For the best experience, open
https://m.samyuktakarnataka.in
on your mobile browser.

ಸಸಿಗಳ ದರ ಎಂಟು ಪಟ್ಟು ಹೆಚ್ಚಳ

10:41 AM Jun 05, 2023 IST | Samyukta Karnataka
ಸಸಿಗಳ ದರ ಎಂಟು ಪಟ್ಟು ಹೆಚ್ಚಳ

ವಿಶ್ವನಾಥ ಕೋಟಿ
ಧಾರವಾಡ: ಅರಣ್ಯ ಇಲಾಖೆಯ ವತಿಯಿಂದ ಸಾರ್ವಜನಿಕರ ವಿತರಣೆಗಾಗಿ ಬೆಳೆಸಿದ ಸಸಿಗಳ ದರವನ್ನು ಸುಮಾರು ೮ ಪಟ್ಟು ಹೆಚ್ಚಳ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರಕಾರ 'ಗ್ಯಾರಂಟಿ' ಯೋಜನೆಗಳ ಅನುಷ್ಠಾನಕ್ಕಾಗಿ ಸಸಿಗಳ ದರ ಹೆಚ್ಚಿಸಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
೮/೧೨ ಅಂಗುಲ ಚೀಲದ ಪ್ರತಿ ಸಸಿಯ ಬೆಲೆಯನ್ನು ೩ ರೂ.ಗಳಿಂದ ಏಕಾಏಕಿ ೨೩ ರೂ.ಗಳಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ೧೦/೧೫ ಅಂಗುಲ ಅಳತೆ ಚೀಲದ ಪ್ರತಿ ಸಸಿಯ ಬೆಲೆ ೭೨ ರೂ. ೧೪/೨೦ ಅಂಗುಲ ಅಳತೆಯ ಚೀಲದಲ್ಲಿರುವ ಸಸಿಯ ಬೆಲೆಯನ್ನು ೧೧೧ ರೂ.ಗೆ ಹೆಚ್ಚಳ ಮಾಡಲಾಗಿದೆ.
ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಿರುವುದಾಗಿ ಇಲಾಖೆ ತಿಳಿಸಿದೆ. ಮಾನ್ಸೂನ್ ಸಂದರ್ಭದಲ್ಲಿ ಹೊಲಗಳ ಬದುಗಳಲ್ಲಿ ರೈತರು ವಿವಿಧ ಬಗೆಯ ಸಸಿಗಳನ್ನು ನೆಡುತ್ತಾರೆ. ಮಣ್ಣಿನ ಸವಕಳಿ ತಡೆಯುವ ಉದ್ದೇಶದೊಂದಿಗೆ ಗಿಡ, ಮರಗಳಿಂದ ಆದಾಯ ಹೆಚ್ಚಿಸಬಹುದೆಂಬ ನಿರೀಕ್ಷೆಯೊಂದಿಗೆ ಸಸಿಗಳನ್ನು ನೆಡಲು ಮುಂದಾಗುತ್ತಾರೆ. ಆದರೆ ಪ್ರಸ್ತುತ ಮಾನ್ಸೂನ್ ಆರಂಭವಾಗುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಸಿಗಳ ದರವನ್ನು ವಿಪರೀತ ಪ್ರಮಾಣದಲ್ಲಿ ಹೆಚ್ಚಳ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಧಾರವಾಡದ ಕಿತ್ತೂರ ಚನ್ನಮ್ಮ ಉದ್ಯಾನದ ಎದುರಿನ ಅರಣ್ಯ ಇಲಾಖೆ ಆವರಣದ ನರ್ಸರಿಯಲ್ಲಿ ೬೫,೦೦೦ ಸಸಿಗಳನ್ನು ಬೆಳೆಸಿದ್ದರೆ, ಹೊಲ್ತಿಕೋಟಿ ಅರಣ್ಯ ಇಲಾಖೆ ನರ್ಸರಿಯಲ್ಲಿ ೫೦,೦೦೦ ಹಾಗೂ ಹೊನ್ನಾಪುರ ನರ್ಸರಿಯಲ್ಲಿ ೫೦,೦೦೦ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಲು ಬೆಳೆಸಲಾಗಿದೆ. ಒಟ್ಟು ೧,೬೫,೦೦೦ ಸಸಿಗಳು ಸಾರ್ವಜನಿಕರಿಗೆ ಲಭ್ಯವಿದೆ. ಪ್ರತಿ ಬಾರಿ ಭಾರಿ ಬೇಡಿಕೆಯ ಕಾರಣದಿಂದಾಗಿ ಸಿದ್ಧಪಡಿಸಿದ ಸಸಿಗಳೆಲ್ಲ ಖಾಲಿ ಆಗುತ್ತಿದ್ದವು. ಆದರೆ ಈ ಬಾರಿ ದರ ಹೆಚ್ಚಳದಿಂದಾಗಿ ಸಸಿಗಳು ಉಳಿಯುವ ಸಾಧ್ಯತೆಯಿದೆ. ಒಂದು ವೇಳೆ ಸಸಿಗಳು ಉಳಿದರೆ ಅವುಗಳನ್ನು ಇಟ್ಟುಕೊಳ್ಳಲಾಗುವುದಿಲ್ಲ.
ಅರಣ್ಯ ಇಲಾಖೆ ಸಾರ್ವಜನಿಕರಿಗಾಗಿ ಟಿಂಬರ್ ಮರಗಳ ಸಸಿಗಳು, ಹಣ್ಣಿನ ಗಿಡದ ಸಸಿಗಳು, ನಗರವಾಸಿಗಳು ಗಾರ್ಡನ್‌ಗಳಲ್ಲಿ ನೆಡಲು ಅನುಕೂಲವಾಗುವ ಅಲಂಕಾರಿಕ ಸಸಿಗಳು, ಶಾಲೆಗಳ ಆವರಣದಲ್ಲಿ ನೆಡಬಹುದಾದ ಸಸಿಗಳು ಸೇರಿದಂತೆ ೪೫ ಬಗೆಯ ಸಸಿಗಳನ್ನು ನರ್ಸರಿಗಳಲ್ಲಿ ಸಿದ್ಧಪಡಿಸುತ್ತದೆ.
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರು ಸಸಿಗಳನ್ನು ನೆಟ್ಟು ಮೂರು ವರ್ಷಗಳ ಕಾಲ ಬೆಳೆಸಿದರೆ ಅರಣ್ಯ ಇಲಾಖೆಯಿಂದ ಒಟ್ಟು ೧೨೫ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಪ್ರೋತ್ಸಾಹಧನದ ಹೊರೆ ಕಡಿಮೆ ಮಾಡಿಕೊಳ್ಳುವ ದಿಸೆಯಲ್ಲಿ ಸಸಿಗಳ ದರ ಹೆಚ್ಚಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

