ಸುಗ್ರೀವಾಜ್ಞೆ ಜಾರಿ ಮಹತ್ವ
ಸಂವಿಧಾನದ ಪ್ರಕಾರ ಸಂಸತ್ ಅಥವಾ ಶಾಸನಸಭೆ ಅಧಿವೇಶನದ ಇಲ್ಲದೇ ಇರುವ ಸಂದರ್ಭದಲ್ಲಿ ತುರ್ತು ಘಟನಾವಳಿಗೆ ಸಂಬಂಧಿಸಿದಂತೆ ಪರಿಹಾರವಾಗಿ ಸುಗ್ರೀವಾಜ್ಞೆಯನ್ನು ರೂಪಿಸಿ ಜಾರಿಗೊಳಿಸಲು ಸರ್ಕಾರಗಳಿಗೆ ಮುಕ್ತ ಅವಕಾಶವಿದೆ. ಸಂಪುಟದಲ್ಲಿ ಕೈಗೊಂಡ ತೀರ್ಮಾನಗಳು ರಾಷ್ಟçಪತಿ ಇಲ್ಲವೇ ರಾಜ್ಯಪಾಲರ ಸಮ್ಮತಿಯ ನಂತರ ಈ ಸುಗ್ರೀವಾಜ್ಞೆಗಳು ಜಾರಿಗೆ ಬರಲು ಅವಕಾಶ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ಆದರೆ ಸುಗ್ರೀವಾಜ್ಞೆ ಜಾರಿಯ ವಿಚಾರದಲ್ಲಿ ಸರ್ಕಾರಗಳು ವಿವೇಚನೆಯನ್ನು ಬಳಸಿದರಷ್ಟೇ ಅದಕ್ಕೆ ಮಹತ್ವ. ಅದಿಲ್ಲದೇ ಹೋದರೆ ರಾಷ್ಟ್ರಪತಿ ಇಲ್ಲವೇ ರಾಜ್ಯಪಾಲರು ಮರುಪರಿಶೀಲನೆ ನಡೆಸುವಂತೆಯೋ ಅಥವಾ ಅಧಿವೇಶನ ಮಾರ್ಗದ ಮೂಲಕ ಶಾಸನವನ್ನು ರಚಿಸುವಂತೆಯೋ ಸಲಹೆ ನೀಡಿ ಸುಗ್ರೀವಾಜ್ಞೆಯ ಕರಡನ್ನು ಸರ್ಕಾರಕ್ಕೆ ವಾಪಸ್ ಕಳುಹಿಸುವ ಅವಕಾಶವೂ ಇದೆ. ಕರ್ನಾಟಕ ರಾಜ್ಯದಲ್ಲಿ ನಾಮಫಲಕಗಳ ಮೇಲ್ಭಾಗದಲ್ಲಿ ಶೇ.೬೦ರಷ್ಟು ಕನ್ನಡ ಭಾಷೆ ಇರಬೇಕು ಎಂಬುದನ್ನು ಕಡ್ಡಾಯಗೊಳಿಸುವ ಸುಗ್ರೀವಾಜ್ಞೆಯನ್ನು ಶಾಸನಸಭೆಯ ಮಾರ್ಗದ ಮೂಲಕ ಜಾರಿಗೊಳಿಸುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹಿಂದಕ್ಕೆ ಕಳುಹಿಸಿರುವ ಕ್ರಮ ಸಂವಿಧಾನಾತ್ಮಕವಾಗಿ ಕ್ರಮಬದ್ದವಾಗಿದೆ. ಆದರೆ ಜನರ ದೃಷ್ಟಿಯಲ್ಲಿ ಇದರ ಬಗ್ಗೆ ಸಾಕಷ್ಟು ಆಕ್ಷೇಪಗಳು ಭುಗಿಲೆದ್ದಿವೆ.
