For the best experience, open
https://m.samyuktakarnataka.in
on your mobile browser.

ಸಿಎಂ ಪತ್ರ ಬರೆದು ರಾಜಕಾರಣ ಮಾಡಿದರೆ ಪ್ರಜ್ವಲ್ ಪಾಸ್ಪೋರ್ಟ್ ರದ್ದಾಗಲ್ಲ

09:38 PM May 25, 2024 IST | Samyukta Karnataka
ಸಿಎಂ ಪತ್ರ ಬರೆದು ರಾಜಕಾರಣ ಮಾಡಿದರೆ ಪ್ರಜ್ವಲ್ ಪಾಸ್ಪೋರ್ಟ್ ರದ್ದಾಗಲ್ಲ

ಹುಬ್ಬಳ್ಳಿ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಗೆ, ವಿದೇಶಾಂಗ ಸಚಿವರಿಗೆ ಪತ್ರ ಬರೆದು ರಾಜಕಾರಣ ಮಾಡಿದರೆ ಪಾಸ್ಪೋರ್ಟ್ ರದ್ದು ಆಗಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ರಾಜಕಾರಣ ಮಾಡಲೆಂದು ಪತ್ರ ಬರೆಯುವುದಲ್ಲ. ಪೊಲೀಸ್ ಇಲಾಖೆ ಅಧಿಕೃತ ಮಾಹಿತಿ ನೀಡಬೇಕು, ಇಲ್ಲವೇ ಕೋರ್ಟ್ ಆದೇಶ ಇರಬೇಕು ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

SIT ಈಗ ಮಾಹಿತಿ ನೀಡಿದೆ:
ಪ್ರಜ್ವಲ್ ರೇವಣ್ಣ ಪ್ರಕರಣ ಸಂಬಂಧ SIT ಈಗ ಕೇಂದ್ರಕ್ಕೆ ಮಾಹಿತಿ ನೀಡಿದೆ. ಪ್ರಕರಣ ಬೆಳಕಿಗೆ ಬಂದು ಒಂದು ತಿಂಗಳ ಬಳಿಕ ಮೇ 21ರಂದು ಕೇಂದ್ರಕ್ಕೆ ಅಧಿಕೃತ ಮಾಹಿತಿ ನೀಡಿದೆ ಎಂದು ತಿಳಿಸಿದರು.

ಕೇಂದ್ರದಿಂದ ಅತ್ಯಂತ ತ್ವರಿತ ಕ್ರಮ:
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕೇಂದ್ರ ಅತ್ಯಂತ ತ್ವರಿತ ಕ್ರಮ ಹೈಗೊಂಡಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಮಾಹಿತಿ ನೀಡಿದ ಮೇಲೆ 10 ದಿನಗಳ ಸಮಯ ಇರುತ್ತದೆ. ಅದರಂತೆ ಮೇ 21ಕ್ಕೆ SIT ಮಾಹಿತಿ ನೀಡುತ್ತಲೆ ಮುಂದಿನ ಕ್ರಮ ಕೈಗೊಂಡಿದೆ. ಮೇ 25ಕ್ಕೆ ಅಂದರೆ ಎರಡೇ ದಿನದಲ್ಲಿ ಆಗಲೇ ಕೇಂದ್ರ ಸರ್ಕಾರ ನೋಟಿಸ್ ಕೊಟ್ಟಿದೆ. ಕಾನೂನು ಪ್ರಕಾರ ಇನ್ನು 8 ದಿನದಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಜೋಶಿ ಸ್ಪಷ್ಟ ಪಡಿಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜಕಾರಣ ಮಾಡುವುದಕ್ಕಿಂತ ಹೆಚ್ಚಾಗಿ ಗಂಭೀರವಾಗಿ ಪರಿ ಗಣಿಸಬೇಕು. ವಿದೇಶಕ್ಕೆ ಹಾರಿರುವ ಪ್ರಜ್ವಲ್ ರನ್ನು ಹಿಡಿದು ಕರೆ ತಂದು ಶಿಕ್ಷೆಗೆ ಗುರಿಪಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು

ಸಿಎಂ ಪತ್ರ ಬರೆದು ರಾಜಕಾರಣ ಮಾಡೋದಲ್ಲ : ಪಾಸ್ಪೋರ್ಟ್ ರದ್ದುಪಡಿಸುವ ವಿಚಾರದಲ್ಲಿ ಮುಖ್ಯಮಂತ್ರಿಯೇ ಅಲ್ಲ ಯಾರೂ ಪ್ರಧಾನಿಗೆ, ವಿದೇಶಾಂಗ ಸಚಿವರಿಗೆ ಪತ್ರ ಬರೆದು ರಾಜಕಾರಣ ಮಾಡೋದು ಅಲ್ಲ. ಕಾನೂನು ಪ್ರಕಾರ ಸಂಬಂಧಪಟ್ಟ ಪೊಲೀಸ್ ಇಲಾಖೆ ನೋಟಿಸ್ ನೀಡಬೇಕು. ಪ್ರಜ್ವಲ್ ತನಿಖೆಗೆ ಲಭ್ಯವಾಗುತ್ತಿಲ್ಲ ಎಂದು FIR ಸಮೇತ ಕೇಂದ್ರಕ್ಕೆ ಅಧಿಕೃತ, ನಿರ್ಧಿಷ್ಟ ಮಾಹಿತಿ ನೀಡಬೇಕು ಅಥವಾ ಕೋರ್ಟ್ ಆದೇಶ ಹೊರಡಿಸಬೇಕು. ಇದು ವಕೀಲಿಕಿ ಮಾಡಿದ ಸಿಎಂಗೆ ಗೊತ್ತಿಲ್ಲವೆ? ಎಂದು ಜೋಶಿ ಪ್ರಶ್ನಿಸಿದರು.

ವಿದೇಶಕ್ಕೆ ಹಾರಲು ಬಿಟ್ಟಿದ್ದೇ ರಾಜ್ಯ ಸರ್ಕಾರ:
ಪ್ರಜ್ವಲ್ ರೇವಣ್ಣ ಅವರನ್ನು ವಿದೇಶಕ್ಕೆ ಹಾರಲು ಬಿಟ್ಟಿದ್ದೇ ರಾಜ್ಯ ಸರ್ಕಾರ. ಈಗ ದುರುದ್ದೇಶದಿಂದ ಕೇಂದ್ರದತ್ತ ಬೆರಳು ತೋರಿಸುತ್ತಿದೆ ಎಂದು ಆರೋಪಿಸಿದರು.

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಏಪ್ರಿಲ್ 21ರಂದೇ ಬೆಳಕಿಗೆ ಬಂದಿದೆ. ಪ್ರಜ್ವಲ್ ಏಪ್ರಿಲ್ 28ಕ್ಕೆ ವಿದೇಶಕ್ಕೆ ಹಾರಿದ್ದಾರೆ. ಅಷ್ಟು ದಿನ ರಾಜ್ಯ ಸರ್ಕಾರ ಏಕೆ ಸುಮ್ಮನಿತ್ತು? ಆಗಲೇ ಏಕೆ ಬಂಧಿಸಲಿಲ್ಲ? ಈ ಪ್ರಶ್ನೆಗಳಿಗೆ ಇನ್ನುವರೆಗೂ ಸಿಎಂ ಬಳಿ ಉತ್ತರವಿಲ್ಲ ಎಂದು ಹೇಳಿದರು.

ಕೇಂದ್ರ ರೆಡ್ ಅಲರ್ಟ್ ಘೋಷಿಸುತ್ತಿತ್ತು:
ಏಪ್ರಿಲ್ 21, 22ರಂದೇ ರಾಜ್ಯ ಸರ್ಕಾರ ಭಾರತ ಸರ್ಕಾರಕ್ಕೆ ಅಧಿಕೃತ ಮಾಹಿತಿ ಕೊಟ್ಟಿದ್ದರೆ, ಕೇಂದ್ರ ಅಂದೇ ಎಲ್ಲಾ ವಿಮಾನ ನಿಲ್ದಾಣಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡುತ್ತಿತ್ತು. ಪ್ರಜ್ವಲ್ ವಿದೇಶಕ್ಕೆ ಹಾರಲು ಅವಕಾಶ ಕೊಡುತ್ತಿರಲಿಲ್ಲ. ಆದರೆ, ಪ್ರಕರಣ ಬೆಳಕಿಗೆ ಬಂದು ಒಂದು ತಿಂಗಳ ಬಳಿಕ ಕೇಂದ್ರಕ್ಕೆ ಅಧಿಕೃತ ಮಾಹಿತಿ ನೀಡಿದ್ದಾರೆ ಎಂದು ಪ್ರಲ್ಹಾದ ಜೋಶಿ ತಿಳಿಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣ ಗಂಭೀರವಾಗಿದ್ದರೂ ರಾಜ್ಯ ಸರ್ಕಾರ ಅದರಲ್ಲಿ ರಾಜಕಾರಣ ಮಾಡುತ್ತಿದೆ. ಆದರೆ, ಕೇಂದ್ರ ಸರ್ಕಾರ ಕಾನೂನು ಕ್ರಮವನ್ನು ಅನುಸರಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.