For the best experience, open
https://m.samyuktakarnataka.in
on your mobile browser.

ಸಾಂಸ್ಕೃತಿಕ ಪುನರುತ್ಥಾನದ ಹೆಗ್ಗುರುತು ಕನ್ಯಾಕುಮಾರಿ

03:30 AM Nov 21, 2024 IST | Samyukta Karnataka
ಸಾಂಸ್ಕೃತಿಕ ಪುನರುತ್ಥಾನದ ಹೆಗ್ಗುರುತು ಕನ್ಯಾಕುಮಾರಿ

ತಾರುಣ್ಯದ ಸಂಕೇತವಾಗಿರುವ ಸ್ವಾಮಿ ವಿವೇಕಾನಂದರ ಉದಾತ್ತ, ಉನ್ನತ ವಿಚಾರಗಳನ್ನು ಜಗದಗಲ ಪಸರಿಸಲು ಐದು ದಶಕಗಳ ಹಿಂದೆ ನಡೆದ ಸಂಘಟಿತ ಪ್ರಯತ್ನವೇ ಕನ್ಯಾಕುಮಾರಿಯ ಶಿಲಾಸ್ಮಾರಕ. ಭಾರತೀಯ ವಿಚಾರ ಶ್ರೀಮಂತಿಕೆಯನ್ನು, ಆಧ್ಯಾತ್ಮದ ಮಹಾನತೆಯನ್ನು ಅರಸಿ ಬಹುದೂರದಿಂದ ಬರುವ ಛಾತ್ರದುಂಬಿಗಳಿಗೆ ಜ್ಞಾನಮಕರಂದ ಉಣಬಡಿಸಲು ಸಮುದ್ರಮಧ್ಯದಲ್ಲಿ ಆವಿರ್ಭವಿಸಿದ ಸಹಸ್ರಮಾನದ ಸಾಧನೆಯಾದ ವಿವೇಕಸ್ಮತಿಪ್ರಸಾದವು ಭರತಖಂಡದ ಇಂದ್ರನೀಲಮಣಿಯಂತೆ. ಸಾಧಕರಿಗೆ ನವಶಕ್ತಿಯನ್ನೂ, ಹೊಸಹುರುಪನ್ನೂ ತುಂಬಿ ವಿಜಯಧ್ವಜ ರಾರಾಜಿಸಲು ಅವಕಾಶವೀಯುವ ವಿದ್ಯುತ್ಕಾಂತಿಸಮಪ್ರಭ ತಾಣವನ್ನು ಕಡಲಿನಲೆಗಳಾರ್ಭಟದ ನಡುವೆ ನಿರ್ಮಿಸಿದ ಧೀಮಂತಪುರುಷ ಏಕನಾಥ ರಾನಡೆಯವರ ಬದುಕೇ ರಾಷ್ಟ್ರಸಮರ್ಪಿತ. ಭಾರತದ ಸಾಂಸ್ಕೃತಿಕ ಅಸ್ಮಿತೆಯ ಹೆಗ್ಗುರುತು, ಅವಿಚ್ಛಿನ್ನ ಪರಂಪರೆಯ ಮಾನಬಿಂದುವೆಂಬ ವಿಶಿಷ್ಟತೆಗೆ ಪಾತ್ರವಾದ ಕಲಾಸಮುಚ್ಚಯದ ಯಾಜಿಯೂ, ರಾಷ್ಟ್ರೀಯ ಏಕತೆಯ ರೂವಾರಿಯೂ ಆದ ರಾನಡೆಯವರ ಧನ್ಯಜೀವನದ ಸ್ಮರಣೆಯೇ ಗಂಗಾಸ್ನಾನಸಮ.
ಮಹಾರಾಷ್ಟ್ರದ ಅಮರಾವತಿಯ ಸಂಪ್ರದಾಯಸ್ಥ ವೈದಿಕ ಕುಟುಂಬದ ರಾಮಕೃಷ್ಣ ವಿನಾಯಕ ರಾನಡೆ-ರಮಾಬಾಯಿ ದಂಪತಿಗಳಿಗೆ ೧೯೧೪ರ ನವಂಬರ್ ಹತ್ತೊಂಭತ್ತರಂದು ಜನಿಸಿದ ಏಕನಾಥರು ಶಿಕ್ಷಣದ ಉದ್ದೇಶದಿಂದ ನಾಗಪುರಕ್ಕೆ ಪಯಣಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯಾದ ಆರಂಭಿಕ ವರ್ಷದಲ್ಲೇ ಅದರ ಸಂಪರ್ಕಕ್ಕೆ ಬಂದ ರಾನಡೆ, ಹೆಡಗೆವಾರರ ಸ್ಫೂರ್ತಿಯುತ ಮಾತಿನಿಂದ ಪ್ರೇರಿತರಾಗಿ ರಾಷ್ಟ್ರೀಯತೆ ಮತ್ತು ಸಾಮಾಜಿಕ ಸಮರಸತೆಯ ದಿಕ್ಕಿನತ್ತ ಆಕರ್ಷಿತರಾದರು.
