ಸಹಚರನೊಂದಿಗೆ ತನ್ನ ಮನೆಯಲ್ಲಿ ಕಳ್ಳತನ ಮಾಡಿದ್ದ ಯುವತಿ ಬಂಧನ
ದಾವಣಗೆರೆ: ಪರಿಚಯಸ್ಥನೊಂದಿಗೆ ಸೇರಿ ತನ್ನದೇ ಮನೆಯಲ್ಲಿ ಕಳ್ಳತನ ಮಾಡಿದ್ದ ಯುವತಿ ಹಾಗೂ ಸಹಚರನನ್ನು ಬಂಧಿಸಿರುವ ಪೊಲೀಸರು, ಸುಮಾರು ೧೦.೭೭ ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕು ಅಗರಬನ್ನಿಹಟ್ಟಿ ಗ್ರಾಮದ ತಸ್ಮೀಯ ಖಾನಂ(೨೬ ವರ್ಷ), ಶಿವಮೊಗ್ಗ ಇಲಿಯಾಜ್ ನಗರ ಮೂಲದ ಹಾಲಿ ಬೆಂಗಳೂರು ರಾಜಾಜಿನಗರ ನಿವಾಸಿ ಮುಜೀಬುಲ್ಲಾ ಶೇಖ್(೪೨ ವರ್ಷ) ಬಂಧಿತ ಆರೋಪಿಗಳು. ಕಳೆದ ಸೆ.೩೦ರಂದು ಮಧ್ಯಾಹ್ನನ ಅಗರಬನ್ನಿಹಟ್ಟಿ ಗ್ರಾಮದ ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ಯಾರೋ ಪ್ರಜ್ಞೆ ತಪ್ಪಿಸಿ, ಮನೆಯ ಬೀರುವಿನಲ್ಲಿದ್ದ ಸುಮಾರು ೧೭೦ ಗ್ರಾಂ ಚಿನ್ನಾಭರಣ, ೧.೨೦ ಲಕ್ಷ ರೂ. ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ತಸ್ಮೀಯ ಖಾನಂ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹೆಚ್ಚಿನ ತನಿಖೆ ನಡೆಸಿದಾಗ ಸ್ವತಃ ತಸ್ಮೀಯ ಖಾನಂ ತಮ್ಮ ಕುಟುಂಬಕ್ಕೆ ನಿಕಟವರ್ತಿಯಾಗಿದ್ದ ಮುಜೀಬುಲ್ಲಾ ಶೇಖ್ ಜೊತೆ ಸೇರಿಕೊಂಡು ಕೃತ್ಯ ಎಸಗಿದ್ದು, ಇದು ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಸುಳ್ಳು ಕಥೆ ಸೃಷ್ಟಿಸಿರುವುದು ತಿಳಿದುಬಂದಿದೆ. ತಪ್ಪೊಪ್ಪಿಕೊಂಡ ತಸ್ಮೀಯ ಖಾನಂ ನೀಡಿದ ಮಾಹಿತಿ ಮೇರೆಗೆ ಪ್ರಕರಣದಲ್ಲಿ ಕಳ್ಳತನವಾಗಿದ್ದ ೯.೫ ಲಕ್ಷ ರೂ. ಬೆಲೆಬಾಳುವ ೧೫೫ ಗ್ರಾಂ ಚಿನ್ನಾಭರಣ ಹಾಗೂ ೧,೨೭,೦೦೦ ರೂ. ನಗದು ಹಣವನ್ನು ಮುಜೀಬುಲ್ಲಾ ಶೇಖ್ ನ ಶಿವಮೊಗ್ಗ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಸಧ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರಕರಣದ ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯಕುಮಾರ್ ಎಂ.ಸಂತೋಷ್, ಜಿ.ಮಂಜುನಾಥ್, ಚನ್ನಗಿರಿ ಡಿವೈಎಸ್ಪಿ ಸ್ಯಾಮ್ ವರ್ಗಿಸ್ ಮಾರ್ಗದರ್ಶನದಲ್ಲಿ ಪಿಐ ಬಾಲಚಂದ್ರ ನಾಯ್ಕ ನೇತೃತ್ವದಲ್ಲಿ ಪಿಎಸೈಗಳಾದ ಸುರೇಶ್, ಜಗದೀಶ್ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡ ರಚಿಸಲಾಗಿತ್ತು.