ಸರ್ವರ್ ಸಮಸ್ಯೆ; ಅಭ್ಯರ್ಥಿಗಳು ಹೈರಾಣ
ಹುಬ್ಬಳ್ಳಿ: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ವರ್ ಸಮಸ್ಯೆಯಿಂದಾಗಿ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಪರದಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಮಾತ್ರವಲ್ಲದೇ ಅವರ ಪೋಷಕರೂ ಆತಂಕಕ್ಕೀಡಾಗಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶಾಲಾ ಶಿಕ್ಷಣ ಇಲಾಖೆ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಎಸ್‌ಎಟಿಎಸ್ ತಂತ್ರಾಂಶ(ವಿದ್ಯಾರ್ಥಿ ಸಾಮರ್ಥ್ಯ ಪತ್ತೆ ವ್ಯವಸ್ಥೆ) ಕಡ್ಡಾಯಗೊಳಿಸಿದೆ. ಈ ತಂತ್ರಾಂಶಕ್ಕೆ
ವಿದ್ಯಾರ್ಥಿಗಳು ಶಾಲಾ ಹಂತದ ಶೈಕ್ಷಣಿಕ ದಾಖಲೆಗಳನ್ನು ಅಪ್‌ಲೋಡ್ ಮಾಡಲೇಬೇಕು. ಈಗಾಗಲೇ ಎಸ್‌ಎಸ್‌ಎಲ್‌ಸಿ ಪೂರೈಸಿ, ಪದವಿಪೂರ್ವ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ತಾವು ಹಿಂದೆ ಶಿಕ್ಷಣ ಪಡೆದ ಶಾಲೆಗಳ ದಾಖಲೆಗಳನ್ನು ಎಸ್‌ಎಟಿಎಸ್ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಲು ಸರ್ವರ್ ಸಮಸ್ಯೆ ಎದುರಾಗಿದೆ. ಜ. ೧೦ ರಿಂದ ಅಪ್‌ಲೋಡ್‌ಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಕಳೆದ ೧೫ ದಿನಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಗ್ರಾಮೀಣ ಪ್ರಮಾಣ ಪತ್ರ ಮೊದಲಾದ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗಿದೆ. ಹೀಗಾಗಿ, ರಾಜ್ಯಾದ್ಯಂತ ಏಕಕಾಲದಲ್ಲಿ ಎಸ್‌ಎಟಿಎಸ್ ತಂತ್ರಾಂವನ್ನು ಬಳಕೆ ಮಾಡುವುದರಿಂದ ಸಮಸ್ಯೆ ತಲೆದೋರಿದೆಯಂತೆ. ಇನ್ನು ಕಳೆದ ವರ್ಷ ಈ ಎಲ್ಲ ಪ್ರಕ್ರಿಯೆಗೆ ಕೇವಲ ೫-೧೦ ನಿಮಿಷ ಹಿಡಿಯುತ್ತಿತ್ತು. ಆದರೆ, ಈ ಬಾರಿ ಸರ್ವರ್ ಸಮಸ್ಯೆಯಿಂದ ೪೫-೫೦ ನಿಮಿಷ ಸಮಯ ಬೇಕಾಗುತ್ತಿದೆ. ಹೀಗಾಗಿ, ಅಭ್ಯರ್ಥಿಗಳು ಬೆಳಗ್ಗೆ ೬ ಗಂಟೆಯಿಂದಲೇ ಕಾಲೇಜು ಮತ್ತು ಇಂಟರ್ನೆಟ್ ಸೆಂಟರ್‌ಗಳಲ್ಲಿ ಸರತಿ ಸಾಲು ಹಚ್ಚುತ್ತಿದ್ದಾರೆ. ರಾತ್ರಿ ೧೦ರ ವರೆಗೂ ಪ್ರಯತ್ನದ ಬಳಿಕ ನಿರಾಶೆಯಿಂದ ವಾಪಸ್ಸಾಗುತ್ತಿದ್ದಾರೆ.