ಸಿದ್ದರಾಮಯ್ಯ ಅಸಮರ್ಥ ಸಿಎಂ
ಹುಬ್ಬಳ್ಳಿ: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೇ ಪೇಚಾಡುತ್ತಿರುವ ಸಿದ್ದರಾಮಯ್ಯ ಓರ್ವ ಅಸಮರ್ಥ ಮುಖ್ಯಮಂತ್ರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾರಿಗೂ ನೆಮ್ಮದಿ ಇಲ್ಲ. ಅಭಿವೃದ್ಧಿ ಕಾರ್ಯಗಳು ನಡೆಯದೇ ಆಡಳಿತ ಪಕ್ಷದ ಶಾಸಕರೇ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ೧೫ ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಅವರ ಈಗಿನ ಪರಿಸ್ಥಿತಿ ನೋಡಿದರೆ ಅಯ್ಯೋ ಪಾಪ ಎನಿಸುತ್ತಿದೆ ಎಂದು ವ್ಯಂಗ್ಯವಾಡಿದರು.
ಒಂದೆಡೆ ಬಿಪಿಎಲ್ ಕಾರ್ಡ್ ರದ್ದು ಮಾಡುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಹುನ್ನಾರ ಸಿಎಂ ಮಾಡಿದ್ದಾರೆ. ಸುಮಾರು ೨೫ ಲಕ್ಷ ಕಾರ್ಡ್ ರದ್ದುಪಡಿಸುವ ಉದ್ದೇಶ ಅವರಿಗಿದೆ. ಇದರಿಂದ ಗ್ಯಾರಂಟಿ ಯೋಜನೆ ಮೇಲಿನ ಹೊರೆ ಕಡಿಮೆ ಮಾಡಿ, ಹಣ ಉಳಿಸುವ ಸಂಚು ಮಾಡಿದ್ದಾರೆ. ಆದರೆ, ನೋಡಿದರೆ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ೯೨.೫ರಷ್ಟು ಸಹಾಯವನ್ನು ಕೇಂದ್ರ ಸರ್ಕಾರವೇ ಮಾಡುತ್ತಿದೆ. ಉಳಿದ ಶೇ. ೭.೫ ರಷ್ಟನ್ನು ಮಾತ್ರ ರಾಜ್ಯ ಸರ್ಕಾರ ನಿರ್ವಹಣೆ ಮಾಡುತ್ತದೆ. ಹೀಗಿದ್ದರೂ ಬಡವರ ಬಿಪಿಎಲ್ ರದ್ದು ಮಾಡಿ ಅವರನ್ನು ಬೀದಿಗೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವ ಮಾನದಂಡದ ಆಧಾರದಲ್ಲಿ ಬಿಪಿಎಲ್ ರದ್ದು ಮಾಡುತ್ತೀರಿ? ಬೀದಿ ಬದಿ ವ್ಯಾಪಾರಿ ಕೂಡ ಇಂದು ಪ್ಯಾನ್ ಕಾರ್ಡ್ ಹೊಂದಿರುತ್ತಾನೆ. ಅಧಿಕಾರಿಗಳು ಕಂಪ್ಯೂಟರ್ ಮುಂದೆ ಕುಳಿತು ಕಾರ್ಡ್ ರದ್ದತಿಗೆ ಮುಂದಾಗಬಾರದು, ಫೀಲ್ಡಿಗಿಳಿದು ಸರ್ವೆ ಮಾರಿ ನಂತರ ಕ್ರಮ ತೆಗೆದುಕೊಳ್ಳಬೇಕು. ಬಿಜೆಪಿ ಅವಧಿಯಲ್ಲೂ ಅನೇಕರ ಬಿಪಿಎಲ್ ಕಾರ್ಡ್ ರದ್ದಾಗಿವೆ. ಆದರೆ ಯಾರೂ ಆಕ್ಷೇಪಣೆ ಮಾಡದ ರೀತಿಯಲ್ಲಿ ಅಳೆದು ತೂಗಿ ಕ್ರಮ ಕೈಗೊಳ್ಳಲಾಗಿತ್ತು. ಹೀಹಾಗಿಯೇ ಆಕ್ಷೇಪಣೆಗಳು ಬಂದಿರಲಿಲ್ಲ ವಿವರಿಸಿದರು.
