For the best experience, open
https://m.samyuktakarnataka.in
on your mobile browser.

ಸಿಟೀಲಿ ಮನೆಯ ಮಾಡಿ ಸೌಂಡಿಗೆ ಅಂಜಿದೊಡೆ ಎಂತಯ್ಯ…

01:30 AM Mar 20, 2024 IST | Samyukta Karnataka
ಸಿಟೀಲಿ ಮನೆಯ ಮಾಡಿ ಸೌಂಡಿಗೆ ಅಂಜಿದೊಡೆ ಎಂತಯ್ಯ…

ರವೆ ಚೆನ್ನಾಗಿದ್ರೆ ಉಪ್ಪಿಟ್ಟು ಚೆನ್ನ, ಸೈಟು ಚೆನ್ನಾಗಿದ್ರೆ ಮನೆ ಚೆನ್ನ. ಸೈಟು ಕೊಂಡಾಗ ಅಕ್ಕಪಕ್ಕ ಸೈಟುಗಳೆಲ್ಲ ಸಾಮಾನ್ಯವಾಗಿ ಖಾಲಿ ಇರುತ್ತೆ. ಆರಾಮಾಗಿ ಮನೆ ಕಟ್ಟಬಹುದು, ಪಕ್ಕದ ಸೈಟಿನಲ್ಲಿ ಶಾಮಿಯಾನ ಹಾಕಿ ಭರ್ಜರಿ ಗೃಹಪ್ರವೇಶದ ಊಟವನ್ನು ಬಡಿಸಬಹುದು.
ಬರ ಬರುತ್ತಾ ಆ ಬಡಾವಣೆ ಕಿಷ್ಕಿಂಧೆಯಾಗುತ್ತದೆ, ಸೈಟು ಕೊಂಡ ಎಲ್ಲರೂ ಮನೆ ಕಟ್ಟಲು ಶುರು ಮಾಡಿದಾಗ ನಮ್ಮ ಮನೆಗೆ ಗಾಳಿ, ಬೆಳಕು ಕಡಿಮೆ ಆಗುತ್ತೆ, ಜನರಿಗಿಂತ ಧೂಳು ಜಾಸ್ತಿ ಬರುತ್ತದೆ. ಮನೆ ತುಂಬಾ ಧೂಳಿನ ಕಣಗಳ ಫೈನ್ ಕೋಟಿಂಗ್ ಶೇಖರವಾಗುತ್ತೆ. ಧೂಳು ಇರುವ ಕಡೆ ಕೆಮ್ಮು ಬರಲೇಬೇಕು.
ವಿಶ್ವ ಮತ್ತೆ ಮತ್ತೆ ಕೆಮ್ಮಿದ. ವಿಶಾಲುಗೆ ಗಂಡ ಕೆಮ್ಮುವುದನ್ನು ನೋಡಿ ಕರೋನ ನೆನಪಾಗಿ ಶಾಕ್ ಆಯಿತು.
“ನಾನು ಬಡ್ಕೊಂಡೆ, ಈ ಏರಿಯಾದಲ್ಲಿ ಮನೆ ಕಟ್ಟೋದು ಬೇಡ, ಆಸ್ಪತ್ರೆ ಪಕ್ಕ ಮನೆ ಮಾಡೋಣ ಕೆಮ್ಮಿದ್ರೆ ಡಾಕ್ಟರ್ ಸಿಕ್ತಾರೆ ಅಂತ, ನೀವೆಲ್ಲಿ ಕೇಳ್ತೀರ ನನ್ನ ಮಾತ್ನ” ವಿಶಾಲು ದಬಾಯಿಸಿದಳು.
“ನಾವು ಮನೆ ಕಟ್ಟಿ ಇಲ್ಲಿಗೆ ಬಂದಾಗ ಎಲ್ಲಾ ಚೆನ್ನಾಗೇ ಇತ್ತು ವಿಶಾಲು, ಆಮೇಲೆ ತಾನೇ ಜನ ಒಬ್ಬೊಬ್ಬರೇ ಮನೆ ಕಟ್ಟೋಕೆ ಶುರು ಮಾಡಿದ್ದು?. ನಾವೇ ಸಪರೇಟಾಗಿ ಇರಬೇಕು ಅಂದ್ರೆ ಒಂದು ತೋಟದ ಮನೆ ತಗೋಬೇಕು ಅಷ್ಟೆ”.
ನಾನು ಮನೆ ಒಳಗೆ ಬರುವ ವೇಳೆಗೆ ಮಾತು ಬಿಸಿ ಏರಿತ್ತು. ಇಬ್ಬರ ಮುಖದಲ್ಲೂ ಹೊಗೆ ಕಾಣಿಸಿಕೊಂಡಿತ್ತು.
