ಸವಿಬೆಲ್ಲ-ಸಿಹಿಗಲ್ಲ
ಎಂ.ಎಸ್. ನರಸಿಂಹಮೂರ್ತಿ ಅವರು ನಮ್ಮ ನಡುವಿನ ಖ್ಯಾತ ಹಾಸ್ಯ ಸಾಹಿತಿ. ಪಾಪ ಪಾಂಡು, ಸಿಲ್ಲಿಲಲ್ಲಿ ಸೇರಿದಂತೆ ಇದುವರೆಗೆ ಟಿವಿ ಧಾರಾವಾಹಿಗಳಿಗೆ ೧೦ ಸಾವಿರಕ್ಕೂ ಅಧಿಕ ಎಪಿಸೋಡ್‌ಗಳನ್ನು ಬರೆದು ಮನೆಮಾತಾಗಿದ್ದಾರೆ. ೨೦೦೦ಕ್ಕೂ ಹೆಚ್ಚು ನಗೆಲೇಖನ ಬರೆದಿದ್ದಾರೆ. ಮಕ್ಕಳ ಸಾಹಿತ್ಯ, ಕಾದಂಬರಿ ಬಾನುಲಿ ನಾಟಕಗಳನ್ನು ರಚಿಸಿದ್ದಾರೆ. ಅವರ ೪೦ಕ್ಕೂ ಮಿಕ್ಕಿ ಪುಸ್ತಕಗಳು ಪ್ರಕಟವಾಗಿವೆ. ಅಂಕಣಕಾರರೂ ಹೌದು. ಇಂದಿನ ಒತ್ತಡದ ಬದುಕಿನಲ್ಲಿ ತಮ್ಮ ಹಾಸ್ಯಭರಿತ ಬರಹಗಳ ಮೂಲಕ ಎಲ್ಲೆಡೆ ನಗುವಿನ ಲಾಸ್ಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಯಾವುದು ಹೆಚ್ಚು ಸಿಹಿ?
ಅದು ಅವರವರ ಭಾವಕ್ಕೆ, ಅವರವರ ಬಕುತಿಗೆ ಬಿಟ್ಟಿದ್ದು.
ಗೃಹಸ್ಥನಾದ ಮೇಲೆ ಗೃಹಿಣಿಯ ಕೈಲಿ ಲಗಾಮಿರುತ್ತೆ ಅಂತಾರೆ. ನನ್ನ ವಿಷಯದಲ್ಲಂತೂ ನಿಜ. ಉಳಿದವರ ಬಗ್ಗೆ ನಾನು ಹೇಳಲಾರೆ. ಸತ್ಯವಾಕ್ಯವನ್ನು ಬಹುಮಂದಿ ನಿರಾಕರಿಸುತ್ತಾರೆ.
ಕೆಲವು ವರ್ಷಗಳ ಹಿಂದೆ ಹಾಸ್ಯೋತ್ಸವ ಕಾರ್ಯಕ್ರಮದಲ್ಲಿ ನನ್ನ ಗೆಳೆಯ ವಿಶ್ವ ಒಂದು ಪ್ರಶ್ನೆ ಪಬ್ಲಿಕ್ಕಾಗಿ ಕೇಳಿದ್ದ.
“ಸಂಸಾರಿಗೂ, ಸಂನ್ಯಾಸಿಗೂ ವ್ಯತ್ಯಾಸ ಏನು ?”
ಎಂಥ ಚಾಲೆಂಜು! ಅವನಿಗೆ ಅದೇ ವರ್ಷ ಮದುವೆ ಆಗಿತ್ತು. ಕೂಡಲೇ ಉತ್ತರ ಕೊಟ್ಟೆ.
“ಹುಲಿಯ ಚರ್ಮದ ಮೇಲೆ ಮಲಗೋವನು ಸಂನ್ಯಾಸಿ . ಹುಲಿಯ ಜೊತೆ ಮಲಗೋವನು ಸಂಸಾರಿ” ಎಂದೆ. ಚಪ್ಪಾಳೆಗಳ ಸುರಿಮಳೆ.
ಮಡದಿಯ ಬೇಡಿಕೆಗಳನ್ನು ಪೂರೈಸೋದು ಕಷ್ಟ ಎಂಬುದು ಎಲ್ಲರ ಅನುಭವ. ಹೊಸ ವರ್ಷದಲ್ಲಿ ವಿಶಾಲು ಹೊಸ ಸೀರೆಗೆ ಇಂಡೆಂಟ್ ಹಾಕಿದಳು.
