For the best experience, open
https://m.samyuktakarnataka.in
on your mobile browser.

ಸಹಕಾರ ರಂಗವನ್ನು ಅಧಿಕಾರಶಾಹಿ ಮುಕ್ತ ಮಾಡಬೇಕು

05:46 PM Sep 08, 2024 IST | Samyukta Karnataka
ಸಹಕಾರ ರಂಗವನ್ನು ಅಧಿಕಾರಶಾಹಿ ಮುಕ್ತ ಮಾಡಬೇಕು

ಹಾವೇರಿ: ಸಹಕಾರ ರಂಗವನ್ನು ಅಧಿಕಾರಶಾಹಿ ಮುಕ್ತಮಾಡಬೇಕು. ಸಾರ್ವಜನಿಕರ ಠೇವಣಿ ನಷ್ಟವಾಗಬಾರದೆಂದು ಕಾನೂನುಗಳನ್ನು ಮಾಡಬೇಕು. ಸಹಕಾರಿ ರಂಗದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಹಾವೇರಿಯ ಹುಕ್ಕೇರಿಮಠದ ಶ್ರೀ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ದಿ. ಕಾರ್ಡಮಮ್ ಮರ್ಚಂಟ್ಸ ಕೋ ಆಪ್ ಬ್ಯಾಂಕ್ ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಉದ್ಘಾಟನೆಗೊಳಿಸಿ ಮಾತನಾಡಿದರು.
ಒಂದು ಸಂಸ್ಥೆ ಸುವರ್ಣ ಮಹೋತ್ಸವ ಆಚರಣೆ ಮಾಡುತ್ತಿರುವುದು ಅತ್ಯಂತ ಮಹತ್ವವಾದದ್ದು, ಒಂದು ಸಂಸ್ಥೆ ಬೆಳೆಯಬೇಕೆಂದರೆ ಹಲವಾರು ಜನರು ಕಠಿಣ ಶ್ರಮ ವಹಿಸಿ ,ತ್ಯಾಗ ಮಾಡಿ, ತಮ್ಮ ಸ್ವಂತ ಸಂಸ್ಥೆ ಎಂದು ಹಣಕಾಸಿನ ವ್ಯವಹಾರವನ್ನು ಸ್ವಚ್ಚವಾಗಿ ದಕ್ಷವಾಗಿ ಇಟ್ಟು ಮಾಡುವುದು ದೊಡ್ಡ ಶ್ರಮ ಇದೆ. ಈ ಹಿನ್ನೆಲೆಯಲ್ಲಿ ಈ ಯಾಲಕ್ಕಿ ವ್ಯಾಪಾರಸ್ಥರು ಹಾವೇರಿಯಲ್ಲಿ ತಮ್ಮ ವ್ಯಾಪಾರ ಆರಂಭಿಸಿ, ಇಡೀ ಕರ್ನಾಟಕಕ್ಕೆ ಯಾಲಕ್ಕಿ ಕಂಪು ಕೊಟ್ಟಿದ್ದಾರೆ. ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಈ ಬ್ಯಾಂಕ್ ಸ್ಥಾಪನೆ ಆಲೋಚನೆ ಹಿರಿಯರಿಗೆ ಯಾವಾಗ ಬಂತೊ ಆ ಘಳಿಗೆಗೆ ಹಾಗೂ ಸಂಸ್ಥಾಪಕರಿಗೆ ನಮ್ಮ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಈ ಬ್ಯಾಂಕ್ ಅತ್ಯಂತ ಯಶಸ್ವಿಯಾಗಿ ಆರ್ಥಿಕ ಸಬಲತೆ ಹೊಂದಿದೆ. ಸರಕಾರಿ ಬ್ಯಾಂಕ್‌ನ ವಿಶ್ವಾಸಾರ್ಹತೆ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಮೇಲೆ ನಿಂತಿದೆ. ಕಾರ್ಡಮಮ್ ಬ್ಯಾಂಕ್‌ನ ವಿಶ್ವಾಸಾರ್ಹತೆ ಎಂದರೆ ನಿಮ್ಮ ವಿಶ್ವಾಸಾರ್ಹತೆಯೇ ಬ್ಯಾಂಕಿನ ವಿಶ್ವಾಸಾರ್ಹತೆ, ನೂರಾರು ಜನರು ತಮ್ಮ ದುಡಿಮೆಯ ಹಣವನ್ನು ಇಲ್ಲಿ ಇಟ್ಟಿದ್ದಾರೆ. ಸುಮಾರು 50 ಕೋಟಿ ಹಣ ಇಟ್ಟಿದ್ದಾರೆ. ಅದನ್ನು ನೀವು ಉಳಿಸಿಕೊಂಡು ಬೆಳೆಸಿಕೊಂಡು ಹೋಗುತ್ತಿದ್ದೀರಿ ಒಳ್ಳೆಯ ಕಾರ್ಯ ಎಂದರು.
