For the best experience, open
https://m.samyuktakarnataka.in
on your mobile browser.

ಸಿದ್ದರಾಮಯ್ಯ ನೀರೋನಂತೆ

05:41 PM Mar 10, 2024 IST | Samyukta Karnataka
ಸಿದ್ದರಾಮಯ್ಯ ನೀರೋನಂತೆ

ಬೆಂಗಳೂರು: ʻರೋಮ್ ಹೊತ್ತಿ ಉರಿಯುತ್ತಿದ್ದರೆ ಅಲ್ಲಿನ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದʼ. ಕರ್ನಾಟಕದಲ್ಲಿ ಜನರು ಬರದಿಂದ ಕಂಗೆಟ್ಟಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀರೋನಂತೆಯೇ ವರ್ತಿಸುತ್ತಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ರಾಜ್ಯದ ಬರ ಪರಿಸ್ಥಿತಿ ಹಾಗೂ ಜನರ ಸಂಕಷ್ಟವನ್ನು ಅಣಕಿಸುವಂತೆ ಸಿದ್ದರಾಮಯ್ಯ ಅವರ ಸರ್ಕಾರ ವರ್ತಿಸುತ್ತಿದೆ. ಜನರ ತೆರಿಗೆ ಹಣದಲ್ಲಿ ಗ್ಯಾರಂಟಿ ಸಮಾವೇಶಗಳನ್ನು ಮಾಡುತ್ತಾ ಪ್ರಚಾರದ ಜಾತ್ರೆಯಲ್ಲಿ ಮುಳುಗಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಎಕ್ಸ್ ಖಾತೆಯ ಪೋಸ್ಟ್​​ನಲ್ಲಿ ಆರೋಪಿಸಿದ್ದಾರೆ.
ʻರೋಮ್ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ! ಸಿದ್ದರಾಮಯ್ಯನವರೇ ನೀವೇ ನಮ್ಮ ನೀರೋ! ರಾಜ್ಯದ ಪಾಲಿನ ಝೀರೋ! ನಿಮಗೆ ಜನರ ಚಿಂತೆ ಇಲ್ಲ, ಚುನಾವಣೆ ಚಿಂತೆಯಷ್ಟೇ. ಅದೇ ನಿಮ್ಮ ಪಕ್ಷ, ಸರ್ಕಾರಕ್ಕೆ ಚಿತೆಯಾಗಲಿದೆ. ಎಂದಿದ್ದಾರೆ.
ಬರಪೀಡಿತ ರೈತರಿಗೆ ಕೊಡಲು ಈ ನಿಮ್ಮ ಸರ್ಕಾರಕ್ಕೆ ₹2000 ಗತಿ ಇಲ್ಲ. ಆದರೆ, ಗ್ಯಾರಂಟಿ ಸಮಾವೇಶಗಳಿಗೆ ಬೇಕಾದಷ್ಟು ಹಣವಿದೆ. ತುರ್ತು ಉದ್ದೇಶಕ್ಕೆ ಇರಿಸಿರುವ ಜಿಲ್ಲಾಧಿಕಾರಿ, ತಹಶೀಲ್ದಾರ್​​ಗಳ ಪಿಡಿ ಖಾತೆಗೆ ನಿಮ್ಮ ಸರ್ಕಾರ ಕನ್ನ ಹಾಕಿದೆ. ಇದೆಂಥಾ ಸಿದ್ದನಾಮಿಕ್ಸ್ ಸಿದ್ದರಾಮಯ್ಯನವರೇ?'' ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದ್ದಾರೆ.
ಒಂದು ವರ್ಷದಿಂದ ನಿಮ್ಮ ಇಡೀ ಸರ್ಕಾರದ ಬದುಕು ಜಾಹೀರಾತು ಮೇಳದಲ್ಲೇ ಮುಗಿದಿದೆ. ನಿಮ್ಮ ಹಿಂದೆ, ಮುಂದೆ ಸುತ್ತುವ ಪಟಾಲಂಗಳ ಏಜೆನ್ಸಿಗಳ ಮೂಲಕ 'ಜಾಹೀರಾತು ಜಾತ್ರೆ'ಯನ್ನು ಎಗ್ಗಿಲ್ಲದೆ ಮಾಡುತ್ತಿದ್ದೀರಿ. ಬರದಲ್ಲಿ ಬೆಂದು ಕಣ್ಣೀರು ಹಾಕುತ್ತಿರುವ ಜನರ ಹಣವನ್ನು ಹೀಗೆ ಪ್ರಚಾರದ ತೆವಲಿಗೆ ಸುರಿಯುತ್ತಿರುವ ನಿಮಗೆ ನಾಚಿಕೆ ಆಗುವುದಿಲವೇ?'' ಎಂದು ಹೆಚ್​ಡಿಕೆ ಟೀಕಿಸಿದ್ದಾರೆ..