ಸಾಧಕರ ಹಿಂದೆ ದೈವಾನುಗ್ರಹ ಇದ್ದೇ ಇರುತ್ತದೆ
ನಮ್ಮ ಆರೋಗ್ಯದ ಸವಾಲುಗಳನ್ನು ಪರಿಹರಿಸಲು ಆಧುನಿಕ ಔಷಧಗಳು, ಶಸ್ತ್ರಚಿಕಿತ್ಸೆ, ತಂತ್ರಜ್ಞಾನ, ಬ್ಯಾಂಡೇಜುಗಳ ಬಳಕೆಯನ್ನು ತಿಳಿದಿದ್ದೇವೆ. ಈ ವಿಧಾನಗಳು ಅನೇಕ ಸಂದರ್ಭಗಳಲ್ಲಿ ಪರಿಣಾಮಕಾರಿ ಮತ್ತು ಅಗತ್ಯವೂ ಆಗಿವೆ. ಆದಾಗ್ಯೂ ಕೆಲವೊಮ್ಮೆ "ನಮ್ಮ ದೇಹದೊಳಗಿನ ಜೀವಾಣು-ಪರಮಾಣುಗಳು ಹಿಂದಕ್ಕೆ ಮುಂದಕ್ಕೆ ಚದುರಿಹೋಗಿವೆ" ಎಂಬಂತೆ ಅನಿಸುತ್ತಿರುವುದು ಮಾತ್ರವಲ್ಲದೆ ಬಹುಶಃ ಮರಳಿ ಸಹಜಸ್ಥಿತಿಗೆ ಮರಳಲಾರೆವು ಎಂಬಂಥ ಮನಃಸ್ಥಿತಿಗೆ ಕಾರಣವೂ ಆಗುವುದಿದೆ!
ನಾವು ಧೂಳಿನ ಕಣಗಳಿಂದ ಮಾಡಲ್ಪಟ್ಟಿದ್ದೇವೆ ಎಂಬುದಾಗಿ ಅರಿತರೆ ಗುಣಪಡಿಸುವಿಕೆಯ ಪರಿಣಾಮಗಳು ಏನಾಗಬಹುದು? ಅಲ್ಲದೆ, ನಾವು ನಮ್ಮದೇ ವೈಯಕ್ತೀಕರಿಸಿದ ಆಕಾಶಕಾಯಗಳನ್ನು ನಮ್ಮೊಳಗೆ ಚಕ್ರಗಳ ರೂಪದಲ್ಲಿ ಸಾಗಿಸುತ್ತಿದ್ದೇವೆ ಎಂದು ಒಪ್ಪಿಕೊಂಡರೆ ಏನಾಗಬಹುದು? ಒಂದುವೇಳೆ ಇದು ನಿಜವೇ ಹೌದಾದಲ್ಲಿ ಅತ್ಯಂತ ಸಂತೋಷಪಡಬೇಕಾದವರು ನಾವೇ ಆಗಿರುತ್ತೇವೆ. ಏಕೆಂದರೆ; ಚಕ್ರಗಳ ಮೂಲಕ ಅನ್ವಯಿಸುವ ಚಿಕಿತ್ಸಾಪದ್ಧತಿ ನಮ್ಮ ಜೀವನದ ಅನೇಕ ಮಜಲುಗಳಲ್ಲಿ ಧನಾತ್ಮಕ ಪರಿಣಾಮಗಳನ್ನು, ಪರಿವರ್ತನೆಗಳನ್ನು ತರುವ ಸಾಮರ್ಥ್ಯ ಹೊಂದಿದೆ. ಹಲವಾರು ದೃಷ್ಟಿಕೋನಗಳಿಂದ ಏಕಕಾಲದಲ್ಲಿ ನಮ್ಮ ಸವಾಲುಗಳನ್ನು ಸಮಗ್ರವಾಗಿ ಸಮೀಪಿಸಲು ಚಕ್ರಗಳು ನಮಗೆ ಸಹಾಯಮಾಡುತ್ತವೆ. ನಾವು ಸಮಸ್ಯೆಯನ್ನು ಭೂತ, ವರ್ತಮಾನ ಅಥವಾ ಸಂಭಾವ್ಯ ಭವಿಷ್ಯದ ದೃಷ್ಟಿಕೋನದಿಂದ ಮನೋವಿಜ್ಞಾನ, ಅಧ್ಯಾತ್ಮಿಕತೆ ಅಥವಾ ಭೌತಿಕತೆಯ ದೂರದರ್ಶಕದ ಮೂಲಕ ನೋಡಿದಾಗ ಅದು ನಕ್ಷತ್ರವಾಗಿ ಗೋಚರಿಸಬಹುದು; ನಮ್ಮದೇ ಆದ ದೈವತ್ವದ ಮಸೂರದ ಮೂಲಕ ಹಾಗೂ ಚಕ್ರಗಳ ಕಾರಣದಿಂದಾಗಿ ಅಧ್ಯಾತ್ಮಿಕ ಒಳನೋಟಕ್ಕಾಗಿ ಆತ್ಮಕ್ಕೆ ಅಥವಾ ದೇವರಿಗೆ ಸಂಪರ್ಕಿಸಿಕೊಳ್ಳಬಹುದು.
