For the best experience, open
https://m.samyuktakarnataka.in
on your mobile browser.

ಸಿಎಂ ದಿಢೀರ್ ಡಿನ್ನರ್ ಸಭೆ ವಿವಾದಾತ್ಮಕ ಹೇಳಿಕೆಗೆ ಬ್ರೇಕ್

10:51 PM Feb 02, 2024 IST | Samyukta Karnataka
ಸಿಎಂ ದಿಢೀರ್ ಡಿನ್ನರ್ ಸಭೆ ವಿವಾದಾತ್ಮಕ ಹೇಳಿಕೆಗೆ ಬ್ರೇಕ್

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಡಿನ್ನರ್ ಮೀಟ್ ಸರಣಿ ಮುಂದುವರಿದಿದೆ. ಇದುವರಿಗೆ ಸಚಿವರ ನಿವಾಸದಲ್ಲಿ ನಡೆಯುತ್ತಿದ್ದ ಸಭೆ ಇದೀಗ ಸಿಎಂ ನಿವಾಸಕ್ಕೆ ಶಿಫ್ಟ್ ಆಗಿದ್ದು ಗುರುವಾರ ತಡರಾತ್ರಿವರೆಗೂ ಸಿಎಂ ಸಿದ್ದರಾಮಯ್ಯ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದು ಹಲವು ಮಹತ್ವದ ಸೂಚನೆ ರವಾನಿಸಿದ್ದಾರೆ ಎಂದು ಹೇಳಲಾಗಿದೆ.
ಸಚಿವ ಸಂಪುಟ ಸಭೆ ಮುಗಿದ ಬೆನ್ನಲ್ಲೇ ತಮ್ಮ ಅಧಿಕೃತ ನಿವಾಸ ಕಾವೇರಿಗೆ ಎಲ್ಲ ಸಚಿವರಿಗೂ ಸಿಎಂ ಆಹ್ವಾನ ಕೊಟ್ಟಿದ್ದರು. ರಾತ್ರಿ ಭೋಜನದ ಹೊತ್ತಿಗೆ ಬಹುತೇಕ ಎಲ್ಲ ಸಚಿವರು ಸೇರಿದ್ದರು. ಇತ್ತೀಚೆಗೆ ಕೆಲವು ಸಚಿವರು ಹಾಗೂ ಶಾಸಕರು ಅನಾವಶ್ಯಕವಾಗಿ ನೀಡುತ್ತಿರುವ ಕೆಲವು ಹೇಳಿಕೆ ವಿವಾದಾತ್ಮಕ ತಿರುವು ಪಡೆದುಕೊಳ್ಳುತ್ತಿರುವ ಬಗ್ಗೆ ಗಂಭೀರ ಚರ್ಚೆಯಾಗಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಯಾರೊಬ್ಬರೂ ಅನಗತ್ಯ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾಗಿ ತಿಳಿದುಬಂದಿದೆ.
ಭೋಜನಕೂಟದ ಮಧ್ಯೆಯೇ ಸಿಎಂ, ಲೋಕಸಭೆ ಚುನಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲೇಬೇಕು. ಹಾಗಾಗಿ ಸಚಿವರುಗಳ ಮೇಲೆ ಹೆಚ್ಚಿನ ಹೊಣೆಯಿದೆ. ಹೈಕಮಾಂಡ್ ಯಾರನ್ನು ಅಭ್ಯರ್ಥಿಗಳಾಗಿ ಸೂಚಿಸುವುದೋ ಗೊತ್ತಿಲ್ಲ. ಎಲ್ಲದಕ್ಕೂ ಸಜ್ಜಾಗಿರಿ ಎಂದು ಸೂಕ್ಷ್ಮವಾಗಿ ಸಚಿವರ ಸ್ಪರ್ಧೆ ಬಗ್ಗೆಯೂ ಸಂದೇಶ ರವಾನಿಸಿರುವ ಅವರು ಖುದ್ದು ನೀವೇ ಗೆಲುವಿನ ಜವಾಬ್ದಾರಿ ತೆಗೆದುಕೊಳ್ಳಿ ಎಂದು ಸೂಚಿಸಿದ್ದಾಗಿ ಹೇಳಲಾಗಿದೆ.
ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಸಂಬಂಧ ಇತ್ತೀಚೆಗೆ ಆಯ್ದ ಹಿರಿಯ ಸಚಿವರ ಮೊದಲ ಸಭೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ನಿವಾಸದಲ್ಲಿ ನಡೆದಿತ್ತು. ಕೆಲವು ದಿನಗಳ ಬಳಿಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿಯೂ ಐದಾರು ಮಂದಿ ಸಚಿವರ ಮತ್ತೊಂದು ಸಭೆ ನಡೆದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಚುನಾವಣೆ ನೆಪದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಡಿನ್ನರ್ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.