ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಹೇಳುವುದಿಲ್ಲ
ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟರೆ ಅವರ ಸೀಟಿಗೆ ಯಾರು ಕೂಡಲಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಹೀಗಾಗಿ ಅವರು ರಾಜೀನಾಮೆ ಕೊಡಲಿ ಎಂದು ನಾನು ಹೇಳುವುದಿಲ್ಲ ಎಂದು ಸಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಹೇಳಿದರು.
ಬಳ್ಳಾರಿಯ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ ಏನಾಗಿದೆ? ಏನಾಗಿಲ್ಲ ಎನ್ನುವ ವಾದ ಬಿಟ್ಟು, ಪಡೆದ ಎಲ್ಲ ಸೈಟುಗಳನ್ನು ಕೂಡಲೇ ವಾಪಸ್ಸು ನೀಡಿ ತಪ್ಪು ತಿದ್ದಿಕೊಳ್ಳಬೇಕು. ಬದಲಾಗಿ ನ್ಯಾಯಾಲಯದಲ್ಲಿ ಅರ್ಜಿ ಹಾಕುವುದು, ಕಾನೂನು ಹೋರಾಟ ಮಾಡುತ್ತೇವೆ ಎನ್ನುವುದನ್ನು ಕೈ ಬಿಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಸಲಹೆಗಾರರನ್ನು ಇಟ್ಟುಕೊಳ್ಳಬೇಕು. ಇಂತಹ ಪ್ರಕರಣಗಳಲ್ಲಿ ಉತ್ತಮ ಸಲಹೆ ನೀಡುವವರನ್ನು ನಂಬಬೇಕೆ ವಿನಃ ದಾರಿ ತಪ್ಪಿಸುವವರಿಂದ ದೂರ ಇರಬೇಕು ಎಂದು ಹೇಳಿದರು.
ಹೋರಾಟ: ಬಳ್ಳಾರಿ ಸೇರಿ ಎಲ್ಲಿಯೇ ಅಕ್ರಮ ಗಣಿಗಾರಿಕೆ ನಡೆಯಲಿ ಅದರ ವಿರುದ್ದ ಹೋರಾಡುತ್ತೇವೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಓಬಳಾಪೂರಂ ನಲ್ಲಿ ಮರು ಆರಂಭಿಸಲು ಉದ್ದೇಶಿಸಿದ್ದ ಗಣಿಗಾರಿಕೆ ಕಂಪನಿ ಆರಂಭಕ್ಕೆ ಕಾನೂನು ಹೋರಾಟ ಮಾಡಿದ್ದೇವೆ. ಗಣಿಬಾಧಿತ ಪ್ರದೇಶದ ಅಭಿವೃದ್ದಿಗೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳಲು ಬಿಡುವುದಿಲ್ಲ. ಕೆಲವು ಚುನಾಯಿತರು ಈ ಮೊತ್ತವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮಾರ್ಗಸೂಚಿ ಬಿಟ್ಟು ಬೇರೆ ಕಡೆ ಹಣ ಬಳಕೆಗೆ ನಮ್ಮ ಆಕ್ಷೇಪವಿದೆ. ಈ ಬಗ್ಗೆ ಹೋರಾಟ ನಡೆಸುತ್ತೇವೆ ಎಂದರು.