ಸಿಇಟಿ ಪ್ರಶ್ನೆ ಪತ್ರಿಕೆ ದೋಷ ನಿವಾರಣೆಗೆ ಕೃಪಾಂಕ
ಶಿಕ್ಷಣ ಪದ್ಧತಿಯಲ್ಲಿ ಪ್ರಶ್ನೆ ಪತ್ರಿಕೆಗಳೇ ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯ ಒರೆಗೆ ಹಚ್ಚುವ ಕನ್ನಡಿ. ಪದವಿಯ ಹಂತ ಯಾವುದೇ ಇರಲಿ, ಪರೀಕ್ಷೆಯ ಸ್ವರೂಪ ಎಂತಹುದೇ ಆಗಿರಲಿ ಪ್ರಶ್ನೆ ಪತ್ರಿಕೆಗಳ ಗುಣಮಟ್ಟವೇ ಶೈಕ್ಷಣಿಕ ಗುಣಮಟ್ಟ ಗುರುತಿಸಲು ಇರುವ ಮುಖ್ಯ ಸಾಧನ. ಇದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾದ ಸ್ಥಿತಿಯಲ್ಲ. ಜಗತ್ತಿನಾದ್ಯಂತ ಇದೇ ಸ್ಥಿತಿ. ಆದರೆ, ಸ್ವರೂಪ ಬೇರೆ ಇರಬಹುದು ಅಷ್ಟೆ. ಪಠ್ಯಕ್ರಮ ಆಧರಿಸಿ ಹಾಗೂ ಸೀಮಿತವಾಗಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು ಶಿಕ್ಷಣ ತಜ್ಞರ ಗುರುತರವಾದ ಹೊಣೆಗಾರಿಕೆ. ಇಂತಹ ಹೊಣೆಗಾರಿಕೆ ಶಿಕ್ಷಣ ತಜ್ಞರ ಬದಲಿಗೆ ಅಧಿಕಾರಿಗಳ ಕೈಗೆ ಹೋದರೆ ಆಗುವ ಪ್ರಮಾದ ಘೋರ. ೨೦೨೪ನೇ ಸಾಲಿನ ಸಿಇಟಿ ಪರೀಕ್ಷೆ ವಿದ್ಯಾರ್ಥಿಗಳ ಮಟ್ಟಿಗೆ ಯಮಗಂಡ ಕಾಲಕ್ಕೆ ತಿರುಗಲು ಕಾರಣ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳನ್ನು ಒಳಗೊಂಡಿದ್ದ ಪ್ರಶ್ನೆ ಪತ್ರಿಕೆ. ಇಂತಹ ಪತ್ರಿಕೆಯನ್ನು ಹದಿಹರೆಯದ ವಿದ್ಯಾರ್ಥಿಗಳು ಕೊಠಡಿಯಲ್ಲಿ ಜೀರ್ಣಿಸಿಕೊಂಡು ಬರೆಯುವುದು ದೊಡ್ಡ ಸವಾಲು. ಇಂತಹ ಸವಾಲನ್ನು ಅವಕಾಶವೆಂದು ಪರಿಗಣಿಸಿ ಪ್ರಶ್ನೆ ಪತ್ರಿಕೆಯನ್ನು ಬರೆದಿರುವ ವಿದ್ಯಾರ್ಥಿಗಳು ಇರಬಹುದು. ಆದರೆ, ಬಹುತೇಕ ವಿದ್ಯಾರ್ಥಿಗಳಿಗೆ ಇದು ಕಬ್ಬಿಣದ ಕಡಲೆಯೇ. ವಸ್ತು ಸ್ಥಿತಿ ಕಬ್ಬಿಣದ ಕಡಲೆ ಆಗಿದ್ದರೂ ಅದನ್ನು ಒಪ್ಪಿಕೊಳ್ಳಲು ಆರಂಭದಲ್ಲಿ ಸಿಇಟಿ ಪರೀಕ್ಷೆಯ ಸಂಘಟಿಸುವ ಹೊಣೆಗಾರಿಕೆ ಇರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧವಿರಲಿಲ್ಲ. ಭವಿಷ್ಯ ಕಮರಿಹೋಗುತ್ತಿರುವ ಭೀತಿಯಲ್ಲಿ ಮುಳುಗಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಕೇಳಿದ ಪ್ರಶ್ನೆಗೆ ದಬ್ಬಾಳಿಕೆ ಉತ್ತರ ನೀಡಿದ ಅಧಿಕಾರಿಗಳಿಗೆ ನಂತರ ಗೊತ್ತಾದ ಸಂಗತಿ ಎಂದರೆ ದೀಪದ ಕೆಳಗೆ ಕತ್ತಲು ಇರುವ ರೀತಿಯಲ್ಲಿ ಪ್ರಶ್ನೆ ಪತ್ರಿಕೆಯಲ್ಲೇ ದೋಷವಿದೆ ಎಂಬುದು.
