ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಾಕ್ಷಿ ಪ್ರಜ್ಞೆಯ ಎಚ್ಚರಿಕೆ

02:00 AM Apr 11, 2024 IST | Samyukta Karnataka

ಮುಕ್ಕಾಲು ಶತಮಾನದ ಅವಧಿಯಲ್ಲಿ ದೇಶ ನಿರ್ಮಾಣದ ಅಗತ್ಯ ಮತ್ತು ಅನಗತ್ಯಗಳನ್ನು ಸ್ವಾನುಭವದ ಮೂಲಕ ಕಂಡುಕೊಂಡಿರುವ ಭಾರತ ದೇಶ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟçವೆಂಬ ಗೌರವಕ್ಕೂ ಪ್ರಾಪ್ತವಾಗುತ್ತಿರುವ ಕಾಲಘಟ್ಟದಲ್ಲಿ ದೇಶವಾಸಿಗಳು ಹಾಗೂ ದೇಶದ ಮುಖಂಡರ ನಡೆನುಡಿಯಲ್ಲಿ ಮತ್ತಷ್ಟು ಜವಾಬ್ದಾರಿಯುತ ವರ್ತನೆಯನ್ನು ನಿರೀಕ್ಷಿಸುವುದು ನಿಜವಾದ ಅರ್ಥದಲ್ಲಿ ರಾಷ್ಟ್ರಧರ್ಮ. ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡು ಕೊಡುಕೊಳ್ಳುವ' ಎಂಬ ಸೂತ್ರದ ಆಧಾರದ ಮೇರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂವಿಧಾನದ ಸದಾಶಯಗಳಿಗೆ ಅನುಗುಣವಾಗಿ ನಡೆದುಕೊಂಡು ಬರುತ್ತಿರುವುದು ನಿಜಕ್ಕೂ ಅಭಿಮಾನ ಹಾಗೂ ಗೌರವದ ಸಂಗತಿ. ಈ ಎಪ್ಪತ್ತೈದು ವರ್ಷಗಳ ಅನುಭವ ದೇಶಕ್ಕೆ ಬಹು ಆಯಾಮದ ಅಗ್ನಿಪರೀಕ್ಷೆ. ಸಂವಿಧಾನಿಕ ಕಟ್ಟುಕಟ್ಟಳೆಗಳನ್ನು ಪಾಲಿಸುವ ಜೊತೆಗೆ ಆದಾಯ ಹಾಗೂ ವೆಚ್ಚವನ್ನು ರಾಜ್ಯಗಳು ನಿರ್ವಹಿಸಲು ಸಂಪನ್ಮೂಲ ಸಂಗ್ರಹಣೆಯ ಮಾರ್ಗಗಳನ್ನು ಅನುಸರಿಸಿಕೊಂಡು ಬರುತ್ತಿರುವ ರೀತಿಯಲ್ಲಿ ಹಲವಾರು ರೀತಿಯ ತೊಡರುಗಾಲುಗಳು ಎದುರಾಗುತ್ತಿರುವುದು ಪ್ರಗತಿಯ ಸಂಕೇತ ಎಂಬುದು ತಜ್ಞರ ನಂಬಿಕೆ. ಇಂತಹ ಸದಾಶಯದ ವಾತಾವರಣದಲ್ಲಿ ಹಣಕಾಸಿನ ನೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಗೆ ಸುಪ್ರೀಂಕೋರ್ಟ್ನಲ್ಲಿ ಜರುಗಿದ ಕಾನೂನಿನ ಸಮರ ನಿಜಕ್ಕೂ ಎಚ್ಚರಿಕೆಯ ಗಂಟೆಯೂ ಹೌದು, ಇನ್ನೊಂದು ಅರ್ಥದಲ್ಲಿ ಮಾದರಿಯೂ ಹೌದು. ಎರಡು ಸರ್ಕಾರಗಳ ವಾದ ಪ್ರತಿವಾದಗಳನ್ನು ಆಲಿಸಿದ ಸುಪ್ರೀಂಕೋರ್ಟ್ ನ್ಯಾಯಪೀಠ ಅತ್ಯಂತ ಸ್ಪಷ್ಟ ಮಾತುಗಳಲ್ಲಿಪರಸ್ಪರ ಸೌಹಾರ್ದಯುತ ಸಂವಾದದ ಮೂಲಕ ಬಿಕ್ಕಟ್ಟು ಇತ್ಯರ್ಥಪಡಿಸಿಕೊಳ್ಳುವುದು ನ್ಯಾಯಯೋಚಿತ ಮಾರ್ಗ' ಎಂದು ಬುದ್ಧಿಮಾತು ಹೇಳಿರುವುದು ಸ್ವಾಗತಾರ್ಹ ನಿಲುವು.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಮ್ಮದೇ ಆದ ಜವಾಬ್ದಾರಿ ಹಾಗೂ ಕರ್ತವ್ಯಗಳಿವೆ. ಈ ವಿಚಾರದಲ್ಲಿ ಯಾರೊಬ್ಬರೂ ಅಮುಖ್ಯರಲ್ಲ. ಇಬ್ಬರೂ ಮುಖ್ಯರೇ. ಸಂವಿಧಾನದ ೩೫೧ನೇ ವಿಧಿಯಿಂದ ೩೫೬ನೇಯ ವಿಧಿಯವರಿಗೆ ಪ್ರಸ್ತಾಪವಾಗಿರುವ ನಾನಾ ಕಲಂಗಳಲ್ಲಿ ಉಭಯ ಸರ್ಕಾರಗಳ ಪಾತ್ರವನ್ನು ಸ್ಪಷ್ಟ ಮಾತುಗಳಲ್ಲಿ ಹೇಳಲಾಗಿದೆ. ಆಡಳಿತಾತ್ಮಕ ಅನುಕೂಲಕ್ಕಾಗಿ ಕೇಂದ್ರದ ವ್ಯಾಪ್ತಿಗೆ ಹಲವಾರು ನಿರ್ಣಾಯಕ ರೀತಿಯ ಪರಮಾಧಿಕಾರಗಳು ದತ್ತಕವಾಗಿರುತ್ತದೆ. ಈ ಪೈಕಿ ಹಣಕಾಸು, ವಿದೇಶಾಂಗ ವ್ಯವಹಾರ, ಮಿಲಿಟರಿ, ಸಾರ್ವಭೌಮತ್ವ ರಕ್ಷಣೆ ಮುಂತಾದ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ನಿಲುವೇ ಅಂತಿಮ. ಇನ್ನು ಹಣಕಾಸಿಗೆ ಸಂಬಂಧಿಸಿದ ತೆರಿಗೆ ವಸೂಲಿ ವಿಚಾರದಲ್ಲಿಯೂ ಕೂಡಾ ಪರಸ್ಪರ ಒಪ್ಪಂದಗಳ ಮೂಲಕ ನೀತಿಯನ್ನು ರೂಪಿಸಲಾಗಿದೆ. ಜಿಎಸ್‌ಟಿ ತೆರಿಗೆ ಪದ್ಧತಿಯೂ ಕೂಡಾ, ಕೇಂದ್ರ ಹಾಗೂ ರಾಜ್ಯಗಳ ಸಮ್ಮತಿಯೊಂದಿಗೆ ಸಂಸತ್‌ನಲ್ಲಿ ರೂಪುಗೊಂಡಿರುವ ಒಂದು ಶಾಸನ. ಶಾಸನಕ್ಕೆ ಬದ್ಧವಾಗಿ ನಡೆಯುವುದಾದರೆ ಕೇಂದ್ರ ಹಾಗೂ ರಾಜ್ಯಗಳ ನಡುವೆ ತಿಕ್ಕಾಟಕ್ಕೆ ಸುತರಾಂ ಅವಕಾಶವಿಲ್ಲ. ಆದರೆ ಸಮ್ಮಿಶ್ರ ರಾಜಕೀಯ ವ್ಯವಸ್ಥೆ ಭಾರತದಲ್ಲಿ ಪ್ರವೇಶ ಪಡೆದ ನಂತರ ಕೇಂದ್ರ ಹಾಗೂ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರಗಳು ಅಧಿಕಾರಕ್ಕೆ ಬಂದ ನಂತರ ಇಂತಹ ತಿಕ್ಕಾಟಗಳು ಒಂದೊಂದಾಗಿ ಹೊರಬರುತ್ತಿವೆ. ಕೇರಳ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೋಗಿರುವುದು ಸಾಲದ ಮಿತಿಯನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿರುವುದನ್ನು ವಿರೋಧಿಸಿ ಎಂಬುದನ್ನು ಪರಿಗಣಿಸಬೇಕು. ಸಂಪನ್ಮೂಲ ಸಂಗ್ರಹಣೆಯ ಆಧಾರದ ಮೇಲೆ ಸಾಲ ಎತ್ತುವ ಸಾಮರ್ಥ್ಯವನ್ನು ರಿಜರ್ವ್‌ ಬ್ಯಾಂಕ್ ಮಾರ್ಗದರ್ಶನದೊಂದಿಗೆ ಕೇಂದ್ರ ಸರ್ಕಾರ ರೂಪಿಸುತ್ತದೆ. ಹಾಗೊಮ್ಮೆ ಕೇರಳ ಸರ್ಕಾರಕ್ಕೆ ಈ ಮಿತಿಯನ್ನು ವಿಸ್ತರಿಸಿಕೊಳ್ಳಬೇಕು ಎಂಬ ಮನಸ್ಸಿದ್ದರೆ ಕೇಂದ್ರ ಸರ್ಕಾರದ ಜೊತೆ ಸಮಾಲೋಚಿಸುವುದೇ ರಾಜಮಾರ್ಗ. ಆದರೆ ಈ ರಾಜಮಾರ್ಗಕ್ಕೆ ಅಡ್ಡಿಯಾಗಿರುವುದು ರಾಜಕೀಯ ಮಾರ್ಗ. ಸಹಜವಾಗಿಯೇ ಕೇರಳ ಸರ್ಕಾರ ಇದನ್ನು ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಿದ ಪರಿಣಾಮವಾಗಿ ವಿವಾದ ರಾಷ್ಟ್ರಮಟ್ಟಕ್ಕೆ ಹೋದಂತಾಗಿದೆ.
ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳು ಕೂಡಾ ಕೇಂದ್ರ ಸರ್ಕಾರದ ವಿರುದ್ಧ ಬೇರೆ ಬೇರೆ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಹತ್ತಿ ತಮಿಳುನಾಡಿನಲ್ಲಿ ಸಂಭವಿಸಿದ ಅತಿವೃಷ್ಟಿಗೆ ಪರಿಹಾರ ಕೊಡಲು ಸತಾಯಿಸುತ್ತಿರುವ ಕೇಂದ್ರದ ವಿರುದ್ಧ ದಾವೆ ಸುಪ್ರೀಂಕೋರ್ಟಿನಲ್ಲಿದೆ. ಬರಗಾಲ ಪರಿಹಾರಕ್ಕೆ ಮೀನಮೇಷ ಎಣಿಸುತ್ತಿರುವುದು ಸುಪ್ರೀಂಕೋರ್ಟ್‌ಗೆ ಕರ್ನಾಟಕ ಹೋಗಲು ಕಾರಣ. ಈ ಎರಡು ರಾಜ್ಯಗಳ ಪರಿಸ್ಥಿತಿಯನ್ನು ಗಮನಿಸಿ ಹೇಳುವುದಾದರೆ ರಾಜ್ಯಗಳ ನಿಲುವನ್ನು ಕೇಂದ್ರ ಸರ್ಕಾರ ಮುಕ್ತ ಮನಸ್ಸಿನಿಂದ ಪರಿಶೀಲಿಸಿ ಉದಾರ ಮನಸ್ಸಿನ ನೆರವನ್ನು ಘೋಷಿಸಬೇಕಾಗಿದೆ. ಆದರೆ ರಾಜಮಾರ್ಗಕ್ಕೆ ಈಗ ಅಡ್ಡಿಯಾಗಿರುವುದು ರಾಜಕೀಯ ಮಾರ್ಗ.