೨೦೨೩-೨೪ನೇ ಸಾಲಿನಲ್ಲಿ ಅರಣ್ಯ ಇಲಾಖೆಯಿಂದ ಮಾರಾಟವಾಗುವ ಸಸಿಗಳ ದರ ಹೆಚ್ಚಳ ಮಾಡಲಾಗಿದೆ. ಆದರೆ ಹಿರಿಯ ಅಧಿಕಾರಿಗಳ ಸೂಚನೆಯನ್ವಯ ದರ ಹೆಚ್ಚಳ ಮಾಡಲಾಗಿದೆ. ಈಗ ಸಸಿಗಳ ವಿತರಣೆ ಆರಂಭಗೊಂಡಿದ್ದು, ರೈತರು ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
ಪ್ರದೀಪ ಪವಾರ
ಧಾರವಾಡ ವಲಯ ಅರಣ್ಯಾಧಿಕಾರಿ

ಸರಕಾರ ಸಸಿಗಳ ದರವನ್ನೂ ಹೆಚ್ಚಿಸುತ್ತಿರುವುದು ಬೇಸರದ ಸಂಗತಿ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ರೈತರಿಗೆ ನೀಡುತ್ತಿರುವ ಸಸಿಗಳ ಬೆಲೆ ಹೆಚ್ಚಿಸಿರುವ ಸಾಧ್ಯತೆಯಿದೆ. ೩ ರೂ. ಬೆಲೆಯ ಸಸಿಗೆ ೨೩ ರೂ. ನಿಗದಿಪಡಿಸಿದರೆ ಯಾರು ಖರೀದಿ ಮಾಡುತ್ತಾರೆ? ಕೃಷಿ ಅರಣ್ಯದ ಬಗ್ಗೆ ರೈತರಲ್ಲಿ ಆಸಕ್ತಿ ಮೂಡುತ್ತಿರುವ ಸಂದರ್ಭದಲ್ಲಿ ಸಸಿಗಳ ಬೆಲೆ ಹೆಚ್ಚಳ ಮಾಡಿರುವುದು ಸೂಕ್ತವಲ್ಲ. ರೈತರಿಗೆ ರಿಯಾಯಿತಿ ದರದಲ್ಲಿ ಸಸಿ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಭೀಮಪ್ಪ ಹಳೆಮನಿ | ಧಾರವಾಡದ ರೈತರು