`ಕರ್ನಾಟಕಕ್ಕೆ ಕೇಂದ್ರದ ಅನುದಾನ ಕಡಿತ' ಎಂದು ಸುಖಾಸುಮ್ಮನೇ ಆರೋಪ ಮಾಡುವುದು ಸರಿಯಲ್ಲ. ಕರ್ನಾಟಕ ಮಾತ್ರವಲ್ಲ, ದೇಶದ ಎಲ್ಲ ರಾಜ್ಯಗಳಿಗೂ ಅನುದಾನ ಕಡಿತ ಆಗಿದೆ. ಇದು ಯಾಕೆ ಎಂಬುದು ಸಿಎಂಗೆ ಗೊತ್ತಿದೆ. ರಾಜ್ಯದಲ್ಲಿ ಎದುರಾದ ಹಣಕಾಸಿನ ಮುಗ್ಗಟ್ಟು ಒಪ್ಪಿಕೊಳ್ಳದೇ ತಮ್ಮ ತಪ್ಪನ್ನು ಮರೆಮಾಚಲು ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ವಕ್ಫ ವಿಚಾರದಲ್ಲಿ ರೈತರಿಗೆ ನೋಟಿಸ್ ಕೊಟ್ಟಿರುವುದು ತಮಗೆ ಗೊತ್ತೇ ಇಲ್ಲ ಎನ್ನುತ್ತಾರೆ. ಇನ್ನೊಂದೆಡೆ ಅಧಿಕಾರಿಗಳು, ಸಚಿವರು ಸಿಎಂ ಸೂಚನೆ ಮೇರೆಗೆ ಮಾಡಿದ್ದೇವೆ ಎನ್ನುತ್ತಾರೆ. ಇಂತಹ ದ್ವಂದ್ವ ಏಕೆ ಎಂದು ಪ್ರಶ್ನಿಸಿದರು.
ವಕ್ಫ್ ಹೋರಾಟದ ವಿಚಾರವಾಗಿ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇಲ್ಲಿ ಯಾರು ಮೊದಲು ಹೋರಾಟ ಶುರು ಮಾಡಿದ್ದಾರೆ ಎಂಬುದು ಮುಖ್ಯ ಅಲ್ಲ. ಪ್ರಧಾನಿ ಮೋದಿ ಅವರು ವಕ್ಫ್ ತಿದ್ದುಪಡಿ ತರಲು ಹೊರಟಿದ್ದಾರೆ. ಅದಕ್ಕೆ ಪೂರಕ ಹೋರಾಟ ನಡೆಸಲಾಗುತ್ತಿದೆ. ಪಕ್ಷಕ್ಕೆ ರೈತರ ಹಿತ ಮುಖ್ಯವಾಗಿದೆ. ಅದಕ್ಕಾಗಿ ಮೂರು ತಂಡವಾಗಿ ರಾಜ್ಯ ಪ್ರವಾಸ ಮಾಡಲಿದ್ದೇವೆ. ರೈತರ ಪರ ಹೋರಾಟ ಮಾಡುವುದು ಪಕ್ಷದ ಅಧ್ಯಕ್ಷನಾಗಿ ನನ್ನ ಕರ್ತವ್ಯವಾಗಿದೆ. ಬಸನಗೌಡ ಪಾಟೀಲ ಯತ್ನಾಳ ಅವರು ಹೋರಾಟದಲ್ಲಿ ಇರುತ್ತಾರೆ. ಇದರಲ್ಲಿ ಕ್ರೆಡಿಟ್ ತೆಗೆದುಕೊಳ್ಳುವುದು ನನಗೆ ಮುಖ್ಯವಲ್ಲ ಎಂದು ತಿಳಿಸಿದರು ಉತ್ತರಿಸಿದರು.
ಕಾಂಗ್ರೆಸ್ ಶಾಸಕರಿಗೆ ೫೦ ಕೋಟಿ ರೂ. ನೀಡುವ ಅಗತ್ಯ ನಮಗಿಲ್ಲ. ೬೬ ಶಾಸಕರು ಇರುವ ಬಿಜೆಪಿಗೆ ಸರ್ಕಾರ ಮಾಡುವ ಅಗತ್ಯವೂ ಇಲ್ಲ. ಸಿಎಂ ಸಿದ್ದರಾಮಯ್ಯ ಅವರೇ ಸ್ವತಃ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಅದರಿಂದ ಪಾರಾಗಲು ಇಲ್ಲಸಲ್ಲದ ಆಫರ್ ಬಗ್ಗೆ ಮಾತಾಡುತ್ತಾರೆ. ಸಿಎಂ ಕುರ್ಚಿಯನ್ನೇ ಅವರು ಹರಾಜಿಗೆ ಇಟ್ಟಿದ್ದಾರೆ ಎಂದು ಕುಟುಕಿದರು.