ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಾಹಿತ್ಯ ಸಮ್ಮೇಳನದ ಗುಡಿಗೆ ಅಧ್ಯಕ್ಷರೇ ಭೂಷಣ

03:45 AM Nov 25, 2024 IST | Samyukta Karnataka

ವಕ್ತಾರರ ಕಮ್ಮಟವೆಂದು ಗುರುತಿಸಬಹುದಾದ ಸಾಹಿತ್ಯ ಕ್ಷೇತ್ರದ ಗತಿಬಿಂಬದ ಪರಾಮರ್ಶೆಗೆ ಸಮ್ಮೇಳನವೇ ಒಂದು ಯೋಗ್ಯ ಸ್ಥಳ; ಬದಲಾದ ಕಾಲಘಟ್ಟದಲ್ಲಿ ಸಮ್ಮೇಳನಗಳು ಪರಾಮರ್ಶೆಯ ಸ್ಥಳಗಳಾಗಿ ಇನ್ನೂ ಉಳಿದಿವೆಯೇ ಎಂಬುದು ಚರ್ಚೆಗೆ ಬಿಟ್ಟಿರುವ ವಿಚಾರ. ಆದರೆ, ಸಾಹಿತ್ಯ ಸಮ್ಮೇಳನದ ಮುಖ್ಯ ಆಶಯವೇ ಅದಾಗಿರುವಾಗ ಅದನ್ನು ವಿಚಾರಣೆ ಮಾಡದೆ ಪ್ರಶ್ನೆ ಮಾಡುವುದು ಒಂದು ರೀತಿಯ ಏಕಚಕ್ರಾಧಿಪತ್ಯ. ಬಹುಶ್ರುತ ಸಮಾಜದಲ್ಲಿ ಇಂತಹ ಸಮ್ಮೇಳನಗಳಿಗಿರುವ ಮಹತ್ವ ವಿಶಿಷ್ಟ. ಈ ಗ್ರಹಿಕೆಯ ನೆರಳಿನಲ್ಲಿ ಡಿಸೆಂಬರ್ ೨೦ರಿಂದ ಮಂಡ್ಯದಲ್ಲಿ ಆರಂಭವಾಗಲಿರುವ ಸಾಹಿತ್ಯ ಸಮ್ಮೇಳನಕ್ಕೆ ಅಗತ್ಯಕ್ಕಿಂತಲೂ ಹೆಚ್ಚಿನ ಮಾನ್ಯತೆ ದೊರಕಲು ಇರುವ ಕಾರಣಗಳು ಬೇರೆ ಬೇರೆ. ಈ ಪೈಕಿ ಸಾತ್ವಿಕ ಸ್ವಭಾವದ ಸಜ್ಜನ ಸಾಹಿತಿ ಗೊ.ರು. ಚನ್ನಬಸಪ್ಪ (ಗೊರುಚ) ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವುದು ಕನ್ನಡಿಗರ ಸಂವೇಧನಾಶೀಲತೆಯ ದಿಕ್ಸೂಚಿ.
ಮೂರು ದಿನಗಳ ಅವಧಿಯ ಸಮ್ಮೇಳನದ ಸುತ್ತ ಹರಿದಾಡುತ್ತಿರುವ ವಾದ ವಿವಾದಗಳು ಏನೇ ಇರಬಹುದು. ಇಷ್ಟಕ್ಕೂ ಸಾಹಿತ್ಯ ಕ್ಷೇತ್ರವೆಂದ ಮೇಲೆ ವಾದಗಳಿಗೆ ಪ್ರತಿವಾದಗಳು ಇಲ್ಲದಿದ್ದರೆ ಹೇಗೆ. ಪ್ರತಿವಾದಗಳು ಹಲವಾರು ಸಂದರ್ಭದಲ್ಲಿ ವಿವಾದಗಳ ಮಸುಕನ್ನು ಹೊದಿಯುವುದರಿಂದ ಪ್ರಶ್ನಾರ್ಥಕ ಚಿಹ್ನೆಗಳು ಮೂಡಬಹುದು. ಆದರೆ, ಸಂವಾದಗಳು ಎಂದ ಮೇಲೆ ಅನುಮಾನಗಳು ಸ್ವಾಭಾವಿಕ. ಮಾನವಂತ ಬರಹಗಾರರು ಪಾಲ್ಗೊಳ್ಳುವ ಗೋಷ್ಠಿಗಳಲ್ಲಿ ವೈವಿಧ್ಯಮಯ ವಾದಗಳೇ ಸಂವಾದಗಳ ಹೂರಣ. ಹೀಗಿರುವಾಗ ಪ್ರತಿಯೊಂದಕ್ಕೂ ವಿವಾದದ ಮುಸುಕನ್ನು ಹೊದಿಸುವುದು ಆರೋಗ್ಯಕರ ಚಿಂತನೆಯ ಕ್ರಮವಾಗದು. ಮೂರು ದಿನಗಳ ಸಮ್ಮೇಳನದ ಗೋಷ್ಠಿಗಳ ಸ್ವರೂಪ ಇನ್ನಷ್ಟೆ ಬಯಲಾಗಬೇಕು. ಆದರೆ, ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡಿರುವ ಗೊರುಚ ಅವರು ಜ್ಞಾನ ಹಾಗೂ ಅನುಭವದಿಂದ ಮಾಗಿರುವವರು. ಹೀಗಾಗಿ ತಮ್ಮ ಹಿರಿತನದಿಂದಲೇ ಗೋಷ್ಠಿಗಳಿಗೆ ಬೆರಗನ್ನು ತಂದುಕೊಡುವ ಸಾಮರ್ಥ್ಯ ಉಳ್ಳವರು. ಎಲ್ಲರ ನಿರೀಕ್ಷೆಗಳನ್ನು ಹುಸಿ ಮಾಡಿ ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಧೀಮಂತರನ್ನು ಆಯ್ಕೆ ಮಾಡಿರುವುದು ಅಭಿನಂದನಾರ್ಹ ಹಾಗೂ ಅನುಕರಣೀಯ ಕ್ರಮ.
ನಿಜ. ಇತ್ತೀಚಿನ ದಿನಮಾನಗಳಲ್ಲಿ ಸಾಹಿತ್ಯ ಸಮ್ಮೇಳನಗಳು ಜಾತ್ರೆಯ ಸ್ವರೂಪ ಪಡೆದು ಕೊಳ್ಳುತ್ತಿವೆ. ಇಷ್ಟಕ್ಕೂ ಸಾಹಿತ್ಯ ವೆಂಬುದು ಪ್ರಾತಃಸ್ಮರಣೀಯ ಬಿ. ಎಂ.ಶ್ರೀ ಹೇಳಿರುವಂತೆ ಜನವಾಣಿ. ಇದರ ಅರ್ಥ ಸಾಮಾನ್ಯರೇ ಸಾಹಿತ್ಯದ ಪಾತ್ರಧಾರಿಗಳು. ಅವರ ಬದುಕು, ಪರಿಸರ, ವೈಚಾರಿಕತೆ, ಸ್ವಾಭಾವಿಕ ಸಣ್ಣತನ, ವಿಶಾಲ ದೃಷ್ಟಿಕೋನ ಇಂತಹ ಮಾನವೀಯ ಗುಣಗಳ ಪ್ರತಿಬಿಂಬವೇ ಸಾಹಿತ್ಯ. ಹೀಗಿದ್ದಾಗ ತಮ್ಮ ಪ್ರತಿಬಿಂಬವನ್ನು ಕಾಣುವ ಉದ್ದೇಶವಿಲ್ಲದಿದ್ದರೂ ಕುತೂಹಲದ ಸನ್ನಿವೇಶವನ್ನು ಕಣ್ತುಂಬಿಕೊಳ್ಳುವ ಜನಸಾಮಾನ್ಯರು ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವುದು ಒಂದರ್ಥದಲ್ಲಿ ಸಾಹಿತಿಗಳಿಗೆ ಹಾಗೂ ಸಂಘಟಕರಿಗೆ ಆತ್ಮವಿಶ್ವಾಸವನ್ನು ಒಗ್ಗೂಡಿಸಿಕೊಳ್ಳುವ ಒಂದು ರಾಜಮಾರ್ಗ. ಜನಗಳು ಇಂತಹ ಸಮ್ಮೇಳನಗಳಲ್ಲಿ ಪಾಲ್ಗೊಳ್ಳದಿದ್ದರೆ ಅಂತಹ ಸಮ್ಮೇಳನಗಳು ಬರಡು ಸಮ್ಮೇಳನಗಳಾಗಿ ಅಥವಾ ಕೂಚುಭಟ್ಟರ ಚಾವಡಿಯಾಗಿ ರೂಪಾಂತರಗೊಳ್ಳುವ ಎಲ್ಲಾ ಅಪಾಯಗಳೂ ಇವೆ. ಸಾಮಾನ್ಯರ ಉಪಸ್ಥಿತಿಯಲ್ಲಿ ಅಸಾಮಾನ್ಯ ಸಂಗತಿಗಳನ್ನು ವಿಶ್ಲೇಷಿಸಿ ಒಮ್ಮತದ ನಿಲುವಿಗೆ ಬರುವುದು ಸಮ್ಮೇಳನಗಳ ಆಶಯ. ಕವಿಗೋಷ್ಠಿಯೇ ಇರಲಿ ಅಥವಾ ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ ಕಮ್ಮಟವೇ ಇರಲಿ ಎಲ್ಲಾ ಚರ್ಚೆಗಳು ಕೂಡಾ ಇದರ ಸುತ್ತಲೇ ನಡೆದು ಕನ್ನಡ ನಾಡಿನ ಕಲ್ಯಾಣದ ಮೂಲಕ ಕನ್ನಡತನದ ವಿಜೃಂಭಣೆಗೆ ಮಾರ್ಗಗಳನ್ನು ಹುಡುಕಿಕೊಳ್ಳುವುದಷ್ಟೆ ನಮ್ಮ ಮುಂದಿರುವ ಸವಾಲು ಹಾಗೂ ಇದೇ ಅವಕಾಶ ಕೂಡಾ.