“ಏನೋ ಟೆನ್ಷನ್ ಇದ್ಹಾ÷್ದಂಗ್ ಇದೆ?” ಎನ್ನುತ್ತ ಎಂಟ್ರಿ ಕೊಟ್ಟೆ.
“ನನ್ ಹೆಂಡ್ತಿನ ಕೇಳು” ಎಂದ ವಿಶ್ವ.
“ನನ್ ಗಂಡನ್ನೇ ಕೇಳಿ” ಎಂದಳು ವಿಶಾಲು.
“ನೀವಿಬ್ಬರೂ ಹೇಳ್ಲಿಲ್ಲಾಂದ್ರೆ ನಾನು ಪಕ್ಕದ ಮನೆಯವರನ್ನ ಕೇಳಬೇಕಾಗುತ್ತೆ ಅಷ್ಟೆ” ಎಂದಾಗ ಹೊರಗಡೆಯಿಂದ ಭಜನೆ ಶಬ್ದ ಕೇಳಿ ಬಂತು, ಸೊಗಸಾದ ರಾಮ ಭಜನೆ! “ವಾವ್ ಏನ್ ಭಜನೆ, ಏನ್ ಆನಂದ” ಎನ್ನುತ್ತಾ ತಾಳ ಹಾಕಿದೆ.
“ತಾಳ ಹಾಕಿ ಬೇತಾಳ ಆಗಬೇಡ” ಎಂದು ವಿಶ್ವ ಮೆಲ್ಲಗೆ ಹೇಳಿದ.
“ದಿನಕ್ಕೆ ಮೂರು ಗಂಟೆ ಭಜನೆ ಆಗುತ್ತೆ, ಅಪರೂಪಕ್ಕೆ ಬಂದವರಿಗೆ ಕೇಳೋಕೆ ಚೆನ್ನಾಗಿರುತ್ತೆ, ನಮ್ಮ ನೆಮ್ಮದಿ ಏನ್ ಆಗಬೇಕು”. ಎಂದು ವಿಶಾಲು ರೇಗಿದಳು. ಮನೆ ಎದುರು ಇದ್ದ ಶಾಲಾ ಮಕ್ಕಳು ಓ ಎಂದು ಕೂಗುತ್ತ ಆಡುತ್ತಿದ್ದರು. ವಿಶಾಲು ಕಿಟಕಿ ಆಚೆ ಇದ್ದ ಶಾಲೆಯನ್ನು ತೋರಿಸಿದಳು.
“ನಾವು ಇಲ್ಲಿಗೆ ಬಂದಾಗ ಶಾಲೆ ಇರಲಿಲ್ಲ, ಬರೀ ಗ್ರೌಂಡು. ಆನಂತರ ಯಾರೋ ಪರ್ಮಿಷನ್ ತಗೊಂಡಿದ್ದಾರೆ, ಅಲ್ಲಿ ಯಾವಾಗ್ಲೂ ಮಕ್ಕಳು ಕಿರುಚಾಡ್ತ ಗಲಾಟೆ ಮಾಡ್ತಾ ರ‍್ತಾರೆ.”

“ರೈನ್ ರೈನ್ ಗೋ ಅವೇ” ರೈಮ್ಸ್ ಕೇಳಿಸಿತು. “ಇವರ ಗಲಾಟೆ ಸಹಿಸೋಕೆ ನನ್ ಕೈಲಿ ಆಗ್ತಾ ಇಲ್ಲ. ಇದು ಸಾಲ್ದು ಅಂತ ನಮ್ಮ ಮನೆ ಮುಂದೆ ವಿಪರೀತ ಟ್ರಾಫಿಕ್ ಆಗಿಬಿಟ್ಟಿದೆ”. ಎಂದು ವಿಶಾಲು ಗೊಣಗಿದಳು.
“ಮೇನ್ ರೋಡ್ ಸೈಟ್ ಸಿಕ್ಕಿದ್ರೆ ಒಳ್ಳೇದು, ಕಾರ್ನರ್ ಸೈಟ್ ಆದ್ರೆ ಇನ್ನೂ ಒಳ್ಳೇದು ಅಂತ ಹೇಳಿದ್ದು ಯಾರು, ನೀನ್ ತಾನೇ? ಅದಕ್ಕೆ ೨೦ ವರ್ಷಗಳ ಹಿಂದೆ ನಾನು ತಗೊಂಡಿದ್ದು. ೨೦ ವರ್ಷಗಳಲ್ಲಿ ಸಿಟಿ ಬಹಳಷ್ಟು ಬದಲಾವಣೆ ಆಗಿದೆ, ಈಗ ಎಲ್ಲಾ ಕಡೆನೂ ಗಿಜಿಗಿಜಿ ಮನೆಗಳು, ವಟವಟ ಗಲಾಟೆಗಳು ಇದ್ದಿದ್ದೇ. ಹೇಗೋ ಸಹಿಸಿಕೊಂಡು ಹೋಗಬೇಕು” ಎಂದ ವಿಶ್ವ.
