ಸಿದ್ದು ಸರ್ಕಾರಕ್ಕೆ ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲ
ಹುಬ್ಬಳ್ಳಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿಚಾರವಾಗಿ ಸರ್ಕಾರ ಎಡವುತ್ತಿದೆ. ದೋಷಾರೋಪ ಪಟ್ಟಿ ಸಲ್ಲಿಸುವ ಹಂತದಲ್ಲಿ ಶಿಫಾರಸ್ಸು ವಾಪಸ್ ಪಡೆದಿರುವುದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ ಅವರ ಸಿಬಿಐ ತನಿಖೆ ಶಿಫಾರಸ್ಸು ವಾಪಸ್ ಹಿಂಪಡೆಯುವುದು ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ಸರಿಯಲ್ಲ. ದೇಶದಲ್ಲಿ ನಾಯಾಂಗ ವ್ಯವಸ್ಥೆ ಇದೆ. ಸರ್ಕಾರದ ನಿರ್ಣಯಗಳ ವಿರುದ್ಧವಾಗಿಯೂ ನ್ಯಾಯಾಲಯಗಳು ತೀರ್ಪು ನೀಡಿದ ಉದಾಹರಣೆಗಳಿವೆ.
ನ್ಯಾಯಾಂಗ ವ್ಯವಸ್ಥೆ ಸಂಪೂರ್ಣವಾಗಿ ಸ್ವತಂತ್ರವಾಗಿದ್ದು, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿವೆ. ಸಚಿವ ಸಂಪುಟದ ಈ ನಿರ್ಧಾರವನ್ನ ನ್ಯಾಯಾಲಯ ತಿರಸ್ಕರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆ ಶಿವಕುಮಾರ ವಿರುದ್ಧ ಸೂಕ್ತ ರೀತಿಯಲ್ಲಿ ತನಿಖೆ ನಡೆಯುತ್ತೆ. ದೋಷಾರೋಪ ಪಟ್ಟಿ ಸಲ್ಲಿಕೆಯ ಹಂತದಲ್ಲಿರುವುದರಿಂದ ಟೆಕ್ನಿಕಲ್ ಗ್ರೌಂಡ್ಸ್ ಮೇಲೆ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಒಂದು ದೋಶಾರೋಪಣ ಪಟ್ಟಿ ತಪ್ಪಾಗಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ಆದರೆ, ಯಾವ ಸಂಪುಟದಲ್ಲಿ ಡಿ.ಕೆ.ಶಿ ಉಪಮುಖ್ಯಮಂತ್ರಿಯಾಗಿದ್ದಾರೆ ಅದೇ ಸಂಪುಟದಿಂದ ಅವರನ್ನ ನಾಮಕೇವಾಸ್ತೇ ಒಂದು ದಿನ ಹೊರಗಿಟ್ಟು ಶಿಫಾರಸ್ಸು ವಾಪಸ್ ಪಡೆಯುವುದರ ಅರ್ಥವೇನು ಎಂದು ಪ್ರಶ್ನಿಸಿದರು. ಈ ಪ್ರಕರಣದ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು.