ಸಾಂಪ್ರದಾಯಿಕ ಶಲ್ಯ ಧರಿಸಿ ಬಂದ ಶಾಸಕರು….
ಇತ್ತ ಬಿಜೆಪಿ ಸದಸ್ಯರು ಪ್ಲೇ ಕಾರ್ಡ್ ಪ್ರದರ್ಶಿಸಿ ಸರ್ಕಾರದ ಬಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅತ್ತ ಆಡಳಿತ ಪಕ್ಷದ ಎಲ್ಲ ಸದಸ್ಯರು ಕೇಸರಿ, ಬಿಳಿ, ಹಸಿರು ವರ್ಣದ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಶಲ್ಯವನ್ನು ಧರಿಸಿ ಕಲಾಪಕ್ಕೆ ಹಾಜರಾಗಿದ್ದು ವಿಶೇಷವಾಗಿತ್ತು. ಸಿಎಂ ಕೂಡಾ ಮಾಮೂಲಿನಂತೆ ಶ್ವೇತವಸ್ತ್ರಧಾರಿಯಾಗಿ ಬಜೆಟ್ ಮಂಡಿಸಿದರು.
ವಿಶೇಷ ಸಂಪುಟ ಸಭೆ: ಮಂಡನೆಗೂ ಮುನ್ನ ವಿಶೇಷ ಸಚಿವಸಂಪುಟ ಸಭೆ ನಡೆಸಿ ಬಜೆಟ್‌ಗೆ ಅನುಮೋದನೆ ಪಡೆಯಲಾಯಿತು. ಇದಕ್ಕೂ ಮೊದಲು ಬೆಳಗ್ಗೆ ಕಾವೇರಿ ನಿವಾಸಕ್ಕೆ ತೆರಳಿದ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸಾರಥ್ಯದ ತಂಡ ಬಜೆಟ್ ಪ್ರತಿಯಿದ್ದ ಮಿನಿಸೂಟ್‌ಕೇಸ್ ಅನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿದರು.
ಬಜೆಟ್ ಪ್ರತಿಗೆ ಕಿತ್ತಾಟ: ಸಿಎಂ ಓದಲು ಶುರು ಮಾಡುತ್ತಿದ್ದಂತೆ ಪತ್ರಕರ್ತರ ಗ್ಯಾಲರಿಯಲ್ಲಿ ಬಜೆಟ್ ಪ್ರತಿ ಪಡೆಯಲು ಕಿರುಚಾಟ, ಕಿತ್ತಾಟ ಶುರುವಾಯಿತು. ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಆಸನದಿಂದ ಎದ್ದು ಬಂದು ದಯವಿಟ್ಟು ಸೈಲೆಂಟಾಗಿರಿ ಎಂದು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಸುಮಾರು ೧೦ ನಿಮಿಷಗಳ ಕಾಲ ವಾರ್ತಾ ಇಲಾಖೆ ಸಿಬ್ಬಂದಿ ಪ್ರತಿ ವಿತರಿಸುವ ಹೊತ್ತಿಗೆ ಸಾಕುಸಾಕಾಗಿತ್ತು.