ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸೀಮಂತ ಸಂಭ್ರಮದ ಮನೆಯಲ್ಲಿ ಶೋಕ

05:23 AM Jun 12, 2024 IST | Samyukta Karnataka

ಎನ್.ಎಂ.ಬಸವರಾಜ್
ಚಿತ್ರದುರ್ಗ: ಸೀಮಂತ ಕಾರ್ಯ ನಡೆದು ಸಂಭ್ರಮದಲ್ಲಿದ್ದ ಮನೆಯಲ್ಲಿ ದುಃಖ ಮಡುಗಟ್ಟಿದೆ. ಕರುಳ ಕುಡಿಯನ್ನು ನೋಡುವ ಮೊದಲೇ ಅಪ್ಪ ಸಾವಿನ ಮನೆ ಸೇರಿದ್ದಾನೆ. ಪತಿಯನ್ನು ಕಳೆದುಕೊಂಡ ಗರ್ಭಿಣಿಯ ಆಕ್ರಂದನ ಮುಗಿಲುಮುಟ್ಟಿದೆ. ಹೆತ್ತ ಮಗನನ್ನು ಕಳೆದುಕೊಂಡ ಪೋಷಕರಿಗೆ ಆಘಾತವಾಗಿದೆ. ತಾಯಿ ಹೊಟ್ಟೆಯಲ್ಲಿದ್ದಾಗಲೇ ಮಗು ತಂದೆಯನ್ನು ನೋಡದಂತಾಗಿದೆ. ಇದು ಕೊಲೆಯಾದ ರೇಣುಕಾಸ್ವಾಮಿ ಮನೆಯಲ್ಲಿ ಕಂಡುಬಂದ ಮನಕಲುಕುವ ದೃಶ್ಯ.
ಮರ‍್ನಾಲ್ಕು ದಿನಗಳ ಹಿಂದೆ ರೇಣುಕಾಸ್ವಾಮಿ ಪತ್ನಿ ಸಹನಾ ಅವರಿಗೆ ಸೀಮಂತ ಮಾಡಲಾಗಿತ್ತು. ಐದು ತಿಂಗಳ ಗರ್ಭಿಣಿ, ಇನ್ನು ನಾಲ್ಕು ತಿಂಗಳಾಗಿದ್ದರೆ ಮಗುವನ್ನು ನೋಡುವ ಕಾತರದಲ್ಲಿದ್ದ ರೇಣುಕಾಸ್ವಾಮಿ ನಾಪತ್ತೆಯಾಗಿ ಇದೀಗ ಶವವಾಗಿ ಪತ್ತೆಯಾಗಿದ್ದಾನೆ. ಬಾಳಿ ಬದುಕಿ ಕುಟುಂಬಕ್ಕೆ ಬೆಳಕಾಗಬೇಕಾಗಿದ್ದ ರೇಣುಕಾಸ್ವಾಮಿ ಬಾರದ ಲೋಕಕ್ಕೆ ಹೋಗಿರುವುದು ಎರಡು ಕುಟುಂಬಗಳಿಗೆ ಭಾರಿ ಅಘಾತವಾಗಿದೆ.
೨೦೨೩ರ ಜೂನ್ ೨೮ರಂದು ವಿವಾಹವಾಗಿದ್ದ ಇವರಿಬ್ಬರೂ ಈ ತಿಂಗಳ ೨೮ರಂದು ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದರು. ಎಲ್ಲಾ ತಯಾರಿ ಕೂಡ ನಡೆದಿತ್ತು. ಸಂಭ್ರಮದ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಕೆಇಬಿ ನಿವೃತ್ತ ನೌಕರ ಕಾಶಿನಾಥ ಶಿವನಗೌಡ, ತಾಯಿ ರತ್ನಪ್ರಭ ಕಾಶಿನಾಥ್ ಪುತ್ರ. ಚಿತ್ರದುರ್ಗದ ಅಪೋಲೊ ಫಾರ್ಮಸಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ನಾಲ್ಕು ದಿನಗಳ ಹಿಂದೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿದವನು ಮತ್ತೆ ಬರಲಿಲ್ಲ. ಫಾರ್ಮಸಿ ಕೆಲಸದ ಜೊತೆಗೆ ಸಂಘಟನೆಗಳಲ್ಲಿಯೂ ಗುರುತಿಸಿಕೊಂಡಿದ್ದ.
ಈ ಘಟನೆ ಸಂಪೂರ್ಣ ತನಿಖೆ ಆಗಬೇಕಿದೆ. ರೇಣುಕಾಸ್ವಾಮಿ ಕೊಲೆ ದರ್ಶನ್ ಮಾಡಿದ್ದಾರೋ ಯಾರೇ ಮಾಡಿದ್ದರೂ ಶಿಕ್ಷೆ ಆಗಬೇಕು ಎಂದು ರೇಣುಕಾಸ್ವಾಮಿ ತಂದೆ ಸ್ನೇಹಿತ ಷಣ್ಮಖಪ್ಪ ಒತ್ತಾಯಿಸಿದ್ದಾರೆ.

Next Article