For the best experience, open
https://m.samyuktakarnataka.in
on your mobile browser.

ಸಿಎಂ ಸಿದ್ದು ಕುಟುಂಬದ ವಿಚಾರಣೆಗೆ ಇಡಿ ಸಿದ್ಧತೆ

04:30 AM Nov 15, 2024 IST | Samyukta Karnataka
ಸಿಎಂ ಸಿದ್ದು ಕುಟುಂಬದ ವಿಚಾರಣೆಗೆ ಇಡಿ ಸಿದ್ಧತೆ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅನುಪಾತ ನಿವೇಶನಗಳ ಹಗರಣ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿಯನ್ನು ವಿಚಾರಣೆ ಗೊಳಪಡಿಸಲು ಜಾರಿ ನಿರ್ದೇಶನಾಲಯ (ಇ.ಡಿ.) ಸಿದ್ಧತೆ ಮಾಡಿಕೊಳ್ಳುತ್ತಿದೆ.
ಬಹುತೇಕ ತಮ್ಮ ಆಪ್ತರನ್ನೆಲ್ಲಾ ಇ.ಡಿ. ತನಿಖಾಧಿಕಾರಿಗಳು ಗಂಟಗಟ್ಟಲೆ ಕೂರಿಸಿ ವಿಚಾರಣೆ ನಡೆಸಿರುವುದನ್ನು ಗಮನಿಸಿರುವ ಸಿಎಂ, ಮುಂದಿನ ಸರದಿ ತಮ್ಮದಾಗಬಹುದೆಂದೇ ಭಾವಿಸಿದ್ದಾರೆ. ಈ ಹಿನ್ನೆಲೆ ಯಲ್ಲಿಯೇ ತವರು ನೆಲದಲ್ಲಿ ನಿಂತು, ನನ್ನನ್ನು ಯಾರಾದರೂ ಮುಟ್ಟಿದರೆ ಜನ ರೊಚ್ಚಿಗೇಳುತ್ತಾರೆಂಬ ಹೇಳಿಕೆ ನೀಡುವ ಮೂಲಕ ಕೇಂದ್ರ ಸರ್ಕಾರ ಮತ್ತು ಇ.ಡಿ.ಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ನರಸೀಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಮೊದಲ ಬಾರಿಗೆ ಆಪರೇಷನ್ ಕಮಲದ ಬಗ್ಗೆ ಬಹಿರಂಗ ವಾಗಿ ಸಿಎಂ ಹೇಳಿಕೆ ನೀಡುವ ಸಮಯದಲ್ಲೇ ಬೆಂಗಳೂರಿನ ಇ.ಡಿ. ಕಚೇರಿಯಲ್ಲಿ ಇವರ ಅತ್ಯಾಪ್ತ ಅಧಿಕಾರಿಯಾಗಿದ್ದ ರಾಯಚೂರಿನ ಈಗಿನ ಕಾಂಗ್ರೆಸ್ ಸಂಸದ ಕುಮಾರನಾಯಕ್ ವಿಚಾರಣೆ ಎದುರಿಸುತ್ತಿದ್ದರು. ಕೆಸೆರೆಯ ವಿವಾದಿತ ಜಮೀನಿನ ಭೂ ಪರಿವರ್ತನೆಯಾದಾಗ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದರು ಎನ್ನುವುದು ಗಮನಾರ್ಹ.
ಇದೇ ವೇಳೆ ಮುಡಾ ಮತ್ತು ಪಾಲಿಕೆ ಎರಡೂ ಕಡೆ ಕೆಲಸ ಮಾಡುತ್ತಿದ್ದ ಹಾಗೂ ಎರಡೂ ಸಂಸ್ಥೆಗಳ ಹಿರಿಯ ಅಧಿಕಾರಿಗಳು, ರಾಜಕಾರಣಿಗಳ ಆಪ್ತವಲಯದಲ್ಲಿದ್ದ ಗುತ್ತಿಗೆ ನೌಕರ ಕುಮಾರ್ ಎಂಬಾತನನ್ನೂ ಇಡಿ ವಶಕ್ಕೆ ಪಡೆದುಕೊಂಡಿತ್ತು. ಕುಮಾರ್ ಬಳಿ ಹಗರಣದ ಎಲ್ಲ ಮಾಹಿತಿ ಇದೆ ಎಂಬುದು ಅಧಿಕಾರಿಗಳ ನಂಬಿಕೆ.
ಮಾಜಿ ಅಧ್ಯಕ್ಷರ ವಿಚಾರಣೆ: ಈ ನಡುವೆ ಮುಡಾದ ಮಾಜಿ ಅಧ್ಯಕ್ಷರೂ ಆಗಿರುವ ಸಿಎಂ ಸಿದ್ದರಾಮಯ್ಯ ಪರ ಮಾಪ್ತ ಕೆ. ಮರೀಗೌಡ ಅವರನ್ನೂ ಇಡಿ ಗುರುವಾರ ವಿಚಾರಣೆಗೊಳಪಡಿಸಿದ್ದು, ಹಲವು ಗಂಟೆಗಳ ಕಾಲ ಪ್ರಶ್ನೋತ್ತರ ಮುಂದುವರೆದಿದೆ. ಇವೆಲ್ಲವನ್ನು ಗಮನಿ ಸಿಯೇ ವಿಚಾರಣೆ ಎದುರಿಸುವ ಮುಂದಿನ ಸರದಿ ಸಿಎಂ ಮತ್ತು ಇವರ ಪತ್ನಿಯದಾಗಲಿದೆ ಎಂದು ಬಹು ತೇಕ ವರದಿಗಳು ಬಿಂಬಿಸಿರುವ ಹಿನ್ನೆಲೆಯಲ್ಲಿ ಸಿಎಂ ಆಕ್ರೋಶಗೊಂಡಿದ್ದಾರೆ. ಹೀಗಾಗಿಯೇ ಬಹಿರಂಗ ಸಭೆಯ ವೇದಿಕೆಯಿಂದಲೇ ಸಂದೇಶ ರವಾನಿಸುವ ಯತ್ನ ನಡೆಸಿದ್ದಾರೆಂದು ಬಿಂಬಿಸುತ್ತಿದ್ದಾರೆ.