ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಿದ್ದು ಗ್ಯಾರಂಟಿ ವಿರುದ್ಧ ಮೋದಿ ಗ್ಯಾರಂಟಿ!

02:15 AM Feb 26, 2024 IST | Samyukta Karnataka

ಮತದಾರರ ಬುದ್ಧಿ-ಮನಸ್ಸುಗಳನ್ನೇ ನೇರವಾಗಿ ತಲುಪಬಲ್ಲ ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ, ಶಕ್ತಿ ಮತ್ತು ಅನ್ನಭಾಗ್ಯಗಳೆಂಬ ಪಂಚತತ್ವಗಳನ್ನಾಧರಿಸಿದ ಜನಾಕರ್ಷಕ ಕೊಡುಗೆಗಳ ಮೂಲಕ ಮೊದಲು ೨೦೨೩ರ ಮೇನಲ್ಲಿನ ವಿಧಾನಸಭೆ ಚುನಾವಣೆಯನ್ನು ಗೆದ್ದು ಅಧಿಕಾರದ ಗದ್ದುಗೆಗೇರಿದ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಇದೀಗ ೨೦೨೪ರ ಲೋಕಸಭಾ ಚುನಾವಣೆಯಲ್ಲೂ ಅದೇ ತಂತ್ರವನ್ನೇ ನಂಬಿ ಅತ್ಯುತ್ಸಾಹದಿಂದ ಮುನ್ನುಗ್ಗುತ್ತಿದೆ.
ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ೬ ತಿಂಗಳುಗಳಲ್ಲೇ ಕರಾರುವಾಕ್ಕಾಗಿ ಈಡೇರಿಸಿಬಿಟ್ಟಿದ್ದೇವೆಂದು ಹೋದಲ್ಲಿ-ಬಂದಲ್ಲಿ ಸಾರ್ವಜನಿಕ ವೇದಿಕೆಗಳಲ್ಲೂ ಹಾಗೂ ವಿಧಾನಮಂಡಲದ ಕಲಾಪಗಳಲ್ಲೂ ಎದೆ ತಟ್ಟಿಕೊಂಡು ಸಾರುತ್ತಾ ಆತ್ಮವಿಶ್ವಾಸದ ನಗೆ ಬೀರುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್. ಖಚಿತ ಗೆಲುವಿನ ಈ ಪಂಚಸೂತ್ರಗಳ ಪವಾಡ ಕಂಡು ಅಕ್ಷರಶಃ ಮೂಕವಿಸ್ಮಿತರಾದ ಕಾಂಗ್ರೆಸ್ ಹೈಕಮಾಂಡಿನ ಹಾಲಿ ಅಧಿನಾಯಕ ರಾಹುಲ್ ಗಾಂಧಿಯವರೋ ಈಗಾಗಲೇ ತಮ್ಮ ಎರಡನೇ ಸುತ್ತಿನ ನ್ಯಾಯ ಯಾತ್ರೆಯುದ್ದಕ್ಕೂ ಇದೇ ಕರ್ನಾಟಕ ಮಾಡೆಲ್ಲನ್ನೇ ತಮ್ಮ ಪಾರ್ಟಿಯ ರಾಷ್ಟ್ರೀಯ ಪ್ರಣಾಳಿಕೆ ಎಂದೇ ಬಿಂಬಿಸುತ್ತಾ ನಡೆದಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವಂತೂ ೨೦೨೩ರ ಈ ಗ್ಯಾರಂಟಿ ಕಾರ್ಡ್ ಜಯದ ನಂತರ ತಾನೊಂದು ಪ್ರಾದೇಶಿಕ ಪಕ್ಷವೇನೋ ಎಂಬಷ್ಟರ ಮಟ್ಟಿಗೆ ರೂಪಾಂತರಗೊಂಡು, ನೆರೆಯ ತಮಿಳ್ನಾಡಿನ ದ್ರಾಮುಕ ಪಕ್ಷಗಳ ವರಸೆಗಳನ್ನೇ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಅದರಲ್ಲೂ ತನ್ನ ಪರಮಶತ್ರು ನರೇಂದ್ರ ಮೋದಿಯವರ ವಿರುದ್ಧ ದಿನಂಪ್ರತಿ ಒಂದಿಲ್ಲೊಂದು ವಾಗ್ಬಾಣದ ಮೂಲಕ ಪ್ರಯೋಗಿಸಲಾರಂಭಿಸಿಬಿಟ್ಟಿದೆ. ಸನಾತನ ಧರ್ಮದ ಮೂದಲಿಕೆ, ಅಯೋಧ್ಯೆಯ ರಾಮಮಂದಿರ ಕುರಿತಾದ ಗೇಲಿಮಾತು, ತೆರಿಗೆ ಸಂಪನ್ಮೂಲ ಹಂಚಿಕೆಯಲ್ಲಿ ರಾಜ್ಯದ ಪಾಲಿಗೆ ಅನ್ಯಾಯ, ಪ್ರತ್ಯೇಕ ದಕ್ಷಿಣ ಭಾರತ ರಾಷ್ಟ್ರ ಬೇಡಿಕೆಯ ಬೆದರಿಕೆ, ರಾಷ್ಟ್ರೀಯ ಶಿಕ್ಷಣ ನೀತಿಯ ತಿರಸ್ಕಾರ ಹಾಗೂ ಪ್ರತ್ಯೇಕ ರಾಜ್ಯ ಶಿಕ್ಷಣ ನೀತಿಯ ಅನುಷ್ಠಾನ. ಹೀಗೆ ಚುನಾವಣೆ ಕಾವೇರುತ್ತಿದ್ದಂತೆಯೇ ದಿನಕ್ಕೊಂದು ತಗಾದೆ ಎತ್ತಿಕೊಂಡು ನಾಡಿನ ಜನತೆಯಲ್ಲಿ ಮೋದಿ ಸರ್ಕಾರ ಮತ್ತವರ ಪಕ್ಷದ ವಿರುದ್ಧ ತಿರಸ್ಕಾರ ಮೂಡಿಸುವ ವಾಕ್‌ಪ್ರಹಾರ.