ಪಾಶ್ಚಿಮಾತ್ಯ ದೇಶಗಳಲ್ಲಿ ಬ್ಯಾಂಕ್‌ಗಳು ಹುಟ್ಡುವುದು ಬಹಳ ಸುಲಭ‌ ಮುಚ್ಚುವುದು ಸುಲಭ ಅಮೇರಿಕಾದಲ್ಲಿ ಅತಿ ಹೆಚ್ಚು ಬ್ಯಾಂಕ್‌ಗಳಿವೆ ಬ್ಯಾಂಕ್‌ಗಳು ದಿವಾಳಿಯಾಗುವುದು ಅತಿ ಹೆಚ್ಚು. ನಮ್ಮ ದೇಶದಲ್ಲಿ ಬ್ಯಾಂಕ್‌ಗಳು ಹುಟ್ಟುವುದು ಕಡಿಮೆ ಮುಚ್ಚುವುದು ಕಡಿಮೆ. ಅಮೇರಿಕೆಯಲ್ಲಿ ಖರ್ಚು ಮಾಡುವ ಸಂಸ್ಕೃತಿ, ನಮ್ಮದು ಉಳಿತಾಯ ಸಂಸ್ಕೃತಿ, ನಮ್ಮ ತಾಯಂದಿರುವ ಉಳಿತಾಯ ಮಾಡಿರುವುದು ದೇಶದ ಸಂಪತ್ತು. ಬಂಗಾರ, ದುಡ್ಡಿನ ಠೇವಣಿ ಉಳಿಯುತ್ತಿರುವುದು ಮಹಿಳೆಯರಿಂದ, ದೇಶದಲ್ಲಿರುವ ಬಡ ಮನೆತನಗಳು ಇವತ್ತು ತಮ್ಮ ಬದುಕನ್ನು ಸ್ವಾಭಿಮಾನ ದಿಂದ ನಡೆಸಲು ಸಾಧ್ಯವಾಗಿದೆ.
ಪಾಶ್ಚಿಮಾತ್ಯ ಬ್ಯಾಂಕ್ ಮತ್ತು ಸಾಸಿವೆ ಜೀರಿಗೆ ಡಬ್ಬಿಯ ಬಗ್ಗೆ ಒಂದು ಚರ್ಚೆ ನಡೆಯಿತು. ನಮ್ಮ ಆರ್ಥಿಕ ಚಟುವಟಿಕೆಗಳು ನಮ್ಮ ಸಂಸ್ಕೃತಿಯಲ್ಲಿದೆ‌. ಇತ್ತೀಚಿನ ದಿನಗಳಲ್ಲಿ ತಪ್ಪು ಕಲ್ಪನೆ ಬೆಳೆಯುತ್ತಿದೆ. ನಾಗರೀಕತೆಯನ್ನೇ ಸಂಸ್ಕೃತಿ ಎಂದು ಕೊಂಡಿಕೊಂಡಿದ್ದೆವೆ. ನಮ್ಮ ಬಳಿ ಏನಿದೆಯೊ ಅದು ನಾಗರಿಕತೆ, ನಾವು ಏನಾಗಿದ್ದೇವೊ ಅದು ಸಂಸ್ಕೃತಿ. ಹಳ್ಳಿಯಲ್ಲಿ ಮೊದಲು ಬೀಸಿಕಲ್ಲು ಇದ್ದವು‌ ಈಗ ಮಿಕ್ಸರ್ ಬಂದಿದೆ. ಆರ್ಥಿಕತೆಯ ಜೊತೆಗೆ ಸಂಸ್ಕೃತಿ ಉಳಿಸಿಕೊಂಡು ಹೋಗಬೇಕು.
