ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಿಬಿಐಗೆ ರಾಜ್ಯ ಅನುಮತಿ ನಕಾರ-ಮುಂದುವರಿದ ಸಂಘರ್ಷ

06:00 AM Sep 28, 2024 IST | Samyukta Karnataka

ನ್ಯಾಯಾಲಯದ ಮೂಲಕ ಸಿಬಿಐ ತನಿಖೆ ನಡೆದಲ್ಲಿ ಅದನ್ನು ರಾಜ್ಯ ಸರ್ಕಾರ ತಡೆಯಲು ಬರುವುದಿಲ್ಲ. ರಾಜ್ಯ ಸರ್ಕಾರಗಳ ಸಿಬಿಐ ವಿರೋಧಿ ನಿಲುವು ದೀರ್ಘಕಾಲಿಕ ತೀರ್ಮಾನವಾಗಿ ಉಳಿಯುವುದಿಲ್ಲ.

ರಾಜ್ಯ ಹೈಕೋರ್ಟ್ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿಯುತ್ತಿದ್ದಂತೆ ಸಿಬಿಐಗೆ ನೀಡಿದ್ದ ಸಾರ್ವತ್ರಿಕ ಅನುಮತಿಯನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿದೆ. ಇದಕ್ಕೂ ಸಿದ್ದರಾಮಯ್ಯ ಮೂಡಾ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಹೇಳಿದರೂ ಸಿಬಿಐಗೆ ಮೇಲೆ ಕಾಂಗ್ರೆಸ್‌ಗೆ ಇರುವ ಅನುಮಾನ ದೃಢಪಟ್ಟಿದೆ. ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ಸಿಬಿಐ ದಾಳಿಯನ್ನು ತನ್ನ ಹಿತಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಈಗ ರೆಕ್ಕೆಪುಕ್ಕ ಬರುತ್ತಿದೆ. ಅರವಿಂದ ಕೇಜ್ರಿವಾಲ್, ಹೇಮಂತ ಸೊರೇನ್ ಆದ ಮೇಲೆ ಸಿದ್ದರಾಮಯ್ಯ ಮೇಲೆ ಸಿಬಿಐ ದಾಳಿ ನಡೆಯುತ್ತದೆ ಎಂದು ಹೇಳುತ್ತಿದ್ದರು. ಅದಕ್ಕೆ ಅವಕಾಶ ನೀಡಬಾರದು ಎಂದು ಸಿಬಿಐ ತನಿಖೆಗೆ ರಾಜ್ಯ ಸರ್ಕಾರದ ಸಾರಾಸಗಟು ಅನುಮತಿ ಇಲ್ಲ ಎಂದು ಹೇಳಿದೆ ಎಂಬ ಮಾತು ಕೇಳಿ ಬರುತ್ತಿದ್ದರೂ ರಾಜ್ಯ ಸರ್ಕಾರ ಅನುಮಾನಗಳನ್ನು ತಳ್ಳಿಹಾಕಿದೆ.
ಮೊದಲಿನಿಂದಲೂ ಸಿಬಿಐ ತನ್ನ ತನಿಖೆಗೆ ವಿಶಿಷ್ಟ ಸ್ಥಾನಮಾನ ಉಳಿಸಿಕೊಂಡು ಬಂದಿದೆ. ಎರಡನೇ ಮಹಾಯುದ್ಧದ ಕಾಲದಲ್ಲಿ ಇದರ ಜನನವಾಯಿತು. ದೆಹಲಿ ವಿಶೇಷ ಪೊಲೀಸ್ ಕಾಯ್ದೆ ಮೂಲಕ ಇದು ಅಸ್ತಿತ್ವಕ್ಕೆ ಬಂದಿತು. ಕೇಂದ್ರದ ಆಡಳಿತ ಮತ್ತು ಸಿಬ್ಬಂದಿ ಇಲಾಖೆಗೆ ಇದು ಮೊದಲು ಸೇರಿತ್ತು. ಬೊಫೋರ್ಸ್ ಹಗರಣದಿಂದ ಹಿಡಿದು ಹವಾಲ ಪ್ರಕರಣದವರೆಗೆ ಹಲವು ಅಕ್ರಮಗಳ ಬಗ್ಗೆ ತನಿಖೆ ನಡೆಸಿತ್ತು. ಅಲ್ಲದೆ ಪ್ರಮುಖ ರಾಜಕಾರಣಿಗಳ ಅಕ್ರಮಗಳ ಬಗ್ಗೆ ಇದು ನೀಡಿದ ವರದಿಗಳು ವಿವಾದಕ್ಕೆ ಕಾರಣವಾಗಿತ್ತು. ಹಿಂದೆ ಬಿಜೆಪಿ ಅಧಿಕಾರದಲ್ಲಿಲ್ಲದ ಕಾಲದಲ್ಲೂ ಬಿಜೆಪಿಯವರಿಂದಲೂ ಸಿಬಿಐ ಟೀಕೆಗೆ ಒಳಗಾಗಿತ್ತು. ಈಗ ಕಳೆದ ೧೦ ವರ್ಷಗಳಿಂದ ಇದರ ದುರುಪಯೋಗ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ೨೦೧೩ ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ವರ್ಮ ಸಿಬಿಐ ಪುನರುಜ್ಜೀವನಕ್ಕೆ ೨೪ ಸೂತ್ರಗಳನ್ನು ರೂಪಿಸಿದ್ದರು. ಅದು ಜಾರಿಗೆ ಬರಲೇ ಇಲ್ಲ. ೨೦೧೩ ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರ್. ಎಂ. ಲೋಧಾ ಸಿಬಿಐ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ್ದರು. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಬಂದ ಮೇಲೆ ಆಂಧ್ರ ಪ್ರದೇಶ, ಪಶ್ಚಿಮಬಂಗಾಳ, ಪಂಜಾಬ್, ಜಾರ್ಖಂಡ್, ಕೇರಳ, ತೆಲಂಗಾಣ, ಮೇಘಾಲಯ, ತಮಿಳುನಾಡು ರಾಜ್ಯ ಸರ್ಕಾರಗಳು ಸಿಬಿಐಗೆ ನೀಡಿದ್ದ ಸಾರ್ವತ್ರಿಕ ಅನುಮತಿಯನ್ನು ಹಿಂದಕ್ಕೆ ಪಡೆದಿವೆ. ಈ ರಾಜ್ಯಗಳ ಪಟ್ಟಿಗೆ ಕರ್ನಾಟಕವೂ ಸೇರಿದೆ. ಇದರಿಂದ ರಾಜಕೀಯ ಲಾಭ ಸಿಗಬಹುದೇ ಹೊರತು ಕಾನೂನು ಆಸರೆ ಸಿಗುವುದಿಲ್ಲ. ಏಕೆಂದರೆ ದೂರುದಾರರು ನೇರವಾಗಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಮೊರೆಹೋಗಿ ಸಿಬಿಐ ತನಿಖೆಗೆ ಒತ್ತಾಯಿಸಬಹುದು. ನ್ಯಾಯಾಲಯದ ಮೂಲಕ ಸಿಬಿಐ ತನಿಖೆ ನಡೆದಲ್ಲಿ ಅದನ್ನು ರಾಜ್ಯ ಸರ್ಕಾರ ತಡೆಯಲು ಬರುವುದಿಲ್ಲ. ರಾಜ್ಯ ಸರ್ಕಾರಗಳ ಸಿಬಿಐ ವಿರೋಧಿ ನಿಲುವು ದೀರ್ಘಕಾಲಿಕ ತೀರ್ಮಾನವಾಗಿ ಉಳಿಯುವುದಿಲ್ಲ. ಮುಂಬರುವ ದಿನಗಳಲ್ಲಿ ಕೇಂದ್ರದಲ್ಲಿ ಹೊಸ ರಾಜಕೀಯ ವ್ಯವಸ್ಥೆ ಬಂದಲ್ಲಿ ಈಗ ವಿರೋಧಿಸಿದವರೇ ಸಿಬಿಐಗೆ ಜೀವ ತುಂಬಬಹುದು. ಸಿಬಿಐಗೆ ಹೋದ ಪ್ರಕರಣಗಳೆಲ್ಲ ಬಗೆಹರಿಯುತ್ತವೆ ಎಂಬ ಭರವಸೆ ಏನೂ ಇಲ್ಲ. ಕರ್ನಾಟಕದಿಂದ ನೀಡಿದ ಹಲವು ಪ್ರಕರಣಗಳನ್ನು ಸಿಬಿಐ ಬಗೆಹರಿಸಲು ಸಾಧ್ಯವಾಗಲಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಸಿಬಿಐ ರಾಜಕೀಯ ಅಸ್ತçವಾಗಿರುವುದಂತೂ ನಿಜ. ರಾಷ್ಟ್ರೀಯ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಉಳಿಯದೇ ಹೋದಲ್ಲಿ ಜನಸಾಮಾನ್ಯರಿಗೆ ಸರ್ಕಾರದ ಮೇಲಿರುವ ವಿಶ್ವಾಸ ಉಳಿಯುವುದಿಲ್ಲ. ಪೊಲೀಸ್ ಮತ್ತು ತನಿಖಾಸಂಸ್ಥೆಗಳು ಎಲ್ಲ ಕಾಲದಲ್ಲೂ ರಾಜಕೀಯ ಒತ್ತಡಕ್ಕೆ ಒಳಗಾಗುವುದು ಸಹಜ. ಆದರೆ ಅದು ಸ್ವತಂತ್ರವಾಗಿರುವಂತೆ ಮಾಡುವುದು ಜನಸಾಮಾನ್ಯರ ಕೈಯಲ್ಲಿದೆ. ನ್ಯಾಯಾಂಗ ಆಗಾಗ್ಗೆ ತನ್ನ ಚಾಟಿ ಬೀಸುತ್ತಿದ್ದಲ್ಲಿ ತನಿಖಾ ಸಂಸ್ಥೆಗಳು ಪಕ್ಷಾತೀತವಾಗಿ ಕೆಲಸ ಮಾಡಲು ಸಾಧ್ಯ.
