ಎಂದು ಇಡಿ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು. ಮುಖ್ಯಮಂತ್ರಿಗೆ ಕಿಂಚಿತ್ತಾದರೂ ಆತ್ಮಗೌರವ ಇದ್ದು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಇಷ್ಟೊತ್ತಿಗಾಗಲೇ ರಾಜೀನಾಮೆ ಕೊಡಬೇಕಿತ್ತು. ಮುಡಾ ಮಾದರಿಯಲ್ಲೇ ವಾಲ್ಮೀಕಿ ನಿಗಮದ ಹಗರಣದ ಸತ್ಯಾಂಶವನ್ನು ಮುಚ್ಚಿಡುವ ಕೆಲಸವನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ ಎಂದು ದೂರಿದರು.