ಜಗತ್ತಿಗೇ ಕ್ಷಣಾರ್ಧದಲ್ಲಿ ಗೊತ್ತಾದ ಪ್ರಶ್ನೆ ಪತ್ರಿಕೆಯ ದೋಷ ಪತ್ತೆ ಹಚ್ಚಲು ತಜ್ಞರ ಸಭೆಯನ್ನು ಏರ್ಪಡಿಸಿದ ಪ್ರಾಧಿಕಾರ ಪಾರದರ್ಶಕ ರೀತಿಯಲ್ಲಿ ಸಭೆಯ ಕಲಾಪವನ್ನು ಜನರ ಮುಂದೆ ಮಂಡಿಸುವ ಬದಲು ಕೃಪಾಂಕದ ಮಾರ್ಗಕ್ಕೆ ಶರಣಾದದ್ದು ಒಂದು ರೀತಿಯಲ್ಲಿ ಅರ್ಥವಾಗದ ಕ್ರಮ. ಪ್ರಶ್ನೆ ಪತ್ರಿಕೆ ದೋಷಪೂರ್ಣವಾಗಿರುವಾಗ ಮರುಪರೀಕ್ಷೆ ನಡೆಸುವ ದಿಟ್ಟ ಕ್ರಮವನ್ನು ಕೈಗೊಳ್ಳಲು ಪ್ರಾಧಿಕಾರಕ್ಕೆ ಮುಕ್ತ ಅಧಿಕಾರವಿತ್ತು. ಶಿಕ್ಷಣ ತಜ್ಞರ ಅಭಿಪ್ರಾಯವೂ ಬಹುತೇಕ ಇದೇ ಆಗಿತ್ತು. ಆದರೆ, ಇದರ ಬದಲು ಕೃಪಾಂಕ ಕರುಣಿಸಿ ಪರೀಕ್ಷೆಯ ದೋಷವನ್ನು ಮುಚ್ಚಿ ಹಾಕುವ ಮಾರ್ಗವನ್ನು ಅನುಸರಿಸಿದ್ದು ಜನರಿಗೆ ನಾನಾ ರೀತಿಯ ಅನುಮಾನ ಬರಲು ಕಾರಣವಾಯಿತು. ಕೆಲವರು ಹೇಳುವಂತೆ, ಈ ಪ್ರಶ್ನೆ ಪತ್ರಿಕೆ ಸಿದ್ಧವಾಗಿದ್ದು ಕಳೆದ ವರ್ಷದ ಪರೀಕ್ಷೆಗಾಗಿ. ಮೂರು ಸೆಟ್ ಪ್ರಶ್ನೆ ಪತ್ರಿಕೆಗಳ ಪೈಕಿ ಕಳೆದ ವರ್ಷ ಒಂದನ್ನು ಮಾತ್ರ ಬಳಸಲಾಗಿತ್ತು. ಉಳಿದ ಎರಡರ ಪೈಕಿ ಒಂದನ್ನು ಈ ಬಾರಿ ಏಕಪಕ್ಷೀಯವಾಗಿ ಬಳಸಿದ್ದು ಈ ದೋಷಕ್ಕೆ ಕಾರಣ. ಬಳಸುವ ಮುನ್ನ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದವರ ಜೊತೆ ಸಮಾಲೋಚಿಸಿದ್ದರೆ ಇಂತಹ ಅವಾಂತರ ಆಗುತ್ತಿರಲಿಲ್ಲವೇನೋ. ಬೇಸರದ ಸಂಗತಿ ಎಂದರೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಸಂಭಾವನೆ ತಪ್ಪಿಸುವ ಸಲುವಾಗಿ ಇಂತಹ ದೋಷ ಪೂರಿತ ಮಾರ್ಗವನ್ನು ಅನುಸರಿಸಲಾಯಿತು. ಕಳೆದ ವರ್ಷದ ಪಠ್ಯಕ್ಕೂ ಈ ವರ್ಷದ ಪಠ್ಯಕ್ಕೂ ಗುಣಾತ್ಮಕ ವ್ಯತ್ಯಾಸ ಇರುವುದರಿಂದ ಈ ಪ್ರಮಾದ ಜರುಗಲು ಕಾರಣವಾಗಿದೆ. ಕೃಪಾಂಕ ಕರುಣಿಸಲು ಔದಾರ್ಯ ತೋರಿದ ಪ್ರಾಧಿಕಾರದ ಅಧಿಕಾರಿಗಳಿಗೆ ದೋಷ ಪೂರ್ಣ ಪ್ರಶ್ನೆ ಪತ್ರಿಕೆ ಪರೀಕ್ಷೆಗೆ ಒದಗಿಸಲು ಕಾರಣವೇನು ಎಂಬುದರ ಬಗ್ಗೆ ತನಿಖೆಯಾಗಿದ್ದರೆ ಆಗ ಅದರ ನಿಷ್ಪಕ್ಷಪಾತತನವನ್ನು ಒಪ್ಪಿಕೊಳ್ಳಬಹುದಾಗಿತ್ತು. ಸಿಇಟಿ ವಿದ್ಯಾರ್ಥಿಗಳು ಹಾಗೂ ಪೋಷಕರು ಅಸಂಘಟಿತ ವರ್ಗದವರು. ಸಂಘಟಿತ ಪರೀಕ್ಷಾ ಪ್ರಾಧಿಕಾರದ ವಿರುದ್ಧ ಸಿಡಿದೇಳುವುದು ಸುಲಭದ ಮಾತಲ್ಲ. ಅದರಲ್ಲೂ ಚುನಾವಣೆಯ ಸಂದರ್ಭದಲ್ಲಿ ಚುನಾಯಿತ ಸರ್ಕಾರದ ಆಡಳಿತ ಅಧಿಕಾರಿಗಳ ಕೈವಶದಲ್ಲಿರುವಾಗ ಸಮರ ಸಾರುವುದು ಸುಲಭವಲ್ಲ. ಬಹುಶಃ ಈ ಸಂದರ್ಭದಲ್ಲಿ ರಾಜಕೀಯ ನೇತೃತ್ವದ ಸರ್ಕಾರವಿದ್ದಿದ್ದರೆ ಸಿಇಟಿ ಪರೀಕ್ಷೆಯ ಅಸಲಿ ಬಣ್ಣ ಬಯಲಾಗುತ್ತಿತ್ತೇನೋ. ಚಾಣಾಕ್ಷ ಅಧಿಕಾರಿಗಳ ಆಡಳಿತ ಎಷ್ಟೇ ಉತ್ತಮ ಎಂದು ಒಪ್ಪಿದರೂ ರಾಜಕೀಯ ನಾಯಕತ್ವದ ಸರ್ಕಾರದ ಆಡಳಿತದಲ್ಲಿ ಜನರಿಗೆ ಸಿಗುವ ಸಹಜ ನ್ಯಾಯ ಈ ಅಧಿಕಾರಿಗಳ ಆಡಳಿತದಲ್ಲಿ ನಿರೀಕ್ಷಿಸುವುದು ಕಷ್ಟ ಎಂಬುದು ಈಗ ಅನುಭವದ ಮೂಲಕ ಸಿದ್ಧಗೊಂಡಿರುವ ಒಂದು ಪಾಠ.