ಚಕ್ರಗಳೂ ಕೂಡಾ ಅತ್ಯುತ್ತಮ ಔಷಧಿಗಳಾಗಿ ಕಾರ್ಯನಿರ್ವಹಿಸುತ್ತವೆ. ಚಕ್ರಗಳ ಕಾರ್ಯನಿರ್ವ ಹಣೆಯನ್ನು ಆರೋಗ್ಯ, ತೃಪ್ತಿ, ಸಾಮರಸ್ಯದ ಕಡೆಗೆ ಚಲಿಸುವ ಚಟುವಟಿಕೆಗಳೆಂದೇ ವ್ಯಾಖ್ಯಾನಿಸಲಾಗಿದೆ. ಚಕ್ರಗಳ ನಮ್ಮ ಅಸ್ತಿತ್ವದ ಎಲ್ಲಾ ಅಂಶಗಳೊಂದಿಗೆ ಹೆಣೆದುಕೊಂಡಿರುವುದರಿಂದ ಚಕ್ರದೊಳಗೆ ನಾವು ಉಂಟುಮಾಡುವ ಯಾವುದೇ ಬದಲಾವಣೆಯು ಅತ್ಯದ್ಭುತ ರೂಪಾಂತರವನ್ನು ಸೃಷ್ಟಿಸುತ್ತದೆ. ಏಕೆಂದರೆ; ಚಕ್ರಗಳು ಒಂದಕ್ಕೊಂದು ಸಂಪರ್ಕ ಹೊಂದಿರುವುದರಿಂದ ಒಬ್ಬರಿಗೆ ಪ್ರಯೋಜನವಾದರೆ ಅದು ಇತರರಲ್ಲೂ ಸುಧಾರಣೆಯನ್ನು ತರುತ್ತದೆ. ಚಕ್ರಗಳು ಸೂಕ್ಷ್ಮಶಕ್ತಿಯೊಂದಿಗೆ ವೇಗವಾಗಿ ಕಂಪಿಸುವ ಅಂಗಗಳಾಗಿರುವುದರಿಂದ ಚಕ್ರಗಳ ಮೂಲಕದ ಚಿಕಿತ್ಸೆ ತ್ವರಿತವಾಗಿ ಕೆಲಸಮಾಡುತ್ತದೆ.