“ರೀ, ಸಂಕ್ರಾಂತಿ ಹಬ್ಬಕ್ಕೆ ಒಂದು ಹೊಸ ರೇಷ್ಮೆ ಸೀರೆ !”
ವಿಶ್ವ ಗಹಗಹಿಸಿ ನಕ್ಕಾಗ ಅವನ ಮುಖದಲ್ಲಿ ನೆಗೆಟಿವಿಟಿ ನಲಿದಿತ್ತು.
“ಸಂಕ್ರಾಂತಿ ಅಂದ್ರೆ ದನಗಳ ಹಬ್ಬ ಕಣಮ್ಮ. ಹಸುಗಳಿಗೆ ಅಲಂಕಾರ ಮಾಡ್ತೀವಿ. ಕೊಬ್ಬರಿ ಗಿಟುಕು, ಬಾಳೆಹಣ್ಣು ಹಸು ಕೊರಳಿಗೆ ಕಟ್ತೀವಿ. ಕೊಂಬುಗಳಿಗೆ ಬಣ್ಣ ಹಚ್ತೀವಿ. ದನದ ಹೆಗಲ ಮೇಲೆ ದಮಾಸ್ ಬಟ್ಟೆಯ ಗೌಸು ಹಾಕ್ತೀವಿ. ಬಲೂನುಗಳು ಕಟ್ತೀವಿ. ಮೆರವಣಿಗೆಯಲ್ಲಿ ರ‍್ಕೊಂಡ್ಹೋಗಿ ಕಿಚ್ಹಾಯಿಸ್ತೀವಿ. ಈಗ ಹೇಳು, ದನಗಳ ಹಬ್ಬಕ್ಕೆ ನಿಂಗೆ ಸೀರೆ ಬೇಕಾ ?” ಎಂದ.
ವಿಶಾಲು ಈ ನಕಾರಾತ್ಮಕ ಹೇಳಿಕೆ ಒಪ್ಪಲು ತಯಾರಿರಲಿಲ್ಲ.
“ಹಬ್ಬದ ಬಗ್ಗೆ ಇಷ್ಟೆಲ್ಲಾ ಹೇಳ್ತೀರಲ್ಲ. ಎಳ್ಳು-ಬೆಲ್ಲದ ಬಗ್ಗೆ ನಿಮಗೆಷ್ಟು ಗೊತ್ತು ?” ಎಂದು ಸವಾಲು ಎಸೆದಳು.
“ಬೆಲ್ಲ ಮನುಷ್ಯನ ಬದುಕಲ್ಲಿ ಮೊದಲಿಂದ ಕಡೇವರೆಗೂ ಇರುತ್ತೆ. ನೀನು ಹೆಂಡ್ತಿಯಾಗಿ ನನ್ನ ಕಂಟ್ರೋಲ್‌ಗೆ ತಗೊಳ್ಳೋಕೆ ಬೆಲ್ಲವೇ ಕಾರಣ” ಎಂದ.
“ಅದು ಹ್ಯಾಗೇರಿ ?”
“ಮದ್ವೆ ಟೈಮಲ್ಲಿ ಪುರೋಹಿತರು ಗಂಡು-ಹೆಣ್ಣು ನಡುವೆ ಅಡ್ಡ ತೆರೆ ಅಂತ ಅವರ ಪಂಚೇನ ಹಿಡೀತಾರೆ”.
“ಅದು ಪುರೋಹಿತರ ಪಂಚೆ ಅಲ್ಲ, ಅಂತರಪಟ !”
“ರ‍್ಲಿ, ಯಾವ್ದೋ ಒಂದು ಗಾಳೀಪಟ. ಸೂಚನೆ ಕೊಡದೆ ಘಂಟಾನಾದ ಮಾಡ್ತಾರೆ. ವಧು ವರರು ಕೂಡಲೇ ಪರಸ್ಪರ ತಲೆ ಮೇಲೆ ಜೀರಿಗೆ ಬೆಲ್ಲ ಇಡಬೇಕು. ಮೊದಲು ಇಟ್ಟವರು ಡಾಮಿನೇಟ್ ಮಾಡ್ತಾರೆ ಅಂತ ನಂಬಿಕೆ. ನಿನ್ನ ಅಣ್ಣಂದಿರು, ತಮ್ಮಂದಿರು ಎಲ್ಲಾ ಸೇರಿ ನಿನ್ನ ಮೇಲಕ್ಕೆತ್ತಿ ನನ್ನ ತಲೆ ಮೇಲೆ ಜೀರಿಗೆ ಬೆಲ್ಲ ಇಡಿಸಿದರು. ಆವತ್ತಿಂದ ನೀನು ಹಾಕಿದ ತಾಳಕ್ಕೆ ನಾನು ಕುಣೀತಾ ಇದ್ದೀನಿ” ಎಂದು ದುಃಖಿಸಿದ.
