ಸಾಲಬಾಧೆ: ರೈತ ಆತ್ಮಹತ್ಯೆ
ಕೆ.ಆರ್.ಪೇಟೆ: ಸಾಲದ ಬಾಧೆ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮುರುಕನಹಳ್ಳಿ ಗ್ರಾಮದ ಗೋವಿಂದಾಚಾರಿ ಮಗ ನಾಗರಾಜಾಚಾರಿ(60) ಆತ್ಮಹತ್ಯೆಗೆ ಶರಣಾದ ರೈತ.
ಘಟನೆ ವಿವರ: ನಾಗರಾಜಚಾರಿ ಅವರು ಶುಕ್ರವಾರ ಬೆಳಿಗ್ಗೆ ಮುರುಕನಹಳ್ಳಿ ಗ್ರಾಮದಲ್ಲಿ ಮತದಾನ ಮಾಡಿದ ನಂತರ ಪಾಂಡವಪುರ ತಾಲೂಕು ಚಿನಕುರಳಿ ಹೋಬಳಿಯ ಬೇಬಿ ಗ್ರಾಮದ ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾವನಪ್ಪಿದ್ದಾರೆ.
ಮೃತ ನಾಗರಾಜಾಚಾರಿ ಮುರುಕನಹಳ್ಳಿ ಗ್ರಾಮದ ಸರ್ವೆ ನಂ.230ರಲ್ಲಿದ್ದ ಸುಮಾರು 1ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ತರಕಾರಿ ಬೆಳೆಗಳನ್ನು ಬೆಳೆದು ಜೀವನ ನಡೆಸುತ್ತಿದ್ದರು. ಇದಕ್ಕಾಗಿ ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 50 ಸಾವಿರ ಸಾಲ, ಮನೆಯ ಮೇಲೆ ಖಾಸಗಿ ಬ್ಯಾಂಕ್ ನಲ್ಲಿ ಸಾಲ, ಜೊತೆಗೆ ಸಂಘ ಸಂಸ್ಥೆಗಳಲ್ಲಿ ಸೇರಿ ಸುಮಾರು ಐದಾರು ಲಕ್ಷ ರೂಪಾಯಿಗಳನ್ನು ಸಾಲ ಮಾಡಿದ್ದರು.
ಬರಗಾಲದ ಹಿನ್ನೆಲೆಯಲ್ಲಿ ಕೊಳವೆ ಬಾವಿಯಲ್ಲಿ ನೀರು ಬತ್ತಿಹೋಗಿದ್ದ ಕಾರಣ ಯಾವುದೇ ತರಕಾರಿ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಇದರಿಂದ ಸಾಲ ತೀರಿಸುವ ಮಾರ್ಗ ಕಾಣದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ನಾಗರಾಜಾಚಾರಿ ಅವರ ಮಗ ಮಂಜುನಾಥ್ ಅವರು ಚಿನಕುರಳಿ ಪೋಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮೃತ ರೈತ ನಾಗರಾಜಾಚಾರಿ ಅವರು ತಮ್ಮ ಜಮೀನಿನಲ್ಲಿ ತರಕಾರಿ ಬೆಳೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು, ಆದರೆ ಬರಗಾಲದ ಹಿನ್ನೆಲೆಯಲ್ಲಿ ಕೊಳವೆಬಾವಿಯಲ್ಲಿ ಅಂತರ್ಜಲ ಕಡಿಮೆಯಾದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದೇ ಮನ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾಗಾಗಿ ಸರ್ಕಾರವು ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಮುರುಕನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.