For the best experience, open
https://m.samyuktakarnataka.in
on your mobile browser.

ಸಿದ್ಧಾರೂಢ ಮಠದಲ್ಲಿ ೧೨ರಂದು ಲಕ್ಷ ದೀಪೋತ್ಸವ

07:19 PM Dec 01, 2023 IST | Samyukta Karnataka
ಸಿದ್ಧಾರೂಢ ಮಠದಲ್ಲಿ ೧೨ರಂದು ಲಕ್ಷ ದೀಪೋತ್ಸವ

ಹುಬ್ಬಳ್ಳಿ: ಕಾರ್ತಿಕ ಮಾಸದ ನಿಮಿತ್ತ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ವತಿಯಿಂದ ಸಿದ್ಧಾರೂಢ ಸ್ವಾಮೀಜಿ ಮಠದಲ್ಲಿ ಡಿ. ೧೨ ರಂದು ಸಂಜೆ ೬.೩೦ಕ್ಕೆ ಲಕ್ಷ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣ ಶೆಟ್ಟರ್ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಜಿ. ಶಾಂತಿ ಅವರು ದೀಪೋತ್ಸವಕ್ಕೆ ಚಾಲನೆ ನೀಡುವರು ಎಂದರು.
ದೀಪೋತ್ಸವಕ್ಕೆ ೪೦ ರಿಂದ ೫೦ ಸಾವಿರ ಭಕ್ತರು ಆಗಮಿಸಿ ತಮ್ಮ ಸೇವೆ ಸಲ್ಲಿಸುತ್ತಿದ್ದು, ೬೦ ರಿಂದ ೭೦ ಸಾವಿರ ದೀಪಗಳನ್ನು ಶ್ರೀಮಠದಿಂದ ಭಕ್ತರಿಗೆ ನೀಡಲಾಗುವುದು. ಈ ಸಂದರ್ಭದಲ್ಲಿ ಶ್ರೀಮಠದ ಧರ್ಮದರ್ಶಿಗಳು, ಪದಾಧಿಕಾರಿಗಳು, ಸಿಬ್ಬಂದಿ, ಶ್ರೀಮಠದ ಸಂಸ್ಕೃತ ಪಾಠಶಾಲೆ, ಜೈಂಟ್ಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಶ್ರೀ ಸಿದ್ಧಾರೂಢ ಹೈಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪಾರ್ಕಿಂಗ್ ವ್ಯವಸ್ಥೆಗಾಗಿ ಮಠದ ಪಕ್ಕದಲ್ಲಿ ೨೫ ಗುಂಟೆ ಜಾಗದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಮಠದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಲು ಹೊರ ಗುತ್ತಿಗೆ ಮೂಲಕ ಸಿಬ್ಬಂದಿ ನೇಮಕ ಮಾಡಿಕೊಂಡು ಸ್ವಚ್ಛತೆ ಕಾಪಾಡಲು ಯೋಜನೆ ರೂಪಿಸಲಾಗಿದೆ. ಶ್ರೀಮಠದಿಂದ ಗೋ ಶಾಲೆ ನಿರ್ಮಿಸುತ್ತಿದ್ದು, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಅದರಂತೆ ಗೋ ಉತ್ಪನ್ನಗಳ ತಯಾರಿಕೆಗೂ ಚಿಂತನೆ ನಡೆಸಲಾಗಿದೆ. ೫೦ ಶೌಚಾಲಯ, ಸ್ನಾನ ಗೃಹ ಹಾಗೂ ಡಾಮೆಟ್ರಿಗಳ ನಿರ್ಮಾಣ ಕಾರ್ಯ ಸಾಗಿದೆ. ೧೨ ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ಶ್ರೀಮಠದ ಆವರಣದಲ್ಲಿರುವ ಕರೆಯ ಬಳಿ ಅದ್ವೈತ ಮಂಟಪ ನಿರ್ಮಾಣ, ಅದ್ವೈತ ವೇದಾಂತ ಗ್ರಂಥಾಲಯ ನಿರ್ಮಾಣಕ್ಕೆ ಚಿಂತಿಸಿದ್ದು, ೧೦೮ ಅದ್ವೈತ ಗ್ರಂಥಗಳ ಮುದ್ರಣಕ್ಕೆ ಈಗಾಗಲೇ ಸಿದ್ಧತೆ ಮಾಡಲಾಗಿದೆ ಎಂದು ಹೇಳಿದರು.