ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಿದ್ದು ಭವಿಷ್ಯ ಇಂದು ನಿರ್ಧಾರ

04:28 AM Sep 24, 2024 IST | Samyukta Karnataka

ಬೆಂಗಳೂರು: ಮುಡಾ ಹಗರಣದಲ್ಲಿ ತನಿಖೆ ನಡೆಸಲು ರಾಜ್ಯಪಾಲರು ಅನುಮತಿ ನೀಡಿರುವ ಕ್ರಮವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿಯ ಕುರಿತು ವಿಚಾರಣೆ ನಡೆಸಿರುವ ಹೈಕೋರ್ಟ್ ಸೆಪ್ಟೆಂಬರ್ ೨೪ರಂದು ಮಧ್ಯಾಹ್ನ ೧೨ಕ್ಕೆ ತೀರ್ಪು ಪ್ರಕಟಿಸಲಿದೆ. ಈ ತೀರ್ಪಿನ ಮೇಲೆ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಮೈಸೂರಿನ ಕೆಸರೆ ಗ್ರಾಮದಲ್ಲಿ ೩.೧೬ ಎಕರೆ ಜಮೀನಿಗೆ ಬದಲಿ ನಿವೇಶನ ನೀಡಿರುವ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಪತ್ನಿಯ ಹೆಸರಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಟಿ.ಜೆ.ಅಬ್ರಹಾಂ, ಸಿ.ಎಸ್.ಪ್ರದೀಪ್‌ಕುಮಾರ್ ಮತ್ತು ಸ್ನೇಹಮಯಿ ಕೃಷ್ಣ ಅವರು ನೀಡಿದ ದೂರಿನ ಆಧಾರದ ಮೇಲೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ತೀರ್ಪು ಪ್ರಕಟಿಸಲಿದೆ. ಸಿದ್ದರಾಮಯ್ಯ ಪರ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರೂ ಆದ ಸುರ್ಪ್ರಿಂನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಹೈಕೋರ್ಟ್‌ನ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೂರುದಾರರ ಪರ ಸುಪ್ರಿಂಕೋರ್ಟ್‌ನ ಹಿರಿಯ ವಕೀಲ ಮಣಿಂದರ್ ಸಿಂಗ್, ಮಾಜಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹೈಕೋರ್ಟ್‌ ಹಿರಿಯ ವಕೀಲ ಕೆ.ಜಿ.ರಾಘವನ್, ವಕೀಲ ರಂಗನಾಥ್ ರೆಡ್ಡಿ, ಲಕ್ಷ್ಮೀ ಐಯ್ಯರ್, ರಾಜ್ಯ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದರು.
ಕೆರಳಿದ ಕುತೂಹಲ: ಸಿಎಂ ಸಿದ್ದರಾಮಯ್ಯ ಅರ್ಜಿ ಕುರಿತ ತೀರ್ಪು ಕೇವಲ ರಾಜ್ಯದಲ್ಲಿ ಮಾತ್ರ ವಲ್ಲದೇ ರಾಷ್ಟ್ರದ ರಾಜಧಾನಿ ದೆಹಲಿಯಲ್ಲೂ ದೊಡ್ಡ ಮಟ್ಟದಲ್ಲಿ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ರಾಷ್ಟ್ರೀಯ ವರಿಷ್ಠರು ಮಾತ್ರವಲ್ಲದೇ ದೇಶದ ನಾನಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಮುಖ್ಯಸ್ಥರು ಕೂಡ ಕರ್ನಾಟಕ ಹೈಕೋರ್ಟ್ ತೀರ್ಪು ಏನಾಗಲಿದೆ ಎಂದು ಕಾಯುತ್ತಿದ್ದಾರೆ.

