ಸಿಎಂ, ಡಿಸಿಎಂ ಕರ್ನಾಟಕವನ್ನು ಪಾಕ್‌ಗಿಂತ ಕಡೆ ಮಾಡುತ್ತಿದ್ದಾರೆ
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕರ್ನಾಟಕವನ್ನು ಪಾಕಿಸ್ತಾನಕ್ಕಿಂತ ಕಡೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ, ಹನುಮಾನ್ ಚಾಲೀಸ್ ಪಠಣ ಮಾಡಿದವರ ಮೇಲೆ ಎಫ್‌ಐಆರ್ ಹಾಕಿದ್ದಾರೆ. ಇವರೇನು ಕರ್ನಾಟಕವನ್ನು ಆಳುತ್ತಿದ್ದಾರೋ? ಅಥವಾ ಮೂಲಭೂತವಾದಿ ಇಸ್ಲಾಮಿಕ್ ರಾಷ್ಟ್ರವನ್ನು ಆಳುತ್ತಿದ್ದಾರೋ? ಎಂದು ವಾಗ್ದಾಳಿ ನಡೆಸಿದರು.
ಹನುಮಾನ್ ಚಾಲೀಸ್ ಪಠಣ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆ ಖಂಡನಾರ್ಹ. ನಾನು ಇದನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ. ಪಾಕಿಸ್ತಾನ ಜಿಂದಾಬಾದ್ ಕೂಗಿದಾಗಲೂ ಸಹ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ನಡೆಯನ್ನೇ ಪ್ರದರ್ಶಿಸಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರವು ಕೂಡಲೇ ಅಂಗಡಿಯಲ್ಲಿ ಹನುಮಾನ್ ಚಾಲೀಸ್ ಹಾಡು ಹಾಕಿದ ವ್ಯಕ್ತಿ ಮೇಲೆ ಹಾಕಿರುವ ಎಫ್‌ಐಆರ್ ಕೈ ಬಿಡಬೇಕು ಎಂದು ಜೋಶಿ ಆಗ್ರಹಿಸಿದರು.
ನಮಾಜ್ ಮಾಡಬಹುದೇ?
ಬೆಳ್ಳಂ ಬೆಳಿಗ್ಗೆ ಬೆಳಕು ಹರಿಯುವ ಮೊದಲೆ ಅಂದರೆ ೬ ಗಂಟೆಗೂ ಮೊದಲೇ ನಮಾಜ್ ಮಾಡಬಹುದು. ಆದರೆ, ಹಿಂದೂಗಳು ಮಾತ್ರ ತಮ್ಮ ಅಂಗಡಿಯಲ್ಲಿ ಹನುಮಾನ್ ಚಾಲೀಸ್ ಹಾಕುವುದು ತಪ್ಪೇ ಎಂದು ಜೋಶಿ ಪ್ರಶ್ನಿಸಿದರು. ಇದು ಕಾಂಗ್ರೆಸ್ ಸರ್ಕಾರದ ತುಷ್ಟೀಕರಣದ ಪರಮಾವಧಿಯಾಗಿದೆ. ರಾಜ್ಯದ ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.