ಸಿಎಂ-ರಾಜ್ಯಪಾಲರ ಮುಖಾಮುಖಿ
ಬೆಂಗಳೂರು: ಮುಡಾ ಹಗರಣ ಮುಖ್ಯಮಂತ್ರಿ ಕುರ್ಚಿಗೆ ಕಂಟಕ ತಂದೊಡ್ಡುವ ಆತಂಕ ಎದುರಾಗಿರುವ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಸ್ಪರ ಮುಖಾಮುಖಿಯಾದ ಪ್ರಸಂಗಕ್ಕೆ ರಾಜಭವನ ಮಂಗಳವಾರ ಸಾಕ್ಷಿಯಾಯಿತು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ ಬಳಿಕ ರಾಜಭವನ ಮತ್ತು ಶಕ್ತಿಸೌಧದ ನಡುವೆ ಅಪರೋಕ್ಷ ಸಂಘರ್ಷ ಶುರುವಾಗಿತ್ತು. ಕಾಂಗ್ರೆಸ್ ನಾಯಕರು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಘಟನೆ ನಡೆದ ಬಳಿಕ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಸ್ಪರ ಮುಖಾಮುಖಿಯಾಗಿದ್ದು ಕಡಿಮೆಯೇ.
ಮಂಗಳವಾರ ಅಂತಹ ಮುಖಾಮುಖಿಗೆ ರಾಜಭವನ ವೇದಿಕೆಯಾದರೆ, ಮಾಲ್ಡೀವ್ಸ್ ಅಧ್ಯಕ್ಷರ ಬೆಂಗಳೂರು ಭೇಟಿ ಕಾರಣವಾಯಿತು. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮತ್ತವರ ಪತ್ನಿ ಸಾಜಿದಾ ಮೊಹಮ್ಮದ್ ದಂಪತಿ ಬೆಂಗಳೂರಿಗೆ ಭೇಟಿಗಾಗಿ ಆಗಮಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಯಭಾರ ಕಚೇರಿಯ ಉನ್ನತಾಧಿಕಾರಿ ಮತ್ತು ಇತರೆ ಗಣ್ಯರು ರಾಜಭವನದಲ್ಲಿ ಅತಿಥಿಗಣ್ಯರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ರಾಜಭವನಕ್ಕೆ ಬಂದ ಸಿದ್ದರಾಮಯ್ಯ ಅವರನ್ನು ರಾಜ್ಯಪಾಲರು ನಮಸ್ಕರಿಸಿ ಸ್ವಾಗತಿಸಿದರು. ಇಬ್ಬರು ನಾಯಕರು ಪರಸ್ಪರ ಹಸ್ತಲಾಘವ ಮಾಡಿದ್ದು ವಿಶೇಷವಾಗಿತ್ತು. ಸಿದ್ದರಾಮಯ್ಯ ಅವರು ಎಂದಿನಂತೆ ಲಘುಬಗೆಯಲ್ಲಿ ನಗೆ ಬೀರುತ್ತಲೇ ರಾಜ್ಯಪಾಲರೊಡನೆ ಕೆಲಕಾಲ ಸಂಭಾಷಿಸಿದರು. ಈ ಅಪರೂಪದ ಮುಖಾಮುಖಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಸಾಕ್ಷಿಯಾಗಿ ಅವರೂ ಮುಗುಳ್ನಕ್ಕರು. ಮುಡಾ ಹಗರಣ ಸೃಷ್ಟಿಸಿರುವ ಬಿಸಿಬಿಸಿ ರಾಜಕೀಯ ವಾತಾವರಣದ ನಡುವೆ ಈ ಅಚಾನಕ್ ಭೇಟಿ-ಹಸ್ತಲಾಘವ ವಿಶೇಷವೆನಿಸಿ ಗಮನಸೆಳೆಯಿತು.