ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಒಳಿತು
ಮಂಗಳೂರು: ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಉಚಿತ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾನೂನು ಹೋರಾಟ ಮಾಡಲು ಮುಖ್ಯಮಂತ್ರಿಗೆ ಅವಕಾಶ ಇದೆ. ಆದರೆ ಸಾರ್ವಜನಿಕರ ದೃಷ್ಟಿಯಲ್ಲಿ ರಾಜೀನಾಮೆ ನೀಡುವುದೇ ಸರಿ ಎಂದರು.
ಸಿದ್ದರಾಮಯ್ಯ ಅವರು ಅವರು ತಾವೇನೂ ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ ಈಗ ಆರೋಪಗಳಿಗೆ ಸಂಬಂಧಿಸಿ ಪುರಾವೆಗಳು ಇವೆ ಎಂದು ಹೈಕೋರ್ಟ್ ಹೇಳಿದೆ. ಪ್ರಕರಣದ ತನಿಖೆ ಮಾಡುವ ಏಜೆನ್ಸಿ ಯಾವ ನಿರ್ಣಯಕ್ಕೆ ಬರುತ್ತವೆ ಎಂಬುದರ ಮೇಲೆ ಪ್ರಕರಣ ಅಂತ್ಯ ಕಾಣುತ್ತದೆ. ಅದು ಆಮೇಲಿನ ವಿಷಯ. ಆದರೆ ಸದ್ಯ ಗಂಭೀರವಾದ ಆರೋಪ ಬಂದ ಹಿನ್ನೆಲೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.
ಯಾವ ಸಂಸ್ಥೆಯಿಂದ ತನಿಖೆ ನಡೆಸಿದರೆ ಉತ್ತಮ ಎಂದು ನಾನು ಹೇಳುವುದಿಲ್ಲ, ಅದು ಸರ್ಕಾರಕ್ಕೆ ಬಿಟ್ಟ ವಿಚಾರ. ಸಿಬಿಐ ಅಥವಾ ಲೋಕಾಯುಕ್ತ ಎಂದು ನಾನು ಹೇಳಲು ಹೋಗುವುದಿಲ್ಲ. ಯಾರಿಗೆ ಕೊಟ್ಟರೂ ಪ್ರಾಮಾಣಿಕ ತನಿಖೆ ಮಾಡಬಹುದು. ಸಿದ್ದರಾಮಯ್ಯನವರು ಆರೋಪಿತನಲ್ಲವೆಂದು ತೀರ್ಪು ಬಂದಲ್ಲಿ ಮತ್ತೆ ಸಿಎಂ ಆಗಬಹುದು. ಹೈಕೋರ್ಟ್ ತೀರ್ಪು ಬರುವ ಬರುವ ಮೊದಲು ನಾನು ತಪ್ಪೇ ಮಾಡಿಲ್ಲ ಎಂದು ಹೇಳಿದರು. ಈಗ ಮೇಲ್ನೋಟಕ್ಕೆ ತಪ್ಪು ಕಂಡು ಬಂದಿದೆ ಎಂದು ಕೋರ್ಟ್ ಹೇಳಿದೆ. ಹೀಗಾಗಿ ಸಿಎಂ ಹೇಳಿದ್ದು ಸರಿ ಇಲ್ಲ ಎಂದಾಯ್ತಲ್ಲ ಎಂದರು.