ವಿಚಾರಧಾರೆಗೆ ತಕ್ಕಂತೆ ಕಾಯಿಲೆಗಳು ಬರುತ್ತವೆ. ಆಯಾ ವಿಚಾರಕ್ಕೆ ತಕ್ಕಂತೆ ರೇಡಿಯೇಷನ್ ಆಗುತ್ತದೆ. ಈ ರೇಡಿಯೇಷನ್‌ಗೆ ತಕ್ಕಂತೆ ಪ್ರಭಾವಳಿಯಲ್ಲಿ ಕರ್ಮಸಂಗ್ರಹಣೆ ನಡೆಯುತ್ತದೆ. ಪ್ರಭಾವಳಿ ಏನಿದೆ ಅದುವೆ 'ನಿಜವಾದ ನಾನು' ಆಗಿರುತ್ತದೆ. ಪ್ರಭಾವಳಿ ಮ್ಯಾಗ್ನೆಟಿಕ್ ಫೀಲ್ಡ್. ಡಾಟಾ ಸಂಗ್ರಹಣೆ ಮ್ಯಾಗ್ನೆಟಿನ ಮೂಲ ಸ್ವಭಾವ. ಎನರ್ಜಿ ಫೀಲ್ಡ್ ಜನ್ಮದಿಂದ ಜನ್ಮಕ್ಕೆ ಮುಂದುವರಿಯುತ್ತದೆ.
ಭೂಮಿಗೂ ಪ್ರಭಾವಳಿಯಿದೆ. ಜನ್ಮದಿಂದ ಜನ್ಮಕ್ಕೆ ನಮ್ಮ ಪ್ರಭಾವಳಿ ವೃದ್ಧಿಸುವಂತೆಯೇ ಭೂಮಿಯ ಪ್ರಭಾವಳಿಯೂ ಬಲಗೊಳ್ಳುತ್ತದೆ. ಭೂಮಿ ಮೇಲೆ ಎಲ್ಲಿಯೇ ಅಧ್ಯಾತ್ಮಿಕ ಸಾಧನೆ ನಡೆದರೂ ಅದರ ಪ್ರಭಾವ ಭೂಮಿಯ ಪ್ರಭಾವಳಿಯಲ್ಲಿ ಸೇರಿ 'ಪ್ರಜ್ಞಾವಲಯ' ವಿಸ್ತರಣೆಗೊಳ್ಳುತ್ತದೆ. ಬ್ರಹ್ಮಾಂಡದ ಆವರ್ತನಗಳು (ಫ್ರೀಕ್ವೆನ್ಸಿ) ನಮ್ಮ ಮೂಲಕ ನಿರಂತರವಾಗಿ ಹಾದುಹೋಗುತ್ತಿರುತ್ತವೆ ಮತ್ತು ನಾವೂ ಅದರ ಮಧ್ಯೆಯೇ ಹಾದುಹೋಗುತ್ತಾ ಇರುತ್ತೇವೆ. ಹೀಗಾಗಿಯೇ ನಾವು ಜನ್ಮಜನ್ಮಾಂತರದ ಮಾಹಿತಿ/ಅನುಭವ/ಆಲೋಚನೆಗಳ ದೈತ್ಯ ಸಂಗ್ರಹಾಗಾರವಾಗಿದ್ದು, ಇವು ಸಾಫ್ಟ್ವೇರ್‌ನಂತೆ ಹಾಗೂ ನಮ್ಮ ದೇಹ ಹಾರ್ಡ್ವೇರ್‌ನಂತೆ ಕೆಲಸಮಾಡುತ್ತವೆ; ಬ್ರಹ್ಮಾಂಡದಲ್ಲಾಗುವ ಬದಲಾವಣೆಗಳು ನಮ್ಮ ಮೇಲೂ, ನಮ್ಮಲ್ಲಾಗುವ ಬದಲಾವಣೆಗಳು ಪ್ರಕೃತಿಯ ಮೇಲೂ ಪರಿಣಾಮಬೀರುತ್ತವೆ.
