ಸಿಎಂ ಸಾಚಾತನ ಜನಕ್ಕೆ ಗೊತ್ತಾಗಿದೆ...
3 ಕ್ಷೇತ್ರಗಳ ಉಪಚುನಾವಣೆಯಿಂದ ಯಾವುದೇ ರಾಜಕೀಯ ಬದಲಾವಣೆ ಆಗುವುದಿಲ್ಲ
ಬೆಂಗಳೂರು: ಈಗಾಗಲೇ ಮುಡಾ, ವಾಲ್ಮೀಕಿ ಫ್ರಾಡ್ ಜೊತೆಗೆ ಯೋಗೇಶ್ವರ್ ಎಂಬ ಮೂರನೇ ಫ್ರಾಡ್ ಸೇರಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 3 ಕ್ಷೇತ್ರಗಳ ಉಪಚುನಾವಣೆಯಿಂದ ಯಾವುದೇ ರಾಜಕೀಯ ಬದಲಾವಣೆ ಆಗುವುದಿಲ್ಲ, ಇತ್ತೀಚೆಗೆ ಪಕ್ಷ ರಾಜಕಾರಣದ ಬದಲು ವ್ಯಕ್ತಿ ರಾಜಕಾರಣ ಮುನ್ನೆಲೆಗೆ ಬಂದಿದೆ. ನಿನ್ನೆ ವರುಣದಲ್ಲಿ ಸಿಎಂ ಸಿದ್ದರಾಮಯ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಮಾರಂಭದಲ್ಲಿ ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ್ದೀರ. ಈಗ ಏನೇ ಹೇಳಿದರೂ ರಾಜ್ಯದ ಜನರು ನಂಬುವುದಿಲ್ಲ. ನಿನ್ನೆ ನಡೆದಿದ್ದು 500 ಕೋಟಿ ಶಿಲಾನ್ಯಾಸ ಕಾರ್ಯಕ್ರಮವೇ ಅಥವಾ ಸ್ಪಷ್ಟೀಕರಣ ಕೊಡುವ ಕಾರ್ಯಕ್ರಮವೇ? ನಾನು ಸತ್ಯವಂತ, ಸತ್ಯವಂತ ಎಂದು ಹೇಳ್ತಿದ್ದಾರೆ. ನೀವು ಎಷ್ಟೇ ಹೇಳಿದರೂ ಸಿದ್ದರಾಮಯ್ಯ ಭ್ರಷ್ಟ ಅಂತ ಜನ ತೀರ್ಮಾನ ಮಾಡಿದ್ದಾರೆ. ಮನೆ ಇಲ್ಲ, ಮರಿಸ್ವಾಮಿ ಮನೇಲಿ ಮಲಗಿಕೊಳ್ತೀನಿ ಅಂತೀರಾ. ಇದೆಲ್ಲ ಹೇಳುವ ಮಾತುಗಳಾ? ನೀವು ಭ್ರಷ್ಟ ಅಂತ ಜನ ತೀರ್ಮಾನ ಮಾಡಿದ್ದಾರೆ, ಭೈರತಿ ಸುರೇಶ್ ನಂತಹ ಅಯೋಗ್ಯನನ್ನು ಮಂತ್ರಿ ಮಾಡಿಕೊಂಡು ರಾಜ್ಯಕ್ಕೆ ಮಸಿ ಬಳಿದಿದ್ದೀರಿ. ಕರ್ನಾಟಕ ಅಂದರೆ ಫ್ರಾಡ್‌ಗಳ ಸಂತೆ ಆಗಿ ಹೋಗಿದೆ, ಸಿದ್ದರಾಮಯ್ಯ ಮಗ ಸೊಸೆ ಹೆಸರಿನಲ್ಲಿ ಪಬ್ ಮಾಡಿದ್ದಾರೆ. ಅದು 350 ಕೋಟಿ ಬೆಲೆ ಬಾಳುತ್ತದೆ. ಅದಕ್ಕೆ ಬೈರತಿ ಸುರೇಶ್ ಮಾಸ್ಟರ್ ಮೈಂಡ್. ಅವನ ಕ್ಷೇತ್ರದಲ್ಲೇ ಆ ಪಬ್ ಇದೆ. ಸಿದ್ದರಾಮಯ್ಯ ನಾನು ಒಳ್ಳೆಯವನು ಎಂದು ಡಂಗೂರ ಹೊಡೆಯುತ್ತಿದ್ದಾರೆ. ಆದರೆ ಅವರ ಸಾಚಾತನ ಜನಕ್ಕೆ ಗೊತ್ತಾಗಿದೆ. ಭೈರತಿ ಸುರೇಶ್ ಒಳಗೆ ಹಾಕಿದ್ರೆ ಎಲ್ಲಾ ವಿಚಾರ ಹೊರಗೆ ಬರುತ್ತದೆ, ರಾಜ್ಯದ ಬಹುತೇಕ ಕಡೆ ಭಾರೀ ಮಳೆಯಿಂದಾಗಿ ಜನರು ಮನೆಯಿಂದ ಹೊರಬರಲಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಬಂದೊದಗಿರುವ ಎದುರಾಗಿರುವ ವಿಪತ್ತು ನಿವಾರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸಿಎಂ ಆದಿಯಾಗಿ ಯಾವುದೇ ಸಚಿವರು ಜನರ ಸಮಸ್ಯೆಗಳತ್ತ ಗಮನ ಹರಿಸಿಲ್ಲ. ಮೂರು ಪಕ್ಷಗಳ ನಾಯಕರು ಉಪ ಚುನಾವಣೆಯತ್ತ ಗಮನ ಹರಿಸಿದ್ದಾರೆ. ಜನರ ಕಷ್ಟಕ್ಕೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದರು.