ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಾಮರಸ್ಯ ಜೀವನಕ್ಕೆ ನಂಬಿಕೆಯ ಬಹುತ್ವ ಮುಖ್ಯ

11:32 AM Jan 02, 2024 IST | Samyukta Karnataka

ಪಾಶ್ಚಾತ್ಯ ದೃಷ್ಟಿಕೋನದಲ್ಲಿ ಮನುಷ್ಯನನ್ನು ಶಾಶ್ವತವಾಗಿ ಕೆಟ್ಟ ಮತ್ತು ಸ್ವಾರ್ಥಿ ಪ್ರಾಣಿ' ಎಂದೇ ವ್ಯಾಖ್ಯಾನಿಸಲಾಗಿದೆ. ೧೬ನೇ ಶತಮಾನದ ಇಂಗ್ಲಿಷ್ ತತ್ವಜ್ಞಾನಿ ಥಾಮಸ್ ಹಾಬ್ಸ್ ಇದನ್ನು ಹೀಗೆ ಹೇಳುತ್ತಾನೆ: "ನೈಸರ್ಗಿಕ ಸ್ಥಿತಿಯಲ್ಲಿ ಮನುಷ್ಯ ಪ್ರತಿಯೊಬ್ಬರ ವಿರುದ್ಧ ನಿರಂತರ ಯುದ್ಧದಲ್ಲಿದ್ದಾನೆ. ನಿರಂತರ ಅಪಾಯ ಮತ್ತು ಹಿಂಸಾತ್ಮಕ ಸಾವಿನ ಭಯದಲ್ಲಿ ಮನುಷ್ಯನ ಜೀವನ ಅಸಹ್ಯ, ಕ್ರೂರ ಮತ್ತು ಸಂಕುಚಿತವಾಗಿದೆ". ಹೀಗಾಗಿ ಅಂತರ-ವೈಯಕ್ತಿಕ ಸಂಘರ್ಷವನ್ನು ನಿಯಂತ್ರಿಸಲು ಮತ್ತು ನಾಗರಿಕತೆಯನ್ನು ಸಾಧ್ಯವಾಗಿಸಲು "ರಾಜ್ಯ ವ್ಯವಸ್ಥೆ" ಹುಟ್ಟಿಕೊಂಡಿತು. ಮನುಷ್ಯನ ಬಗ್ಗೆ ಭಾರತೀಯ ತಿಳಿವಳಿಕೆ ವಿಭಿನ್ನವಾಗಿದೆ ಮತ್ತು ಹೆಚ್ಚು ಸಂಕೀರ್ಣವಾಗಿದೆ. ಮನುಷ್ಯನು ಸತ್ವ (ಅಧ್ಯಾತ್ಮಿಕ), ರಜೋ (ವಸ್ತು ಮತ್ತು ಲೌಕಿಕ) ಮತ್ತು ತಮೋ (ಆಕ್ರಮಣಶೀಲತೆ, ಹಿಂಸೆ ಮತ್ತು ಪ್ರಾಣಿಪ್ರವೃತ್ತಿ) ಎಂಬ ತ್ರಿಗುಣಗಳಿಂದ ಕೂಡಿದ್ದಾನೆ ಎಂಬುದು ಭಾರತೀಯ ತಿಳಿವಳಿಕೆ. ಹೀಗಾಗಿ ಎಲ್ಲಾ ಸನ್ನಿವೇಶಗಳನ್ನು ಮತ್ತು ಘಟನೆಗಳನ್ನು ಈ ಮೂರರ ಹಿನ್ನೆಲೆಯಲ್ಲೇ ನೋಡಲಾಗುತ್ತದೆ. ಸಂಘರ್ಷಕ್ಕಿಂತ ಹೆಚ್ಚಾಗಿ ರಾಜಿಗೆ, ಸಹಿಷ್ಣುತೆಗೆ ಭಾರತೀಯ ಒಲವು ಹೆಚ್ಚಿರುವುದರ ಹಿಂದೆ ಮೂಲಭೂತ ವಿಶ್ವದೃಷ್ಟಿಕೋನವನ್ನು ಗಮನಿಸಬಹುದು. ರಾಮಾಯಣ ಕಾಲದಲ್ಲಿ ರಾವಣನನ್ನು ವಧಿಸಿದ ರಾಮ ಆತನ ಶವಸಂಸ್ಕಾರವನ್ನು ಅತ್ಯಂತ ಗೌರವಯುತವಾಗಿ ನಡೆಸಲು ಅನುವುಮಾಡಿಕೊಟ್ಟದ್ದಲ್ಲದೇ ರಾವಣನ ವ್ಯಕ್ತಿತ್ವವನ್ನು ಬಹುವಾಗಿ ಗೌರವಿಸಿದ. ದುಷ್ಟನಾಗಿದ್ದರೂ ದೇಹಾವಸಾನದ ನಂತರದಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ಭಾರತೀಯ ಸಂಸ್ಕಾರ ಎಂದಿಗೂ ಒಪ್ಪುವುದಿಲ್ಲ. ಒಬ್ಬರ ಪಾದಗಳು ಅಕಸ್ಮತ್ತಾಗಿ ಇನ್ನೊಬ್ಬರಿಗೆ ಸ್ಪರ್ಶಿಸಿದಾಗ ಕೂಡಲೇ ಕ್ಷಮೆಯಾಚಿಸುವ ಸದ್ಗುಣ ಭಾರತೀಯತೆಯಲ್ಲಿದೆ. ಭಾರತೀಯರು ಸರಿ-ತಪ್ಪುಗಳ ಬಗ್ಗೆ ಆಳವಾದ ಪ್ರಜ್ಞೆಯನ್ನು ಹೊಂದಿರುವುದೇ ಈ ರೀತಿಯ ಸಂಸ್ಕಾರ, ಸಂಸ್ಕೃತಿಗೆ ಕಾರಣ. ಈ ವರ್ತನೆಗಳು ಮತ್ತು ನಡವಳಿಕೆಗಳು ನಮ್ಮ ನೆಲದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತುಗಳಿಂದ ರೂಪುಗೊಂಡಿವೆ. ಭಾರತೀಯ ಪ್ರಜಾಪ್ರಭುತ್ವ ಆಲೋಚನೆ, ನಂಬಿಕೆ, ಜನಾಂಗ, ಭಾಷೆ ಮತ್ತು ಸಂಸ್ಕೃತಿಯಬಹುತ್ವದ' ತಳಹದಿಯ ಮೇಲೆ ನಿಂತಿದೆ ಹಾಗೂ ಉಳಿದುಕೊಂಡಿದೆ. ಭಾರತೀಯ ಬಹುತ್ವವು ಮನುಷ್ಯ ಮತ್ತು ಪ್ರಕೃತಿಯಲ್ಲಿ ತ್ರಿ-ಗುಣದ ಸ್ವೀಕಾರವನ್ನು ಆಧರಿಸಿದೆ. ಏಕವ್ಯಕ್ತಿ ಆಧಾರಿತ ಅಬ್ರಹಾಮಿಕ್ ನಂಬಿಕೆಗಳಿಗಿಂತ ಭಿನ್ನವಾಗಿ ಭಾರತವು ಸೃಷ್ಟಿಕರ್ತ ಬ್ರಹ್ಮ; ರಕ್ಷಕ ವಿಷ್ಣು; ವಿನಾಶಕ ಶಿವ ಎಂಬ ತ್ರಿಮೂರ್ತಿ' ಪರಿಕಲ್ಪನೆಯನ್ನು ಹೊಂದಿದೆ. ಈ ಮೂರು ದೇವತೆಗಳು ಲಕ್ಷಾಂತರ ಸ್ಥಳೀಯ ಅವತಾರಗಳಾಗಿ ವಿಕಸನ ಹೊಂದಿದ್ದು, ನಂಬಿಕೆಯ ಬಹುತ್ವವು ಸಾಮರಸ್ಯದ ಜೀವನಕ್ಕೆ ಕಾರಣವಾಗುವ ವ್ಯತ್ಯಾಸಗಳ ಸಹಿಷ್ಣುತೆ ಮತ್ತು ಸ್ವೀಕಾರಗಳಲ್ಲಿ ವ್ಯಾಪಿಸಿವೆ. ಭಾರತವೂ ಸೇರಿದಂತೆ ಚೀನಾ, ಜಪಾನ್‌ನಂತಹ ಏಷ್ಯಾದ ರಾಷ್ಟçಗಳು ತಮ್ಮ ಸಾಂಸ್ಕೃತಿಕ ಬೇರುಗಳನ್ನು ಕಳೆದುಕೊಳ್ಳದೆ ಆಧುನೀಕರಣವನ್ನು ಅಪ್ಪಿಕೊಂಡಿವೆ, ಒಪ್ಪಿಕೊಂಡಿವೆ. ತಮ್ಮ ಮೂಲ ಸಾಂಸ್ಕೃತಿಕ ಮೌಲ್ಯವ್ಯವಸ್ಥೆಯನ್ನು ಹಾಗೆಯೇ ಉಳಿಸಿಕೊಂಡೇ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪಾಶ್ಚಿಮಾತ್ಯ ಮೌಲ್ಯಗಳನ್ನು ಸ್ವೀಕರಿಸಿವೆ. ಪರ್ವತಗಳಲ್ಲಿ ಉಗಮಿಸಿ ಸಾಗರವನ್ನು ಸೇರುವ ಜಲಪ್ರವಾಹಗಳನ್ನು ನದಿಗಳೆನ್ನುತ್ತೇವೆ. ಅವುಗಳಲ್ಲಿ ಸ್ನಾನ ಮಾಡಿದವರನ್ನು ಪಾವನಗೊಳಿಸುತ್ತವೆ ಎಂಬ ನಂಬಿಕೆ ಋಗ್ವೇದ ಕಾಲದಿಂದಲೂ ಇದೆ. ಋಗ್ವೇದದಲ್ಲಿ ಆಪೋದೇವತೆಗಳನ್ನು ಸ್ತುತಿಸುವಾಗ ಆ ದೇವತೆಗಳು ನಮಗೆ ಕಲ್ಯಾಣವನ್ನು ಉಂಟುಮಾಡಲು, ನಮ್ಮನ್ನು ಪಾವನಗೊಳಿಸಲು ಎಂದು ಪ್ರಾರ್ಥಿಸಲಾಗಿದೆ. ನದಿಗಳು ಎತ್ತರವಾದ ಸ್ಥಳಗಳಲ್ಲಿ ಹುಟ್ಟಿ, ಶುದ್ಧ ಜಲಧಾರೆಯೊಂದಿಗೆ ಹರಿದು ದಾರಿಯುದ್ದಕ್ಕೂ ಮಲಿನತೆಯನ್ನು ನಷ್ಟಮಾಡುತ್ತಾ ಅಂತಿಮವಾಗಿ ಸಾಗರವನ್ನು ಸೇರುತ್ತವೆ. ಎಲ್ಲೋ ಹುಟ್ಟಿ ಎಲ್ಲಿಗೋ ಸೇರುವ ಮನುಷ್ಯನ ಬದುಕನ್ನು ನದಿಯೊಂದಿಗೆ ಹೋಲಿಸಲಾಗಿದೆ. ವೇದವ್ಯಾಸರುವಿಶ್ವಸ್ಯ ಮಾತರಃ' ಎನ್ನುತ್ತಾ ನದಿಗಳನ್ನು ಮಾತೃತ್ವದ ಸ್ಥಾನದಲ್ಲಿರಿಸಿದ್ದಾರೆ. ಎಲ್ಲಾ ಮಂಗಲಕಾರ್ಯಗಳಲ್ಲಿ ಪವಿತ್ರ ನದಿಗಳನ್ನು ಪ್ರಾರ್ಥಿಸಿ, ಆವಾಹಿಸುವ ನಾವು ಸಾಮಾನ್ಯ ಸ್ನಾನದ ಸಂದರ್ಭದಲ್ಲಿಯೂ ಸಪ್ತಮಹಾನದಿಗಳನ್ನು ಸ್ಮರಿಸುವ ಸಂಸ್ಕಾರ ಭಾರತೀಯರಲ್ಲಿ ಮಾತ್ರವೇ ಇದೆ. ಮಾನವ ಮಾಧವ'ನಾಗಲು; ವಿಕಾಸದ ಮಾರ್ಗದಲ್ಲಿ ಸಾಗಲು ಇವೆಲ್ಲಾ ಸೋಪಾನಗಳು. ತೀರ್ಥಯಾತ್ರೆಯ ಉದ್ದೇಶವೂ ನದಿಯ ದರ್ಶನ ಹಾಗೂ ಸ್ನಾನವೇ ಆಗಿದೆ. ಪರ್ವಕಾಲಗಳಲ್ಲಿ ನದಿ ಮತ್ತು ಸಮುದ್ರಸ್ನಾನದ ಹಿನ್ನೆಲೆಯೂ ಇದೇ ಸಂಸ್ಕಾರದ ಪ್ರತಿಫಲವಾಗಿದೆ. ಭಾರತೀಯ ಸಂಸ್ಕೃತಿಯು ಮುಖ್ಯವಾಗಿ ನದಿ ತೀರಗಳಲ್ಲೇ ಬೆಳೆದಿದೆ. ಋಷಿಮುನಿಗಳ ತಪಃಪ್ರಧಾನವಾದ ಸಂಸ್ಕೃತಿಯು ಗಂಗೆಯ ದಡದಲ್ಲಿ ಅವತರಿಸಿದರೆ; ಸೂರ್ಯವಂಶೀಯರ ರಾಜಧಾನಿ ಸರಯೂ ತೀರದಲ್ಲಿತ್ತು. ಚಂದ್ರವಂಶೀಯರ ರಾಜಧಾನಿ ಯಮುನೆಯ ತೀರದಲ್ಲಿದ್ದರೆ; ಭಕ್ತಿಪಂಥವು ಪರಿಪುಷ್ಟವಾದದ್ದು ಯಮುನೆ ಮತ್ತು ತುಂಗೆಯರ ಮಡಿಲಲ್ಲಿ. ಪ್ರಯಾಗದ ತ್ರಿವೇಣಿ ಸಂಗಮವು ಯಜ್ಞಪ್ರಧಾನ ಮತ್ತು ಪೂಜಾಪ್ರಧಾನ ಸಂಸ್ಕೃತಿಗಳ ಸಂಗಮಕ್ಷೇತ್ರವಾದರೆ; ನರ್ಮದಾ-ಗೋದೆಯರ ದಡದಲ್ಲಿ ವಿಕ್ರಮ, ಶಾಲಿವಾಹನರ ಪರಾಕ್ರಮಗಳು ಮೈದಳೆದವು. ಮಹಾರಾಷ್ಟçದ ಭಕ್ತಿಸಾಹಿತ್ಯದ ಕುಸುಮ ಅರಳಿದ್ದು ಗೋದಾವರಿ ದಡದಲ್ಲಿ. ಸಮರ್ಥ-ಶಿವಾಜಿ, ವಿದ್ಯಾರಣ್ಯ-ಹರಿಹರ-ಬುಕ್ಕ, ನಾನಾಫಡ್ನವೀಸ್-ರಾಮಾಶಾಸ್ತಿç ಒಂದೇ ಮಾತಿನಲ್ಲಿ ಹೇಳುವುದಾದರೆ ದಕ್ಷಿಣದ ಸಾಧುತ್ವ-ವೀರತ್ವ, ನ್ಯಾಯನಿಷ್ಠೆ, ಮುತ್ಸದ್ದಿತನ, ಧರ್ಮ, ಸದಾಚಾರ, ದೇಶಸೇವೆ, ಉದಾರತೆ ಮುಂತಾದ ಎಲ್ಲಾ ಸದ್ಗುಣಗಳು ಕೃಷ್ಣೆ, ಗೋದೆ, ತುಂಗೆಯರ ಮಡಿಲಲ್ಲಿ ಬೆಳೆದವು. ಚೋಳರು, ಪಲ್ಲವರು ಕಾವೇರಿಯನ್ನು ಸಾಕ್ಷಿಯಾಗಿಸಿಕೊಂಡರೆ; ವೈದಿಕ ಸಂಸ್ಕೃತಿಯ ಜ್ವಲಂತ ಅಭಿಮಾನದ ಕೇಂದ್ರ ವಿಜಯನಗರ ಸಾಮ್ರಾಜ್ಯ ಮೆರೆದದ್ದು ತುಂಗಭದ್ರೆಯ ತಟದಲ್ಲಿ. ಇದೇ ನದಿಯ ತಟದಲ್ಲಿ ಸಾಯಣಾಚಾರ್ಯರು ವೇದಗಳಿಗೆ ಭಾಷ್ಯವನ್ನು ಬರೆದರು. ಹೀಗೆ ಒಂದೊಂದು ನದಿಯೂ ಸಂಸ್ಕೃತಿಯ ಪ್ರವಾಹವೇ! ನಮ್ಮ ಕೃತಜ್ಞತೆ, ಪೂಜೆಗೆ ಪಾತ್ರವಾಗಿರುವ ನದಿಗಳಿವು. ಗಂಗಾಜಲದ ಆರೋಗ್ಯಕರವಾದ, ಅಮೃತಮಯವಾದ ಅಂಶಗಳನ್ನು ವಾಗ್ಭಟನಅಷ್ಟಾಂಗ ಹೃದಯ'ದಲ್ಲಿ ಸಾರಿ ಸಾರಿ ಹೇಳಿದ್ದಾನೆ. ಕೊಳಕಾದ ನೀರನ್ನು ಮತ್ತೆ ಶುದ್ಧೀಕರಿಸಿಕೊಂಡು ಪುನಶ್ಚೇತನಗೊಳ್ಳುವ ಒಂದು ಅಪೂರ್ವಗುಣ ಗಂಗಾಜಲದಲ್ಲಿದೆ.
ಕ್ರಿ.ಪೂ.೩೦೨ರಲ್ಲಿ ಗಂಗೆಯನ್ನು ಕಂಡ ಮೆಗಸ್ತನೀಸನಿಂದ ಹಿಡಿದು ೧೯೭೭ರಲ್ಲಿ ಗಂಗೆಯಲ್ಲಿ ನೌಕಾಯಾನ ಮಾಡಿದ ನ್ಯೂಜಿಲ್ಯಾಂಡಿನ ಎಡ್ಮಂಡ್ ಹಿಲೆರಿ (ಹಿಮಾಲಯ ಏರಿದವ) ವರೆಗೆ ಸಹಸ್ರಾರು ವಿದೇಶೀಯರು ಗಂಗೆಯ ಪಾವಿತ್ರö್ಯವನ್ನು ಕೊಂಡಾಡಿದ್ದಾರೆ. ಗಂಗೆಯ ಇತಿಹಾಸವೆಂದರೆ ಭಾರತದ ನಾಗರಿಕತೆ ಮತ್ತು ಸಂಸ್ಕೃತಿಯ ಇತಿಹಾಸ. ಗಂಗೆಯ ಉದ್ದಕ್ಕೂ ಪ್ರವಾಸಮಾಡಿದರೆ ಭಾರತದ ಇತಿಹಾಸವೇ ಕಣ್ಣಿಗೆ ಕಟ್ಟುತ್ತದೆ. ಮಾನಸಸರೋವರದ ಉತ್ತರಕ್ಕೆ ಕೈಲಾಸಪರ್ವತ ಪ್ರದೇಶದಲ್ಲಿ ಹುಟ್ಟುವ ಸಿಂಧೂನದಿ `ಸಿಂಧೂ ಸಂಸ್ಕೃತಿ'ಯ ಪ್ರತೀಕ. 'ಸಿಂಧೂ' ಎಂಬುದು ಜಗತ್ತಿನ ಇತಿಹಾಸದ ಅತ್ಯಂತ ಪ್ರಾಚೀನ ಶಬ್ದವಾಗಿದೆ.
ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತೀ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು
ಎಂಬ ಪ್ರಾರ್ಥನೆಯಲ್ಲಿ ಭಾರತದ ಎಲ್ಲಾ ಪವಿತ್ರ ನದಿಗಳು ಒಳಗೊಂಡಿವೆ. ಭಾರತಭೂಮಿಯೇ ಮಾನವ ಸಂಸ್ಕೃತಿಯ ಜನ್ಮಭೂಮಿಯಾಗಿದ್ದು ಇಲ್ಲಿಂದಲೇ ಅದು ಎಲ್ಲೆಡೆ ಪಸರಿಸಿತು ಎಂದು ಅನೇಕ ಇತಿಹಾಸಕಾರರು ಚರಿತ್ರೆಯಲ್ಲಿ ಅಭಿಪ್ರಾಯವನ್ನು ದಾಖಲಿಸಿದ್ದಾರೆ.
ಸತ್ತಿರುವ ಸಿಂಹಕ್ಕಿಂತ ಜೀವಂತವಿರುವ ಚಿರತೆ ಬಹಳ ಓಜಸ್ಸಿನಿಂದಿರುವುದು; ಒಣಗಿರುವ ಗುಲಾಬಿಗಿಂತ ಹಸಿರುಪೊದೆ ಬಹಳ ಸುಗಂಧಯುಕ್ತವಾಗಿರುವುದು; ತೀರದಲ್ಲಿ ಕುಳಿತಿರುವ ಕೊಕ್ಕರೆಗಿಂತ ಸರೋ ವರದಲ್ಲಿ ಈಜುತ್ತಿರುವ ಹಂಸ ಹೆಚ್ಚು ಶೋಭಾಯ ಮಾನವಾಗಿರುವುದು. ನೆನಪಿನಲ್ಲಿಡಬೇಕಾದ ವಿಚಾರ ವೆಂದರೆ, ನಮ್ಮ ಆದರ್ಶವೆಂದು ತಿಳಿದಿರುವ ವಿದ್ಯಮಾನ ಯುರೋಪಿನ ಜೀವನಯಾತ್ರೆಯು ದಿನದಿಂದ ದಿನಕ್ಕೆ ವಿಪರ್ಯಾಸವಾಗುತ್ತಾ ಹೋಗುತ್ತಿದೆ. ಜೀವನಯಾತ್ರೆಯ ಸಮಸ್ಯೆ ಜಟಿಲವಾಗುತ್ತಾ ಸಾಗುತ್ತಿದೆ. ಜಗತ್ತಿನಲ್ಲಿರುವ ದೇಶಗಳು ನಿದ್ರಿಸುತ್ತಿರುವವರೆಗೂ ಯುರೋಪಿನ ಸಮಾಜದಲ್ಲಿನ ಬಣ್ಣದ ಹೊಳಪಿರುವುದು.

Next Article