“ಆದರೆ ವಿಪರೀತ ಶಬ್ದ ಮಾಲಿನ್ಯ” ಎಂದಳು ವಿಶಾಲು.
“ಅಂಥ ಗಲಾಟೆ ಇಲ್ಲ ಬಿಡಿ” ಎಂದೆ ಸಮಾಧಾನ ಮಾಡಲು ಪ್ರಯತ್ನಿಸಿದೆ.
“ಮನೆಯಲ್ಲಿ ಇದ್ದೋರಿಗೆ ಶಬ್ದ ಕೇಳುತ್ತೆ, ಕಿವಿನೇ ಇಲ್ಲದವರಿಗೆ ಏನು ಕೇಳ್ಸುತ್ತೆ, ನನ್ನ ಗಂಡ ಆಫೀಸ್‌ಗೆ ಹೋಗ್ತಾರೆ, ಶಬ್ದ ಅವರ ಕಿವಿ ಮೇಲೆ ಬೀಳಲ್ಲ, ನನಗೆ ಟಿ.ವಿ. ಸೀರಿಯಲ್ ನೋಡೋಕ್ ಆಗಲ್ಲ, ಒಂದು ಮಧುರವಾದ ಹಾಡು ಹೇಳ್ಕೊಳೋಕ್ ಆಗೊಲ್ಲ, ಒಂದು ನ್ಯೂಸ್ ಪೇಪರ್ ಓದೋಕ್ ಆಗೊಲ್ಲ” ಎನ್ನುವ ವೇಳೆಗೆ ಪಕ್ಕದ ಶಾಲೆಯಿಂದ ಗಟ್ಟಿಯಾಗಿ ರೈಮ್ಸ್ ಕೇಳಿ ಬಂತು.
“ರೈನ್ ರೈನ್ ಗೋ ಅವೇ”
“ಈಗ್ಲೇ ನೀರಿಲ್ಲದೆ ಒದ್ದಾಡ್ತಿದ್ದೀವಿ, ಸ್ಟಾಂಪ್ ಹಚ್ಚೋಕೆ ನೀರಿಲ್ಲ, ಮಳೇನ ವಾಪಸ್ ಕಳಿಸ್ತಿವೆ ಈ ಕಾನ್ವೆಂಟ್ ಮಕ್ಕಳು” ಎಂದಳು ವಿಶಾಲು
“ಇದಕ್ಕೆ ಏನ್ ಇದೆ ಪರಿಹಾರ?” ಎಂದು ವಿಶ್ವ ನನ್ನ ಕೇಳಿದ.
“ನೋಡು ವಿಶ್ವ, ಅಕ್ಕಮಹಾದೇವಿ ಆವತ್ತೇ ಹೇಳಿದ್ದಾರೆ, ‘ಸಿಟಿಯಲ್ಲೊಂದು ಮನೆ ಮಾಡಿ, ಸೌಂಡಿಗೆ ಅಂಜಿದೊಡೆ ಎಂತಯ್ಯ ಅಂತ. ಕಲ್ಕತ್ತಾದಲ್ಲಿ ಸದಾ ೪೦ರಿಂದ ೫೦ ಡೆಸಿಬಲ್ ಶಬ್ದ ಇದ್ದೇ ಇರುತ್ತೆ. ಎಂದೆ ವಿಶ್ವನಿಗೆ.
“ಆದರೆ ಇದು ಕಲ್ಕತ್ತ ಅಲ್ಲ ಬೆಂಗಳೂರು” ಎಂದಳು ವಿಶಾಲು.
ಪಕ್ಕದ ಮನೆಯಲ್ಲಿ ಗಂಡ ಹೆಂಡಿರ ಕಾದಾಟ ಶುರುವಾಗಿತ್ತು. ಬೈಗುಳ ವಿಶ್ವನ ಮನೆ ಒಳಕ್ಕೂ ನುಗ್ಗಿ ಬರುತ್ತಿತ್ತು.
“ರೀ, ನಿಮ್ಮನ್ನ ಕಟ್ಕೊಂಡಿದ್ದೇ ತಪ್ಪಾಯ್ತು, ನಾನು ನಿಮ್ಮ ಜೊತೆ ಬಾಳೋಕೆ ಆಗೊಲ್ಲ, ನಾನು ನನ್ನ ತವರು ಮನೆಗೆ ಹೋಗ್ತೀನಿ” ಎಂದು ಪಕ್ಕದ ಮನೆ ಹೆಂಡತಿ ಕೂಗಿದಾಗ ಗಂಡ ನಗುವ ಶಬ್ದ.