ಸ್ವತಂತ್ರ ಭಾರತದ ಇತಿಹಾಸದಲ್ಲೇ ಯಾವುದೇ ರಾಜ್ಯದ ಆಯ-ವ್ಯಯದಲ್ಲೂ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಬತ್ತಿಗೆ ರೂ.೩೬,೪೦೦ ಕೋಟಿಗಳಷ್ಟು ದಾಖಲೆ ಮೊತ್ತವನ್ನು ಬಹುಶಃ ಯಾರೂ ನೀಡಿರಲಾರರು. ಅಂತಹದ್ದೊಂದು ಅಭೂತಪೂರ್ವ ದಾಖಲೆ ಕಳೆದ ವಾರವಷ್ಟೇ ಸಿದ್ದರಾಮಯ್ಯ ಮಂಡಿಸಿ ಪಾಸುಮಾಡಿಸಿಕೊಳ್ಳಲಿರುವ ಕರ್ನಾಟಕ ಸರ್ಕಾರದ್ದು. ಸುಮಾರು ೧.೧೭ ಕೋಟಿ ಕುಟುಂಬಗಳ ಯಜಮಾನಿಯರ ಬ್ಯಾಂಕ್ ಖಾತೆಗೆ ನೇರವಾಗಿ ತಿಂಗಳಿಗೆ ೨ ಸಾವಿರ ರೂಪಾಯಿಗಳ ಸಂದಾಯವಾಗುತ್ತಿದೆ ಎಂದರೆ ಪ್ರತಿ ಮನೆಗೆ ೪ ಓಟುಗಳಂತೆ ಕನಿಷ್ಠ ೪ ಕೋಟಿ ಬಡ ಮತದಾರರೀಗಾಗಲೇ ಕಾಂಗ್ರೆಸ್ ಸರ್ಕಾರದ ಋಣಭಾರದಲ್ಲಿದ್ದಾರೆಂದೇ ಲೆಕ್ಕ ಹಾಕಿದ್ದಾರೆ ರಾಜ್ಯ ಕಾಂಗ್ರೆಸ್ ನಾಯಕರು. ಇನ್ನು ಮಹಿಳೆಯರ ಉಚಿತ ಬಸ್ ಪ್ರಯಾಣ ಮತ್ತು ಅವರ ಮನೆಗಳಿಗೆ ಉಚಿತ ವಿದ್ಯುತ್ ಪೂರೈಕೆಯ ಉಪಕಾರದ ಸ್ಮರಣೆ ಕೂಡ ಮುಂಬರುವ ಲೋಕಸಭಾ ಚುನಾವಣೆಯ ಹೆಚ್ಚುವರಿ ಬೋನಸ್ ಆದೀತು. ಜೊತೆಗೆ ಇದೀಗ ತಾನೇ ೨೫೦೦೦ ಕುಟುಂಬಗಳ ಪದವೀಧರ ಯುವಕರಿಗೆ ಮಾಸಿಕ ರೂ.೩೦೦೦/- ನಿರುದ್ಯೋಗ ಭತ್ಯೆ ನೀಡಿಕೆಯ ಅನುಗ್ರಹ.
