ಸಾಹಿತ್ಯಲೋಕದ ಸಾರ್ವಭೌಮರು
ಬರೆಯುವ ಕಾಯಕವನ್ನೇ ತಪವೆಂದು ಬಗೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಾಹಿತ್ಯದ ಛಾಪು ಮೂಡಿಸಿದ ಕನ್ನಡ ಕಣ್ಮಣಿ ಕೋಟ ಶಿವರಾಮ ಕಾರಂತ ಮತ್ತು ಕಥಾಪ್ರಪಂಚದ ದಿಗ್ಗಜ ಆರ್.ಕೆ. ನಾರಾಯಣ್ ಸದಾ ಸ್ಮರಣೀಯ ಪದಪ್ರಪಂಚ ಸಾರ್ವಭೌಮರು.
ಸಂಶೋಧನಾತ್ಮಕ ದೃಷ್ಟಿಯಿಂದ ನಡೆಯುವ ಸಾಹಿತ್ಯವೊಂದೇ ಶಾಶ್ವತ' ಎಂದು ಯುವಕರನ್ನು ಉತ್ತೇಜಿಸಿದ ನಡೆದಾಡುವ ವಿಶ್ವಕೋಶ ಶಿವರಾಮ ಕಾರಂತರು ಸಾಹಿತ್ಯ, ಯಕ್ಷಗಾನ, ಕಲೆ, ವಿಜ್ಞಾನ, ಚಲನಚಿತ್ರ, ರಂಗಭೂಮಿ, ರಾಜಕೀಯವೇ ಮೊದಲಾಗಿ ಸರ್ವರಂಗಗಳಲ್ಲೂ ನಿರಂತರವಾಗಿ ಏಳು ದಶಕಗಳ ಕಾಲ ತೊಡಗಿಸಿ ಸಾರಸ್ವತ ವಿಶ್ವವನ್ನು ಬೆಳೆಸಿ ಬೆಳಗಿದ ಕಡಲತೀರದ ಭಾರ್ಗವನೆಂದೇ ಲೋಕಪ್ರಸಿದ್ಧರು. ಕನ್ನಡ ಸಂಸ್ಕೃತಿ, ಭಾಷಾಸೊಗಡಿನ ವಿಶಾಲತೆಯನ್ನು ಸಾಹಿತ್ಯದ ಹೆದ್ದಾರಿಯಲ್ಲಿ ಪರಿಚಯಿಸಿದ ನೇರನಿಷ್ಠುರ ನಡೆಯ ಮಾನವತಾವಾದದ ಧೀಮಂತ ಸಾಹಿತಿ ಕಾರಂತರು ನಿಸರ್ಗ ವಿಶ್ವವಿದ್ಯಾಲಯದ ಬಹುಶ್ರುತ ವಿದ್ಯಾರ್ಥಿ. ಪ್ರಕೃತಿಯ ಮಡಿಲಿನಲ್ಲಿ ಅರಳಿನಿಂತ ಅಪ್ಪಟ ಅಪರಂಜಿ ದೇಸೀಪ್ರತಿಭೆಯದು. ಉಡುಪಿಯ ಶೇಷ ಕಾರಂತ-ಲಕ್ಷ್ಮೀ ಅಮ್ಮ ದಂಪತಿಗಳ ಸರಳ, ಸಂಪ್ರದಾಯಸ್ಥ, ವಿದ್ವಜ್ಜನ ಮನೆತನದಲ್ಲಿ ಜನಿಸಿದ ಶಿವರಾಮ ಕಾರಂತರು ಶಾಲಾದಿನಗಳಲ್ಲಿ ಅಧ್ಯಾಪಕರ ಪ್ರೇರಣೆಯಿಂದ ಬರವಣಿಗೆ ಹಾಗೂ ಯಕ್ಷಗಾನದಲ್ಲಿ ಆಸಕ್ತರಾದರು. ಹೊಟ್ಟೆಪಾಡಿಗಾಗಿ ಓದುವ ಶಿಕ್ಷಣಕ್ಕಿಂತ ಪರಿಸರಪ್ರೇಮಪೂರಕ ವ್ಯಕ್ತಿವಿಕಾಸವೇ ಅಗತ್ಯವೆಂದು ಭಾವಿಸಿ ಸ್ವಾತಂತ್ರ‍್ಯ ಹೋರಾಟದ ಕರೆಗೆ ಓಗೊಟ್ಟು ಖಾದಿವ್ರತಧಾರಿಯಾದರು. ನಾಡಿನ ಬಂಧಮುಕ್ತಿಗಾಗಿ ಅವಿರತ ಶ್ರಮಿಸಿದ ಕಾರಂತರ ಪುಣ್ಯಫಲವೋ ಅಥವಾ ದೈವೇಚ್ಛೆಯೋ ಎಂಬಂತೆ ಹೋರಾಟಗಾರನ ಮನದೊಳಗೆ ಸುಪ್ತವಾಗಿದ್ದ ಅಕ್ಷರಪ್ರತಿಭೆ ಜಾಗೃತವಾಗಿ ವಾಗ್ದೇವಿಯ ಸೇವೆಗೆಂದೇ ಜೀವನಪುಷ್ಪವನ್ನು ಮುಡಿಪಿಟ್ಟರು. ಪತ್ರಿಕೋದ್ಯೋಗಿಯಾಗಿ ವೃತ್ತಿ ಆರಂಭಿಸಿದ ಕಾರಂತರಿಗೆ ಪತ್ರಿಕೆ ಲಾಭದಾಯಕವಾಗಿ ನಡೆಯದಿದ್ದರೂ ಭರಪೂರ ಆತ್ಮಸಂತೃಪ್ತಿಯಿತ್ತು. ಧಾರಾವಾಹಿ, ಬಿಡಿ ಲೇಖನಗಳು, ಕಾದಂಬರಿಗಳಿಂದ ಕೀರ್ತಿ ಸಂಪಾದಿಸಿ, ಮುದ್ರಣಾಲಯ ಸ್ಥಾಪಿಸಿ, ತಮ್ಮ ಪುಸ್ತಕಗಳಿಗೆ ತಾವೇ ಮುಖಪುಟ ಚಿತ್ರಬರೆದು ಪ್ರಕಟಿಸಿದ ಅತ್ಯಪರೂಪದ ಸಾಹಿತಿಯೆಂದರೆ ಅತಿಶಯೋಕ್ತಿಯಲ್ಲ. ಆಬಾಲವೃದ್ಧರ ಮನಮುಟ್ಟುವ ಶೈಲಿ, ಸ್ಫೂರ್ತಿದಾಯಕ ಘಟನೆಗಳಿಂದ ಚೈತನ್ಯತುಂಬಿದ ಕಾರಂತರು ಪ್ರಶಸ್ತಿ ಅಥವಾ ಜನರಂಜನೆಗಾಗಿ ಬರೆದವರಲ್ಲ. ಒಳಿತನ್ನು ಹಂಚುವ ಉದ್ದೇಶದ ಜೊತೆಜೊತೆಗೆ ಹಳ್ಳಿ, ಕಾಡು, ಮರ, ದುಂಬಿ, ಹಕ್ಕಿ, ಹೂವು, ಹಣ್ಣು, ಮಣ್ಣಿನ ಸೊಗಡನ್ನು ತಾನರಿಯುವ ಹಾತೊರೆತ ಕಾರಂತರ ಹುಟ್ಟುಗುಣ. ಕಾರಂತರ ಕೃತಿಗಳೆಂದರೆ ಅನುಭವಶಾಲೆ. ಓದುತ್ತ ಸಾಗಿದಂತೆ ನಿಸರ್ಗದ ಕಿಟಕಿ ಬಾಗಿಲುಗಳು ತೆರೆಯುತ್ತವೆ. ವಸ್ತುನಿಷ್ಠತೆಗೆ ಆದ್ಯತೆ ನೀಡುವ ಕಾರಂತರು