ಬಂಡವಾಳ ಶಾಹಿ ಮತ್ತು ಸಮಾಜವಾದ ಎರಡೂ ವಿರುದ್ದ ಇರುವಂತಹವು, ಇವೆರಡೂ ಮಾನವೀತೆಯ ಉದ್ದಾರ ಆಗಿಲ್ಲ. ಇವೆರಡಕ್ಕೂ ಉತ್ತರ ಸಹಕಾರ ತತ್ವ. ಅಂತಹ ಸಹಕಾರ ತತ್ವದಡಿ ಈ ಬ್ಯಾಂಕ್ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಮಹಾರಾಷ್ಟ್ರ ಹಾಗೂ ಗುಜರಾತ್ ನಲ್ಲಿ ಸಹಕಾರ ರಂಗದವರು ಸರ್ಕಾರವನ್ನು ಆಳುತ್ತಾರೆ. ಇಲ್ಲಿ ಸರ್ಕಾರ ಸಹಕಾರ ರಂಗವನ್ನು ಆಳಲು ಬಯಸುತ್ತದೆ. ಅದು ಬದಲಾಗಬೇಕು. ಸಹಕಾರ ರಂಗವನ್ನು ಅಧಿಕಾರಶಾಹಿ ಮುಕ್ತಮಾಡಬೇಕು. ಸಾರ್ವಜನಿಕರ ಠೇವಣಿ ನಷ್ಟವಾಗಬಾರದೆಂದು ಕಾನೂನುಗಳನ್ನು ಮಾಡಬೇಕು. ಅದರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಕೋಆಪರೇಟಿವ್ ಕ್ಯಾಪಲಿಸ್ಟ್ ಇದ್ದಾರೆ‌. ಕೆಲವು ಮೂಲಭೂತ ಬದಲಾವಣೆ ಮಾಡಿದರೆ ಸಹಕಾರಿ ರಂಗ ದೇಶವನ್ನೇ ಆಳುವ ಶಕ್ತಿ ಹೊಂದಿದೆ. ಅದಕ್ಕಾಗಿಯೇ ಕೇಂದ್ರ ಸರ್ಕಾರ ಸಹಕಾರ ಇಲಾಖೆ ಮಾಡಿದೆ. ಎಲ್ಲ ಸೊಸೈಟಿಗಳನ್ನು ಮೂರು ವರ್ಷಗಳಲ್ಲಿ ಕಂಪ್ಯೂಟರಿಕರಣ ಮಾಡಲಾಗುತ್ತಿದೆ. ಒಂದು ಸೊಸೈಟಿ ಪೆಟ್ರೊಲ್ ಬಂಕ್ ನಡೆಸಬಹುದು. ಯಾಲಕ್ಕಿ ವ್ಯಾಪಾರ ಮಾಡುತ್ತಿರುವ ಈ ಬ್ಯಾಂಕ್ ಮಹತ್ವದ ಕೆಲಸ ಮಾಡಬೇಕು. ಇದು ಹಾವೇರಿಗೆ ಲೀಡ್ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಈ ಬ್ಯಾಂಕ್ ಗೆ ಎಪ್ಪತೈದು ವರ್ಷ ಆಗುವಷ್ಟರಲ್ಲಿ ನಾಲ್ಕು ಪಟ್ಟು ವ್ಯವಹಾರ ನಡೆಸಬೇಕು. ಇದಕ್ಕೆ ಹುಕ್ಕೇರಿ ಸ್ವಾಮೀಜಿಗಳ ಆಶೀರ್ವಾದ ಇದೆ. ಗವಿಮಠದ ಸ್ವಾಮೀಜಿ ಇಲ್ಲಿ ಬಂದಿರುವುದು ಖುಷಿಯಾಗಿದೆ. ಅವರು ಯಾರಿಂದಲೂ ಏನೂ ಬಯಸದ ನಿರ್ಮೋಹಿ, ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯ, ವಿದ್ಯ ನೀಡುತ್ತಿದ್ದಾರೆ. ದಕ್ಷಿಣದಲ್ಲಿ ಸಿದ್ದಗಂಗಾ ಮಠ ನಡೆಯುತ್ತಿರುವಂತೆ ಕೊಪ್ಪಳದಲ್ಲಿ ಮಠ ನಡೆಸುತ್ತಿದ್ದಾರೆ‌. ಅವರ ಮಾತುಗಳು ನೇರವಾಗಿ ಹೃದಯಕ್ಕೆ ಮುಟ್ಟುತ್ತವೆ. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡುವುದು, ಶೌಚಾಲಯ ತಾವೇ ಸ್ವಚ್ಚ ಮಾಡುವ ಕೆಲಸ ಮಾಡುತ್ತಾರೆ. ಇಬ್ಬರು ಪರಮಪೂಜ್ಯರು ಹಿರಿಯ ಗುರುಗಳ ಆಶೀರ್ವಾದದಿಂದ ಸದಾಶಿವ ಸ್ವಾಮೀಜಿ ಮೌನವಾಗಿ ಎಲ್ಲ ಸಾಧನೆ ಮಾಡುತ್ತಿದ್ದಾರೆ. ಅದೇ ರೀತಿ ಗವಿಶಿದ್ದ ಮಠ ಕೆಲಸ ಮಾಡುತ್ತಿದೆ. ನಮ್ಮ ಕರ್ನಾಟಕದ ಆದ್ಯಾತ್ಮಿಕ ಧಾರ್ಮಿಕ ಭವಿಷ್ಯ ರೂಪಿಸುವ ಇಬ್ಬರು ಸ್ವಾಮೀಜಿಗಳು ಇಲ್ಲಿದ್ದಾರೆ. ಅವರ ಆಶೀರ್ವಾದ ಮಾರ್ಗದರ್ಶನ ಪಡೆದು ನಾವು ಮುನ್ನಡೆಯೋಣ ಎಂದು ಹೇಳಿದರು.