ಸಿಬಿಐ ಜತೆ ಎನ್‌ಐಎ ಹಾಗೂ ಇಡಿ ದೇಶದ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂಬುದನ್ನು ಗಮನಿಸಬೇಕು. ದೇಶದ ಆರ್ಥಿಕ ಸುಭದ್ರತೆಯಲ್ಲಿ ಇವುಗಳ ಪ್ರಭಾವ ಪ್ರಮುಖ ಎಂಬುದನ್ನು ಮರೆಯುವ ಹಾಗಿಲ್ಲ. ಉಗ್ರರ ಬಾಲ ಕತ್ತರಿಸುವುದಕ್ಕೆ ಸಿಬಿಐ ಮತ್ತು ಇಡಿ ನೆರವು ಪ್ರಧಾನ. ಅದರಲ್ಲೂ ಗಡಿ ಭಾಗದಲ್ಲಿ ವೈರಿಗಳ ಎಲ್ಲ ಕುತಂತ್ರಗಳಿಗೆ ಬದಲಿ ತಂತ್ರ ರೂಪಿಸುವಾಗ ಸೇನೆಗೆ ಬೆಂಬಲವಾಗಿ ನಿಲ್ಲುವುದು ಈ ತನಿಖಾಸಂಸ್ಥೆಗಳು ಎಂಬುದನ್ನು ಗಮನಿಸಬೇಕು. ಕೇಂದ್ರವಾಗಲಿ ರಾಜ್ಯವಾಗಲಿ ಈ ತನಿಖಾಸಂಸ್ಥೆಗಳ ಕಾರ್ಯವಿಧಾನದಲ್ಲಿ ಹಸ್ತಕ್ಷೇಪ ಮಾಡುವ ರಾಜಕಾರಣಿಗಳನ್ನು ದೂರವಿಡುವ ಕೆಲಸವನ್ನು ಜನಸಾಮಾನ್ಯರು ಕೈಗೊಳ್ಳಬೇಕು. ಕೇಂದ್ರ-ರಾಜ್ಯಗಳ ನಡುವೆ ಒಕ್ಕೂಟ ಸುಮಧುರ ಬಾಂದವ್ಯ ಇರಬೇಕೆಂದರೆ ಸಿಬಿಐನಂಥ ತನಿಖಾಸಂಸ್ಥೆಗಳು ಆರೋಗ್ಯಕರವಾಗಿರಬೇಕು. ಇಂದು ಈ ಸಂಸ್ಥೆಗಳಿಗೆ ರಾಜಕೀಯ ನೆರಳು ಆವರಿಸಿಕೊಂಡಿದೆ. ಇದು ಮೊದಲು ಹೋಗಬೇಕು. ಜನರಲ್ಲಿ ಈ ಸಂಸ್ಥೆಗಳ ಬಗ್ಗೆ ಹಿಂದೆ ಇದ್ದ ವಿಶ್ವಾಸ ಮತ್ತೆ ಮೂಡಿಬರಬೇಕು. ಆಳುವವರ ಮನೋಧರ್ಮದ ಮೇಲೆ ಈ ಸಂಸ್ಥೆಗಳು ಕೆಲಸ ಮಾಡುತ್ತವೆ.

Tags :
#ಸಂಪಾದಕೀಯ#ಸಂಯುಕ್ತಕರ್ನಾಟಕ
Next Article