ಬರೆದ ಅಕಾರಾದಿ ಪ್ರಾಣಿಪ್ರಪಂಚ, ಬಾಲಪ್ರಪಂಚ, ವಿಜ್ಞಾನಪ್ರಪಂಚ, ಓದುವ ಆಟ ಅಚ್ಚಳಿಯದ ಅಚ್ಚರಿಯೇ ಸರಿ. ಬಾಲವನದಲ್ಲಿ ಕಾರಂತಜ್ಜ'ನಾಗಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸರಳ ವ್ಯಕ್ತಿತ್ವದ ಕಾರಂತರು ಅಸಾಂಪ್ರದಾಯಿಕ ಶೈಕ್ಷಣಿಕ ಕೇಂದ್ರವಾಗಿ ಪುತ್ತೂರಿನ ಬಾಲವನವನ್ನು ಸ್ಥಾಪಿಸಿದರು. ಯಕ್ಷಗಾನದಲ್ಲಿ ವಿವಿಧ ಪ್ರಯೋಗಗೈದು ದೇಶವಿದೇಶಗಳ ಕಲಾಸಕ್ತರನ್ನು ಆಕರ್ಷಿಸಿದ ಕಾರಂತರು ಶಿಲ್ಪಕಲೆ, ಚಿತ್ರಕಲೆಯಲ್ಲಿ ಎತ್ತಿದ ಕೈ. ಪರಿಸರಪೂರಕ ಮಾನವಜೀವನದ ಪ್ರಬಲ ಪ್ರತಿಪಾದಕರಾಗಿ ಪಶ್ಚಿಮಘಟ್ಟಗಳ ರಕ್ಷಣೆ, ಕೈಗಾ ಸ್ಥಾವರವಿರೋಧೀ ಆಂದೋಲನದಲ್ಲಿ ಭಾಗವಹಿಸಿ ಜನಜಾಗೃತಿಗೈದರು. ನಡೆದು ಆಡುವ, ಆಡಿ ನಡೆಯುವ ಗಟ್ಟಿಗ ಕಾರಂತರನ್ನು
ಖಾರಂತ' ಎಂದೇ ಗುರುತಿಸಿದ್ದ ವಿಮರ್ಶಕವರ್ಗ, ಹೋಲಿಕೆಗೂ ನಿಲುಕದ ಮೇರುವ್ಯಕ್ತಿ' ಎಂದು ಗೌರವಿಸಿತು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಪದ್ಮಪ್ರಶಸ್ತಿಯನ್ನು ಹಿಂತಿರುಗಿಸಿ ಸರಕಾರಕ್ಕೆ ಸಡ್ಡು ಹೊಡೆದಿದ್ದ ಕಾರಂತರು ಪದವೀಧರರಲ್ಲದಿದ್ದರೂ ವಿಜ್ಞಾನಿಗಳ ಕುತೂಹಲ ಕೆರಳಿಸಿದ ಪ್ರಕೃತಿವಿಸ್ಮಯಗಳನ್ನು ಸಂಶೋಧಿಸಿದರು, ಪದವಿಯ ಪಠ್ಯವಾದರು. ಹತ್ತು ವಿಜ್ಞಾನಿಗಳು ಸೇರಿದರೂ ಮುಗಿಸಲಾಗದ ಕಾರ್ಯವನ್ನು ಕಾರಂತರೊಬ್ಬರೇ ಮಾಡಿ ಮುಗಿಸಿದ್ದು ದಾಖಲೆಯಷ್ಟೇ ಅಲ್ಲ, ಸಹಸ್ರಮಾನದ ಆಶ್ಚರ್ಯವೂ ಹೌದು.
ಕಾಲೇಜು ಶಿಕ್ಷಣ, ಪದವಿ ಪ್ರಮಾಣಪತ್ರಕ್ಕೆ ನೀಡುವುದಕ್ಕಿಂತ ಅತಿಹೆಚ್ಚಿನ ಆದ್ಯತೆ ಬದುಕಿಗೆ ಕೊಡಬೇಕು. ಜೀವನವೆಂಬ ವಿಶಾಲ ವಿಶ್ವವಿದ್ಯಾಲಯದಲ್ಲಿ ಕಲಿತಷ್ಟು ಜ್ಞಾನವನ್ನು ಯಾವ ಪಠ್ಯಪುಸ್ತಕಗಳೂ ನೀಡಲಾರವು. ಸುತ್ತಮುತ್ತಲಿನ ಘಟನೆಗಳಿಗೆ, ಚಿತ್ರಣಗಳಿಗೆ ಸ್ಪಂದಿಸುವ ಹಾಗೂ ಮಾನವೀಯತೆಯನ್ನು ಮರೆಯದೆ ಮನುಷ್ಯನನ್ನು ಮನುಷ್ಯನನ್ನಾಗಿಯೇ ಪ್ರೀತಿಸುವ ಉದಾರತೆ ನಮ್ಮ ಹೃದಯಾಂತರಾಳದಿಂದ ಮೂಡದ ಹೊರತು ಉಸಿರಾಡುತ್ತಿರುವುದಕ್ಕೆ ಅರ್ಥವಿಲ್ಲ' ಎಂಬ ಚೇತೋಹಾರಿ ಮಾತುಗಳಿಂದ ಜಾಗತಿಕ ಅಕ್ಷರಸಾಮ್ರಾಜ್ಯದ ಅನಭಿಷಿಕ್ತ ದೊರೆಯಂತೆ ಬಾಳಿದ ಸಾರ್ವಕಾಲಿಕ ಸರ್ವಶ್ರೇಷ್ಠ ಕಾದಂಬರಿಕಾರ ಆರ್. ಕೆ. ನಾರಾಯಣ್, ತಮ್ಮ ಬರಹಗಳ ಮೂಲಕ ಅತ್ಯುನ್ನತ ಆದರ್ಶಗಳನ್ನು ಬೋಧಿಸಿದ ವಿಶ್ವಮಾನ್ಯ ಕಾದಂಬರಿಕಾರ. ಶಿಕ್ಷಣಪ್ರೇಮಿ ಮುಖ್ಯೋಪಾಧ್ಯಾಯ ಕೃಷ್ಣಸ್ವಾಮಿ ಅಯ್ಯರ್-ಜ್ಞಾನಾಂಬಾಳ್ ದಂಪತಿಗಳಿಗೆ ಜನಿಸಿದ ನಾರಾಯಣ್, ಅಜ್ಜಿಯ ಸಂಸ್ಕಾರಪೂರ್ಣ ಗರಡಿಯಲ್ಲಿ ಬೆಳೆದ ಕುಸುಮ. ಬಾಲ್ಯದ ಕಥೆಗಳು, ಪುಸ್ತಕಗಳ ಓದಿನಿಂದ ಅಪಾರ ಸ್ಫೂರ್ತಿಪಡೆದು ಹನ್ನೆರಡನೆಯ ವಯಸ್ಸಿನಲ್ಲಿ ಮದ್ರಾಸಿನಲ್ಲಿ ನಡೆದ ಸ್ವಾತಂತ್ರ‍್ಯ ಹೋರಾಟದ ಸಭೆಯಲ್ಲಿ ಪಾಲ್ಗೊಂಡು, ಮನೆಯವರ ವಿರೋಧ ನುಂಗಿದರೂ ದೇಶಕ್ಕಾಗಿ ಬದುಕಬೇಕೆಂಬ ಕನಸು ಕಮರಲಿಲ್ಲ. ತಂದೆಯ ವರ್ಗಾವಣೆ ಪ್ರಕ್ರಿಯೆಗನುಸಾರ ಮೈಸೂರಿಗೆ ಬಂದು ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದು ಅಲ್ಪಕಾಲ ಶಾಲಾ ಅಧ್ಯಾಪಕರಾಗಿ ವೃತ್ತಿಜೀವನ ನಡೆಸಿದರು. ಆದರೆ ಅದಾಗಲೇ ಬರವಣಿಗೆ, ಸಾಹಿತ್ಯಾಧ್ಯಯನದತ್ತ ಮುಖಮಾಡಿದ್ದ ನಾರಾಯಣರಿಗೆ ಕೆಲಸ ಸಾಕಾಗಿ, ರಾಜೀನಾಮೆಯಿತ್ತು ಬರಹ ಕೃಷಿಯಲ್ಲಿ ತೊಡಗಿಸಿದರು.