ಶ್ರದ್ಧಾವಂತ ಸಾಧಕನಿಗೆ ದಿವ್ಯಾನುಭವ ಸಹಜವಾಗಿ ಹಾಗೂ ಅನಿವಾರ್ಯವಾಗಿ ಪ್ರಾಪ್ತವಾಗುತ್ತದೆ. ಅವನ ತೀವ್ರವಾದ ಅಭೀಪ್ಸೆ ಅದನ್ಯ ಶಕ್ತಿಯೊಡನೆ ಅವನನ್ನು ಭಗವಂತನೆಡೆಗೆ (ಬೆಳಕಿನೆಡೆಗೆ) ತುಯ್ಯುತ್ತದೆ. ಆ ಕಾಂತಗುಣದ ತೀವ್ರತೆಯಿಂದ ಸಾಧಕನ ಪ್ರಜ್ಞಾವಲಯಕ್ಕೆ ಬ್ರಹ್ಮಾಂಡ ದರ್ಶನದ ರೂಪದಲ್ಲಿ ಭಗವಂತ (ಬೆಳಕು) ಸೆಳೆಯಲ್ಪಡುತ್ತಾನೆ. ಸಾಧಕರ ಹಿಂದೆ ದೈವಾನುಗ್ರಹ ಇದ್ದೇ ಇರುತ್ತದೆ. ದೇವತಾನುಗ್ರಹವಿದ್ದಾಗ ನಮ್ಮ ಯೋಗ್ಯತೆಗೆ ತಕ್ಕಂತೆಯೇ ಸಾಧನೆ ಸಾಧ್ಯವಾಗುತ್ತದೆ. ದೇವತಾನುಗ್ರಹ ಎಲ್ಲರಿಗೂ ಸಮಾನವಾಗಿ ಸಿಗುವ ಅವಕಾಶವಿದ್ದರೂ ಅದನ್ನು ಸ್ವೀಕರಿಸಿ ತಮಗೆ ಬೇಕಾದಂತೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಾಮರ್ಥ್ಯ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ದೇವತೆಗಳಿಂದ ನಮಗೆ ಅನುಗ್ರಹ ಸಿಗುವಂತೆಯೇ ನಮ್ಮಿಂದ ನಡೆಯುವ ಕ್ರಿಯೆಗಳು (ಮಂತ್ರಪಠಣ, ಹೋಮ, ಹವನಾದಿ ಪೂಜೆಗಳು, ಭಜನೆ ಇತ್ಯಾದಿ) ದೇವತೆಗಳಿಗೂ ಇನ್ನಷ್ಟು ಶಕ್ತಿನೀಡುತ್ತವೆ. ಬುದ್ಧಿಶಕ್ತಿಯನ್ನು ಮೀರಿದ ಸಾಧನೆಗೆ ದೈವಾನುಗ್ರಹ ಇದ್ದೇ ಇರುತ್ತದೆ.
ನಂಬಿಕೆಯ ಮೇಲೆ ಸಮಸ್ಯೆ ಪರಿಹಾರವಾಗುವುದು ಒಂದಾದರೆ; ರೇಕಿಯಿಂದ ನಿರ್ಧಿಷ್ಟ ರೀತಿಯಲ್ಲಿ ನಿರ್ಧಿಷ್ಟ ಸಮಸ್ಯೆಗಳನ್ನು ಪರಿಹರಿಸುವ ಜ್ಞಾನ ಪ್ರಾಪ್ತಿಯಾಗುತ್ತದೆ. ವಿಶ್ವದ ಎಲ್ಲಾ ನಾಗರಿಕತೆಗಳಲ್ಲೂ ದೇವತಾರಾಧನೆಯಿತ್ತು. 'ಏಕದೋವೋಪಾಸನೆ' ಎಂಬುದು ಆಧುನಿಕ ಪರಿಕಲ್ಪನೆ. ಪ್ರಾಚೀನ ಕಾಲದಲ್ಲಿ ಇಡೀ ಜಗತ್ತಿನಲ್ಲಿ ದೇವತಾರಾಧನೆ ಇದ್ದುದರಿಂದ ಮೂಲಸ್ವರೂಪದಲ್ಲಿ ಇಡೀ ಮಾನವ ಜನಾಂಗವೇ ಒಂದಾಗಿತ್ತು. ದೇವರಿದ್ದಾನೆ ಎಂದು ಸುಮ್ಮನೆ ಕುಳಿತರೆ ಸಾಲದು; ನಮ್ಮ ಸಾಧನೆ ಇರಬೇಕು. ಪರಮಾತ್ಮನ ಅನುಗ್ರಹ ಎಲ್ಲಾ ಲೋಕಗಳಲ್ಲೂ ಸಮಾನವಾಗಿ, ಏಕರೂಪವಾಗಿ ನೀಡಲ್ಪಟ್ಟಿರುತ್ತದೆ. ನಮ್ಮ ನಮ್ಮ ಸಾಧನೆ, ಸಾಧನೆಯಿಂದ ಉಂಟಾಗುವ ಅರ್ಹತೆಯ ಆಧಾರದಲ್ಲಿ ಆಯಾಯ ಪ್ರಮಾಣದಲ್ಲಿ ದೇವತಾನುಗ್ರಹ ಪ್ರಾಪ್ತಿಯಾಗಲು ಸುಲಭವಾಗುತ್ತದೆ. ಹೋಮ-ಹವನಾದಿಗಳು ನೀರಾವರಿ ಯೋಜನೆಗಳಾದರೆ ರೇಕಿ ತುಂತುರು ನೀರಾವರಿ.