ಓಟು ಬ್ಯಾಂಕ್ ರಾಜಕಾರಣದ ಹೆಸರಿನಲ್ಲಿ ಸುಖಾಸುಮ್ಮನೆ ಖಾಸಗಿಯಾಗಿ ಹಣ ಹಂಚಿ ಓಟು ಖರೀದಿಸುವ ಬದಲು ಸರ್ಕಾರದ ಖಜಾನೆಯಿಂದಲೇ ವಿವಿಧ ಬಗೆಯ ಗ್ಯಾರಂಟಿಗಳನ್ನು ವಿತರಿಸುತ್ತಾ ಬಂದಲ್ಲಿ, ಅದಕ್ಕಿಂತ ಸುಲಭೋಪಾಯದ ತಂತ್ರ ಯಾವುದಾದೀತು ಹೇಳಿ? ಆದರೇನಂತೆ ಕರ್ನಾಟಕದ ಕಾಂಗ್ರೆಸ್ಸಿಗರು ಯಶಸ್ವಿಯಾಗಿ ಜಾರಿಗೊಳಿಸಿದ ಈ ಗ್ಯಾರಂಟಿ ಕಾರ್ಡ್ ಎಂಬ ಜನಾಕರ್ಷಣೆಯ ಪೈಪೋಟಿಗಿಳಿಯಲು ಭಾಜಪದ ಸರ್ವೋಚ್ಚ ನಾಯಕ ಪ್ರಧಾನಿ ಮೋದಿ ಸುತಾರಾಂ ತಯಾರಿಲ್ಲ. ಓರ್ವ ಗುಜರಾತಿ ಬನಿಯಾ ದೃಷ್ಟಿಕೋನದಿಂದಷ್ಟೇ ಅಲ್ಲ, ಮೋದಿಗೆ ಅವರ ಆತ್ಮಸಾಕ್ಷಿಯೇ ಇಂತಹ ಸುಲಭದ ಹಾದಿಯಲ್ಲಿ ಸಾಗಲು ಅನುಮತಿಸುತ್ತಿಲ್ಲ. ವಿಶ್ವಪ್ರಸಿದ್ಧ ಅರ್ಥಶಾಸ್ತ್ರಜ್ಞರು ನೋಟು ಪ್ರಿಂಟ್ ಮಾಡಿ ವಿತರಿಸಿ ಎಂದು ಸಲಹೆ ನೀಡಿದರೂ ಅದು ದಿವಾಳಿತನದ ರಹದಾರಿ ಎಂದು ಮೋದಿ ಭಾವಿಸುತ್ತಾರೆ.
ನರೇಂದ್ರ ಮೋದಿಯವರ ಗ್ಯಾರಂಟಿ ಯಾವುದೆಂದರೆ ಕಳೆದ ೧೦ ವರ್ಷಗಳಿಂದಲೂ ಅವರು ಪ್ರದರ್ಶಿಸುತ್ತಾ ಬಂದ ಕ್ರಿಯಾಶಾಲಿ ನಾಯಕತ್ವ, ಭ್ರಷ್ಟಾಚಾರ ಮುಕ್ತ ದಕ್ಷ ಆಡಳಿತ ಮತ್ತು ಚುನಾವಣಾ ಲೆಕ್ಕಾಚಾರಗಳಿಲ್ಲದ ದಿಟ್ಟ ನಿರ್ಧಾರ. ಅವರ ಈ ವಿಶಿಷ್ಟ ಕಾರ್ಯವೈಖರಿಗೆ ಎರಡೇ ಎರಡು ಮಾರ್ಗದರ್ಶಿ ಸೂತ್ರಗಳೂ ಉಂಟು. ಒಂದು ಇನ್‌ಕ್ಲೂಸಿವ್ ಡೆವೆಲಪ್‌ಮೆಂಟ್- ಸರ್ವೋದಯ ಸಿದ್ಧಾಂತ, ಮತ್ತೊಂದು ಲಾಸ್ಟ್ ಮೈಲ್ ಡೆಲಿವರಿ - ಅಂತ್ಯೋದಯ ತತ್ವ.
ನೋಟ್ ಬ್ಯಾನ್, ಜಿಎಸ್‌ಟಿ, ಲಾಕ್‌ಡೌನ್, ಜನಧನ್ ಅಕೌಂಟ್, ಡಿಬಿಟಿ, ಮುದ್ರಾ ಸ್ಕೀಮ್, ಕಿಸಾನ್ ಸಮ್ಮಾನ್, ಆರ್ಟಿಕಲ್ ೩೭೦ ರದ್ದತಿ-ಹೀಗೆ ಒಂದಾದ ಮೇಲೊಂದರಂತೆ ಸಾಗಿಬಂದ ಮೋದಿಯ ಚಲನಶೀಲತೆ ಮತ್ತು ದಕ್ಷತೆಯೇ ಬಹುಶಃ ಅವರ ಗ್ಯಾರಂಟಿ ಕಾರ್ಡ್.

Next Article