ಸುಗ್ರೀವಾಜ್ಞೆ ಹೊರಡಿಸುವ ಮುನ್ನ ರಾಜ್ಯ ಸರ್ಕಾರ ಪರಿಸ್ಥಿತಿಯ ಆಮೂಲಾಗ್ರವಾಗಿ ಪರಿಶೀಲಿಸಿ ನಿರ್ಧಾರಕ್ಕೆ ಬಂದಿದ್ದರೆ ಇಂತಹ ಬೆಳವಣಿಗೆ ಆಗುತ್ತಿರಲಿಲ್ಲವೇನೋ. ಶಾಸನಸಭೆಯ ಅಧಿವೇಶನ ಇನ್ನು ಹತ್ತು ದಿನಗಳಲ್ಲಿ ಪ್ರಾರಂಭವಾಗಬೇಕು. ಈ ಹತ್ತು ದಿನಗಳ ಕಿರು ಅವಧಿಯಲ್ಲಿ ತುರ್ತುಕ್ರಮ ಕೈಗೊಳ್ಳುವ ಸಲುವಾಗಿ ಸುಗ್ರೀವಾಜ್ಞೆಯ ಮಾರ್ಗವನ್ನು ಅನುಸರಿಸುವ ಔಚಿತ್ಯವಾದರೂ ಎಲ್ಲಿತ್ತು ಎಂಬುದು ಚರ್ಚೆಗೆ ಒಳಪಡಬೇಕಾದ ವಿಷಯ. ನಾಮಫಲಕಗಳ ಶಾಸನ ಈಗ ಬಹಳ ವರ್ಷಗಳಿಂದಲೂ ಜಾರಿಯಲ್ಲಿವೆ. ಹತ್ತು ದಿನಗಳ ಒಳಗೆ ಸುಗ್ರೀವಾಜ್ಞೆಯ ಮೂಲಕ ನಾಮಫಲಕಗಳ ಸ್ವರೂಪವನ್ನು ಬದಲಾಯಿಸುವ ಕ್ರಮ ಜಾರಿಗೆ ಬರದಿದ್ದರೆ ಯಾವುದೇ ಬಿಕ್ಕಟ್ಟು ಇಲ್ಲವೇ ಕಂಟಕ ಎದುರಾಗುವ ಸಾಧ್ಯತೆಗಳು ಇಲ್ಲ. ಹೀಗಿರುವಾಗ ಬೆಂಗಳೂರಿನಲ್ಲಿ ಸುಮಾರು ಹದಿನೈದು ದಿನಗಳ ಹಿಂದೆ ಕನ್ನಡಪರ ಹೋರಾಟಗಾರರ ಪ್ರತಿಭಟನೆಯನ್ನು ಪರಿಗಣಿಸಿ ಇಂತಹ ಸುಗ್ರೀವಾಜ್ಞೆಯ ಮಾರ್ಗವನ್ನು ಅನುಸರಿಸಿದ ಕ್ರಮ ಎಷ್ಟರಮಟ್ಟಿಗೆ ಸಮರ್ಥನೀಯ ಎಂಬುದು ಅರ್ಥವಾಗುತ್ತಿಲ್ಲ. ನಾಮಫಲಕಗಳಲ್ಲಿ ಶೇ. ೬೦ರಷ್ಟು ಕನ್ನಡ ಭಾಷೆಯನ್ನು ಬಳಕೆ ಮಾಡುವ ಸರ್ಕಾರದ ಆಶಯ ಮೆಚ್ಚತಕ್ಕದ್ದೇ. ಆದರೆ ಅದಕ್ಕೆ ತುರ್ತುಕ್ರಮದ ಅಗತ್ಯ ಕಾಣುತ್ತಿಲ್ಲ. ಸುಗ್ರೀವಾಜ್ಞೆ ಅವಕಾಶವಿರುವುದು ಯಾವುದಾದರೂ ಬಿಕ್ಕಟ್ಟು ಅಥವಾ ಗಂಡಾಂತರದ ಬೆಳವಣಿಗೆ ಭುಗಿಲೆದ್ದಾಗ ಅದನ್ನು ಶಮನಗೊಳಿಸುವ ಸಲುವಾಗಿ ಶಾಸನವನ್ನು ಬದಲಾಯಿಸುವ ಸರ್ಕಾರಕ್ಕೆ ಅಧಿಕಾರ. ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ಬಳಸಿ ಶಾಸನಸಭೆಯ ಮೂಲಕ ಶಾಸನ ಮಾರ್ಪಾಡು ಮಾಡುವಂತೆ ಸೂಚಿಸಿ ಕರಡನ್ನು ಹಿಂದಕ್ಕೆ ಕಳುಹಿಸಿರುವ ಕ್ರಮ ಸಮರ್ಥನೀಯವೇ.
