ಸಿದ್ದರಾಮಯ್ಯ ೨ನೇ ಟಿಪ್ಪು
ವಿಜಯಪುರ: ಹಿಜಾಬ್ ನಿಷೇಧ ವಾಪಸ್ ಪಡೆವುದಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ೨ನೇ ಟಿಪ್ಪು ಸುಲ್ತಾನ್ ಆಗುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಸಮಾನತೆ ಇರಲಿ ಎನ್ನುವ ಉದ್ದೇಶದಿಂದಲೇ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸಮವಸ್ತ್ರ ಕಾಯ್ದೆ ಮಾಡಿದ್ದಾರೆ. ಶಾಲೆಗಳಲ್ಲಿ ವಿದ್ಯಾರ್ಥಿಗಳು ತಮಗೆ ತಿಳಿದಿದ್ದನ್ನೇ ಧರಿಸಿ ಬರುವುದಾದರೆ ನಾಳೆ ಹಿಂದೂ ಸಮುದಾಯದ ವಿದ್ಯಾರ್ಥಿಗಳು ಕೇಸರಿ ಶಾಲು, ಹಣೆಗೆ ತಿಲಕ ಇಟ್ಟುಕೊಂಡು ಬರುತ್ತಾರೆ. ಇದು ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ. ಹಿಜಾಬ್ ನಿಷೇಧ ಹಿಂಪಡೆಯುವುದು ಸೂಕ್ತ ನಿರ್ಧಾರವಲ್ಲ ಎಂದು ಅಭಿಪ್ರಾಯಪಟ್ಟರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮುಸ್ಲಿಂರ ತುಷ್ಟೀಕರಣಕ್ಕೆ ನಿಂತಿದ್ದಾರೆ. ಮುಸ್ಲಿಂರು ಇವರಿಗೆ ಮತ ಚಲಾಯಿಸ್ತಾರೆ ಎಂದುಕೊಂಡಿದ್ದಾರೆ. ಸಿದ್ದರಾಮಯ್ಯನವರ ಓಲೈಕೆ ರಾಜಕಾರಣ ಅತೀಯಾಗಿದೆ. ಅವರಿಗೆ ಅಂತ್ಯ ಕಾಲ ಬಂದಿದೆ. ೨೦೨೪ರಲ್ಲಿ ಮತ್ತೆ ನಮ್ಮ ಸರ್ಕಾರ ಬಂದ ಬಳಿಕ ಏಕರೂಪ ನಾಗರಿಕ ಕಾನೂನು ಬರುತ್ತದೆ ಎಂದರು.