“ನಾಟಕ ಸಾಕು, ಬೆಲ್ಲದ ಬಗ್ಗೆ ಹೇಳಿ”
“ಮದ್ವೆ ಆದ್ಮೇಲೆ ನೀನು ನಮ್ಮ ಮನೆಗೆ ಬಂದೆ. ಅಚ್ಚೇರು, ಬೆಲ್ಲ ಹೊಸ್ತಿಲಲ್ಲಿ ಇಟ್ಟಿದ್ರು. ಒದೀ ಅಂದಾಗ ನೀನು ಒದ್ದೆ. ನಮ್ಮ ತಾಯಿ ಮೊಣಕಾಲಿಗೆ ಅಚ್ಚೇರು ಬಂದು ಬಡೀತು”.
“ನಾನು ಕಾಲೇಜಲ್ಲಿ ಫುಟ್‌ಬಾಲ್ ಪ್ಲೇರ‍್ರು” ಎಂದಳು ವಿಶಾಲು.
“ಯುಗಾದಿ ಬಂದ್ರೆ ಬೆಲ್ಲಕ್ಕೆ ಬೇವು ಬೆರೆಸಿ `ಬೇವು-ಬೆಲ್ಲ’ ಹಂಚ್ತೀವಿ. ಮನೆಗೆ ಯಾರಾದ್ರೂ ಬಂದ್ರೆ ನೀರು-ಬೆಲ್ಲ ಕೊಡ್ತೀವಿ. ನವಗ್ರಹ ಪೂಜೆ ಮಾಡ್ಬೇಕಾದ್ರೂ ಲಕ್ಷ್ಮೀ-ನಾರಾಯಣ ಸ್ವರೂಪ ಅಂತ ಬೆಲ್ಲದ ಅಚ್ಚನ್ನೇ ಪೂಜೆಗೆ ಇಡ್ತೀವಿ” ಎಂದು ಹೇಳ್ತಾ ಹೋದಾಗ ಅವಳಿಗೆ ಸಿಟ್ಟಾಯ್ತು.
“ಸಾಕು ಪುರಾಣ. ನಾನು ಈ ಸಲ ಬೆಲ್ಲ ತರೊಲ್ಲ. ಯಾಕೇಂದ್ರೆ ಅದಕ್ಕೆ ಏನೇನೋ ಕೆಮಿಕಲ್ಸ್ ಬೆರೆಸರ‍್ತಾರೆ, ಬಣ್ಣ ಬಿಳಿ ಬರಲಿ ಅಂತ” ಎಂದಳು.
“ನೋಡಿದ್ಯಾ, ಬಿಳೀ ಬಣ್ಣಾನ ನಂಬಬಾರ‍್ದು ಅಂತ ಅದಕ್ಕೇ ಹೇಳೋದು. ನನ್ನ ಥರ ಇರೋ ಕರೀ ಬೆಲ್ಲಾನೇ ಬೆಸ್ಟು” ಎಂದ. ಅವಳಿಗೆ ಮತ್ತಷ್ಟು ಸಿಟ್ಟು ಬಂತು.
“ಈ ಸಲ ನಾನು ಅಂಗಡಿಯಿಂದಾನೇ ರೆಡಿಮೇಡ್ ಎಳ್ಳು-ಬೆಲ್ಲ ತರ‍್ತೀನಿ” ಎಂದಳು.
