For the best experience, open
https://m.samyuktakarnataka.in
on your mobile browser.

ಸಾಮಾನ್ಯ ಪ್ರಜೆಯ ಹೋರಾಟದ ವಿರುದ್ಧ ಜಯಿಸಿ ತೋರಿಸಿ...

12:04 PM Nov 06, 2024 IST | Samyukta Karnataka
ಸಾಮಾನ್ಯ ಪ್ರಜೆಯ ಹೋರಾಟದ ವಿರುದ್ಧ ಜಯಿಸಿ ತೋರಿಸಿ

ಬೆಂಗಳೂರು: ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸುವ ಸಿಎಂ ಸಿದ್ದರಾಮಯ್ಯನವರೇ, ಮೊದಲು ಸಾಮಾನ್ಯ ಪ್ರಜೆಯ ನ್ಯಾಯಾಂಗ ಹೋರಾಟದ ವಿರುದ್ಧ ಜಯಿಸಿ ತೋರಿಸಿ ನೋಡೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡೇ ತನಿಖೆ ಎದುರಿಸುತ್ತಿರುವ ಭ್ರಷ್ಟ ಮುಖ್ಯಮಂತ್ರಿ ಎಂಬ ಅಪಖ್ಯಾತಿಗೆ ಭಾಜನರಾಗಿರುವುದನ್ನು ದೇಶವೇ ಗಮನಿಸುತ್ತಿದೆ. ನೀವು ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರ ಎನ್ನುವುದನ್ನು ನ್ಯಾಯಾಲಯವೇ ತೀರ್ಪಿತ್ತಿದೆ.

ನೀವೊಬ್ಬ ವಕೀಲರೂ ಆಗಿ ಮತ್ತೆ ಮತ್ತೆ ಪ್ರಸ್ತಾಪಿಸುತ್ತಿರುವುದನ್ನು ನೋಡುತ್ತಿದ್ದರೆ ವಿವೇಕಶೂನ್ಯತೆ ನಿಮ್ಮನ್ನು ಕಾಡುತ್ತಿರುವಂತಿದೆ. ದಿನದಿಂದ ದಿನಕ್ಕೆ ಬಿಗಿಯಾಗುತ್ತಿರುವ ಕಾನೂನಿನ ಕುಣಿಕೆ ನಿಮ್ಮ ನೆಮ್ಮದಿಯನ್ನು ಕಸಿದಿದ್ದು ಇದರಿಂದ ತೀವ್ರ ವಿಚಲಿತಗೊಂಡಂತಿರುವ ನೀವು 'ಆಡಿದ್ದೇ ಆಡೋ ಕಿಸಬಾಯಿ ದಾಸ' ಎನ್ನುವಂತೆ ಅದೇ ಸುಳ್ಳು ಆರೋಪಗಳನ್ನು ಪುನರಾವರ್ತಿಸುತ್ತಿದ್ದೀರಿ.

ನಿಮ್ಮದೇ ಸರ್ಕಾರವಿದೆ ನಮ್ಮ ಮೇಲಿನ ಯಾವುದೇ ಆರೋಪವನ್ನು ಸಾಬೀತುಪಡಿಸಲು ತ್ವರಿತಗತಿಯಲ್ಲಿ ತನಿಖೆ ನಡೆಸಲು ನಿಮ್ಮ ಭತ್ತಳಿಕೆಯಲ್ಲಿ ಬ್ರಹ್ಮಾಸ್ತ್ರವೇ ಇದೆ, ಆದಾಗ್ಯೂ ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಮರೆತು ಕ್ಷುಲ್ಲಕ ಆರೋಪಗಳನ್ನೇ ಚುನಾವಣಾ ಪ್ರಚಾರದ ಸರಕಾಗಿ ಬಳಸಿಕೊಳ್ಳುತ್ತಿರುವ ನಿಮ್ಮ ಪರಿಸ್ಥಿತಿ ನೋಡಿ ನಗುವಂತಾಗಿದೆ.

ಸದನದಲ್ಲಿ ನಿಮ್ಮ ವಿರುದ್ಧದ ಮುಡಾ ಹಗರಣದ ಚರ್ಚೆಗೆ ಅವಕಾಶ ನೀಡದೇ ಹೆದರಿ ಪಲಾಯನ ಮಾಡಿದ ನೀವು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು 'ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿಸಿದಂತಾಗಿದೆ'.

ಅಮಾಯಕ ದಲಿತ ಕುಟುಂಬವನ್ನು ವಂಚಿಸಿ ಭೂಮಿ ಪಡೆದುಕೊಂಡ ಆರೋಪ ನಿಮ್ಮ ಕುಟುಂಬದ ಮೇಲಿದೆ. ಅದೇ ಭೂಮಿಯನ್ನು ಮುಡಾ ಬಳಸಿಕೊಂಡಿದೆ ಎಂದು 14 ನಿವೇಶನಗಳನ್ನು ಲಪಟಾಯಿಸಿದ ತನಿಖೆ ನಿಮ್ಮ ವಿರುದ್ಧ ನಡೆಯುತ್ತಿದೆ. ನೀವು ತಪ್ಪೇ ಮಾಡದಿದ್ದರೆ ನೀವು ಕೇಳಿರುವ 62 ಕೋಟಿ ರೂ ಬರಲೇಬೇಕಾಗಿದ್ದರೆ ನೀವೇಕೆ ಮುಡಾಗೆ ನಿವೇಶನಗಳನ್ನು ಬೇಷರತ್ತಾಗಿ ರಾತ್ರೋರಾತ್ರಿ ವಾಪಸ್ ನೀಡಿದಿರಿ. ನೀವು ಸ್ವಚ್ಛರಾಗಿದ್ದರೆ ಪಾರದರ್ಶಕ ತನಿಖೆಗೆ ಅವಕಾಶ ನೀಡದೇ ಭ್ರಷ್ಟತೆಯನ್ನು ಏಕೆ ಸಮರ್ಥಿಸಿ ಕೊಳ್ಳುತ್ತಿದ್ದೀರಿ?
ನೈತಿಕತೆ ಎಂಬ ಪದವನ್ನು ಕಸದಬುಟ್ಟಿಗೆ ಸೇರಿಸಿದ ನಿಮ್ಮಿಂದ ಪ್ರಾಮಾಣಿಕತೆ ಮಾತು ಕೇಳಿಬರುತ್ತಿರುವುದು ಕರ್ಕಶವಾಗಿದೆ ಎಂದಿದ್ದಾರೆ.

Tags :