ಸಿದ್ದರಾಮಯ್ಯ ಪರ ವಕೀಲರ ವಾದ ಏನು?
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ ೧೭ಎ ಅಡಿಯಲ್ಲಿ ಖಾಸಗಿ ವ್ಯಕ್ತಿಗಳ ದೂರು ಆಧರಿಸಿ ತನಿಖೆಗೆ ಅನುಮತಿ ನೀಡಲು ಅವಕಾಶ ಇಲ್ಲ. ದೂರುದಾರರ ವಿಚಾರಣೆ ನಡೆಸುವ ಅಧಿಕಾರವೂ ಇಲ್ಲ. ರಾಜ್ಯಪಾಲರು ಸಚಿವ ಸಂಪುಟ ಸಭೆಯ ನಿರ್ಣಯದ ವಿರುದ್ಧ ತೀರ್ಮಾನ ತೆಗೆದುಕೊಳ್ಳುವಂತಿಲ್ಲ. ಒಟ್ಟಾರೆ ೩ ದೂರು ಬಂದಿದ್ದರೂ ಒಂದೇ ಅರ್ಜಿಯ ಆಧಾರದಲ್ಲಿ ನೋಟಿಸ್ ನೀಡಲಾಗಿದೆ. ತನಿಖೆಗೆ ಅನುಮತಿ ನೀಡುವಾಗ ಯಾವ ಕಾರಣಕ್ಕೆ ಎಂಬುದನ್ನು ರಾಜ್ಯಪಾಲರು ತಿಳಿಸಿಲ್ಲ. ಜಮೀನನ್ನು ೧೯೯೭ರಲ್ಲೇ ಡಿನೋಟಿಫಿಕೇಶನ್ ಮಾಡಿದ್ದರೂ ಅಕ್ರಮವಾಗಿ ಬಡಾವಣೆ ನಿರ್ಮಿಸಲಾಗಿದೆ. ಡಿನೋಟಿಫಿಕೇಶನ್‌ಗೂ ಸಿದ್ದರಾಮಯ್ಯ ಅವರಿಗೂ ಸಂಬಂಧವೇ ಇಲ್ಲ. ಮಲ್ಲಿಕಾರ್ಜುನಸ್ವಾಮಿ ಅವರು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಅರಿಷಿಣ-ಕುಂಕುಮ ನೆಪದಲ್ಲಿ ಭೂಮಿ ದಾನವಾಗಿ ನೀಡಿದ್ದು, ಈ ಜಮೀನಿಗೆ ಬದಲಿ ನಿವೇಶನವನ್ನು ಮುಡಾ ನೀಡಿದ್ದರೂ ಅದರಲ್ಲಿ ಸಿದ್ದರಾಮಯ್ಯ ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ ಹಾಗೂ ಪ್ರಭಾವ ಬೀರಿಲ್ಲ. ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಇಲ್ಲ.

ರಾಜ್ಯಪಾಲರ ಪರ ವಕೀಲರ ಸಮರ್ಥನೆ ಏನು?
ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಾಗ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸಾಕಷ್ಟು ಸಮರ್ಪಕ ಮತ್ತು ವಿಸ್ತೃತವಾಗಿಯೇ ವಿವೇಚನಾಧಿಕಾರ ಬಳಕೆ ಮಾಡಿದ್ದಾರೆ. ದೂರಿನ ಅಂಶಗಳನ್ನು ರಾಜ್ಯಪಾಲರು ಸಮಗ್ರವಾಗಿ ಪರಿಶೀಲನೆಗೆ ಒಳಪಡಿಸಿದ್ದಾರೆ ಹಾಗೂ ಮೇಲ್ನೋಟಕ್ಕೆ ಅಪರಾಧಿಕ ಕೃತ್ಯಗಳು ನಡೆದಿರುವುದು ಕಂಡುಬಂದಿರುವದನ್ನು ಪರಿಗಣಿಸಿದ್ದಾರೆ. ಸೆಕ್ಷನ್ ೧೭ಎ ಹಾಗೂ ಸೆ.೧೯ರ ಅಡಿಯಲ್ಲಿ ರಾಜ್ಯಪಾಲರಿಗೆ ಅಧಿಕಾರ ಮತ್ತು ಕರ್ತವ್ಯಗಳನ್ನು ಸೂಚಿಸಲಾಗಿದೆ. ರಾಜ್ಯಪಾಲರು ಸಚಿವ ಸಂಪುಟದ ಸಲಹೆಯನ್ನು ಪರಿಗಣಿಸಬೇಕೆಂಬ ವಾದದಲ್ಲಿ ಹುರುಳಿಲ್ಲ. ಸಿಎಂ ಸೂಚನೆ ಮೇರೆಗೆ ಮತ್ತೊಬ್ಬ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಮೇಲೆ ಸಿಎಂ ಪ್ರಭಾವ ಇದ್ದೇ ಇರುತ್ತದೆ. ಪ್ರಕರಣದಲ್ಲಿ ಇಡೀ ಸಚಿವ ಸಂಪುಟ ವಿವೇಚನೆ ಪ್ರದರ್ಶಿಸಿಲ್ಲ. ಅಡ್ವೋಕೇಟ್ ಜನರಲ್, ಮುಖ್ಯ ಕಾರ್ಯದರ್ಶಿ ಅಭಿಪ್ರಾಯವನ್ನು ಯಥಾವತ್ತಾಗಿ ಸಚಿವ ಸಂಪುಟ ತನ್ನದೇ ನಿರ್ಣಯ ಎಂಬಂತೆ ಟಂಕಿಸಿದೆ. ಎಜಿ, ಸಿಎಸ್ ಮತ್ತು ಸಂಪುಟದ ನಿರ್ಣಯವನ್ನು ಸಿಎಂ ಕೂಡ ಕಾಪಿ ಪೇಸ್ಟ್ ಮಾಡಿ, ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