“ಹೋಗೋಕೆ ನಿನ್ನ ಬಿಡಲ್ಲ ಕಣೆ, ತವರು ಮನೆಗೆ ನಿನ್ನ ಕಳ್ಸೋಲ್ಲ, ನಿನ್ನ ಬಾಡೀನ ಕಳಿಸ್ತೀನಿ. ಮಚ್ಚು ತಗೊಂಡ್ ಕೊಚ್ಹಾಚಕ್ ಬಿಡ್ತೀನಿ, ಎಲ್ಲಿದೆ ಮಚ್ಚು? ಈಗಲೇ ತಂದೆ”
“ಏನೋ ವಿಶ್ವ ಈ ಪಾಟಿ ಜಗಳ?” ಎಂದೆ ಗಾಬರಿಯಲ್ಲಿ.
“ಪಕ್ಕದ ಬಾಡಿಗೆ ಮನೆಗೆ ಹೊಸದಾಗಿ ಗಂಡ ಹೆಂಡ್ತಿ ಬಂದಿದ್ದಾರೆ, ದಿನಕ್ಕೆ ಎರಡು ಸಲ ನಾಯಿಗಳ ಥರ ಕಚ್ಚಾಡ್ತಾರೆ”
“ಅನಾಹುತ ಆದರೆ ನಿನ್ನ ತಲೆಗೆ ಬರುತ್ತೆ, ನಡೀ ಹೋಗೋಣ ಇಲ್ಲಾಂದ್ರೆ ಪೋಲೀಸರು ನಿನ್ನ ಕೇಳ್ತಾರೆ” ಎಂದೆ.
ನಾನು ಮತ್ತು ವಿಶ್ವ ಪಕ್ಕದ ಮನೆಗೆ ಹೋಗಿ ಬಾಗಿಲು ತಟ್ಟಿದೆವು. ಜಗಳ ತಾರಕಕ್ಕೆ ಏರಿತ್ತು. ಪರಸ್ಪರ ಬಡಿದಾಡುವುದು ಕೇಳುತ್ತಿತ್ತು.
“ನಿನ್ನ ಇವತ್ತು ಮಚ್ಚಿನಿಂದ ಕೊಚ್ಹಾಕಿದರೆ ಮಾತ್ರ ನನ್ನ ಜೀವಕ್ಕೆ ಸಮಾಧಾನ ಆಗುತ್ತೆ” ಎಂದು ಗಂಡ ಕೂಗಿದಾಗ ಆ ಮಹಿಳೆ “ಬೇಡ, ಬೇಡ, ಅಯ್ಯೋ ಯಾರಾದ್ರೂ ಹೆಲ್ಪ್ ಮಾಡಿ” ಎಂದು ಅಳುತ್ತ ಮನೆ ಇಡೀ ಓಡುತ್ತಿದ್ದಳು.
ನಾನು ಜೋರಾಗಿ ಬಾಗಿಲು ಬಡಿದೆ, ಅವರು ಬಾಗಿಲು ತೆಗೆದರು, ಆ ವ್ಯಕ್ತಿಯ ಕೈಯಲ್ಲಿ ಮಚ್ ಇತ್ತು.
“ಏನ್ ಇದು? ಯಾಕ್ ಹೆಂಡ್ತಿ ಮೇಲೆ ಅಟ್ಯಾಕ್ ಮಾಡ್ತಿದ್ದೀರ?” ಎಂದೆ.
ಇಬ್ಬರು ಜೋರಾಗಿ ನಕ್ಕರು
“ಬನ್ನಿ, ಕೂತ್ಕೊಳಿ, ನಾವು ನಾಟಕ ಪ್ರ್ಯಾಕ್ಟೀಸ್ ಮಾಡ್ತಾ ಇದ್ದೀವಿ, ನಾವಿಬ್ಬರು ಕಲಾವಿದರು, ಮುಂದಿನ ವಾರ ಕಲಾಕ್ಷೇತ್ರದಲ್ಲಿ ನಾಟಕ ಇದೆ, ದಯವಿಟ್ಟು ನಾಟಕಕ್ಕೆ ಬನ್ನಿ, ತಗೊಳ್ಳಿ ಟಿಕೆಟ್ಟು” ಎಂದು ೨೦೦ ರೂಪಾಯಿಯ ಟಿಕೆಟ್ಟನ್ನು ನನಗೆ ಮಾರಿದರು.