ನಿಮ್ಮ ದೇಹವು ಆಹ್ಲಾದಕರವಾಗಿದ್ದರೆ ನಾವು ಅದನ್ನು 'ಆರೋಗ್ಯ' ಎಂದು ಕರೆಯುತ್ತೇವೆ. ಅದು ಇನ್ನೂ ಆಹ್ಲಾದಕರವಾಗಿದ್ದರೆ ನಾವು ಅದನ್ನು 'ಆನಂದ' ಎನ್ನುತ್ತೇವೆ. ನಿಮ್ಮ ಮನಸ್ಸು ಆಹ್ಲಾದಕರವಾಗಿದ್ದರೆ ನಾವು ಅದನ್ನು 'ಶಾಂತಿ' ಎಂದು ಕರೆಯುತ್ತೇವೆ. ಅದು ಇನ್ನೂ ಆಹ್ಲಾದಕರವಾಗಿದ್ದರೆ ನಾವು ಅದನ್ನು 'ಸಂತೋಷ' ಎನ್ನುತ್ತೇವೆ. ನಿಮ್ಮ ಭಾವನೆಗಳು ಆಹ್ಲಾದಕರವಾಗಿದ್ದರೆ ನಾವು ಅದನ್ನು 'ಪ್ರೀತಿ' ಎಂದು ಕರೆಯುತ್ತೇವೆ. ಅದು ಇನ್ನೂ ಆಹ್ಲಾದಕರವಾಗಿದ್ದರೆ ನಾವು ಅದನ್ನು 'ಕರುಣೆ' ಎನ್ನುತ್ತೇವೆ. ನಿಮ್ಮ ಜೀವನಶಕ್ತಿಯು ಆಹ್ಲಾದಕರವಾಗಿದ್ದರೆ ನಾವು ಅದನ್ನು 'ಪರಮಾನಂದ' ಎಂದು ಕರೆಯುತ್ತೇವೆ. ಅದು ಇನ್ನೂ ಆಹ್ಲಾದಕರವಾಗಿದ್ದರೆ ನಾವು ಅದನ್ನು 'ಪರವಶತೆ' ಎನ್ನುತ್ತೇವೆ. ನಿಮ್ಮ ಸುತ್ತಲಿನ ಪರಿಸರ ಆಹ್ಲಾದಕರವಾಗಿದ್ದರೆ ನಾವು ಅದನ್ನು 'ಯಶಸ್ಸು' ಎಂದು ಕರೆಯುತ್ತೇವೆ. ಇದು 'ನನ್ನ ದೇಹ', ಅದು 'ನಿಮ್ಮ ದೇಹ' ಎಂಬುದಾಗಿ ಪ್ರತ್ಯೇಕವಾಗಿಯೇ ಇದೆ. ಇದು 'ನನ್ನ ಮನಸ್ಸು', ಅದು 'ನಿಮ್ಮ ಮನಸ್ಸು' ಎಂಬುದಾಗಿ ಪ್ರತ್ಯೇಕವಾಗಿಯೇ ಇದೆ. ಆದರೆ 'ನನ್ನ ಜೀವನ', 'ನಿಮ್ಮ ಜೀವನ'; 'ನನ್ನ ಪ್ರಪಂಚ', 'ನಿಮ್ಮ ಪ್ರಪಂಚ' ಎಂಬುದಿಲ್ಲ. ನಾವೆಲ್ಲರೂ ಒಂದೇ ಬ್ರಹ್ಮಾಂಡದ ಭಾಗವಾಗಿ ಅದೇ ಗಾಳಿಯನ್ನು ಉಸಿರಾಡುತ್ತೇವೆ, ಅದೇ ನೀರನ್ನು ಕುಡಿಯುತ್ತೇವೆ, ಅದೇ ಪ್ರಕೃತಿಯನ್ನು ಅನುಭವಿಸುತ್ತೇವೆ!