ಸಾಹಿತ್ಯವನ್ನು ಹೊಟ್ಟೆಪಾಡಿನ ಮಾಧ್ಯಮವಾಗಿಸದೆ ತಪಸ್ಸೆಂಬ ನೆಲೆಯಲ್ಲಿ ಕಂಡು ಜೀವನದ ಪ್ರತಿಯೊಂದು ಘಟನೆಯನ್ನೂ, ಪ್ರಭಾವಿಸಿದ ನಿದರ್ಶನಗಳನ್ನೂ, ಅನುಭವವನ್ನೂ ಸಮಾಜಕ್ಕೆ ಆದರ್ಶವಾಗುವ ನೆಲೆಯಲ್ಲಿ ಅತ್ಯಾಪ್ತವಾಗಿ ಬರೆಯುವ ಕಲೆಯನ್ನು ಸಿದ್ಧಿಸಿದ ಆರ್.ಕೆ., ತಮ್ಮ ಕಾದಂಬರಿಗಳಲ್ಲಿ ಪ್ರಕಟೀಕರಿಸಿದ್ದು ಶುದ್ಧ ದೇಸೀ ಸೊಬಗನ್ನು. ಭಾರತೀಯರ ಆಂಗ್ಲ ಶಬ್ದಸಂಪತ್ತು, ನಿರೂಪಣಾಶೈಲಿ ವಿದೇಶಿಗರಿಗೆ ಹೊಂದಾಣಿಕೆಯಾಗದೆಂಬ ಕೀಳರಿಮೆಯ ಲವಲೇಶವೂ ಇಲ್ಲದಂತೆ ಲೇಖನಿ ಓಡಿಸಿ ಹೊರತಂದ ಸ್ವಾಮಿ ಮತ್ತು ಗೆಳೆಯರು ಕೃತಿಯನ್ನು ಪ್ರಕಟಿಸಲು ಯಾವೊಬ್ಬ ಪ್ರಕಾಶಕನೂ ಮುಂದೆ ಬಂದಿರಲಿಲ್ಲವೆಂಬುದು ನಂಬಲೇಬೇಕಾದ ಅಚ್ಚರಿಯ ಸಂಗತಿ. ವಿದೇಶೀ ಸಾಹಿತ್ಯಪ್ರೇಮಿಯ ಸಹಕಾರದಿಂದ ಪ್ರಕಟಿತವಾದ ಪುಸ್ತಕ ಭಾರತೀಯ ಸಾಹಿತ್ಯವಲಯದ ಹೊಸ ಮೈಲುಗಲ್ಲು. ಕಾಲೇಜು ಜೀವನದ ಅನುಭವವನ್ನೆಲ್ಲ ಧಾರೆಯೆರೆದ ದ ಬ್ಯಾಚುಲರ್ ಆಫ್ ಆರ್ಟ್ಸ್, ಹೆಣ್ಣಿನ ನೋವಿನ ಪ್ರತಿಬಿಂಬದಂತಿರುವ ದ ಡಾರ್ಕ್ ರೂಮ್, ವೈಟಿಂಗ್ ಫಾರ್ ಮಹಾತ್ಮಾ, ದ ಇಂಗ್ಲಿಷ್ ಟೀಚರ್ ಕೃತಿಗಳು ದೇಶ ವಿದೇಶಗಳಲ್ಲಿ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿತು. ಭಾರತದ ಪೌರಾಣಿಕ ಆದರ್ಶಗಳನ್ನು ಸಾರುವ ಕಂಬ ರಾಮಾಯಣ, ವ್ಯಾಸ ಭಾರತವನ್ನು ಕಥನ ಶೈಲಿಯಲ್ಲಿ ನಿರೂಪಿಸಿದ ಆರ್.