ಸಾಮಾಜಿಕ ನ್ಯಾಯದ ಅಡಿ ಕೆಲಸ ಮಾಡುತ್ತೇನೆ
ಹಾವೇರಿ: ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ನಮ್ಮ ತಂದೆಯಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಬರುವ ದಿನಗಳಲ್ಲಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಸಾಮಾಜಿಕ ನ್ಯಾಯದ ಅಡಿ ಕೆಲಸ ಮಾಡುತ್ತೇನೆ ಎಂದು ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿ ಇರುವ ಸಭಾಭವನದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ತಂದೆಯಂತೆ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಬರುವ ದಿನಗಳಲ್ಲಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನ ಮುಂದುವರೆಸಿಕೊಂಡು ಹೋಗುತ್ತೇನೆ. ಸಾಮಾಜಿಕ ನ್ಯಾಯದ ಅಡಿ ಕೆಲಸ ಮಾಡುತ್ತೇನೆ. ಎಸ್ಸಿ, ಎಸ್ಟಿ ಒಬಿಸಿ ಸೇರಿದಂತೆ ಎಲ್ಲಾ ವರ್ಗದ ಜನರ ಕೆಲಸಗಳನ್ನು ಮಾಡುತ್ತೇನೆ ಎಂದರು.
ನಾನು 2018, 2023ರ ವಿಧಾನಸಭೆ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಜನರು ನನಗೆ ಪ್ರೀತಿ ವಿಶ್ವಾಸ ತೋರಿಸಿದ್ದೀರಿ, ಮಿರ್ಚಿ ಮಂಡಕ್ಕಿ ಕೊಟ್ಟು ಪ್ರೀತಿ ತೋರಿಸಿದ್ದೀರಿ. ನಾನು ನಿಮ್ಮೊಂದಿಗೆ ಸದಾ ಕಾಲ ಇದ್ದು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ಅವಕಾಶ ನಮ್ಮ ನಾಯಕರು, ಹಿರಿಯರು, ಪಕ್ಷದ ವರಿಷ್ಟರು ಜವಾಬ್ದಾರಿ ನೀಡಿದ್ದಾರೆ. ಈ ಅವಕಾಶ ಸಿಕ್ಕಿದೆ ಅಂದರೆ ನಮ್ಮ ತಂದೆತಾಯಿ ಆರ್ಶೀವಾದ ಇದೆ. ಇವತ್ತು ಚುನಾವಣೆ ಶುರು ಮಾಡಿದ್ದೇನೆ. ಶಿಗ್ಗಾಂವಿ ಸವಣೂರು ಜನರ ಪ್ರೀತಿ ನೋಡಿದ್ದೇನೆ. ಬರುವ ದಿನಗಳಲ್ಲಿ ಅವರ ಸಮಾಜಸೇವೆ ಅವಕಾಶ ಸಿಕ್ಕಿದೆ ಎಂದರು.
ನಾನು 2018ರಲ್ಲಿ ಚುನಾವಣೆಯಲ್ಲಿ, 2023ರ ಚುನಾವಣೆಯಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡಿದ್ದೇನೆ. ನನ್ನ ವೋಟರ್ ಐಡಿ ಬಂದಾಗಿನಿಂದಲೂ ಇಲ್ಲಿ ಮತದಾನ ಮಾಡಿದ್ದೇನೆ. ಶ್ರೀಕಾಂತ್ ದುಂಡಿಗೌಡರ ಸೇರಿದಂತೆ ಎಲ್ಲರೂ ನಮ್ಮವರು, ನಮ್ಮ ತಂದೆಯವರ ಅಭಿಮಾನಿಗಳು, ಎಲ್ಲಾ ಭಿನ್ನಮತ ಶಮನ ಮಾಡುತ್ತೇವೆ ಎಂದರು.
ನಾಮಪತ್ರ ಸಲ್ಲಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾಮಪತ್ರಕ್ಕೆ ನಮ್ಮ ತಾಯಿ ಒಳ್ಳೆಯ ದಿನ ನೋಡುತ್ತಾರೆ, ಅವತ್ತು ನಾಮಪತ್ರ ಸಲ್ಲಿಸುತ್ತೇನೆ ಎಂದರು. ಕುಟುಂಬ ರಾಜಕಾರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಪಕ್ಷದ ತಿರ್ಮಾನಕ್ಕೆ ಬದ್ಧನಾಗಿದ್ದೇನೆ. ವರಿಷ್ಟರ ತಿರ್ಮಾನ ಇದು. ಡಾಕ್ಟರ್ ಮಗ ಡಾಕ್ಟರ್ ಅಗುತ್ತಾರೆ, ಟೀಚರ್ ಮಗ ಟೀಚರ್ ಆಗುತ್ತಾರೆ. ರಾಜಕಾರಣಿ ಮಗ ರಾಜಕಾರಣಿ ಯಾಕೆ ಆಗಬಾರದು ಎಂದು ಪ್ರಶ್ನಿಸಿದರು.