ಕಾನೂನು ಪದವಿಯ ಬಳಿಕ ಪೂರ್ಣಕಾಲಿಕ ಪ್ರಚಾರಕರಾಗಿ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿದ ರಾನಡೆ, ಉಪನಿಷತ್ತುಗಳ ಅಧ್ಯಯನದಲ್ಲಿ ತೊಡಗಿದರು. ಋಷಿಪರಂಪರೆಯ ಅತ್ಯಪರೂಪದ ಜ್ಞಾನದಿಂದ ಅವಾಕ್ಕಾಗಿ ಅದರ ಸಾರವನ್ನು ಸಮಾಜಕ್ಕೆ ಪ್ರಚಾರಪಡಿಸಲು ನಿರ್ಧರಿಸಿದರು. ವೈದಿಕ ಸಾಹಿತ್ಯದ ಉದ್ದ, ಅಗಲ, ಆಳ, ವಿಸ್ತಾರಗಳನ್ನೆಲ್ಲ ತಿಳಿದು ಅದರೊಳಗೆ ಅಡಕವಾಗಿರುವ ವಿಜ್ಞಾನ, ತಂತ್ರಜ್ಞಾನ, ಮೌಲ್ಯ, ಸಂಸ್ಕೃತಿಯ ಮಹಾಸತ್ವವನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಲು ಸೂತ್ರ ರೂಪಿಸಿದರು. ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಓದುತ್ತಲೇ ತಮ್ಮ ಬದುಕಿನ ಉದ್ದೇಶವನ್ನು ಏಕತ್ರಗೊಳಿಸಿದ ಏಕನಾಥರು ಭಾವಿ ಜೀವನವನ್ನು ವಿವೇಕವಿಚಾರ ಪ್ರಸಾರಕ್ಕೆ ಮೀಸಲಿಡುವ ನಿರ್ಣಯ ಕೈಗೊಂಡದ್ದು ದೇಶದ ಸಾಂಸ್ಕೃತಿಕ ಪುನರುತ್ಥಾನಕ್ಕೆ ಬಹುದೊಡ್ಡ ಕೊಡುಗೆಯಾಗಿ ಪರಿಣಮಿಸಿತು. ಆಗ ಅವರೆದುರು ತೆರೆದುನಿಂತ ಅದ್ಭುತ ಕಲ್ಪನೆಯೇ ಕನ್ಯಾಕುಮಾರಿ ಶಿಲಾಸ್ಮಾರಕ.
ಭರತವರ್ಷದ ಸಿರಿಸಿಂಗಾರದ ಕಥೆಯನ್ನು ಧೀರಗಂಭೀರವಾಣಿಯಿಂದ ವಿಶ್ವದ ಮೂಲೆಮೂಲೆಗಳಲ್ಲಿ ಅನುರಣಿಸಿದ ವೇದಾಂತಕೇಸರಿ, ವೀರಸಂನ್ಯಾಸಿ ಸ್ವಾಮಿ ವಿವೇಕಾನಂದರಿಗೆ ಭಾರತೋತ್ಥಾನದ ನೀಲನಕಾಶೆಯ ಸ್ಪಷ್ಟ ಚಿತ್ರಣವಿತ್ತ ಶಿವಾನುಗ್ರಹತಾಣ ಕನ್ಯಾಕುಮಾರಿ, ನಾಡಿನ ನಯನಮನೋಹರ ಆಧ್ಯಾತ್ಮಿಕ, ಸಾಂಸ್ಕೃತಿಕ, ರಾಷ್ಟ್ರೀಯ ತಾಣಗಳಲ್ಲಿ ಅತಿವಿಶಿಷ್ಟ. ಪೌರಾಣಿಕವಾಗಿಯೂ ಪ್ರಸಿದ್ಧವಾಗಿರುವ ಕನ್ಯಾಕುಮಾರಿ ಶ್ರದ್ಧೆಶಕ್ತಿಗಳ ಸಂಗಮಸ್ಥಾನ. ತ್ರಿದಿನ ಧ್ಯಾನಗೈದ ಯುಗಪ್ರವರ್ತಕ ವಿಶ್ವವಿಜೇತನ ಜನ್ಮಶತಮಾನೋತ್ಸವ ಮಹಾಪರ್ವದ ನಿಮಿತ್ತ ೧೯೬೩ರಲ್ಲಿ ಕಡಲ ನಡುವೆ ಶಿಲಾಸ್ಮಾರಕವನ್ನು ನಿರ್ಮಿಸುವ ದಿವ್ಯಸಂಕಲ್ಪಕ್ಕೆ ಬದ್ಧರಾದ ಸಂಘದ ಜ್ಯೇಷ್ಠಪ್ರಚಾರಕರು ಮತ್ತು ಸ್ವಯಂಸೇವಕರು ವಿಶ್ವಮಾನವನಿಗೆ ಗೌರವ ಸಲ್ಲಿಸುವ ಮಹಾಯೋಜನೆಯನ್ನು ಕೈಗೆತ್ತಿಕೊಂಡರು. ಆದರೆ ಅದಾಗಲೇ ಪ್ರಬಲರಾಗಿದ್ದ ಮಿಶನರಿಗಳು, ಕ್ರೈಸ್ತ ಮುಖಂಡರು ತೀವ್ರವಿರೋಧವನ್ನೊಡ್ಡಿ ಸ್ಮಾರಕಕ್ಕೆ ನಿಗದಿಯಾಗಿದ್ದ ಜಾಗದಲ್ಲಿ ಶಿಲುಬೆಯನ್ನು ಸ್ಥಾಪಿಸಿದ್ದಲ್ಲದೆ 'ಸೈಂಟ್ ಕ್ಸೇವಿಯರ್ ರಾಕ್' ಹೆಸರಲ್ಲಿ ಮೋಸದಾಟ ಆರಂಭಿಸಿದ್ದು ತಿಕ್ಕಾಟಕ್ಕೆ ಕಾರಣವಾಯಿತು. ಶಠಂ ಪ್ರತಿ ಶಾಠ್ಯಂ ಎಂಬಂತೆ ಸಾಹಸಿ ಕಾರ್ಯಕರ್ತರು ರಾತೋರಾತ್ರಿ ಕಾರ್ಯಾಚರಣೆಗೈದು ಶಿಲುಬೆಯನ್ನು ಅಲ್ಲಿಂದ ತೆರವುಗೊಳಿಸಿದ ಸಂಗತಿಯಂತೂ ತಮಿಳುನಾಡು ಸಹಿತ ದೇಶದ ವಿವಿಧ ಭಾಗಗಳಲ್ಲಿ ಪ್ರತಿಧ್ವನಿಸಿತು. ವಿವೇಕಾನಂದರ ಲಕ್ಷಾಂತರ ಅನುಯಾಯಿಗಳ ಮನದಾಸೆಯನ್ನು ಮಾನ್ಯ ಮಾಡದ ಕೇಂದ್ರ-ರಾಜ್ಯ ಸರಕಾರಗಳೂ ಓಲೈಕೆಯ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಗಂಟುಬಿದ್ದಾಗ ಸಂಘದ ದ್ವಿತೀಯ ಸರಸಂಘಚಾಲಕ ಗುರೂಜಿಯವರ ಮಾರ್ಗದರ್ಶನದಲ್ಲಿ ಪ್ರಾತ:ಸ್ಮರಣೀಯ ಏಕನಾಥ ರಾನಡೆಯವರು ಶಿಲಾಸ್ಮಾರಕ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ಮಹತ್ತರ ಭೂಮಿಕೆಯನ್ನು ನಿರ್ವಹಿಸಿದರು.