ಕೆ., ಮಾಲ್ಗುಡಿಯೆಂಬ ಅತ್ಯದ್ಭುತ ಕಾಲ್ಪನಿಕ ಊರನ್ನೇ ಸೃಷ್ಟಿಸಿದ ಸರಸ್ವತಿಯ ವರಪುತ್ರ. ಚಿತ್ರಸಂಭಾಷಣೆ ಬರೆದ ನಾರಾಯಣರ ಅನೇಕ ಕಾದಂಬರಿಗಳು ಸಾಕ್ಷ್ಯಚಿತ್ರ, ಸಿನೆಮಾ, ಧಾರಾವಾಹಿಗಳಾಗಿ ಹೊರಹೊಮ್ಮಿದೆ. ಇಂಡಿಯನ್ ಥಾಟ್ ಎಂಬ ಪತ್ರಿಕೆಯನ್ನೂ, ಪ್ರಕಾಶನ ಸಂಸ್ಥೆಯನ್ನೂ ಸ್ಥಾಪಿಸಿ ಅದರ ಮೂಲಕ ಸಾಹಿತ್ಯಸೇವೆ ಮುಂದುವರೆಸಿದ ಸರಳ, ಸುಂದರ, ತಿಳಿಹಾಸ್ಯದ ಮೇಧಾವಿ ಬರಹಗಾರ, ಪದ್ಮಪ್ರಶಸ್ತಿ ಸಮ್ಮಾನಿತ ಆರ್. ಕೆ. ನಾರಾಯಣ್, ನಿತ್ಯ ಹರಿಯುವ ಗಂಗೆಯಂತೆ ಲವಲವಿಕೆಯಿಂದ ಬಾಳಿದ ಮಹಾಚೇತನ ಅಕ್ಷರಮಾಂತ್ರಿಕನೆಂದರೆ ಅತಿಶಯೋಕ್ತಿಯಲ್ಲ.
ಕೋಟ ಶಿವರಾಮ ಕಾರಂತ ಮತ್ತು ಆರ್. ಕೆ. ನಾರಾಯಣ್ ಅವರ ಜನ್ಮದಿನದ ಸಂಭ್ರಮವಿಂದು. ಬಡವಾದಂತೆ ಕಾಣುತ್ತಿರುವ ದೇಸೀ ಪರಿಕಲ್ಪನೆಯ ಸಾಹಿತ್ಯಕ್ಕೆ ಉಭಯ ಸಾಹಿತಿಗಳ ನಿತ್ಯಚೈತನ್ಯದ ಬದುಕು ಪ್ರೇರಣೆಯ ಸಂಜೀವಿನಿಯಾಗಲಿ. ಭಾರತೀಯರ ಬರಹಗಳು ಯಾವುದಕ್ಕೂ ಕಡಿಮೆಯಿಲ್ಲವೆಂದು ತೋರಿಸಿಕೊಟ್ಟ ಮಹಾಸಾಧಕರ ಜೀವನಯಾನ ನವಪೀಳಿಗೆಗೆ ಬೆಳಕಾಗಲಿ.