ದೂರುದಾರರ ಪರ ವಕೀಲರ ಆಕ್ಷೇಪ ಏನು?
ಮುಡಾ ೧೯೯೨ರಲ್ಲಿ ೩.೧೬ ಎಕರೆ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿತ್ತು. ೧೯೯೭ರಲ್ಲಿ ಅದು ಪೂರ್ಣಗೊಂಡಿತ್ತು ಮತ್ತು ಮುಡಾ ೧೯೯೮ರಲ್ಲಿ ಸ್ವಾಧೀನ ಮಾಡಿಕೊಂಡು ಅದರ ಮಾಲೀಕ ಎನಿಸಿಕೊಂಡಿತ್ತು ಎಂಬುದಕ್ಕೆ ದಾಖಲೆಗಳಿವೆ. ೨೦೦೧ರಿಂದ ೨೦೦೪ರವರೆಗೆ ಮುಡಾ ಇದೇ ಜಮೀನಿನಲ್ಲಿ ನಿವೇಶನ ಅಭಿವೃದ್ಧಿಪಡಿಸಿ ಮಾರಾಟ ಕೂಡ ಮಾಡಿದೆ. ಆದರೆ ೨೦೦೪ರಲ್ಲಿ ಇದನ್ನು ಕೃಷಿ ಭೂಮಿ ಎಂದು ನಮೂದಿಸಿ ಅರ್ಜಿದಾರರ ಬಾಮೈದ ಜಮೀನು ಖರೀದಿಸಿದ್ದಾರೆ. ಒಮ್ಮೆ ಮುಡಾ ಸ್ವಾಧೀನದಲ್ಲಿದ್ದು, ನಿವೇಶನ ಹಂಚಿದ ಬಳಿಕ ಮತ್ತೆ ಅದೇ ಜಮೀನು ಕೃಷಿ ಭೂಮಿ ಹೇಗೆ ಆಗುತ್ತದೆ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ. ಸಂವಿಧಾನದ ೧೬೩ನೇ ವಿಧಿ ಅನ್ವಯ ಸಿಎಂ ಮತ್ತು ಸಚಿವ ಸಂಪುಟವನ್ನು ಬೇರ್ಪಡಿಸಲು ಆಗುವುದಿಲ್ಲ. ಹೀಗಾಗಿ ಸಂಪುಟದ ಅಭಿಪ್ರಾಯ ಪರಿಗಣಿಸುವಂತಿಲ್ಲ. ಅಸ್ತಿತ್ವ ದಲ್ಲಿಯೇ ಇಲ್ಲದ ಜಮೀನಿಗೆ ಕೇವಲ ಸೇಲ್ ಡೀಡ್ ಪತ್ರ ಆಧರಿಸಿ ಭೂ ಪರಿವರ್ತನೆ, ದಾನಪತ್ರ, ಪರಿಹಾರ ಪಡೆಯಲಾಗಿದೆ.

Tags :
chief ministercmhigh courtmudasiddaramaih
Next Article