ಸಿದ್ದರಾಮಯ್ಯ ʼಧಮ್ ಲೆಸ್ʼ ಸಿಎಂ
ಚಿಕ್ಕಮಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಧಮ್ಕಿ ಹಾಕಿದ್ದಾರೆ. ಹಾಗಾಗಿ ಅವರು ಧಮ್ ಲೆಸ್ ಸಿಎಂ ಆಗಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ. ರವಿ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು ೮೭ ಕೋಟಿ ರುಪಾಯಿ ಅಕ್ರಮ ನಡೆದಿರುವುದು ಅಂಗೈನ ಹುಣ್ಣಿನಷ್ಟು ಸತ್ಯ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ಮೇಲೆ ಕ್ರಮ ಕೈಗೊಳ್ಳುವ ಬದಲು ಭ್ರಷ್ಟರ ರಕ್ಷಣೆ ಮಾಡಲು ಕಾಂಗ್ರೆಸ್ ನಿಂತಿದೆ ಎಂದು ಹೇಳಿದರು.
ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾಗ ಸಾರ್ವಜನಿಕರ ಸಂಶಯ ದೂರ ಮಾಡಲು ಕೆ.ಎಸ್. ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ವಾಲ್ಮೀಕಿ ನಿಗಮದ ಪ್ರಕರಣ ನೋಡಿದಾಗ ಬ್ಯಾಂಕ್‌ಗಳಲ್ಲಿ ಅಕ್ರಮ ಖಾತೆ ತೆರೆದು ಹಣ ವರ್ಗಾವಣೆ ಮಾಡಿರುವುದು ಕಂಡು ಬಂದಿದೆ. ಆದರೂ ಕೂಡ ಮುಖ್ಯಮಂತ್ರಿಯವರು ಸಚಿವರ ರಾಜೀನಾಮೆ ತೆಗೆದುಕೊಳ್ಳುತ್ತಿಲ್ಲ. ಹಾಗಾದರೆ, ಇದರಲ್ಲಿ ಸರ್ಕಾರದ ಪಾತ್ರ ಇದೀಯಾ ಎಂಬ ಸಂಶಯ ಬರುತ್ತಿದೆ ಎಂದು ಹೇಳಿದರು.