ಮಳೆಗಾಳಿ: ಬಿಸಿಲಿಗೆ ಅಂಜದೆ, ಅಳುಕದೆ ಯುಗಯುಗಗಳವರೆಗೆ ಮಕರಾಲಯ ಮಧ್ಯದಲ್ಲಿ ತಲೆಯೆತ್ತಿ ನಿಲ್ಲಬಲ್ಲ ಸ್ಮಾರಕದ ನಿರ್ಮಾಣ, ಹಣಕಾಸಿನ ವ್ಯವಸ್ಥೆ, ವ್ಯಾಟಿಕನ್ ಕಬಂಧಬಾಹು, ಕೇಂದ್ರ ಸಚಿವ ಹುಮಾಯೂನ್ ಕಬೀರ್-ಮುಖ್ಯಮಂತ್ರಿ ಭಕ್ತವತ್ಸಲಂ-ಪ್ರಧಾನಿ ನೆಹರೂ ಇಬ್ಬಂದಿತನಕ್ಕೆ ಮದ್ದು ಹೀಗೆ ಹತ್ತು ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ ರಾನಡೆಯವರು ದೇಶದ ಸಂಘಟನಾತ್ಮಕ ಹನುಮ ಶಕ್ತಿಯ ಜಾಗರಣೆಗೆ ಅವಕಾಶ ಕಲ್ಪಿಸಿದರು. ಸ್ಮಾರಕ ನಿರ್ಮಿತಿಯ ಹಿನ್ನೆಲೆಯಲ್ಲಿ ದೇಶವಿದೇಶಗಳ ಗಣ್ಯರು, ಕಾರ್ಯಕರ್ತರು, ಪ್ರಚಾರಕರಿಗೆ ಇಪ್ಪತ್ತೈದು ಸಾವಿರಕ್ಕೂ ಅಧಿಕ ಪತ್ರ ಬರೆದು ಇತಿಹಾಸ ನಿರ್ಮಿಸಿದ ರಾನಡೆಯವರು ಕಾಲಿಗೆ ಚಕ್ರ ಕಟ್ಟಿದವರಂತೆ ಓಡಾಡಿ ಅಡೆತಡೆಗಳನ್ನೆಲ್ಲ ಹೆಬ್ಬಂಡೆಯಂತೆ ನಿಂತು ಎದುರಿಸಿದರು. ಲಾಲ್ ಬಹಾದ್ದೂರ್ ಶಾಸ್ತಿçಯವರ ಸಹಕಾರದಿಂದ ಮೂರು ದಿನದೊಳಗೆ ಮುನ್ನೂರ ಇಪ್ಪತ್ಮೂರು ಸಂಸದರ ಸಹಿಸಂಗ್ರಹಿಸಿ ಸರಕಾರದ ಎದುರಿಟ್ಟ ಪರಿಣಾಮ, ಆಡಳಿತವು ಅನಿವಾರ್ಯವಾಗಿ ಶಿಲಾಸ್ಮಾರಕಕ್ಕೆ ಒಪ್ಪುವಂತೆ ಮಾಡಿದರು. ಪಾದರಸದ ವ್ಯಕ್ತಿತ್ವವನ್ನು ಹೊಂದಿ, ಸ್ಮಾರಕದ ಇಂಚಿಂಚು ಬೆಳವಣಿಗೆಯನ್ನೂ ವಿಮರ್ಶಿಸಿ, ಪ್ರತಿರಾಜ್ಯಸರಕಾರದಿಂದಲೂ ದೇಣಿಗೆ ಸಂಗ್ರಹಿಸಿ, ಒಂದು ರೂಪಾಯಿ ಯೋಜನೆಯ ಮೂಲಕ ಜನಸಾಮಾನ್ಯರನ್ನೂ ಆಧುನಿಕ ಭಾರತದ ಅದ್ವಿತೀಯ ಸಾಧನೆಯ ಭಾಗೀದಾರರನ್ನಾಗಿಸಿದ ರಾನಡೆಯವರ ಸಂಘಶಕ್ತಿ ಅದ್ಭುತ, ಅತುಲ್ಯ, ಅದಮ್ಯ, ಅವಿಸ್ಮರಣೀಯ.
ಅನಾರೋಗ್ಯದ ನಡುವೆಯೂ ರಾಷ್ಟ್ರೀಯ ಚಟುವಟಿಕೆಗಳಲ್ಲಿ ತೊಡಗಿಸಿ ೧೯೮೨ರ ಆಗಸ್ಟ್ ಇಪ್ಪತ್ತೆರಡರಂದು ಭಗವತ್ಪಾದ ಸೇರಿದ ಏಕನಾಥ ರಾನಡೆಯವರ ಭವ್ಯವೂ, ದಿವ್ಯವೂ ಆದ ಪುನೀತಜೀವನ ನಮ್ಮಂತರಂಗದಲ್ಲಿ ಅರಿವಿನ ಆಳವನ್ನು ವಿಸ್ತಾರಗೊಳಿಸಲಿ. ಸರ್ವರಿಗೂ ರಾನಡೆ ಜಯಂತಿ - ಸಾಧನಾ ದಿನದ ಹಾರ್ದಿಕ ಶುಭಾಶಯಗಳು.