ಸುತ್ತಲಿನ ವಾತಾವರಣವನ್ನು ಆಹ್ಲಾದಕರ ವಾಗಿರಿಸಲು ಮಾತ್ರ ಒಂದು ಸವಾಲಿದೆ; ಏಕೆಂದರೆ ಅಲ್ಲಿರುವ ಎಲ್ಲಾ ಶಕ್ತಿಗಳ ಸಹಕಾರ ನಿಮಗೆ ಬೇಕಾಗುತ್ತದೆ. ಆದರೆ ನನ್ನ ದೇಹವನ್ನು ಆಹ್ಲಾದಕರವಾಗಿ, ಮನಸ್ಸನ್ನು ಆಹ್ಲಾದಕರವಾಗಿ, ಭಾವನೆಗಳನ್ನು ಆಹ್ಲಾದಕರವಾಗಿರಿಸುವುದು ಶೇ.೧೦೦ ನನ್ನದೇ ಹೊಣೆಗಾರಿಕೆಯಾಗಿದೆ. ಆದರೆ ಈ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಸಾಮಾಜಿಕ ವಿದ್ಯಮಾನವಾಗಿ ನಿರ್ವಹಿಸಲು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳು ಎಲ್ಲಕ್ಕಿಂತ ಹೆಚ್ಚು ಸಂಕೀರ್ಣವಾಗಿವೆ. ಆದರೆ ವಾಸ್ತವದಲ್ಲಿ ನೀವು ಶಾಂತವಾಗಿಯೇ ಇರುತ್ತೀರಿ; ಪ್ರೀತಿಯಿಂದಿರುವಿರಿ; ಸಂತೋಷದಿಂದಿರುವಿರಿ. ಪ್ರತಿಯೊಂದು ಮಾನವಸಹಜ ಅನುಭವ ನಿಮ್ಮೊಳಗೇ ಸಂಭವಿಸುತ್ತಿರುತ್ತದೆ. ಇದು ಬಾಹ್ಯಪ್ರಚೋದನೆಗಳಿಂದ ಸಂಭವಿಸಬೇಕೋ ಅಥವಾ ಸ್ವಯಂ-ಆರಂಭದಿಂದಲೋ ಎಂಬುದು ಪ್ರಶ್ನೆ. ಮುಂದೆಂದೋ ಕಂಡುಹಿಡಿಯಬಹುದಾದಂಥ ಸತ್ಯಗಳು ಈಗಲೇ ನಮ್ಮ ಸುತ್ತಲೇ ಸುತ್ತುತ್ತಿರುತ್ತವೆ; ಆದರೂ ನಾವದನ್ನು ಕಾಣುತ್ತಿಲ್ಲ, ಕಾಣಲೂ ಬಯಸುತ್ತಿಲ್ಲ. ಏಕೆಂದರೆ; ಅನಿರೀಕ್ಷಿತವಾದ ಮತ್ತು ಪರಿಚಿತವಾಜ ಸಂಗತಿಯೊಂದು ಕಣ್ಣಿಗೆ ಬಿದ್ದೊಡನೆಯೇ ನಾವು ಆರ್ಜಿಸಿರುವ ಜ್ಞಾನದ ಅತಿಪರಿಚಿತ ಚೌಕಟ್ಟಿನೊಳಗೇ ಅದನ್ನು ಹೊಂದಿಸಿಡಲು ಯತ್ನಿಸುತ್ತೇವೆ.