ಕೇಂದ್ರ ಸರ್ಕಾರದ ನಿಲುವು ಯಾವಾಗಲೂ ಹೃದಯ ಶ್ರೀಮಂತಿಕೆಯಿಂದ ಕೂಡಿರಬೇಕು ಎಂಬುದು ದೇಶದ ನಿರೀಕ್ಷೆ. ಯಾಕೆಂದರೆ ರಾಜ್ಯಗಳ ಅಗತ್ಯಗಳನ್ನು ಪೂರೈಸುವ ಸ್ಥಾನದಲ್ಲಿರುವುದು ಕೇಂದ್ರ ಸರ್ಕಾರ. ರಾಜ್ಯ ಸರ್ಕಾರಗಳಿಗೆ ತೆರಿಗೆ ಸಂಗ್ರಹಿಸುವ ಅಧಿಕಾರವಿದ್ದರೂ ಸಂಗ್ರಹವಾಗುವ ಹಣವನ್ನು ಕೇಂದ್ರಕ್ಕೆ ಒಪ್ಪಿಸಿ ಅದರಲ್ಲಿ ಕೊಂಚ ಪಾಲು ಪಡೆಯುವುದಷ್ಟೇ ಕೆಲಸ. ಇದು ಅತ್ಯಂತ ಸೂಕ್ಷ್ಮವಾದ ಸಂಬಂಧದ ವಿಚಾರ. ನ್ಯಾಯಮೂರ್ತಿ ಸರ್ಕಾರಿಯಾ ನೇತೃತ್ವದ ಆಯೋಗ ಕೇಂದ್ರ ಹಾಗೂ ರಾಜ್ಯಗಳ ಸಂಬಂಧದ ಮಾದರಿಗೆ ಹಲವಾರು ರೀತಿಯ ಶಿಫಾರಸುಗಳನ್ನು ಕೊಟ್ಟು ದಶಕಗಳೇ ಉರುಳಿದೆ. ಬದಲಾದ ಪರಿಸ್ಥಿತಿಯಲ್ಲಿ ಈ ಸಂಬಂಧದ ಮರುಪರೀಶಿಲನೆಗೆ ಇನ್ನೊಂದು ಆಯೋಗದ ಅಗತ್ಯವಿದೆ. ಏನೇ ಆದರೂ ಕೇಂದ್ರ ಹಾಗೂ ರಾಜ್ಯಗಳು ಸುಪ್ರೀಂಕೋರ್ಟಿಗೆ ತಮ್ಮ ಹಕ್ಕಿನ ವಿಚಾರಕ್ಕೆ ಹೋಗುವುದು ಸಾಧುವಾದ ಮಾರ್ಗವಲ್ಲ. ದೇಶದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ. ಪ್ರಗತಿಪರ ಜನತಂತ್ರ ರಾಷ್ಟ್ರ ಎಂಬ ಹಣೆಪಟ್ಟಿಯಿಂದ ಜಗತ್ತಿನಲ್ಲಿ ಬೀಗುತ್ತಿರುವ ಭಾರತಕ್ಕೆ ಇಂತಹ ಅನಗತ್ಯ ನ್ಯಾಯಾಂಗ ವಿವಾದದ ಬೆಳವಣಿಗೆ ಸತ್ಕೀರ್ತಿಗೆ ಕಪ್ಪುಚುಕ್ಕೆಯಾಗುತ್ತದೆ.

Next Article