“ಏನಿದು ವಿಶಾಲು, ಎಳ್ಳು-ಬೆಲ್ಲಾನ ಮನೇಲಿ ರೆಡಿ ಮಾಡ್ಬೇಕು. ಆ ಸಂಭ್ರಮ ಖುಷಿ ತರುತ್ತೆ. ಕರೀ ಎಳ್ಳು ತಂದು ಅದರ ಚರ್ಮ ಸುಲಿದು ಬಿಳೀ ಎಳ್ಳು ಮಾಡಿ ಹುರಿಯೋ ಆ ಪ್ರೋಸೆಸ್ ಎಷ್ಟು ಚೆನ್ನಾಗಿರುತ್ತೆ ಗೊತ್ತಾ? ಮನೆ ತುಂಬಾ ಘಮಘಮ ಇರುತ್ತೆ” ಎಂದ ವಿಶ್ವ.
“ನೀವು ಸಹಾಯ ಮಾಡೋಕೆ ಬಂದ್ರೆ ನಾನು ಮನೇಲಿ ರೆಡಿ ಮಾಡ್ತೀನಿ” ಎಂದಳು.
ವಿಶ್ವ ಯೋಚಿಸುತ್ತಾ ಕೂತ.
ಹಿಂದೆ ಇದ್ದ ಸಂಕ್ರಾಂತಿಯ ಸಡಗರ ಇವತ್ತು ಇಲ್ಲ. ಎಳ್ಳು ಬೆಲ್ಲದ ರೆಡಿಮೇಡ್ ಪ್ಯಾಕೆಟ್‌ಗಳೇ ಸಿಗುತ್ತೆ. ಕೊರಿಯರ್‌ನವನಿಗೆ ಹೇಳಿದ್ರೆ ಅವನೇ ಸೀರೆ ಉಟ್ಕೊಂಡು ಲೇಡಿ ಗೆಟಪ್‌ನಲ್ಲಿ ಹೋಗಿ ನಮ್ಮ ಪರವಾಗಿ ಎಲ್ಲಾ ಕಡೆ ಎಳ್ಳು ಬೀರಿ ಬಂದ್ಬಿಡ್ತಾನೆ. ಈ ರೀತಿಯಾದರೆ ಹಬ್ಬದ ಅರ್ಥ ಎಲ್ಲಿ ಉಳೀತು? ಎಂದು ವಿಶ್ವ ಯೋಚಿಸಿದ.
“ಕಡೇದಾಗಿ ಕೇಳ್ತೀನಿ, ಯಾವಾಗ ಕೊಡಿಸ್ತೀರ ಸೀರೆ?” ವಿಶಾಲು ಕೇಳಿದಳು.
“ಎಲೆಕ್ಷನ್ ಹೊತ್ತಿಗೆ ಯಾರಾದರೂ ಸೀರೆ ಕೊಡಬಹುದು, ವೈಟ್ ಮಾಡೋಣ” ಎಂದ ವಿಶ್ವ.
“ನಾನು ನಿಮ್ಮ ಹೆಂಡತಿ, ಹೊರಗಿನವರು ನನಗೆ ಸೀರೆ ಕೊಡಿಸಬಾರದು” ಎಂದಳು.
“ನೋಡೋಣ, ಚುನಾವಣೆ ಮುಗಿದ ಮೇಲೆ ನಾನೇ ಕೊಡಿಸ್ತೀನಿ” ಎಂದ.
ಅಷ್ಟರಲ್ಲಿ ಕೊರಿಯರ್ ಬಾಯ್ ಬಂದು ಪ್ಯಾಕೆಟ್ ಕೊಟ್ಟು ಹೋದ. ವಿಶ್ವ ಓಪನ್ ಮಾಡಿದರೆ ಅದರಲ್ಲಿ ಏನಿತ್ತು ? ಒಂದು ರೇಷ್ಮೆ ಸೀರೆ, ಒಂದು ನೆಟ್ ಬನಿಯನ್ !
“ನಾನೇ ತರಿಸಿದ್ದು. ಹಬ್ಬದ ದಿನ ಹೊಸ ಬಟ್ಟೆ ಮೈಮೇಲೆ ಇರಬೇಕು, ನನಗೆ ಸೀರೆ, ನಿಮಗೆ ಬನಿಯನ್ !” ಎಂದು ಗಲ್ಲ ಕುಣಿಸಿ ಕಣ್ಣಲ್ಲೇ ನಕ್ಕಳು.
“ದುಡ್ಡೆಲ್ಲಿತ್ತು ?”
“ನಮ್ಮ ಜಾಯಿಂಟ್ ಅಕೌಂಟ್ ಕಾರ್ಡಿಂದ ಉಜ್ಜಿದೆ !”
ವಿಶ್ವ ಕುಸಿದು ಕುಳಿತ.