ಸಾರ್ವಜನಿಕ ಗಣೇಶೋತ್ಸವ : ಹೆಸ್ಕಾಂನಿಂದ ಮಾರ್ಗಸೂಚಿ
ಹುಬ್ಬಳ್ಳಿ : ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮಾರ್ಗಸೂಚಿ ಹೊರಡಿಸಿರುವ ಹೆಸ್ಕಾಂ, ಕೆಲವು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ಸೂಚನೆ ನೀಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಹೆಸ್ಕಾಂ ಹುಬ್ಬಳ್ಳಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಎಂಜಿನೀಯರ್ ಕಿರಣ್ ಕುಮಾರ್ ಬಿ ಅವರು, ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನಧಿಕೃತವಾಗಿ ವಿದ್ಯುತ್ ಲೈನ್‌ಗಳಿಗೆ, ಮನೆಗಳಿಂದ ಹುಕ್ ಹಾಕಿ ವಿದ್ಯುತ್ ಸಂಪರ್ಕ ಪಡೆಯಬಾರದು. ಸಂಬಂಧ ಪಟ್ಟ ಹೆಸ್ಕಾಂ ವಿಭಾಗೀಯ ಅಥವಾ ಶಾಖಾ ಕಚೇರಿಗೆ ತೆರಳಿ ಅನುಮತಿ ಪಡೆಯಬೇಕು. ಗಣಪತಿ ಪ್ರತಿಷ್ಠಾಪನೆ ಮಾಡುವ ಸ್ಥಳದ ಸುತ್ತ ಮುತ್ತ ಯಾವುದೇ ವಿದ್ಯುತ್ ಮಾರ್ಗಗಳಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ವಿದ್ಯುತ್ ಲೈನ್‌ನ ಕೆಳಗೆ ಅಥವಾ ಅಕ್ಕಪಕ್ಕದಲ್ಲಿ ಗಣಪತಿ ಪೆಂಡಾಲ್ ಹಾಕಬಾರದು. ಸುರಕ್ಷತೆಯ ಅಂತರವನ್ನು ಕಾಯ್ದುಕೊಂಡು ಪೆಂಡಾಲ್ ಹಾಕಬೇಕು ಎಂದು ನಿರ್ದೇಶನ ನೀಡಿದೆ.
ಮಳೆಗಾಲ ಇರುವುದರಿಂದ ವಿದ್ಯುತ್ ಅವಘಡಗಳ ತಪ್ಪಿಸಲು ಹೆಚ್ಚಿನ ಜಾಗ್ರತೆ ವಹಿಸುವುದು ಅತ್ಯಗತ್ಯ. ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳಿಗೆ ಬ್ಯಾನರ್ ಮತ್ತು ಫಲಕಗಳನ್ನು ಕಟ್ಟಬಾರದು. ಗಣೇಶನ ವಿಗ್ರಹ ವಿಸರ್ಜನೆ ದಿನವೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ವಿದ್ಯುತ್ ತಂತಿಗಳಿಗೆ ತಾಗುವ ರೀತಿಯಲ್ಲಿ ಅತೀ ಎತ್ತರದ ಧ್ವಜ ಕಟ್ಟಬಾರದು. ಗಣೇಶನ ವಿಗ್ರಹಗಳ ವಿಸರ್ಜನಾ ಮೆರವಣೆಗೆ ನಡೆಯುವ ಬೀದಿಗಳಲ್ಲಿ ವಿದ್ಯುತ್ ಲೈನ್‌ಗಳ ಅಡಚಣೆ ಇದ್ದಲ್ಲಿ ಸಂಬಂಧಿಸಿದ ಹೆಸ್ಕಾಂ ಕಚೇರಿಯ ಗಮನಕ್ಕೆ ತರಬೇಕು. ಅಂತಹ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಗಣೇಶ ವಿಜಸರ್ಜನೆಗೆ ಅನುಕೂಲ ಮಾಡಿಕೊಡಲು ಹೆಸ್ಕಾಂ ಸದಾ ಸನ್ನದ್ದವಾಗಿರುತ್ತದೆ ಎಂದು ಹೆಸ್ಕಾಂ ತಿಳಿಸಿದೆ.
ಒಂದು ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಹೋದರೆ ಏನಾದರೂ ಅವಘಡಗಳು ಸಂಭವಿಸಿದರೆ ಅದಕ್ಕೆ ಹೆಸ್ಕಾಂ ಜವಾಬ್ದಾರಿಯಲ್ಲ. ಹೀಗಾಗಿ, ಎಲ್ಲ ಗಣೇಶ ಮಂಡಳಿಗಳು ಸೂಕ್ತ ಸುರಕ್ಷತಾ ಕ್ರಮ ಅನುಸರಿಸಿ ಗಣೇಶ ಹಬ್ಬ ಆಚರಿಸಬೇಕೆಂದು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.