ಶಾಸನ ರಚನೆ ಎಂಬುದು ಬಹಳ ಮಹತ್ವದ ವಿಷಯ. ಸಂಸತ್ ಹಾಗೂ ಶಾಸನ ಸಭೆಗಳ ಪ್ರಧಾನ ಜವಾಬ್ದಾರಿಯೇ ಶಾಸನ ರಚನೆ. ಸುಗ್ರೀವಾಜ್ಞೆ ಎಂಬುದು ಒಂದು ಅವಕಾಶವಷ್ಟೇ. ಬಹುಮತ ಇರುವ ಸರ್ಕಾರಕ್ಕೆ ಶಾಸನಗಳನ್ನು ರೂಪಿಸುವ ಹಾಗೂ ಮಾರ್ಪಾಟು ಮಾಡುವ ಪರಮಾಧಿಕಾರ ಮುಕ್ತವಾಗಿದೆ. ಇದನ್ನು ರಾಜ್ಯಪಾಲರು ಪ್ರಶ್ನಿಸುವಂತಿಲ್ಲ. ಹೆಚ್ಚೆಂದರೆ ಸಂವಿಧಾನದ ಚೌಕಟ್ಟಿನಲ್ಲಿ ಶಾಸನವನ್ನು ಪರಾಮರ್ಶೆಗೆ ಒಳಪಡಿಸಿ ಹಾಗೊಮ್ಮೆ ಲೋಪದೋಷಗಳಿದ್ದರೆ ಅದನ್ನು ಸರಿಪಡಿಸಲು ಸೂಚನೆ ನೀಡಿ ಕರಡನ್ನು ವಾಪಸ್ ಕಳುಹಿಸಬಹುದು ಅಷ್ಟೇ. ಮತ್ತೆ ಅದೇ ರೀತಿಯ ಕರಡು ರಾಜಭವನಕ್ಕೆ ಬಂದರೆ ಆಗಲೂ ಕೂಡಾ ರಾಜ್ಯಪಾಲರು ವಾಪಸ್ ಕಳುಹಿಸಲು ಮುಕ್ತ ಅವಕಾಶವಿದೆ. ಸುಗ್ರೀವಾಜ್ಞೆಯ ವ್ಯಾಪ್ತಿ ರಾಜ್ಯವನ್ನು ಮೀರಿ ಇಡೀ ದೇಶಕ್ಕೆ ವಿಸ್ತಾರಗೊಳ್ಳುವ ಸೂಚನೆಗಳಿದ್ದರೆ ಆಗ ರಾಜ್ಯಪಾಲರು ಸದರಿ ಸುಗ್ರೀವಾಜ್ಞೆಯ ಕರಡನ್ನು ರಾಷ್ಟ್ರಪತಿಗಳ ವಿವೇಚನೆಗೆ ರವಾನಿಸಬಹುದು. ವಸ್ತುಸ್ಥಿತಿ ಇಷ್ಟು ಖಚಿತವಾಗಿರುವಾಗ ಸುಗ್ರೀವಾಜ್ಞೆಯ ಮಾರ್ಗವನ್ನು ಅನಗತ್ಯವಾಗಿ ತುಳಿಯುವ ಸರ್ಕಾರದ ಕ್ರಮಗಳು ಸರ್ವಥಾ ಸಮರ್ಥನೀಯವಲ್ಲ. ಹಾಗೆ ಮಾಡುವುದರಿಂದ ಜನಾದೇಶದ ಮಹತ್ವವೇ ಕುಗ್ಗಿ ಸರ್ಕಾರ ಜನಾದೇಶವನ್ನು ತನ್ನ ಮನಸ್ಸಿಗೆ ತೋಚಿದ ಹಾಗೆ ಜಾರಿಗೊಳಿಸುವ ದಾರಿಯನ್ನು ಕಂಡುಕೊಳ್ಳಲು ಅವಕಾಶ ಕೊಟ್ಟಂತಾಗುತ್ತದೆ ಅಷ್ಟೇ.
ಸಮ್ಮಿಶ್ರ ರಾಜಕೀಯ ವ್ಯವಸ್ಥೆಯ ಈ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧ ಹದಗೆಡುವ ಎಲ್ಲಾ ಸಾಧ್ಯತೆಗಳು ಇವೆ. ಇಂತಹ ಸಂದರ್ಭದಲ್ಲಿ ಸುಗ್ರೀವಾಜ್ಞೆಯ ಮೂಲಕ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡು ವಿಶ್ವಾಸಾರ್ಹತೆಯನ್ನು ಮತ್ತಷ್ಟು ಸುಧಾರಿಸಿಕೊಳ್ಳುವ ಈ ಕ್ರಮ ಸರ್ಕಾರಗಳ ನಿರಾಸಕ್ತಿಯ ನಡುವೆಯೂ ಜಾರಿಗೊಳಿಸುವ ಅನಿವಾರ್ಯತೆ ರಾಜಕೀಯ ಸ್ಥಿತಿಯ ದಿಕ್ಸೂಚಿ.