For the best experience, open
https://m.samyuktakarnataka.in
on your mobile browser.

ಸಿದ್ದರಾಮಯ್ಯನವರು ಹಾದಿ ತಪ್ಪಿಸುವುದರಲ್ಲಿ ಎಕ್ಸ್‌ಪರ್ಟ್

09:10 PM Sep 30, 2024 IST | Samyukta Karnataka
ಸಿದ್ದರಾಮಯ್ಯನವರು ಹಾದಿ ತಪ್ಪಿಸುವುದರಲ್ಲಿ ಎಕ್ಸ್‌ಪರ್ಟ್

ಕಾರ್ಕಳ: ರಾಜಕೀಯವಾಗಿ ಸಂಕಷ್ಟ ಬಂದಾಗಲೆಲ್ಲ ಜಾತಿ ಗಣತಿ ವರದಿ ಜಾರಿ ವಿಚಾರ ಪ್ರಸ್ತಾಪಿಸಿ ಹಿಂದುಳಿದ ಹಾಗೂ ಶೋಷಿತ ವರ್ಗದ ದಾರಿ ತಪ್ಪಿಸಿವುದು ಸಿಎಂ‌ ಸಿದ್ದರಾಮಯ್ಯ ಅವರಿಗೆ ಚಟವಾಗಿ ಬಿಟ್ಟಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಟೀಕಿಸಿದ್ದಾರೆ.
ಸಿದ್ದರಾಮಯ್ಯನವರಿಗೆ ಜಾತಿ ಗಣತಿ ವರದಿ ಎನ್ನುವುದು ಖುರ್ಚಿ ಭದ್ರಪಡಿಸಿಕೊಳ್ಳುವುದಕ್ಕಾಗಿ ಮಹಾನ್ ಅಸ್ತ್ರವಾಗಿದೆ. ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಜಾರಿ, ಅಹಿಂದ ವರ್ಗಕ್ಕೆ ಅನ್ಯಾಯ ಎಂದು ಭಾಷಣ ಬಿಗಿದು ಬಚಾವ್ ಆಗುವುದು ಚಾಳಿಯಾಗಿ ಬಿಟ್ಟಿದೆ. ಪೊಲೀಸ್ ಭಾಷೆಯಲ್ಲಿ ಹೇಳಬೇಕೆಂದರೆ ಇದು ವೃತ್ತಿಪರ ಆರೋಪಿ ಎಸಗುವ "ಗಮನ ಸೆಳೆಯುವ ತಂತ್ರ" ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯನವರು ಹಾದಿ ತಪ್ಪಿಸುವುದರಲ್ಲಿ "ಎಕ್ಸ್ ಪರ್ಟ್"! ಇಡಿ ಕರ್ನಾಟಕವನ್ನು ನಾಲ್ಕು ದಶಕಗಳಿಂದ ಹಾದಿ ತಪ್ಪಿಸುತ್ತಲೇ ಬಂದಿದ್ದೀರಿ. ರಾಮಕೃಷ್ಣ ಹೆಗಡೆ, ದೇವೇಗೌಡ, ಎಸ್.ಎಂ. ಕೃಷ್ಣರಂಥ ಘಟಾನುಘಟಿಗಳ ಪಥವನ್ನೇ ಬದಲಿಸಿದ ನಿಮಗೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನೀಡಬೇಕಿದೆ ಎಂದು ಟೀಕಿಸಿದ್ದಾರೆ.
ಮುಡಾ ವಿಚಾರದಲ್ಲಿ ಸಂಕಷ್ಟ ಎದುರಾಗುತ್ತಿದ್ದಂತೆ ನೀವು ಜಾತಿ ಗಣತಿ ವಿಚಾರವನ್ನು ಮುಂದಿಟ್ಟುಕೊಂಡು ಹಿಂದುಳಿದ ಹಾಗೂ ಶೋಷಿತ ವರ್ಗದ ದಿಕ್ಕು ತಪ್ಪಿಸಲು ಹೊರಟಿದ್ದೀರಿ. ಎಷ್ಟು ದಿನ ಈ ನಾಟಕ? ಅಧಿಕಾರಕ್ಕೆ ಬಂದಾಗಿನಿಂದ ಜಾತಿ ಗಣತಿ ಅನುಷ್ಠಾನ ಮಾಡುತ್ತೇನೆ ಎಂದು ಹೇಳುತ್ತಲೇ ಬಂದಿದ್ದೀರೇ ವಿನಾ ಆ ದಿಶೆಯಲ್ಲಿ ಒಂದೇ ಒಂದು ಹೆಜ್ಜೆ ಮುಂದಿಟ್ಟಿಲ್ಲ. ಹಲವು ಕಾರಣದಿಂದ ಜಾರಿಯಾಗಿಲ್ಲ ಎಂದು ಮಗುಮ್ಮಾಗಿ ಹೇಳಿದರೆ ಸಾಕೆ? ಆ ಕಾರಣವನ್ನು ಬಹಿರಂಗಪಡಿಸಿ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಭಯವೇ? ಅಥವಾ ವರದಿಯಲ್ಲಿ ಲೋಪಗಳಿವೆಯೇ? ಯಾವುದನ್ನೂ ಸ್ಪಷ್ಟಪಡಿಸದೇ "ಜಾರಿ ಜಪ" ಎಷ್ಟು ವರ್ಷ ಮುಂದುವರಿಸುತ್ತೀರಿ? ಎಂದು ಅವರು ಪ್ರಶ್ನಿಸಿದ್ದಾರೆ.

Tags :