For the best experience, open
https://m.samyuktakarnataka.in
on your mobile browser.

ಸಿದ್ದರಾಮಯ್ಯ ಜತೆಗೆ ಸರ್ಕಾರಕ್ಕೂ ಅಭದ್ರತೆ ಕಾಡುತ್ತಿದೆ

04:37 PM Oct 03, 2024 IST | Samyukta Karnataka
ಸಿದ್ದರಾಮಯ್ಯ ಜತೆಗೆ ಸರ್ಕಾರಕ್ಕೂ ಅಭದ್ರತೆ ಕಾಡುತ್ತಿದೆ

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿದಿನ ಮೂರು ವರ್ಷ ನಾನೇ ಸಿಎಂ ಅಂತ ಹೇಳುತ್ತಿರುವುದು ನೋಡಿದರೆ ಅವರಿಗೆ ಎಷ್ಟು ಅಭದ್ರತೆ ಕಾಡುತ್ತಿದೆ ಎನ್ನುವುದು ಗೊತ್ತಾಗುತ್ತದೆ. ಸಿಎಂ ಜೊತೆಗೆ ಸರ್ಕಾರವೂ ಅಭದ್ರವಾಗಿದ್ದು, ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ, ಜನರ ಪರ‌ ಕೆಲಸ ಮಾಡಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಅವರು ನವದೆಹಲಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಸರ್ಕಾರವೂ ಅಭದ್ರವಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಎಲ್ಲವೂ ನಿಂತು ಹೋಗಿದೆ. ನನಗಿರುವ ಮಾಹಿತಿಯ ಪ್ರಕಾರ ಮಹತ್ವದ ಯಾವುದೇ ಕಡತಗಳಿಗೆ ಸಹಿ ಹಾಕುತ್ತಿಲ್ಲ. ಜನರ ಪರ‌ ಕೆಲಸ ಮಾಡಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ರಾಜೀನಾಮೆ ‌ಕೊಡಬೇಕೆಂದರೆ ಕೇಂದ್ರ ಸಚಿವ ಎಚ್.‌ಡಿ. ಕುಮಾರಸ್ವಾಮಿಯವರೂ ರಾಜೀನಾಮೆ ನೀಡಬೇಕಾಗುತ್ತದೆ ಎಂದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿ.ಟಿ. ದೇವೇಗೌಡರು ಏನು ಹೇಳಿದ್ದಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರ ವಿಚಾರದಲ್ಲಿ ಅವರ ವಿರುದ್ಧ ದೂರು ಕೊಟ್ಟಾಗಲೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ, ರಾಜ್ಯಪಾಲರು ಪ್ರಾಷಿಕ್ಯೂಷನ್‌ಗೆ ಅನುಮತಿ ಕೊಟ್ಟಾಗಲೂ ಕೂಡ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹೈಕೋರ್ಟ್ ಬಹಳ ಸ್ಪಷ್ಟವಾಗಿ ಎಲ್ಲೆಲ್ಲಿ ತಪ್ಪುಗಳಾಗಿದೆ, ಎಲ್ಲಿ ಸ್ವಜನ ಪಕ್ಷಪಾತವಾಗಿದೆ ಎನ್ನುವುದು ಹೇಳಿ ತೀರ್ಪು ನೀಡಿದೆ. ಅದಾದ ಬಳಿಕ ಸಿಎಂ ತಮ್ಮ ಅಡಿಯಲ್ಲಿಯೇ ಕೆಲಸ ಮಾಡುವ ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ನಡೆಸಲು ಸೂಚಿಸುತ್ತಾರೆ ಎಂದರೆ ಅದನ್ನು ಯಾರು ಒಪ್ಪುತ್ತಾರೆ, ಮುಖ್ಯಮಂತ್ರಿಗಳಾದವರು ಕರ್ನಾಟಕದ ಜನತೆಯ ಭಾವನೆಗಳಿಗೆ ಸ್ಪಂದಿಸಬೇಕು ಎಂದರು.
ಮುಖ್ಯಮಂತ್ರಿ ‌ಸಿದ್ದರಾಮಯ್ಯ ಅವರು ಆತ್ಮಸಾಕ್ಷಿಯೇ ಅಂತಿಮ ನ್ಯಾಯಾಲಯ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರ ಆತ್ಮಸಾಕ್ಷಿಯನ್ನು ನೋಡುವವರು ಯಾರು? ಅವರ ಆತ್ಮಸಾಕ್ಷಿ ನಡೆಯಿಂದ ಗೊತ್ತಾಗಬೇಕು. ನುಡಿಯಿಂದ ಅಲ್ಲ ಎಂದು ಹೇಳಿದರು.
ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರ ವಿರುದ್ಧ ಕಾಂಗ್ರೆಸ್ ‌ನಾಯಕರು ಮಾಡಿರುವ ಆರೋಪದ ಕುರಿತು ಅಶೋಕ್ ಅವರೇ ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಅವರ ಪ್ರಕರಣಕ್ಕೂ ಸಿದ್ದರಾಮಯ್ಯ ಅವರ ಪ್ರಕರಣಕ್ಕೂ ವ್ಯತ್ಯಾಸ ಇದೆ. ಅಶೋಕ್ ಅವರು ಪ್ರಕರಣ ದಾಖಲಾಗುವ ಮುನ್ನವೇ ಜಮೀನು ವಾಪಸ್ ಕೊಟ್ಡಿದ್ದರು. ಶೇ. 70ರಷ್ಟು ಬಿಡಿಎ‌ ಇಟ್ಟುಕೊಂಡು ಹಾಗೂ ಶೇಕಡಾ 30ರಷ್ಟು ಜಮೀನು ಬಿಟ್ಟುಕೊಡುವ ವ್ಯವಸ್ಥೆ ಇತ್ತು. ಅಶೋಕ್ ಅವರ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್, ಹೈಕೋರ್ಟ್, ವಿಭಾಗೀಯ ಪೀಠಗಳಲ್ಲಿ ಅಶೋಕ್ ಅವರ ವಿರುದ್ಧ ಆಪಾದನೆಗಳು ಬಂದಿಲ್ಲ. ಇಷ್ಟಾದರೂ ಕೂಡ ಅವರು ನಾನು ನೈತಿಕತೆ ಹೊತ್ತು ರಾಜೀನಾಮೆ ಕೊಡುತ್ತೇನೆ, ನೀವೂ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದ್ದಾರೆ ಎಂದರು.

Tags :