ತಂತ್ರಜ್ಞಾನದ ಯುಗದಲ್ಲಿ ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳು ಅಪಾಯದ ಅಂಚಿನಲ್ಲಿವೆ. ಇದರ ಸಂರಕ್ಷಣೆಯಾಗಬೇಕಾದರೆ ಆಯಾ ಪ್ರದೇಶಗಳ ಜನ ಜಾಗೃತರಾಗಿ ಒಮ್ಮನಸ್ಸಿನ ನಿರ್ಧಾರ ಮಾಡಬೇಕು. ಕನ್ನಡ ನಾಡಿನಲ್ಲಿ ಕನ್ನಡಿಗರು ಇದನ್ನು ಒಂದು ಧರ್ಮ ಯುದ್ಧದಂತೆ ಪರಿಗಣಿಸಿ ಭಾಷೆಯ ಸಂರಕ್ಷಣೆಗೆ ಮುಂದಾಗಬೇಕು. ಸರ್ಕಾರಗಳು ಇಂತಹ ವಿಚಾರದಲ್ಲಿ ಸೌಲಭ್ಯಗಳನ್ನು ಸೃಷ್ಟಿಸಬಹುದಷ್ಟೆ. ಉಳಿದಂತೆ ಇದರ ರಕ್ಷಣೆ ಹೊಣೆ ಇರುವುದು ಜನಗಳ ಕೈಯ್ಯಲ್ಲಿಯೆ. ಕಂಪ್ಯೂಟರ್ ಯುಗದಲ್ಲಿ ಕನ್ನಡ ಅನ್ನದ ಭಾಷೆಯಾಗಿ ಉಳಿದಿಲ್ಲ. ಈಗ ನಮ್ಮ ಮುಂದಿರುವುದು ಕನ್ನಡವನ್ನು ಅನ್ನದ ಭಾಷೆಯಾಗಿ ಮಾರ್ಪಾಟು ಮಾಡಲು ಕಂಪ್ಯೂಟರ್ ಭಾಷೆಯಾಗಿ ಪರಿವರ್ತಿಸಬೇಕು. ಇದು ಕೇವಲ ಭಾವನಾತ್ಮಕ ವಿಚಾರವಲ್ಲ. ವಾಸ್ತವಿಕ ಬದುಕಿನ ವಿಚಾರ. ಸಿಲಿಕಾನ್ ಸಿಟಿ ಎಂಬ ಕೀರ್ತಿಗೆ ಪಾತ್ರವಾಗಿರುವ ಕರ್ನಾಟಕ ರಾಜಧಾನಿ ತಂತ್ರಜ್ಞರು ಇಂತಹ ಸವಾಲನ್ನು ಅವಕಾಶವೆಂದು ಪರಿಗಣಿಸಿ ಕನ್ನಡದ ತಂತ್ರಾಂಶಗಳನ್ನು ಸುಧಾರಿಸಿ ಕಂಪ್ಯೂಟರ್ ತಂತ್ರಜ್ಞಾನಕ್ಕೆ ಹೊಂದಾಣಿಕೆಯಾಗುವಂತೆ ಜೋಡಿಸಿದಾಗ ಉದ್ಯೋಗಾವಕಾಶಗಳು ಕನ್ನಡಿಗರ ಕೈ ಸೇರಬಹುದು. ಇದಕ್ಕೆಲ್ಲಾ ಬೇಕಾದದ್ದು ಸರ್ಕಾರದ ನಾಯಕತ್ವ. ಗೋಕಾಕ್ ಚಳವಳಿಯ ಮಹತ್ವಾಕಾಂಕ್ಷೆಯೇ ಕನ್ನಡಕ್ಕೆ ಸಾರ್ವಭೌಮ ಸ್ಥಾನ ಸಿಗಬೇಕು ಎಂಬುದಾಗಿತ್ತು. ಇಂಗ್ಲಿಷ್ ಜ್ಞಾನದ ಮೂಲಕ ಕಂಪ್ಯೂಟರ್ ಪ್ರಾವೀಣ್ಯತೆ ಪಡೆದವರು ವಿದೇಶಗಳಿಗೆ ತೆರಳುವ ಇಲ್ಲವೇ ಇಲ್ಲಿಯೇ ಇದ್ದು ಇಂಗ್ಲಿಷಿನಲ್ಲಿಯೇ ಬದುಕನ್ನು ಸಾಗಿಸಿ ಕನ್ನಡವನ್ನು ಪರಕೀಯ ಭಾಷೆಯಂತೆ ಕಾಣುವ ಸ್ಥಿತಿಯಲ್ಲಿ ಕನ್ನಡಕ್ಕೆ ಉಳಿಗಾಲವನ್ನು ನಿರೀಕ್ಷಿಸುವುದು ಕಷ್ಟ. ರಾಜ್ಯೋತ್ಸವದ ವೀರಾವೇಶದ ಮಾತುಗಳಿಂದ ಕನ್ನಡದ ಉದ್ದಾರ ಅಸಾಧ್ಯ. ವಾಸ್ತವಿಕ ನೆಲೆಗಟ್ಟಿನಲ್ಲಿ ತ್ರಿಕರಣ ಶುದ್ಧಿಯಿಂದ ಕೈಗೊಳ್ಳುವ ತೀರ್ಮಾನಗಳೇ ಕನ್ನಡ ಉಳಿಸಿ ರಕ್ಷಿಸಿಯಾವು.
ಹಾಗೆ ನೋಡಿದರೆ, ನಿಯೋಜಿತ ಅಧ್ಯಕ್ಷ ಗೊರುಚ ಕನ್ನಡತನಕ್ಕೆ ಹೆಸರಾದವರು. ಅವರು ರಚಿಸಿರುವ `ಸಾಕ್ಷಿಕಲ್ಲು' ನಾಟಕದ ದೇವ ನೀ ದಯಮಾಡು ಎಂಬ ಹಾಡಿನ ಹಿಂದಿರುವುದು ನಾಡಿನ ಹಾಗೂ ನಾಡಿನ ಪ್ರಜೆಗಳ ಕಲ್ಯಾಣ. ಇದೇ ಸಮ್ಮೇಳನದ ಮಂತ್ರಶಕ್ತಿ ಆಗುವುದಾದರೆ ಅದಕ್ಕಿಂತಲೂ ಉತ್ತಮ ಬೆಳವಣಿಗೆ ಇನ್ನೊಂದಿರಲಾರದು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ್ ಜೋಶಿ ಒಬ್ಬ
ಮಹತ್ವಾಕಾಂಕ್ಷಿ ನಾಯಕ. ಪ್ರಸ್ತುತ ಗಂಡಾಂತರದಂತೆ ಕನ್ನಡದ ಮೇಲೆ ಎರಗುತ್ತಿರುವ ಪರಭಾಷೆಗಳ ಆಕ್ರಮಣ ತಡೆಗಟ್ಟಲು ಧೀ ಶಕ್ತಿಯ ಆತ್ಮಸ್ಥೈರ್ಯ ಕನ್ನಡ ಕುಲಕೋಟಿಗೆ ಬರುವಂತೆ ಮಾಡಲು ಸಮ್ಮೇಳನಗಳು ಸರ್ವಾನುಮತದ ಕನ್ನಡ ಸಂರಕ್ಷಣೆ ಕುರಿತ ನಿರ್ಣಯವನ್ನು ಕೈಗೊಂಡು ರಾಜ್ಯಾದ್ಯಂತ ಮನೆ ಮನೆ ಮುಟ್ಟುವಂತಹ ಚಳವಳಿಗೆ ಮುಂದಾಗಲು ಇದು ಸಕಾಲ.

Next Article